ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಿ ; ಕಾಮಗಾರಿ ಬೇಗ ಮುಗಿಸಿ; ಜಿಲ್ಲಾಧಿಕಾರಿಗಳು ಅನುಷ್ಠಾನದ ನಿರಂತರ ಮೇಲ್ವಿಚಾರಣೆ ಮಾಡಿ ಶಾಸಕರಿಗೆ ತಿಳಿಸಲಿ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ.
Published By: ಮಂಜುನಾಥ್ ಬಿರಾದಾರ
Last Updated Date: 17-Jun-2023

ಧಾರವಾಡ - ಜೂ 16 - : ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಸಂಬಂದಿಸಿದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದನ್ನು ಅಂದಾಜಿಸಿರುವ ಗ್ರಾಮಗಳಿಗೆ ಬಾಡಿಗೆ ಬೋರ್‍ವೆಲ್ ಅಥವಾ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಜ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಅಧಿಕಾರಿಗಳಿಗೆ ಸೂಚಿಸಿದರು.ಅವರು ಇಂದು ಬೆಳಿಗ್ಗೆ ಬೆಂಗಳೂರು ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಶಾಸಕರೊಂದಿಗೆ ಧಾರವಾಡ ಜಿಲ್ಲೆಯ ವಿವಿಧ ಅಧಿಕಾರಿಗಳ ಸಭೆ ಜರುಗಿಸಿ, ಸಭೆ ಅಧ್ಯಕ್ಷತೆ ವಹಿಸಿ, ಮತನಾಡಿದರು. ಹುಬ್ಬಳ್ಳಿ-ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ಅನುಷ್ಠಾನದಲ್ಲಿರುವ ನಿರಂತರ ನೀರು ಯೋಜನೆ ಕಾಮಗಾರಿ ತೃಪ್ತಿಕರವಾಗಿಲ್ಲ. ಸರಿಯಾಗಿ ಪೈಪ್‍ಲೈನ್ ಅಳವಡಿಕೆ, ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಕಾಲಮಿತಿಯಲ್ಲಿ ನಡೆಯುತ್ತಿಲ್ಲ. ಮತ್ತು ಕುಡಿಯುವ ನೀರಿನ ಸಮಸ್ಯೆ ಹೇಳಲು ಕಾಲ್ ಸೆಂಟರ್‍ಗೆ ಕರೆ ಮಾಡಿದರೂ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಈ ಕುರಿತು ಜನಪ್ರತಿನಿಧಿಗಳು ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಸಚಿವರು ಹೇಳಿದರು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸದಿದ್ದರೆ ಮತ್ತು ನಿಯಮಿತವಾಗಿ ಅವಳಿನಗರದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡದಿದ್ದರೆ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿ, ಕಂಪನಿಯನ್ನು ಟರ್ಮಿನೆಟ್ ಮಾಡಲು ಕ್ರಮ ವಹಿಸಬೇಕಾಗುತ್ತದೆ. ಕೆಲಸದಲ್ಲಿ ಸುಧಾರಣೆ ಕಾಣದಿದ್ದರೆ ಕ್ರಮ ನಿಶ್ಚಿತ ಎಂದು ಕಂಪನಿ ಅಧಿಕಾರಿಗಳಿಗೆ ಸಚಿವರು ಎಚ್ಚರಿಸಿದರು. ಧಾರವಾಡ ಜಿಲ್ಲೆಯ ಗ್ರಾಮೀಣರ ಬಹುದಿನಗಳ ಬೇಡಿಕೆಯಾದ ಮಲಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಕಾಮಗಾರಿ ತೀವ್ರಗೊಳಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಮುಂದಿನ ವಾರ ಆಯಾ ಕ್ಷೇತ್ರಗಳ ಜನಪ್ರತಿನಿದಿಗಳೊಂದಿಗೆ ನಾನು ಕಾಮಗಾರಿ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಾಮಗಾರಿ ಕಳಪೆ ಆಗದಂತೆ, ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ನಿರಂತರ ನಿಗಾ ವಹಿಸಬೇಕೆಂದು ಸಚಿವರು ಸೂಚಿಸಿದರು. ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸಚಿವರು ತಿಳಿಸಿದರು. ಜಿಲ್ಲೆಯ ಕುಡಿಯುವ ನೀರು ಮತ್ತು ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗಳ ಅನುಷ್ಠಾನದ ಕುರಿತು ನಿರಂತರ ಮೇಲ್ವಿಚಾರಣೆ ಮಾಡಿ, ಶಾಸಕರುಗಳಿಗೆ ವರದಿ ನೀಡಬೇಕೆಂದು ಸಚಿವ ಸಂತೋಷ ಲಾಡ ನಿರ್ದೇಶಿಸಿದರು. ಕಲಘಟಗಿ ತಾಲೂಕಿನ ಗ್ರಾಮಗಳ ಕೆರೆಗಳಿಗೆ ಬೇಡ್ತಿ ನಾಲಾದಿಂದ ನೀರು ತುಂಬಿಸುವ ಯೋಜನೆ ಸಾಧ್ಯತೆಗಳ ಕುರಿತು ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರು ಸ್ಥಳ ಪರಿಶೀಲನೆ ಮಾಡಿ, ವರದಿ ನೀಡಲಿ, ಮುಂದಿನ ವಾರ ಸ್ವತಃ ಸ್ಥಳ ಪರಿಶೀಲನೆ ಮಾಡುವುದಾಗಿ ಸಚಿವರು ತಿಳಿಸಿದರು. ಸಭೆಯಲ್ಲಿ ಶಾಸಕರಾದ ವಿನಯ ಕುಲಕರ್ಣಿ, ಅಬ್ಬಯ್ಯ ಪ್ರಸಾದ ಮತ್ತು ಎನ್.ಎಚ್.ಕೋನರಡ್ಡಿ ಅವರು ಭಾಗವಹಿಸಿ, ಕ್ಷೇತ್ರದ ಸಮಸ್ಯೆ ಮತ್ತು ಕಾಮಗಾರಿಗಳ ಕುರಿತು ಚರ್ಚಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾ ಬಸವಂತಪ್ಪ, ಕೆಯುಐಡಿಎಫ್‍ಸಿ ಅದೀಕ್ಷಕ ಅಬೀಯಂತರ ಮಹಾಂತೇಶ ಜಗತೇರಿ, ಜಲಮಂಡಳಿ ಎಇಇ ಕರಿಯಪ್ಪ, ಎಲ್ ಆ್ಯಂಡ್ ಟಿ ಕಂಪನಿಯ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಸತೀಶಕುಮಾರ, ನೀರು ಸರಬರಾಜು ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಅಭಜಿತ್, ಯೋಜನಾ ವ್ಯವಸ್ಥಾಪಕ ನಾಗರಾಜ ಸೊಗತಿ ಸೇರಿದಂತೆ ಮಹಾನಗರ ಪಾಲಿಕೆ, ಜಲಮಂಡಳಿ, ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ***********
