ಅಪರೂಪದ ದೃಶ್ಯ ಬೆಕ್ಕಿನ ಮರಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ಹಂದಿ.
ಬದುಕಿಗೊಂದು ಆದರ್ಶ ,ಪ್ರೀತಿ ವಾತ್ಸಲ್ಯಕ್ಕೆ ಮತ್ತೊಂದು ನಿದರ್ಶನ .
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date: 18-Jul-2023
ನಿಡಗುಂದಿ -: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಕಂಡು ಬಂದ ಅಪರೂಪದ ಒಂದು ದೃಶ್ಯ. ಹಸಿದ ಹೊಟ್ಟೆಗೆ ಅನ್ನ ನೀಡುವುದು ಮಾನವ ಧರ್ಮವಾಗಿದ್ದು, ಇದು ಅನಾದಿ ಕಾಲದಿಂದಲೂ ನಮಗೆ ರಕ್ತಗತವಾಗಿ ಬಂದಿದೆ. ಹಸಿದ ಹೊಟ್ಟೆಗೆ ಅನ್ನ ನೀಡಿ ಆ ಜೀವವನ್ನು ಸಂತುಷ್ಟಗೊಳಿಸಿದರೆ ಅದರಿಂದ ಪುಣ್ಯಫಲ ದೊರೆಯುತ್ತದೆ ಎಂಬ ನಂಬಿಕೆಯೂ ನಮ್ಮಲ್ಲಿದೆ. ಮಾನವರಾದ ನಾವು ಬುದ್ದಿವಂತ ಪ್ರಾಣಿಗಳು, ಹಾಗಾಗಿ ಪಾಪ ಪುಣ್ಯದ ಲೆಕ್ಕಾಚಾರದಲ್ಲಿ ಒಂದಷ್ಟು ಒಳ್ಳೆ ಕೆಲಸ ಮಾಡುತ್ತೇವೆ. ಆದರೆ ಇಲ್ಲಿ ಮೂಕ ಪ್ರಾಣಿಯಾದ ಹಂದಿಯೊಂದು ಯಾವ ಫಲಾಪೇಕ್ಷೆಯಿಲ್ಲದೆ ಹಸಿದ ಬೆಕ್ಕಿಗೆ ಹಾಲುಣಿಸಿ ತನ್ನ ತಾಯ್ತನವನ್ನು ಧಾರೆ ಎರೆಯುತ್ತಿರುವ ದೃಶ್ಯವೊಂದು ಅಚ್ಚರಿ ಮೂಡಿಸುತ್ತಿದೆ.ಬೀದಿಯಲ್ಲಿ ಮರಿಗಳಿಗೆ ಜನ್ಮನೀಡಿದ ತಾಯಿ ಬೆಕ್ಕೊಂದು ಆಹಾರ ಅರಸುತ್ತಾ ಹೊರಟು ಹೋಗಿದ್ದು, ಇತ್ತ ತಾಯಿಯ ಬರುವಿಕೆಗಾಗಿ ಕಾದು ಹಸಿವಿನಿಂದ ಬಳಲಿ ಬೆಂಡಾದ ಮರಿಗಳು ಅದೇ ದಾರಿಯಲ್ಲಿ ಮಲಗಿದ್ದ ಹಂದಿಯೊಂದನ್ನು ಸುತ್ತುವರೆದು ಹಾಲಿಗಾಗಿ ಹಂಬಲಿಸಿವೆ. ಹಸಿವಿನಿಂದ ಪರಿತಪಿಸುತ್ತಿದ್ದ ಮರಿಗಳನ್ನು ನೋಡಿದ ತಾಯಿ ಹಂದಿಯ ಮನಕರಗಿದೆ. ಇವು ನನ್ನ ಮರಿಗಳಲ್ಲ ಎಂಬುವುದು ಗೊತ್ತಿದ್ದರೂ ಪ್ರತಿರೋಧ ಮಾಡದೆ ಹಾಲುಣಿಸುತ್ತಾ ತನ್ನ ತಾಯ್ತನವನ್ನು ಮೆರೆದಿದೆ ಎಲ್ಲಿ ನಮ್ಮ ಸೌಂದರ್ಯ ಹಾಳಾಗುತ್ತೋ ಎಂಬ ಭಯದಲ್ಲಿ ಕೆಲವು ಮಹಿಳೆಯರು ತಾವು ಹೆತ್ತ ಮಕ್ಕಳಿಗೆ ಹಾಲುಣಿಸಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಹಂದಿಯ ಮಾತೃ ವಾತ್ಸಲ್ಯವನ್ನು ಮೆಚ್ಚಲೇಬೇಕು. ಇಂತಹವೊಂದು ಅಪರೂಪದ ಚಿತ್ರವನ್ನು ಸರೆಹಿಡಿದಿದ್ದು ನಮ್ಮ ಪತ್ರಿಕೆಯ ಹೆಮ್ಮೆ.