logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಸಯೀದ್ ಜಾಫ್ರಿ On birth anniversary of great actor Saeed Jaffrey
ಸಯೀದ್ ಜಾಫ್ರಿ ಒಬ್ಬ ಮಹಾನ್ ಚಲನಚಿತ್ರ ಕಲಾವಿದ. ಇಂದು ಅವರ ಜನ್ಮದಿನ. ಅವರ ಕುರಿತು ಸಿ. ಪಿ. ರವಿಕುಮಾರ್ ಅವರು ಬರೆದ ಮನೋಜ್ಞ ಲೇಖನವನವನ್ನು ಮೊದಲು ಇಲ್ಲಿ ಹೇಳಿ ನಂತರ ಅವರ ಕೆಲವೊಂದು ವಿವರ ಹೇಳುತ್ತೇನೆ.

ಸಯೀದ್ ಜಾಫ್ರಿ ಎಂದಾಗ ನೆನಪಾಗುವುದು ಅವರ ವಿಶಿಷ್ಟವಾದ ಧ್ವನಿ ಮತ್ತು ಮಧುರ ಸಂಭಾಷಣಾ ಶೈಲಿ. "ಶತರಂಜ್ ಕೇ ಖಿಲಾಡಿ" ಚಿತ್ರದಲ್ಲಿನ ಅವರ ಪಾತ್ರ ಅವಿಸ್ಮರಣೀಯ. ಅವಧ್ ಪ್ರಾಂತದಲ್ಲಿ ನವಾಬನಾದ ವಾಜಿದ್ ಅಲಿ ಶಾಹ್ ಒಬ್ಬ ವಿಲಾಸಿ ರಾಜ. ಅವನಿಗೆ ಮೂರು ಹೊತ್ತೂ ಶಾಯರಿ-ನೃತ್ಯ-ಗೀತೆಗಳಲ್ಲೇ ಮೋಹ. ಸ್ವಂತ ಕವಿ ಕೂಡ! ಯಥಾ ರಾಜಾ ತಥಾ ಪ್ರಜಾ! ಜನರಿಗೂ ಇಂಥದ್ದೇ ಶೋಕಿಗಳು. ಈ ಚಿತ್ರದಲ್ಲಿ ಸಜ್ಜದ್ ಅಲಿ ಮತ್ತು ರೋಷನ್ ಅಲಿ ಎಂಬ ಇಬ್ಬರು ಶ್ರೀಮಂತರ ಪಾತ್ರಗಳು ಬರುತ್ತವೆ. ಸಯೀದ್ ಜಾಫ್ರಿ ಮತ್ತು ಸಂಜೀವ್ ಕುಮಾರ್ ಈ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಶ್ರೀಮಂತರಿಗೆ ಶತರಂಜ್ ಆಡುವ ಶೋಕಿ. ಅದರಲ್ಲೇ ಮೂರು ಹೊತ್ತೂ ಮಗ್ನರಾಗಿರುವ ಇವರಿಗೆ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವೇ ಇರುವುದಿಲ್ಲ. ಒಬ್ಬ ಶ್ರೀಮಂತನ ಹೆಂಡತಿ ವಿರಹದಲ್ಲಿ ಬೇಯುತ್ತಾ ಹುಚ್ಚಿಯಂತಾಗಿದ್ದಾಳೆ. ಇನ್ನೊಬ್ಬನ ಹೆಂಡತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ! ಇತ್ತ ಈಸ್ಟ್ ಇಂಡಿಯಾ ಕಂಪನಿ ಅವಧ್ ಮೇಲೆ ಕಣ್ಣಿಟ್ಟಿದೆ. ಶತ್ರುಗಳು ಬಂದಾಗ ವಾಜಿದ್ ಅಲಿ ಶಾಹ್ ಯಾವುದೇ ಹೋರಾಟವಿಲ್ಲದೆ ತನ್ನ ತಲೆಯ ಮೇಲಿನ ಮುಕುಟವನ್ನು ಎತ್ತಿ ಕೆಳಕ್ಕಿಟ್ಟುಬಿಡುತ್ತಾನೆ. ಯುದ್ಧಕ್ಕೆ ಹೆದರಿದ ಶ್ರೀಮಂತರು ಓಡಿ ಒಂದು ಸ್ಮಶಾನದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅಲ್ಲೂ ಅವರಿಗೆ ಶತರಂಜ್ ಶೋಕಿ ಬಿಡದು. ತಮ್ಮ ಪಗಡೆ ಹಾಸನ್ನು ಜೊತೆಗೇ ತೆಗೆದುಕೊಂಡು ಹೋಗುತ್ತಾರೆ! ಆಟದಲ್ಲಿ ಮೋಸ ಮಾಡಿದನೆಂಬ ಕಾರಣಕ್ಕಾಗಿ ಇಬ್ಬರಿಗೂ ಜಗಳವಾಗುತ್ತದೆ. ಇದಕ್ಕಾಗಿ ಒಬ್ಬರನ್ನೊಬ್ಬರು ಖೂನಿ ಮಾಡಲೂ ಅವರು ತಯಾರು! ಆದರೆ ತಮ್ಮ ಜೊತೆ ಪಗಡೆ ಆಡಲಾದರೂ ಯಾರಾದರೂ ಬೇಕಲ್ಲ! ಹೀಗಾಗಿ ಪರಸ್ಪರರನ್ನು ಕ್ಷಮಿಸುತ್ತಾರೆ. ಸತ್ಯಜಿತ್ ರೇ ಅವರ ನಿರ್ದೇಶನದಲ್ಲಿ ಸಂಜೀವ್ ಕುಮಾರ್ ಮತ್ತು ಸಯೀದ್ ಜಾಫ್ರಿ ಅವರ ಅಭಿನಯ ಮನೋಜ್ಞವಾಗಿದೆ. ಈ ಪಾತ್ರಗಳನ್ನು ಕಂಡು ನಗು, ಕೋಪ, ಹೇಸಿಕೆ, ಅನುಕಂಪ ಎಲ್ಲವೂ ಉಂಟಾಗುತ್ತದೆ! ಪ್ರೇಮ್ ಚಂದ್ ತಮ್ಮ ಕತೆಯನ್ನು ಇವರಿಬ್ಬರಿಗಾಗಿಯೇ ಬರೆದರು ಎಂಬಷ್ಟು ಸಹಜವಾಗಿ ಈ ನಟರು ಅಭಿನಯಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಜೆನೆರಲ್ ಊಟ್ರಮ್ ಪಾತ್ರದಲ್ಲಿ ರಿಚರ್ಡ್ ಆಟೆನ್ ಬರೋ ನಟಿಸಿದ್ದಾರೆ.

ಸಯೀದ್ ಜಾಫ್ರಿ ಅವರು ಹಲವಾರು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದ ಮ್ಯಾನ್ ಹೂ ವುಡ್ ಬಿ ಕಿಂಗ್ ಎಂಬುದು ರಡ್ಯಾರ್ಡ್ ಕಿಪ್ಲಿಂಗ್ ಬರೆದ ಕಥೆಯನ್ನು ಆಧರಿಸಿದ ಚಿತ್ರ. ಇದರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಲ್ಲಿ ಕೆಲಸಕ್ಕಿದ್ದ ಇಬ್ಬರು ಮೋಸಗಾರ ಸೈನಿಕರ ಕಥೆ ಬರುತ್ತದೆ. ಇವರು ಯಾವುದೋ ಕೆಟ್ಟ ಕೆಲಸ ಮಾಡಿ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ. ಅವರು ಉತ್ತರ ಭಾರತದ ಒಂದು ಬೆಟ್ಟಪ್ರದೇಶದ ರಾಜ್ಯಕ್ಕೆ ಬಂದು ಸೇರುತ್ತಾರೆ. ಇವರಲ್ಲಿ ಒಬ್ಬನನ್ನು (ಶಾನ್ ಕಾನರಿ) ಇಲ್ಲಿಯ ಜನ ಸೂರ್ಯ ಭಗವಂತನ ಅವತಾರವೆಂದು ಸ್ವೀಕರಿಸುತ್ತಾರೆ. ಈ ನಾಲಾಯಕ್ಕುಗಳಿಗೆ ಎಲ್ಲಿಲ್ಲದ ಆದರ-ಸತ್ಕಾರಗಳು ನಡೆಯುತ್ತವೆ. ಮುಂದೆ ಇವರ ಗುಟ್ಟು ರಟ್ಟಾದಾಗ ಅದೇ ಮುಗ್ಧ ಜನ ಇವರನ್ನು ಒಂದು ಹಗ್ಗದ ಸೇತುವೆಯ ಮೇಲೆ ತಪ್ಪಿಸಿಕೊಂಡು ಹೋಗುವಾಗ ಸೇತುವೆಯನ್ನು ಕಡಿದುಹಾಕುತ್ತಾರೆ. ಶಾನ್ ಕಾನರಿಯ ಜೊತೆಗಾರನಾಗಿ ಸಯೀದ್ ಜಾಫ್ರಿಯವರ ಅಭಿನಯ ನೆನಪಿನಲ್ಲಿ ನಿಲ್ಲುವಂಥದು.

"ಮೈ ಬ್ಯೂಟಿಫುಲ್ ಲಾಂಡ್ರೆಟ್" ಎಂಬುದು ಹನೀಫ್ ಕುರೇಷಿ ಅವರ ಕಥೆಯನ್ನು ಆಧರಿಸಿದ ಚಿತ್ರ. ಇಂಗ್ಲೆಂಡಿನಲ್ಲಿ ನೆಲೆಸಿದ ಪಾಕೀಸ್ತಾನ್ ಮೂಲದ ಒಂದು ಮುಸ್ಲಿಂ ಸಂಸಾರದ ಕಥೆ ಇದರಲ್ಲಿ ಬರುತ್ತದೆ. ಒಮರ್ ಅಲಿ ಎಂಬ ನವಯುವಕನ ತಂದೆ ಹಾಸಿಗೆ ಹಿಡಿದಿದ್ದಾನೆ. ಅಲಿಯ ಚಿಕ್ಕಪ್ಪ ಒಬ್ಬ ಇಂಗ್ಲಿಷ್ ಹೆಣ್ಣನ್ನು ರಖಾವಾಗಿ ಇಟ್ಟುಕೊಂಡಿದ್ದಾನೆ. ಅವನು ತನ್ನ ವಹಿವಾಟಿನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾನೆ. ಆಲಿಗೆ ಅವನು ತನ್ನ ಗ್ಯಾರೇಜಿನಲ್ಲಿ ಕಾರು ತೊಳೆಯುವ ಕೆಲಸಕ್ಕಿಟ್ಟುಕೊಳ್ಳುತ್ತಾನೆ. ಮುಂದೆ ಅಲಿ ಮತ್ತು ಅವನ ಬ್ರಿಟಿಷ್ ಸ್ನೇಹಿತ ಇಬ್ಬರೂ ಸೇರಿ ಚಿಕ್ಕಪ್ಪನ ಒಂದು ಹಳೆಯ ಲಾಂಡ್ರಿಯನ್ನು ಪುನರುಜ್ಜೀವನಗೊಳಿಸಿ ನಡೆಸುತ್ತಾರೆ. ಆದರೆ ಬ್ರಿಟಿಷ್ ಸ್ನೇಹಿತನ ಕೆಲವು ಬ್ರಿಟಿಷ್ ಸಂಗಡಿಗರಿಗೆ ಅವನು ಒಬ್ಬ ಪಾಕೀಸ್ತಾನಿ ಹುಡುಗನೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಸಹಿಸದೆ ಲಾಂಡ್ರಿಯನ್ನು ಧ್ವಂಸ ಮಾಡುತ್ತಾರೆ. ಸಯೀದ್ ಜಾಫ್ರಿ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಲಂಡನ್ ನಗರದಲ್ಲಿ ನೆಲಸಿದ ಭಾರತೀಯ ಅಥವಾ ಪಾಕೀಸ್ತಾನಿ ಮೂಲದ ನಿವಾಸಿಗಳನ್ನು ಕುರಿತು ಮುಂದೆ ಅನೇಕ ಚಿತ್ರಗಳು ಬಂದವು. ಸಯೀದ್ ಜಾಫ್ರಿ ಅವರು ಮಾಡಿದ ಪಾತ್ರಗಳನ್ನು ನೆನಪಿಸುವ ಪಾತ್ರಗಳನ್ನು ನಟ ಓಂ ಪುರಿ ಮಾಡಿದರು. ಇಬ್ಬರೂ ಸಮರ್ಥ ನಟರು. ಓಂ ಪುರಿ ಅವರದ್ದು ತೀಕ್ಷ್ಣ ಅಭಿನಯವಾದರೆ ಜಾಫ್ರಿ ಅವರದ್ದು ಹೆಚ್ಚು ಸೂಕ್ಷ್ಮ.

ಸಯೀದ್ ಜಾಫ್ರಿ ಅವರು ತಮ್ಮ ಡೈರಿಯ ಪುಟದಲ್ಲಿ ಬರೆದಿದ್ದಾರೆ ಎನ್ನಲಾದ ಕಥೆ ಫೇಸ್ ಬುಕ್ಕಿನಲ್ಲಿ ಪ್ರಸಾರವಾಯಿತು. ಈ ಕಥೆಯಲ್ಲಿ ಅವರು ತಮ್ಮ ಮೊದಲ ಹೆಂಡತಿ ಮೆಹಾರುನ್ನೀಮಾ ಬಗ್ಗೆ ಬರೆದಿದ್ದಾರೆ. ಈಕೆಯನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿ ಜಾಫ್ರಿ ಮದುವೆಯಾದರು. ಜಾಫ್ರಿ ಅವರಿಗೆ ಉಡುಗೆ-ತೊಡುಗೆ ಮಾತು-ಕತೆ ಎಲ್ಲದರಲ್ಲೂ ಬ್ರಿಟಿಷರಂತೆ ಇರಬೇಕು ಎನ್ನುವ ಶೋಕಿ. ಅವರ ಪತ್ರಿ ಮೆಹರುನ್ನೀಮಾಗೆ ಇದು ಸಾಧ್ಯವಾಗಲಿಲ್ಲ. ಆಕೆಗೆ ತಾನಾಯಿತು, ತನ್ನ ಮನೆಯಾಯಿತು, ತನ್ನ ಮೂರು ಮಕ್ಕಳಾದರು. ಈಕೆಯ ಹಳ್ಳಿತನದಿಂದ ಬೇಸತ್ತು ಜಾಫ್ರಿ ಆಕೆಯನ್ನು ತ್ಯಜಿಸಿ ಜೆನಿಫರ್ ಎಂಬ ಬ್ರಿಟಿಷ್ ಯುವತಿಯನ್ನು ಮದುವೆಯಾದರು. ಆದರೆ ಕ್ರಮೇಣ ತಮ್ಮ ಹೊಸಪತ್ನಿಯಲ್ಲಿ ಅವರು ಮೆಹರುನ್ನೀಮಾಳ ಭಯ-ಭಕ್ತಿ-ಸಮರ್ಪಣ ಭಾವವನ್ನು ಕಾಣಲು ಬಯಸಿದರು! ಅವರ ದ್ವಿತೀಯ ಪತ್ನಿ ಅವರು ಬಯಸಿದಂತೆ ಶೋಕಿಯಾಗಿದ್ದರೂ ಅವರ ಬೇಕು-ಬೇಡಗಳನ್ನು ಪೂರೈಸುವುದರಲ್ಲಿ ಇಚ್ಛೆಯುಳ್ಳವರಾಗಿರಲಿಲ್ಲ. ಒಂದು ದಿನ ಪತ್ರಿಕೆಯಲ್ಲಿ ಅವರಿಗೆ ತಮ್ಮ ಮೊದಲ ಹೆಂಡತಿ ಮೆಹರುನ್ನೀಮಾ ಅವರ ಫೋಟೋ ಕಂಡಿತು! ಆಕೆ ಸಂಪೂರ್ಣ ಬದಲಾಗಿದ್ದಳು. ಈಗ ಆಕೆಯ ಹೆಸರು ಮಧುರ್ ಜಾಫ್ರಿ ಎಂದಿತ್ತು. ಆಕೆ ಪ್ರಸಿದ್ಧ ಬಾಣಸಿಗಳಾಗಿದ್ದಳು, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಳು! ಆಕೆ ಬೇರೊಬ್ಬರನ್ನು ಮದುವೆಯಾಗಿದ್ದಳು ಕೂಡಾ. ಸಯೀದ್ ಜಾಫ್ರಿ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆಕೆ ಅವರನ್ನು ನೋಡಲು ನಿರಾಕರಿಸಿದಳು! "ನನ್ನ ಮಕ್ಕಳು ಆಕೆಯ ಬಗ್ಗೆ ಹೇಳಿದ್ದನ್ನು ನಾನೆಂದೂ ಮರೆಯಲಾರೆ. ಅವರ ಎರಡನೇ ತಂದೆ ಅವರ ತಾಯಿಯನ್ನು ನಿಜಕ್ಕೂ ಪ್ರೀತಿಸುತ್ತಿದ್ದ. ಆಕೆಯನ್ನು ಇದ್ದ ಹಾಗೇ ಸ್ವೀಕರಿಸಿದ. ನನ್ನ ಹಾಗೆ ಆಕೆಯನ್ನು ಬದಲಾಯಿಸಲು ಪ್ರಯತ್ನಿಸಲಿಲ್ಲ. ಆತನ ಪ್ರೀತಿಯ ಛಾಯೆಯಲ್ಲಿ ಆಕೆ ಒಬ್ಬ ಆತ್ಮವಿಶ್ವಾಸವುಳ್ಳ ಮಹಿಳೆಯಾಗಿ ರೂಪುಗೊಂಡಳು. ನಾನಾದರೋ ನನ್ನದೇ ಸ್ವಾರ್ಥದಲ್ಲಿದ್ದು ಆಕೆಯನ್ನು ಪ್ರೀತಿಸಲೇ ಇಲ್ಲ. ಯಾರಿಗೆ ತಮ್ಮಲ್ಲೇ ಹೆಚ್ಚು ಮೋಹವೋ ಅವರು ಬೇರೆಯವರನ್ನು ಪ್ರೀತಿಸಲಾರರು," ಎಂದು ಸಯೀದ್ ಜಾಫ್ರಿ ಬರೆದುಕೊಂಡಿದ್ದಾರೆ. ಹೀಗೆ ತಮ್ಮ ಜೀವನವನ್ನು ತೆರೆದಿಡುವವರು ಎಷ್ಟು ಜನರಿದ್ದಾರೆ? ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವವರಂತೂ ಇಲ್ಲವೇ ಇಲ್ಲ.

ಜಾಫ್ರಿ ಅವರ ಸಾವಿನಲ್ಲಿ ಒಬ್ಬ ಉತ್ತಮ ನಟನಷ್ಟೇ ಅಲ್ಲ ಒಬ್ಬ ಉತ್ತಮ ಮನುಷ್ಯನನ್ನೂ ಜಗತ್ತು ಕಳೆದುಕೊಂಡಿತು.

ಸಯೀದ್ ಜಾಫ್ರಿ 1929ರ ಜನವರಿ 8ರಂದು ಪಂಜಾಬಿನ ಮಲೇರ್‍ಕೋಟ್ಲ ಎಂಬಲ್ಲಿ ಜನಿಸಿದರು. ಅಲಹಾಬಾದ್ನಲ್ಲಿ ಬಿಎ, ಎಂಎ ಪದವಿಧರರಾದರು. ಆಕಾಶವಾಣಿಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಜಾಫ್ರಿ, ನಂತರ ಅಮೆರಿಕದ ದಿ ಕ್ಯಾಥೋಲಿಕ್‌ ವಿಶ್ವವಿದ್ಯಾಲಯದಲ್ಲಿ ಫುಲ್‌ಬ್ರೈಟ್‌ ಸ್ಕಾಲರ್ ಆಗಿ ಆಯ್ಕೆಯಾಗಿ ನಾಟಕ ವಿಷಯವನ್ನು ಅಧ್ಯಯನ ಮಾಡಿದರು. ಶೇಕ್ಸ್‌ಪಿಯರ್‌ನ ನಾಟಕಗಳನ್ನು ಅಮೆರಿಕದಲ್ಲಿ ಪ್ರದರ್ಶಿಸಿದ ಮೊದಲ ಭಾರತೀಯ ಎಂಬ ಅಗ್ಗಳಿಕೆ ಅವರದಾಗಿತ್ತು. 100ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಜಾಫ್ರಿ, ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ‘ಶತ್‌ರಂಜ್ ಕೆ ಖಿಲಾಡಿ’ ಅಲ್ಲದೆ ‘ಚಷ್ಮೆ ಬದ್ದೂರ್’, ‘ಮಾಸೂಮ್‌’, ‘ಕಿಸೀ ಸೆ ನಾ ಕೆಹನಾ’, ‘ಮಂಡಿ’, ‘ಮಷಾಲ್‌’, ‘ರಾಮ್ ತೇರಿ ಗಂಗಾ ಮೈಲಿ’, ‘ರಾಮ್‌ ಲಖನ್‌’, ‘ಅಜೂಬಾ’, ‘ಹೆನ್ನಾ’ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿ ಚಿತ್ರಗಳಷ್ಟೇ ಅಲ್ಲ, ಹಾಲಿವುಡ್‌ ನಟರಾದ ಸೀನ್ ಕಾನರಿ, ಮೈಕೇಲ್ ಕೇನ್, ರೋಶನ್ ಸೇಥ್, ಜೇಮ್ಸ್ ಐವರಿ, ರಿಚರ್ಡ್ ಅಟೆನ್ಬರೋ ಮತ್ತು ಡೇನಿಯಲ್ ಡೇ-ಲೆವಿಸ್ ಅವರೊಂದಿಗೆ ಇಂಗ್ಲಿಷ್‌ ಚಿತ್ರಗಳಲ್ಲೂ ಜಾಫ್ರಿ ಅಭಿನಯಿಸಿದ್ದರು. ‘ಗಾಂಧಿ’ ಚಿತ್ರದಲ್ಲೂ ಸರ್ದಾರ್ ಪಟೇಲರಾಗಿ ಅವರ ಅಭಿನಯ ಸ್ಮರಣೀಯ. 'ದಿ ಮ್ಯಾನ್‌ ಹೂ ವುಡ್‌ ಬಿ ಕಿಂಗ್, ’ ಡೆತ್ ಆನ್‌ ದಿ ನೈಲ್‌’, ‘ದಿ ಜ್ಯೂಲ್‌ ಇನ್‌ ದಿ ಕ್ರೌನ್‌’, ‘ಎ ಪ್ಯಾಸೇಜ್‌ ಟು ಇಂಡಿಯಾ’, ‘ಮೈ ಬ್ಯೂಟಿಫುಲ್ ಲಾಂಡ್ರೆಟ್‌’, ‘ದಿ ಡಿಸೀವರ್ಸ್’, ‘ಆಫ್ಟರ್ ಮಿಡ್‌ ನೈಟ್‌’, ‘ಆನ್‌ ವಿಂಗ್ಸ್‌ ಆಫ್‌ ಫೈರ್‌’, ‘ಚಿಕನ್ ಟಿಕ್ಕಾ ಮಸಾಲ’ ಜಾಫ್ರಿ ಅಭಿನಯದ ಇಂಗ್ಲಿಷ್ ಚಿತ್ರಗಳು. 'ಮೈ ಬ್ಯೂಟಿಫುಲ್ ಲಾಂಡ್ರೆಟ್‌’ ಚಿತ್ರದ ಅಭಿಯನಕ್ಕಾಗಿ ಜಾಫ್ರಿ ‘ಬಫ್ತಾ’ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸಯೀದ್ ಜಾಫ್ರಿ ಅವರು ಆರ್ಡರ್ ಆಫ್‌ ಬ್ರಿಟಿಷ್‌ ಎಂಪೈರ್ (ಒಬಿಇ) ಗೌರವಕ್ಕೆ ಪಾತ್ರರಾಗಿದ್ದರು. ಈ ಗೌರವ ಪಡೆದ ಪ್ರಥಮ ಭಾರತೀಯ ಅವರು.

ಸಯೀದ್ ಜಾಫ್ರಿ 2015ರ ನವೆಂಬರ್ 15ರಂದು ಲಂಡನ್ನಿನಲ್ಲಿ ನಿಧನರಾದರು.

ಕೃತಜ್ಞತೆ: ಸಿ. ಪಿ. ರವಿಕುಮಾರ್
(https://cpravikumar-kannada.blogspot.com)

Apr 05, 2021 at 9:48 am

ಗಾನಗಂಧರ್ವ ಕೆ. ಜೆ. ಏಸುದಾಸ್ On the birth day of great feel of music called K J Yesudas
ಜನವರಿ 10, ಕೆ. ಜೆ. ಏಸುದಾಸರ ಜನ್ಮದಿನ. ಈ ಸುಕೋಮಲ ಕಂಠದ ಕಟ್ಟಸ್ಸೇರಿ ಜೋಸೆಫ್ ಏಸುದಾಸರು ಹುಟ್ಟಿ 82 ವರ್ಷವಾಯಿತು. ಅವರು ಹುಟ್ಟಿದ್ದು 1940ರ ವರ್ಷದಲ್ಲಿ. ಅವರ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಅವರ ವ್ಯಕ್ತಿತ್ವ ಹೀಗೆ ಪ್ರತಿಯೊಂದೂ ಹಿರಿದಾದದ್ದೇ. ಒಬ್ಬ ಉತ್ತಮ ಕಲೆಗಾರರಾಗಿ, ಸಂಸ್ಕೃತಿಗಾರರಾಗಿ ಅವರು ತಮ್ಮ ಸುತ್ತಲಿನ ಪ್ರಪಂಚದಲ್ಲಿ ಹರಡಿರುವ ಸಂಗೀತ ಪ್ರೀತಿ ಅಪ್ರತಿಮವಾದದ್ದು.

ಕನ್ನಡಿಗರಾದ ನಾವು ಅವರನ್ನು ಅರಿಯುವ ಮೊದಲೇ ಏಸುದಾಸ್ ಅವರು ‘ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ’ ಎಂಬ ಹಾಡಿನಿಂದ ಅರವತ್ತರ ದಶಕದಲ್ಲೇ ಕನ್ನಡಿಗರ ಮನೆಬಾಗಿಲಿಗೆ ಬಂದು ಆಪ್ತರಾಗಿದ್ದರು. 1970ರ ದಶಕದಲ್ಲಿ ‘ಚಿತ್ ಚೋರ್’ ಎಂಬ ರಾಜಶ್ರೀ ಚಿತ್ರಸಂಸ್ಥೆಯ ಚಿತ್ರ ಭಾರೀ ಜನಪ್ರಿಯವಾಯಿತು. ಬಸುಚಟರ್ಜಿ ಅವರ ಸುಂದರ ಚಿತ್ರವದು. ರವೀಂದ್ರ ಜೈನರ ಸುಶ್ರಾವ್ಯ ಸಂಗೀತದಲ್ಲಿ ಏಸುದಾಸರ ‘ಆಜ್ ಸೆ ಪೆಹೆಲೇ ಆಜ್ ಸೆ ಜ್ಯಾದಾ ಖುಷೀ ಆಜ್ ತಕ್ ನಹೀ ಮಿಲೇ’ ಹಾಡು ಬಂದಾಗ ಭಾರತೀಯರಿಗೂ ಅಷ್ಟೇ, ಅಲ್ಲಿಯವರೆಗೆ ಕಾಣದ ಯಾವುದೋ ಸುಮಧುರ ಅನುಭವ. ಎಲ್ಲರ ಬಾಯಲ್ಲೂ ಏಸುದಾಸರ ‘ಗೋರಿ ತೇರ ಗಾವೋ ಬಡಾ ಪ್ಯಾರಾ’ ಮನೆ ಮಾಡಿಬಿಟ್ಟಿತು. 'ಚಿತ್ ಚೋರ್' ಚಿತ್ರದ ಇತರ ಹಾಡುಗಳಾದ ‘ಜಬ್ ದೀಪ್ ಜಲೆ ಆನಾ’, ‘ತು ಜೋ ಮೇರೆ ಸುರ್ ಮೇ’ ಕೂಡ ಅಷ್ಟೇ ಸೊಗಸಿನವು.

ಆನಂತರದಲ್ಲಿ ಏಸುದಾಸ್ ಅವರು ಹಿಂದಿಯಲ್ಲಿ ಆಯ್ದ ಹಾಡುಗಳಿಗೆ ಮಾತ್ರ ಹಾಡಿದರೂ ಅವರಿಲ್ಲದ ಎಡೆಯೇ ಇಲ್ಲ. ಭಾರತದ ಬಹುತೇಕ ಭಾಷೆಗಳಲ್ಲಲ್ಲದೆ, ಮಲಯ, ರಷ್ಯಾ, ಅರಬ್ಬೀ, ಲ್ಯಾಟಿನ್, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಹಾ ಅವರು ಹಾಡಿದ್ದಾರೆ. ಹೀಗೆ ಅವರ ಗಾನ ಲಹರಿ ಕಳೆದ ಆರು ದಶಕಗಳನ್ನು ಮೀರಿ ನಿರಂತರವಾಗಿ ಮುಂದುವರೆದಿದೆ.

ಚಿತ್ರಸಂಗೀತದಲ್ಲಷ್ಟೇ ಅಲ್ಲದೆ ಏಸುದಾಸರು ಶಾಸ್ತ್ರೀಯ ಸಂಗೀತಾಸಕ್ತರಿಗೆ ಸಹಾ ಬಲು ಪ್ರಿಯರು. ಆವರ ಯಾವುದೇ ಚಿತ್ರಗೀತೆ ಕೂಡ ಶಾಸ್ತ್ರೀಯ ಸಂಗೀತದ ಸೊಗಡನ್ನು ಕಟ್ಟಿಕೊಡುತ್ತದೆ. ಬೇಕಿದ್ದರೆ ‘ಯಾರೇ ನೀನು ಚೆಲುವೆ’, ‘ನಗುವಿನ ಅಳುವಿನ ಸಂಕೋಲೆ’, ‘ನಮ್ಮೂರ ಯುವರಾಣಿ ಕಲ್ಯಾಣವಂತಿ’, ‘ಚೆಲುವೆ ನಿನ್ನ ಕಣ್ಣ ನೋಟ ಮಿಂಚು ಮಿಂಚು’, ‘ಆ ಕರ್ಣನಂತೆ ನೀ ದಾನಿಯಾದೆ’, ‘ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ’, 'ಎಲ್ಲೆಲ್ಲು ಸಂಗೀತವೇ', 'ಶ್ರೀಕರ ಶುಭಕರ ಶಿವಶಂಕರ', 'ಶಾರದೇ ದಯೆ ತೋರಿದೆ' ಹೀಗೆ ಯಾವುದೇ ಭಾವದ ಗೀತೆಯನ್ನಾದರೂ ನೆನಪಿಸಿಕೊಂಡು ನೋಡಿ.....!.

ಅಂದಿನ ಅರಳೀಕಟ್ಟೆ ಸಂಗೀತ ಕಾರ್ಯಕ್ರಮಗಳಲ್ಲಿ ಸಂಗೀತ ದಿಗ್ಗಜರ ದಂಡೇ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ತಾಂಡವಿಸುತ್ತಿತ್ತು. ಏಸುದಾಸ್ 1970ರ ದಶಕದಲ್ಲೇ ಅತಿ ಕಿರಿಯವಯಸ್ಸಿನ ಸಂಗೀತ ಸಮ್ಮೇಳನಾಧ್ಯಕ್ಷರು ಎಂಬ ಗೌರವಕ್ಕೆ ಪಾತ್ರರಾದವರು. ಏಸುದಾಸರು ಯಾವುದೇ ಸಿನಿಮಾದ ವಾತಾವರಣದ ಸೋಂಕಿಲ್ಲದೆ, ಕೇವಲ ತಮ್ಮ ಅಮೋಘ ಶಾಸ್ತ್ರೀಯ ಸಂಗೀತ ಬಲಮಾತ್ರದಿಂದಲೇ ಕಳೆದ ಐದು ದಶಕಗಳಲ್ಲಿ ಎಲ್ಲಾ ಸಂಗೀತಾಸಕ್ತರ ಹೃದಯಗಳಲ್ಲಿ ಪ್ರಧಾನರಾಗಿ ರಾರಾಜಿಸುತ್ತಿದ್ದಾರೆ.

ಏಸುದಾಸರಿಗೆ ಅವರ ತಂದೆ ಜೋಸೆಫ್ ಅವರೇ ಮೊದಲ ಗುರು. ಜೋಸೆಫ್ ಅವರು ಕೂಡ ಹೆಸರಾಂತ ಶಾಸ್ತ್ರೀಯ ಸಂಗೀತ, ರಂಗಭೂಮಿ ಕಲಾವಿದರಾಗಿದ್ದರು. ಮುಂದೆ ಏಸುದಾಸರು ಸಂಗೀತ ಅಕಾಡಮಿಗಳಲ್ಲಿ ಪದವಿ ಪಡೆದು, ಸ್ವಲ್ಪ ಕಾಲ ಶ್ರೀ ವೇಚೂರು ಹರಿ ಹರ ಸುಬ್ರಮಣ್ಯ ಅಯ್ಯರ್ ಅವರ ಬಳಿಯೂ ಕಲಿತರು. ಆನಂತರದಲ್ಲಿ ಏಸುದಾಸ್ ಸಂಗೀತ ಲೋಕದ ಅಪ್ರತಿಮ ವಿದ್ವಾಂಸರಾದ ಚೆಂಬೈ ವೈದ್ಯನಾಥ ಭಾಗವತರ್ ಅವರ ಶಿಷ್ಯತ್ವ ಪಡೆದರು. ಕೇವಲ ಕರ್ನಾಟಕ ಸಂಗೀತದಲ್ಲಿ ಗಳಿಸಿದ ಸಾರ್ವಭೌಮತ್ವವಲ್ಲದೆ ಏಸುದಾಸರು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದಲ್ಲೂ ಪ್ರಾವೀಣ್ಯತೆ ಸಾಧಿಸಿದರು. ಅವರಿಗೆ ಯಾವುದೂ ಬೇರೆ ಅಲ್ಲ, ಯಾರೂ ದೂರವಲ್ಲ, ಎಲ್ಲವೂ ಒಂದೇ. ಶ್ರೀ ನಾರಾಯಣ ಗುರು ಅವರು ಹೇಳುವ “ಒಂದೇ ಜಾತಿ, ಒಂದೇ ಧರ್ಮ ಮತ್ತು ಸಮಸ್ತ ಜೀವ ಸಂಕುಲಕ್ಕೆ ಒಂದೇ ದೇವರು” ಎಂಬ ನುಡಿ ನನ್ನ ಹೃದಯದಲ್ಲಿರುವ ಆತ್ಮೀಯ ಮಂತ್ರ ಎನ್ನುತ್ತಾರೆ ಏಸುದಾಸ್.

ಏಸುದಾಸರು ಹಾಡಿರುವ ಧ್ವನಿಮುದ್ರಿಕೆಗಳ ಸಂಖ್ಯೆ ಅನೇಕ ಸಾವಿರಗಳನ್ನು ಮೀರಿದೆ. ಇದುವರೆಗೂ ಇನ್ನಾರಿಗೂ ದಕ್ಕಿಲ್ಲದ ಎಂಟು ರಾಷ್ಟ್ರೀಯ ಪ್ರಶಸ್ತಿಗಳೂ, ಮುವ್ವತ್ತಕ್ಕೂ ಹೆಚ್ಚು ವಿವಿಧ ರಾಜ್ಯ ಪ್ರಶಸ್ತಿಗಳೂ ಚಲನಚಿತ್ರಗಾಯನದಲ್ಲಿ ಅವರಿಗೆ ಸಂದಿವೆ. ಹಲವು ವರ್ಷಗಳ ಹಿಂದೆ ತಮ್ಮನ್ನು ರಾಜ್ಯಪ್ರಶಸ್ತಿಗಳಿಗೆ ಪರಿಗಣಿಸದೆ ಯುವ ಕಲಾವಿದರಿಗೆ ಆ ಪ್ರಶಸ್ತಿಯನ್ನು ನೀಡಬೇಕೆಂದು ಅವರು ತಮ್ಮ ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ. ಎಪ್ಪತ್ತು-ಎಂಭತ್ತರ ದಶಕದಲ್ಲಿ ಹಲವಾರು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನವನ್ನೂ ಮಾಡಿದ್ದರು. ಒಮ್ಮೆ ಚನ್ನೈನ ಸ್ಟುಡಿಯೋದಲ್ಲಿ ಒಂದೇ ದಿನ ಹದಿನಾರು ಸಿನಿಮಾ ಹಾಡುಗಳನ್ನು ಹಾಡಬೇಕಾದ ಅನಿವಾರ್ಯತೆಯನ್ನು ಕೂಡಾ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ವಿಶ್ವದಾದ್ಯಂತ ಏಸುದಾಸ್ ಅವರ ಕಛೇರಿಗಳು, ಗಾಯನ ಪ್ರದರ್ಶನಗಳು ನಡೆಯುತ್ತಿವೆ. 1971ರ ಯುದ್ಧ ಕಾಲದಲ್ಲಿ ಇಡೀ ನಾಡೆಲ್ಲಾ ಸಂಚರಿಸಿ ನಿಧಿ ಸಂಗ್ರಹಣೆ ಮಾಡಿಕೊಟ್ಟರು. 1999ರ ವರ್ಷದಲ್ಲಿ ಯುನೆಸ್ಕೋ ಸಂಸ್ಥೆ “ಸಂಗೀತದಲ್ಲಿ ಅಪಾರ ಸಾಧನೆ ಮತ್ತು ಶಾಂತಿ ಪ್ರೇರಣೆಗಳಿಗಾಗಿ” ಏಸುದಾಸರಿಗೆ ಗೌರವ ಪಾರಿತೋಷಕವನ್ನು ನೀಡಿ ಸಂಮಾನಿಸಿತು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವಗಳಲ್ಲದೆ ಹಲವಾರು ರೀತಿಯ ಗೌರವಗಳು ಏಸುದಾಸರನ್ನು ಸೇರಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಏಸುದಾಸರಿಗೆ ಮೊಹಮ್ಮದ್ ರಫಿ, ತಮ್ಮ ಗುರು ಚಂಬೈ ವೈಧ್ಯನಾಥ ಭಾಗವತರ್, ಬಾಲಮುರಳಿ ಕೃಷ್ಣರೆಂದರೆ ಅಪಾರ ಮೆಚ್ಚುಗೆ. ಅವರ ಪುತ್ರ ವಿಜಯ್ ಏಸುದಾಸ್ ಕೂಡ ಪ್ರಸಿದ್ದ ಗಾಯಕರಾಗಿದ್ದು ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಚನ್ನೈ, ತಿರುವನಂತಪುರ ಅಲ್ಲದೆ ಅಮೇರಿಕದ ಫ್ಲೋರಿಡಾ, ಫ್ಲವರ್ ಮೌಂಡ್, ಸಂಯುಕ್ತ ಅರಾಬ್ ಸಂಸ್ಥಾನದ ದುಬೈ ಮುಂತಾದ ಸ್ಥಳಗಳಲ್ಲಿ ವೈಯಕ್ತಿಕ ನೆಲೆಗಳನ್ನು ಹೊಂದಿದ್ದಾರೆ.

1980ರಲ್ಲಿ ಏಸುದಾಸರು ತಿರುವನಂತ ಪುರದಲ್ಲಿ ತರಂಗಿಣಿ ಸ್ಟುಡಿಯೋ ಆರಂಭಿಸಿ ನಂತರದಲ್ಲಿ ಅದರ ವಹಿವಾಟನ್ನು ಚನ್ನೈಗೆ ವರ್ಗಾಯಿಸಿದರು. ಈ ಸಂಸ್ಥೆ ಅಮೇರಿಕದಲ್ಲಿ ಕೂಡ ತನ್ನ ಪ್ರಮುಖ ಶಾಖೆಯನ್ನು ಹೊಂದಿದೆ. ಈ ಸಂಸ್ಥೆ ಧ್ವನಿಮುದ್ರಣ ಕಾರ್ಯಗಳಲ್ಲದೆ ವಿಶ್ವದಾದ್ಯಂತ ಏಸುದಾಸರ ಸಂಗೀತ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಕೂಡ ನೋಡಿಕೊಳ್ಳುತ್ತಿದೆ.

ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಅವರ ಪ್ರಕಾರ ಏಸುದಾಸರದು ವಿಶ್ವದಲ್ಲೇ ಶ್ರೇಷ್ಠ ಇಂಪುದ್ವನಿ. ಭಾರತದ ಸಿನಿಮಾ ಸಂಗೀತದ ಶ್ರೇಷ್ಠ ಸಂಗೀತ ನಿರ್ಧೇಶಕ ರವೀಂದ್ರ ಜೈನ್ “ಏಸುದಾಸ್ ಭಾರತದ ಧ್ವನಿ. ನನಗೇನಾದರೂ ಕಣ್ಣುಬಂದರೆ ನಾನು ನೋಡಲಿಚ್ಚಿಸುವ ಪ್ರಥಮ ವ್ಯಕ್ತಿ ಅವರು” ಎನ್ನುತ್ತಿದ್ದರು. ಏಸುದಾಸರ ಗೆಳೆಯ ಮತ್ತು ಹಲವಾರು ಪ್ರಸಿದ್ಧ ಚಿತ್ರಗಳ ಮಹಾನ್ ಸಂಗೀತ ನಿರ್ದೇಶಕ ದಿವಂಗತ ರವೀಂದ್ರನ್ ಹೇಳುತ್ತಿದ್ದರು “ಏಸುದಾಸನದು ದೇವರ ಧ್ವನಿ, ನಾನು ಆ ಧ್ವನಿಯ ಭಕ್ತ” ಎಂದು.

ಜವಹರಲಾಲ್ ನೆಹರೂ ಜನ್ಮಶತಾಬ್ಧಿ ಆಚರಣೆ ಸಂದರ್ಭದಲ್ಲಿ ಅವರು ವಿವಿಧ ಭಾಷೆಗಳಲ್ಲಿ ಹಾಡಿರುವ ಶಾಸ್ತ್ರೀಯ ಸಂಗೀತದ ಕ್ಯಾಸೆಟ್ ಮತ್ತು ಸಿ.ಡಿಗಳು ಅವರ ವೈವಿಧ್ಯಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದ್ದು ವಿಶ್ವದಾದ್ಯಂತ ಮನೆ ಮನಗಳನ್ನು ಅಲಂಕರಿಸಿದೆ. ಇದಲ್ಲದೆ ಅವರು ಎಲ್ಲ ರೀತಿಯ ಶಾಸ್ತ್ರೀಯ, ಲಘು ಸಂಗೀತ, ಸಿನಿಮಾ ಸಂಗೀತಗಳ ಹಾಡುಗಳನ್ನೂ ಹಾಡಿದ್ದಾರೆ.

ಅವರ 'ಹರಿವರಾಸನಂ ವಿಶ್ವಮೋಹನಂ' ಭಕ್ತಿ ಗೀತೆಯನ್ನು ಆರಾಧಿಸದವರಿಲ್ಲ. ದೇವರಿಗೂ ಅದು ಅತಿ ಆಪ್ತ. ಅದಕ್ಕೇ ಶಬರಿಮಲೈ ಸನ್ನಿಧಾನದಲ್ಲಿ ಅದು ಅಧಿಕೃತವಾದ ಗೀತೆ. ಈ ಮಹಾನ್ ಸಾಧಕನ ಬಗ್ಗೆ ಅದಕ್ಕಿಂತ ಹೇಳಲಿಕ್ಕೆ ಉಳಿದುದಾದರೂ ಏನಿದೆ.

ಪ್ರತಿವರ್ಷ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಏಸುದಾಸರು ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಸಂಗೀತ ಸೇವೆ ನಡೆಸುವ ಪ್ರತೀತಿ ಕೂಡ ಇದೆ. ಆ ಮಹಾತಾಯಿ ಸಂಗೀತ ಸರಸ್ವತಿಯ ಈ ಸುಪುತ್ರರ ಸಂಗೀತ ಸೇವೆಯನ್ನು ನಿರಂತರವಾಗಿ ಈ ಲೋಕದಲ್ಲಿ ಬೆಳಗುತ್ತಿರಲಿ. ಆ ಗಾನಗಂಗೆಯಲ್ಲಿ ಮಿಂದು ಪುನೀತರಾಗುವ ಅವಕಾಶಗಳು ನಮ್ಮದಾಗುತ್ತಿರಲಿ, ಏಸುದಾಸರಿಗೆ ನಿರಂತರ ಶುಭವಾಗಲಿ ಎಂದು ಹಾರೈಸೋಣ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ) 


-Tiru Sridhara

Apr 05, 2021 at 9:48 am

ಗೋಕುಲ ಸಹೃದಯನೆಂಬ ನಟನ ನಾಟಕ ‘ಚಿಟ್ಟೆ’
It's a Tremendous Performance. Tremendous ಅಂದ್ರೆ ಎಲ್ರೂ ಹೇಳಿಬಿಡುವಂತೆ "Black and white" ಅಲ್ಲ. ಅಥವಾ ಇನ್ನೂ ಮುಂದುವರೆದಂತೆ "ಏ ಸೂಪರ್ ಆಗಿತ್ತಮ್ಮ," "ಬೊಂಬಾಟ್ ಆಗಿತ್ತಮ್ಮ" ಎಂದು ಮೇಲ್ಮೆನಲ್ಲಿ ಹೇಳಿ ಬಿಡಬಹುದು. ಸಾಹಿತಿಗಳಾದರೆ, ಅದೇನೋ ಸಾಹಿತ್ಯ ಪರಿಭಾಷೆಗಳನ್ನು ಬಳಸಿ ಹೇಳಿ ಬಿಡುತ್ತಾರೆ. ಆದರೆ ನಾನು ಹಾಗೆ ಹೇಳುವುದು ಸಾಧ್ಯವಾಗುವುದಿಲ್ಲ. ನಾನೊಬ್ಬ ನಟನಾಗಿ, ನಿರ್ದೇಶಕನಾಗಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವವನಾಗಿ ಸಹೃದಯನ ನಾಟಕ ನೋಡಿದ ಮೇಲೆ ಹೇಳಲೇ ಬೇಕು ಅನ್ನಿಸುತ್ತಿರುವ ಮಾತೆಂದರೆ “ಅವನು ತುಂಬಾ Effort ಹಾಕಿದ್ದಾನೆ”. ಬೇಲೂರು ರಘುನಂದನ್ ಬರೆಯೋ ಕವಿತೆಗಳಿರಬಹುದು, ಬರಹಗಳಿರಬಹುದು ಅಥವಾ ಅವರು ಮಾಡಿರುತ್ತೀರೋ ಎಲ್ಲ ಪ್ರಯತ್ನಗಳು ಮತ್ತು ಉದ್ದೇಶಗಳ ಸುತ್ತ ಮುತ್ತಲೇ ನಾವೂ ಇರ್ತೀವಿ. ಇದೆಲ್ಲದರ ನಡುವೆ ಗೋಕುಲ ಸಹೃದಯ ಯಾವುದೇ ಅತಿಶಯೋಕ್ತಿ ಇಲ್ಲದೆ ಹೇಳಬಹುದಾದರೆ ಅವನು ಮಾತ್ರ ತುಂಬಾ ಚೆನ್ನಾಗಿ ಮಾಡಿದ್ದಾನೆ. Hats off to Him, ಹಾಗೆಯೇ ಬೇಲೂರರಿಗೂ ಹಾಗೂ ಅವರ ಶ್ರೀಮತಿಯವರಿಗೂ. ನಾಟಕ ನೋಡುವಾಗ ಮತ್ತು ನಾಟಕದ ಬಗ್ಗೆ ಬರೆಯುವಾಗ ನನ್ನ ಮಗನೇ ನೆನಪಾಗುತ್ತಿದ್ದಾನೆ ಎಂಬ ವಿಷಯವನ್ನು ಮುಚ್ಚಿಡಲಾಗುತ್ತಿಲ್ಲ. ಶಂಕರ್ ನಾಗ್ ನಾಟಕೋತ್ಸವದಲ್ಲಿ ನಾಟಕವನ್ನು Arrange ಮಾಡಿದರಲ್ಲ ನಮ್ಮ ರಾಜಗುರು ಮತ್ತು ನಯನ ದಂಪತಿಗಳು ಅವರೂ ಕೂಡ ಅಭಿನಂದನಾರ್ಹರು. ಎಲ್ಲದಕ್ಕೂ ಬಹಳ ಮುಖ್ಯವಾದ ಮತ್ತು ತುಂಬಾ ಖುಷಿ ಆದ ವಿಷಯವೆಂದರೆ ಗೋಕುಲ ಅದ್ಭುತವಾಗಿ ನಾಟಕದಲ್ಲಿ ಅನುಭವಿಸಿ ಅಭಿನಯ ಮಾಡಿದ. ಖುಷಿಗೆ ಕಣ್ಣು ತುಂಬಿ ಬಂತು ನನಗೆ.

ಇನ್ನೊಂದು ವಿಷಯ ಹೇಳಬೇಕು ಅಂದ್ರೆ ನಿರ್ದೇಶನ ತುಂಬಾ ಚೆನ್ನಾಗಿ ಮಾಡಿದ್ದಾರೆ ಕೃಷ್ಣಮೂರ್ತಿ ಕವತ್ತಾರರು. ನನಗೆ ಕವತ್ತಾರರು ಆತ್ಮೀಯ ಗೆಳೆಯ ಮತ್ತು ನೀನಾಸಂ ನಲ್ಲಿ Senior ಅವರು. ಒಬ್ಬ ನಟ ನಾಟಕದಲ್ಲಿ ಒಂದು ಗಂಟೆ energy Store ಮಾಡಬೇಕು ಅಂದ್ರೆ ತುಂಬಾ ಕಷ್ಟ ಇದೆ. ಆ ಪುಟ್ಟ ಹುಡುಗ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾನೆ. ವಾಚಿಕ ಸ್ವಲ್ಪ miss ಆಗುತ್ತಿತ್ತು ಅಂದ್ರೆ ಓಡುತ್ತಿತ್ತು. ಅದು ಅವನ ತಪ್ಪಲ್ಲ, ಎನರ್ಜಿನೂ ಇಟ್ಕೊಂಡು, ನಾಟಕಕ್ಕೆ ಬೇಕಾದ Clarityನೂ ಕೊಡ್ಬೇಕಲ್ಲ ಅದು ತುಂಬಾ ಕಷ್ಟ. ತುಂಬಾ Shows ಆಗಿದ್ದಾಗಲೂ ಈ ಬಗೆಯ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ. ಆದ್ರೆ ತುಂಬಾ Particular ಆಗಿ, ತುಂಬಾ Precise ಆಗಿ ಕೆಲವು ಕಡೆ ಮಾತು ಓಡಿ ಬಿಡುತ್ತಿತ್ತು. ಅದೇನ್ ತೊಂದ್ರೆ ಇಲ್ಲ. ಹೇಳಿದರೆ ತಿದ್ಕೋಬೋದು, ತಿದ್ದಿಕೊಳ್ಳಲಾರದಂತಹ ಸಮಸ್ಯೆ ಏನಲ್ಲ ಅದು. ಇದೆಲ್ಲರದ ಆಚೆಗೆ ಗೋಕುಲ ಸಹೃದಯ The Best ಮಾಡಿದ್ದಾನೆ.

ನಾಟಕದ Craftmanship ಬಗ್ಗೆ ಹೇಳುವುದಾದರೆ ಒಂದು design ಮಾಡಿದ್ದಾರೆ ಕವತ್ತಾರರು. ನೋಡುವ ದೃಷ್ಟಿಯಿಂದ ಅದು Imbalance ಅನ್ನಿಸಿತು. ಒಂದು ಕಡೆ Dias ಇಟ್ಟಿದ್ದಾರೆ ಇನ್ನೊಂದು ಕಡೆ ಹುಡುಗನನ್ನು Balance ಮಾಡ್ತಾರೆ. ಒಂದು ಕಡೆ Upstage ಮತ್ತೊಂದು ಕಡೆ Right ನಲ್ಲಿ ನಾಟಕದ ವಿನ್ಯಾಸವನ್ನು ಇಟ್ಟುಕೊಳ್ಳುತ್ತಾರೆ ನಿರ್ದೇಶಕರು. ಮತ್ತೊಂದು ಕಡೆ downstage ನಲ್ಲಿ ಹುಡುಗ ಬರ್ತಾನೆ. Beautiful Composition ಅದು ತುಂಬಾ ಚೆನ್ನಾಗಿದೆ. ಅದು ಎಲ್ಲೋ ಒಂತರ Monotony ಅನ್ನಿಸಿದರೂ ಆ ಏಕತಾನತೆಯನ್ನು ನಟ ಗೋಕುಲ ಸಹೃದಯ ಅತ್ಯಂತ ಸಹಜವಾಗಿ ಮೀರಿ ನಾಟಕವನ್ನು ಮುನ್ನೆಲೆಗೆ ತಂದು ಬಿಡುತ್ತಾನೆ. ಇಡೀ ನಾಟಕದ ಉದ್ದಕ್ಕೂ ಒಂದೇ ಕಡೆ Dias ಇರುತ್ತೆ. ಅದೇನು ನಮ್ಮ ರಸಾನುಭೂತಿಗೆ ತೊಂದರೆ ಆಗಲಿಲ್ಲ. ಆದರೆ ಅದನ್ನು ಸ್ವಲ್ಪ ಬೇರೆ ತರ ಮಾಡಬಹುದಿತ್ತು ಅನ್ನುವುದು ನನ್ನ Personal ಅನಿಸಿಕೆ. ಯಾಕಂದ್ರೆ ನಾನು ನಿರ್ದೇಶಕ, ನಟನಾಗಿರುವುದರಿಂದ ಹೀಗೆ ಅನ್ನಿಸಿರಬಹುದು. ಆದರೆ, ಪ್ರೇಕ್ಷಕನ ದೃಷ್ಟಿಯಲ್ಲಿ ಇದಾವುದು ಗಮನಕ್ಕೆ ಬಾರದಂತೆ ಒಂದು ಲೋಕವನ್ನೇ ಸೃಷ್ಟಿಸಿ ಅಭಿನಯಿಸಿ ಬಿಡುತ್ತಾನೆ ಗೋಕುಲ ಸಹೃದಯ. ಅಭಿನಯ ಮಾಡ್ತಾ ಮಾಡ್ತಾನೆ Diasನ ಬೇರೆ ಕಡೆ ಇಟ್ಕೊಂಡು blocking ಮತ್ತು Composition ಬೇರೆ ತರ ಮಾಡಬಹುದಿತ್ತು ಆವಾಗ ಬೇರೆ ತರಹದ Variety ಸಿಕ್ತಿತ್ತು, depth ಮತ್ತು Texture ಸಿಕ್ತಿತ್ತು. ಇದಿಷ್ಟು ಒಬ್ಬ ನಿರ್ದೇಶಕನ ನನ್ನ ದೃಷ್ಟಿ ಅಷ್ಟೇ.

ಅನೇಕರು ಬರಿತೀವಿ, ಎಲ್ಲಾ ಮಾಡ್ತೀವಿ. ಆದ್ರೆ, ಒಬ್ಬ ಜವಾಬ್ದಾರಿಯುತ ತಂದೆ-ತಾಯಿ ತರ ಮಾಡ್ತೀವಲ್ಲ ಕೆಲಸ ಅದು ತುಂಬಾ ದೊಡ್ಡ ಕೆಲಸ. ನಾಟಕ ಕೃತಿಯನ್ನು ಬರೆಯೋದು ಬೇರೆ ಅಥವಾ ನಾಟಕಕಾರ ಬರೆದದ್ದನ್ನು ನಾನು ತೆಗೆದುಕೊಂಡು ಅಭಿನಯಿಸುವುದು, ನಿರ್ದೇಶನ ಮಾಡುವುದು ಬೇರೆ. ಇವೆರೆಡು Separate, ಆದರೆ ಬರೆದದ್ದನ್ನು, ಜನ್ಮ ಕೊಟ್ಟಿರುವ ಮಗನನ್ನು ಇಟ್ಟುಕೊಂಡು ನಾಟಕ ಮಾಡಿದ್ದೀರಲ್ಲ, ಅದು ಪೆನ್ ಅಲ್ಲಿ ಬರೆಯೋದಕ್ಕಿಂತ ತುಂಬಾ ದೊಡ್ಡ ಕೆಲ್ಸ ಅದು. ಈ ದೃಷ್ಟಿಯಲ್ಲಿ ಕನ್ನಡ ರಂಗಭೂಮಿಯಲ್ಲಿ ರಘುನಂದನ್ ಮತ್ತು ಗೋಕುಲ ಸಹೃದಯ ಇಬ್ಬರದ್ದು ಮಹತ್ವದ ಹೆಜ್ಜೆ ಎಂಬುದು ನನ್ನ ಅಭಿಪ್ರಾಯ. ನಾಟಕಕಾರರೊಬ್ಬರು ಸದಾ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು ತನ್ನ ಮಗನನ್ನೇ ಇಟ್ಕೊಂಡು ಅವರ ಬರವಣಿಗೆಯನ್ನೇ Onstage ತರೋದು ತುಂಬಾ ಕಷ್ಟ ಸಾಧ್ಯ. ನಾನು ಈ ಹಿಂದೆ ಕಂಬಾರರಿಗೆ ಜ್ಞಾನಪೀಠ ಬಂದಾಗ "ನಟ ನಾರಾಯಣನೆಂಬ ಸ್ಪುರದ್ರಂಗರೂಪಿ" ಎಂಬ ಒಂದು ಲೇಖನ ಬರದಿದ್ದೆ, ಅದು ಅವಧಿಯಲ್ಲಿ ಪ್ರಕಟ ಆಗಿತ್ತು. ಅದು ಏನಂದ್ರೆ "ಬರೆಯುವವನು ನನ್ನ ಕೆಲಸ ಇಷ್ಟಕ್ಕೆ ಮುಗೀತು, ನಾನು ಕೃತಾರ್ಥ, ಭಾಗ್ಯವಂತ ಅಂದುಕೊಂಡು ಬಿಟ್ಟುಬಿಡುತ್ತಾನೆ, Next ಅದನ್ನು ಎತ್ತಿಕೊಂಡು ಹೋಗುವವರು ನಟ." ಗೋಕುಲನ ಚಿಟ್ಟೆ ನಾಟಕ ನೋಡಿದ ಮೇಲೆ ಮತ್ತೆ ಆ ಮಾತು ರಿಂಗಣಿಸುತ್ತಿದೆ.

ನಾನು ತಿರುಗಾಟದಲ್ಲಿ ಕೆಲವು ವರ್ಷ ನಟನಾಗಿ ದುಡಿದೆ. ಒಂದು ಕಡೆ ನಾಟಕಕಾರರು ಬರಿತಾರೆ. ‘ಗಿರೀಶ್ ಕಾರ್ನಾಡರ ನಾಟಕ’, ‘ಕಂಬಾರರ ನಾಟಕ’ ಅಂತೆಲ್ಲಾ ಸಹಜವಾಗಿ, ಸಲೀಸಾಗಿ ಹೇಳಿ ಬಿಡುತ್ತಾರೆ. ಇನ್ನೊಂದ್ ಕಡೆ ‘ಬಸವಲಿಂಗಯ್ಯ ಡೈರೆಕ್ಟ್ ಮಾಡಿದ್ದಾರೆ ಕಣ್ರೀ’, ‘ಕಾರಂತರು ಡೈರೆಕ್ಟ್ ಮಾಡಿದ್ದಾರೆ ಕಣ್ರೀ’ ಎಂದು ಅವರ ಹೆಸರು ಬರುತ್ತದೆ. ಆದ್ರೆ ಕೊನೆಗೆ Scene Cut ಮಾಡಿದ್ರೆ ಸಂಜೆಯೆಲ್ಲಾ ಅವ್ನೆ ದುಡಿದು, make-up ಹಾಕೊಂಡು, ಶ್ರಮಿಸುವ ಶ್ರಮಜೀವಿಗಳು ನಟ-ನಟಿಯರೇ ಆಗಿರುತ್ತಾರೆ. ಅವರನ್ನು ಕೇಳುವವರು ಒಬ್ಬರೂ ದಿಕ್ಕಿರುವುದಿಲ್ಲ. ಯಾರಾದ್ರು ಒಬ್ಬ "ಏ ಇಂತಹ ನಟ/ನಟಿಯ ನಾಟಕ ಕಣಪ್ಪಾ ಇದು" ಎಂದು ಹೇಳೋರು ಇರೋದೇ ಇಲ್ಲ. ಬರೆದಿರುವವರು ಹೆಸರು ಹೇಳ್ತಾರೆ, ಇಲ್ಲವೇ Director ನಾಟಕ ಅಂತ ಹೇಳ್ತಾರೆ. ಆದ್ರೆ ಇದು ಇಂಥಾ ನಟನ ನಾಟಕ ಅಂತ ಹೇಳೋದು ನಾವು ಯಾರು ಕೇಳಿಲ್ಲ. ಹಾಗೇನಾದರೂ ಇದ್ದರೂ ತುಂಬಾ ಕಡಿಮೆ.


ಈ ಎಲ್ಲಾ ದೃಷ್ಟಿಯಲ್ಲಿ ಹೇಗೆ ಲೆಕ್ಕ ಹಾಕಿಕೊಂಡರೂ ನಾನು, ಇದು ಗೋಕುಲ ಸಹೃದಯನ ನಾಟಕ ಎಂದು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ. it's not ಬೇಲೂರು ರಘುನಂದನ್, not ಕೃಷ್ಣಮೂರ್ತಿ ಕವಾತ್ತಾರ್, not ಶಂಕರನಾಗ್ ನಾಟಕೋತ್ಸವ. ಇದು ಗೋಕುಲ ಸಹೃದಯನ ನಾಟಕ. ರಂಗಭೂಮಿಯಲ್ಲಿ ತುಂಬಾ ದಿನದಿಂದ ಕೆಲಸ ಮಾಡುತ್ತಿರುವವನು ನಾನು. ಈ ಮಾತನ್ನು ಹೇಳುವಾಗ ಈಗ್ಲೂ ನನ್ನ ಕಣ್ಣಲ್ಲಿ ನೀರು ಬರ್ತಿದೆ. ಬಹಳ ವರ್ಷಗಳ ನಂತರ ನಾಟಕವೊಂದಕ್ಕೆ ಹೀಗೆ ಪ್ರತಿಕ್ರಿಯಿಸುವಂತೆ ಮಾಡಿದ ಮುಖ್ಯವಾಗಿ ಗೋಕುಲ ಸಹೃದಯನಿಗೆ ಸಾವಿರ ಸಿಹಿಮುತ್ತು. ಅವನೊಬ್ಬ ಅಪ್ಪಟ ರಂಗ ಪ್ರತಿಭೆ. ಚಿಟ್ಟೆ ಸಹೃದಯನ ನಾಟಕ. ಮತ್ತೆ ಯಾರದ್ದೂ ಅಲ್ಲ. ಅವನ ಮುಂದಿನ ರಂಗ ಪ್ರಯೋಗಗಳಿಗೆ ಕಾತರಿಸುತ್ತಿರುವೆ.

ಬೇಲೂರು ರಘುನಂದನ್ ಪೇಪರ್ ಮೇಲೆ ಒಂದು ಕಥಾವಸ್ತುವನ್ನು ಅನುಭವಿಸಿ ಬರೆದಿದ್ದಾರೆ. ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರರು ರಂಗದ ಮೇಲೆ ಸಮರ್ಥವಾಗಿ ಬರೆದಿದ್ದಾರೆ. ಆದರೆ, ಇವರಿಬ್ಬರ ಬರವಣಿಗೆಯನ್ನು ಅತ್ಯಂತ ಯಶಸ್ವಿಯಾಗಿ ಗೋಕುಲ ಸಹೃದಯ ತನ್ನ ರಸ-ಭಾವಾಭಿವ್ಯಕ್ತಿಯ ಮೂಲಕ ತನ್ನ ಅಭಿನಯ ಮತ್ತು ರಂಗಾಭಿವ್ಯಕ್ತಿಯಿಂದ ಬರೆದಿದ್ದಾನೆ. ಮಕ್ಕಳ ಮನಸು ಅತ್ಯಂತ ನಿರ್ಮಲವಾಗಿರುತ್ತಾರೆ. ಅವರಿಗೆ Second Thougt ಅನ್ನೋದು ಇರೋದಿಲ್ಲ. ಅವರಿಗೆ ನಿಜದಲ್ಲಿ ಭಾವಸ್ಪುರಣವಾಗುತ್ತದೆ. ದೊಡ್ಡವರು ಈ ಮೇಲಿನ ಅಂಶಗಳನ್ನು ಕಷ್ಟಪಟ್ಟು ಸಾಧಿಸಿಕೊಳ್ಳಬೇಕಾಗುತ್ತದೆ. ನಾನು ನಮ್ಮ ಗುರುಗಳಾದ ಬಿ.ವಿ.ಕಾರಂತರ ಜೊತೆ ಮಕ್ಕಳ ನಾಟಕಗಳಲ್ಲಿ ಒಂದಿಷ್ಟು ಕೆಲಸ ಮಾಡಿದ್ದೇನೆ. ಅವರು ‘ಪಂಜರ ಶಾಲೆ’ ಏಕೆ ಬರೆದರು? ಬರೆಯುವ ಒತ್ತಡ ಏನಿತ್ತು? ಮಕ್ಕಳಿಗಾಗಿ ಯಾಕೆ ಬರೆಯಬೇಕು? ಮಕ್ಕಳ ಜೊತೆ ರಂಗದಲ್ಲಿ ಯಾಕೆ ದುಡಿಯಬೇಕು? ಎನ್ನುವ ಹಲವು ಪ್ರಶ್ನೆಗಳು ಗೋಕುಲ ಸಹೃದಯನ ಚಿಟ್ಟೆ ನಾಟಕ ನೋಡಿದ ಮೇಲೆ ಮತ್ತೆ ಹೊಸ ಹೊಸ ಅರ್ಥಗಳು ದಕ್ಕುತ್ತಿವೆ ಹಾಗೂ ನನ್ನನು ನಾನು ಪುನರಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.

ಕೊನೆಯದಾಗಿ ಗೋಕುಲನಿಗೆ Protien ಇರುವ Food ಕೊಡಿ ಎಂದು ಅವರ ಪೋಷಕರಲ್ಲಿ ವಿನಂತಿಸುವೆ. ಅವರು ಒಳ್ಳೆಯ ಊಟವನ್ನು ಕೊಡುವುದಿಲ್ಲ ಎನ್ನುವ ಆರೋಪವಲ್ಲ. ಹೇಳಲೆಬೇಕಿನಿಸಿದ ಒಂದು ಪ್ರೀತಿಯ ಮಾತು ಅಷ್ಟೇ. ಹಸಿವನ್ನು ಅದ್ಭುತವಾಗಿ ತೋರಿಸುತ್ತದೆ ಮಗು. ಹಾಗೆ ಇದರ ಮಧ್ಯೆ ಅವನ ಎಜುಕೇಷನ್ ಗೆ ಏನು ತೊಂದ್ರೆ ಆಗದ ಹಾಗೆ ನೋಡಿಕೊಳ್ಳಬೇಕು. ರಂಗಭೂಮಿಯೇ-ನಾಟಕವೇ ಒಂದು ಅನಂತ ಸಾಧ್ಯತೆಗಳನ್ನು ಸುಷ್ಟಿಸುವ ಶಾಲೆ. ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ನಾಟಕ ಪ್ರಯೋಗದ ಪ್ರಯತ್ನದ ಫಲವಾಗಿ ಗೊಕುಲನ ಕಲಿಕಾ ಸಾಮರ್ಥ್ಯ ನೂರ್ಪಟ್ಟು –ಸಾವಿರ ಪಟ್ಟು ವೃದ್ಧಿಸುವುದಂತೂ ಖಂಡಿತ. ಬೇಲೂರು ರಘುನಂದನ್ ತುಂಬಾ Great ಕೆಲಸ ಮಾಡಿದ್ದಾರೆ. ಬೇಲೂರರನ್ನು ಬರೀ ಬರವಣಿಗೆಗೆ ಮಾತ್ರ ಸೀಮಿತ ಅಂತ ನಾವು ತುಂಬಾ ಜನ ಅಂದುಕೊಂಡಿದ್ದೆವು. ಹಾಗಲ್ಲ ಎಂಬುದು ಚಿಟ್ಟೆಯ ಮೂಲಕ ಅರಿವಾಯಿತು.






Courtesy:  Book Brahma




Apr 05, 2021 at 9:48 am

ಅರಿವು ಎಚ್ಚರಗಳ ನಡುವೆ ಬೆರಗು ಹುಟ್ಟಿಸಿದ : "ಜನಶತ್ರು ನಾಟಕ"
ಕೇವಲ ಐದೇ ಐದು ಪಾತ್ರಗಳು ಯಾವ ವೈಭವದ ರಂಗ ಪರಿಕರವಾಗಲಿ ವಸ್ತ್ರಾಲಂಕಾರವಾಗಲಿ ಇರಲಿಲ್ಲ. ಆದರೆ ಸರಿಯಾಗಿ ಒಂದು ಗಂಟೆಯ ಕಾಲ ನಿಶಬ್ಧವಾಗಿ ಉಸಿರು ಬಿಗಿ ಹಿಡಿದು ನೋಡುವ ನಾಟಕ ಜನಶತು.್ರ ಇಲ್ಲಿಯ ಪುಟ್ಟದಾದ ಹಂಚಿನಮನಿ ಆರ್ಟಗ್ಯಾಲರಯಲ್ಲಿ ನೊಡುಗರಿಗೆ ದಟ್ಟ ಪ್ರಭಾವ ಬೀರುವಲ್ಲಿ ಯಶಸ್ವಿಯಾಯಿತು. 

ಹೆವ್ರಿ ಇಬ್ಸನ್ ಅವರ ಜನತೆಯ ಶತ್ರು ( ಂಟಿ eಟಿemಥಿ oಜಿ ಣhe ಠಿeಠಿಟe ) ಎಂಬ ನಾಟಕ ಆಧಾರಿತ ಜನಶತ್ರು ನೋಡುಗನ ಮನಸ್ಸು ಮತ್ತು ಸಂವೇದನೆಗಲನ್ನು ಹುರಿಗೊಳಿಸಿತು. ನಿತ್ಯ ನಾವೆಲ್ಲ ಓದುವ ರೈತಾತ್ಮಹತ್ಯೆಯ ಬನಂತರ ಹುಟ್ಟುವ ನೋವು ಸಂಕಟ ತಲ್ಲಣಗಳಿಗೆ ಒಂದು ಪ್ರತಿರೋಧದ ದನಿ ಎತ್ತುವ ಶಕ್ತಿಯುತ ನಾಟಕ. 

ಹತ್ತಿ ಬೆಳೆಯುವ ರೈತನೊಬ್ಬ, ಅನಾರೋಗ್ಯದಿಂದ ಬಳಲುವ ತನ್ನ ಹೆಂಡತಿಯ ಚಿಕಿತ್ಸೆಗಾಗಿ ಸಾಲ ಮಾಡುತ್ತನೆ. ಹಳೆಯ ಸಾಲ ತೀರಿಸಿದ ಕಾರಣ ಬ್ಯಾಂಕು ಸಾಲ ನೀಡಲು ನಿರಾಕರಿಸಿದಾಗ ಅನಿವಾರ್ಯವಾಗಿ ಮೀಟರ್ ಬಡ್ಡಿ ಲೇವಾದೇವಿ ಮಾಡುವ ದಲ್ಲಾಳಿ ಬಳಿ ಸಾಲ ಪಡೆಯುತ್ತಾನೆ. ಆದರೆ ಬೆಳದ ಹತ್ತಿಗೆ ಹುಳ ಹತ್ತಿ ನಾಶವಾದಾಗ ಅನವಾರ್ಯವಾಗಿ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 



ಕಥೆ ಈ ರೀತ ಆರಂಭವಾಗಿ ಆನಂತರ ರೈತನ ಹೆಂಡತಿ ಗಂಡನ ಸಾಲ ಮರುಪಾವತಿಸಲಾಗದೆ ದಲ್ಲಾಳಿ ಬ್ಯಾಂಕುಗಳ ಕಾಟದ ವಿರುದ್ಧ ಹೋರಾಟಕ್ಕೆ
ಇಳಿಯುತ್ತಾಳೆ. ತನ್ನಂತೆ ನೋವುಂಡ ವಿಧವಾ ರೈತ ಹೆಂಡತಿಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾಳೆ. ಇವಳ ಹೋರಾಟಕ್ಕೆ ಪ್ರತಿಯಾಗಿ ಪೊಲೀಸ, ಶಾಸಕ, ದಲ್ಲಾಳಿ ಎಲ್ಲರೂ ಒಗ್ಗೂಡಿ ಹೋರಾಟವನ್ನು ಬಗ್ಗು ಬಡೆಯುವ ಪ್ರಯತ್ನ ಮಾಡುತ್ತಾರೆ. ರೈತ ಮಹಿಳೆಯರೆಲ್ಲರೂ ಒಂದುಗೂಡಿದರೂ ಅವಳು ಕರೆದ ಸಭೆಗೆ ಯಾರೂ ಬರದಂತೆ ನೋಡಿಕೊಳ್ಳುತ್ತಾರೆ. 



ಕಥಾನಾಯಕಿ ಅಂತಿಮವಾಗಿ ಒಂಬಂಟಿಯಾದರೂ ಸರಿ ಸಾಮಾಜಿಕ ಜಾಲ ತಾಣಗಳ ಮೂಲಕ ದನಿ ಎತ್ತುತ್ತಾಳೆ . ಇಷ್ಟೆಲ್ಲವುಗಳ ನಡುವೆ ಇವಳಿಗೆ ಸಾಥ ನೀಡುವ ಏಕೈಕ ವ್ಯಕ್ತಿ ಒಬ್ಬ ಪ್ರಜ್ಞಾವಂತ ಪತ್ರಕರ್ತ ಮಾತ್ರ. 

ಎದೆ ತಟ್ಟುವ ಚುರುಕು ಸಂಭಾಷಣೆ, ಪಕ್ವ ಭಾವಾಭಿನಯ, ಸಂಭಾಷಣೆಗಳ ನಡುವಿನ ಮೌನ ಬಳಸುವಿಕೆ ಇಡೀ ಪ್ರೇಕ್ಷಕ ಸಮುದಾಯವನ್ನು ಡವಗುಟ್ಟುವಂತೆ ಉಸಿರು ಬಿಗಿ ಹಿಡಿಸಿತ್ತು. ನಾಟಕದ ಕಥಾ ನಾಯಕಿ ರೈತನ ಹೆಂಡತಿ ಕೊನೆಯಲ್ಲಿ ‘ಹುಸಿ ಹುತ್ತುಗಳ ನಡುವೆ, ಪೊಳ್ಳು ಮಾತುಗಳ ಬಹುಮತದ ಈ ವ್ಯವಸ್ಥೆಯಲ್ಲಿ, ಅಮಾಯಕ ಜನರ ಸತ್ಯಧ್ವನಿ ಸಾಯಬಾರದು. ಸತ್ಯಕ್ಕಾಗಿ ಒಂಟಿಯಾದರೂ ಸರಿಯೇ ನಾವೆಲ್ಲ ದನಿ ಎತ್ತಬೇಕು’ ಎಂದು ಹೇಳುವ ಮಾತು ಇಂದಿನ ವ್ಯವಸ್ಥೆಗೆ ಚಾಟಿಯಾಗಿತ್ತು. ಅಂತರಾಳವನ್ನು ಶುದ್ಧಗೋಳಿಸಿ ಹೋರಾಟಕ್ಕೆ ಪ್ರೇರೇಪಿಸುವಂತ್ತಿತ್ತು. 


ನಾಟಕದ ಕೇಂದ್ರವಾದ ರೈತನ ಹೆಂಡಿಯಾಗಿ ಶಿಲ್ಪಾ ಎಸ್. ದಲ್ಲಾಳಿ ನಾಗರಾಜ ಕಾಸಂಬಿ. ಶಾಸಕ ಜಗದೀಶ ಕಟ್ಟಿಮನಿ, ರೈತ ಮತ್ತು ಪತ್ರಕರ್ತನಾಗಿ ಗಣೇಶ ಹೆಗ್ಗೋಡ ಮತ್ತು ನಿಶಾಂತ ಮುತ್ತಣ್ಣ ಸರಸಾಟಿಯಾಗಿ ನಾಟದ ಪಾತ್ರಗಳಿಗೆ ಜೀವ ತುಂಬಿದರು. 


ಸುರೇಂದ್ರನಾಥ ರಚಿಸಿ ನಿರ್ದೇಶಿಸಿದ ನಾಟಕದ ಹಿನ್ನಲೆಯಲ್ಲಿ ಡಾ. ಶ್ರೀಪಾದ ಭಟ್ಟ, ಪ್ರಭು ಗುರಪ್ಪನವರ, ನಾಗರಾಜ ಧಾರೇಶ್ವರ, ಶಿವಮೂರ್ತಿ ಹುಣಸಿಕಟ್ಟಿ, ಹರೀಷ ಗುರಪ್ಪನವರ, ಕಲಾವಿದ ಕರಿಯಪ್ಪ ಹಂಚಿನಮನಿ ಕೈಜೊಡಿಸಿದ್ದರು. 

   ನಾಟಕದ ಕೊನೆಯ ಮಾತು  ಇಡೀ ನಾಟಕದಲ್ಲಿ ಗೊತ್ತಿಲ್ಲದಂತೆ ಅನುರಣಿಸಿತು.


Apr 05, 2021 at 9:48 am

"ರಂಗಾಯಣ ಮತ್ತು ನಿರ್ದೇಶಕ "
ರಂಗಾಯಣ ಮತ್ತು ನಿರ್ದೇಶಕರ ಆಸನವೆಂದರೆ ಅದಕ್ಕೊಂದು ಘನತೆ ಇದೆಯೆಂದು ಅರಿತವನು.
ಕಾರಂತರಿಂದ ಶುರುವುಗೊಂಡು ಪ್ರಸನ್ನ,ಜಂಬೆ,ಬಸೂ,ಹಳೆಮನೆ ಆದಿಯಾಗಿ ರಂಗಭೂಮಿ ಮತ್ತು
ರಂಗಾಯಣದ ಗೌರವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದವರು.
ನನ್ನ ಪ್ರಕಾರ ರಂಗಭೂಮಿ ಪ್ರಜಾಸತ್ತಾತ್ಮಕವಾದುದು.ಆ ರೂಪದ ರಂಗಭೂಮಿ ಜನರ ನಾಡಿ
ಮಿಡಿತವಾಗಿ ಕಲೆಯ ರಸಾನುಭವ ಸೃಷ್ಟಿಸಿ  ನವ ಸಂವೇದನೆಗಳನ್ನು ಹುಟ್ಟು ಹಾಕಿ ಮನುಷ್ಯ
ಪ್ರೀತಿಯನ್ನು ಬಿತ್ತುವುದು.ಇದು ಅದರ ಉದ್ದೇಶವು ಹೌದು.
ಅಥವಾ 
ಪ್ರಭುತ್ವದ ವಿರುದ್ದ ರಂಗಭೂಮಿ ಜನರ ದನಿಯಾಗಿ ನಿಂತು ಜಾಗರ ಮೂಡಿಸುವುದು.
ಆದರೆ ವರ್ತಮಾನದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರು ಈ
ಮೌಲ್ಯಗಳನ್ನೆಲ್ಲ ಗಾಳಿಗೆ ತೂರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. "ಬಹುರೂಪಿ" ಎಂಬ ಬಹುತ್ವ
ಸ್ವರೂಪದ ತಿರುಳನ್ನರಿಯದೆ ಏಕರೂಪಿ ಅವರ ವರ್ತನೆ ಖಂಡನೀಯವಾದು. ತಾನು ಮಾಡಿದ್ದೇ ಸರಿ
ಎಂಬ ಮೊಂಡುವಾದ ಅವರ ಧೂರ್ತತನಕ್ಕೆ ಸಾಕ್ಷಿಯಾಗಿದೆ. ಮಾತು ಮಾತಿಗೆ ಅವರು ಬಳಸುವ ಸಂಘ
ಪರಿವಾರದ ಧ್ಯೇಯ ಧೋರಣೆಗಳ ನುಡಿಗಟ್ಟು, ಎಡ ಬಲಗಳ ಅಪರಿಪಕ್ವತೆ ವಿಚಾರವು ನಿಮ್ಮ ರಂಗಭೂಮಿಯೆ?
ನನ್ನ ಮುವತ್ತು ವರ್ಷಗಳ ಸಾಂಸ್ಕೃತಿಕ ಬದುಕಿನಲ್ಲಿ ಇವರಂತೆ  ಯಾರೂ ಹೀಗೆ ಗೆರೆ ಕೊರೆದಂತೆ
ಎಡ ಬಲ ಜಾತಿ ಕೋಮುಗಳನ್ನು ತಂದು ನಿಲ್ಲಿಸಿದ್ದನ್ನು ಕಂಡಿಲ್ಲ. ಹಾಗೆ ನೋಡಿದರೆ ರಂಗಭೂಮಿಗೆ
ಜಾತಿ ಕುಲಗಳುಂಟೆ! ಅದೊಂದು ಸರ್ವರನ್ನು ಒಳಗೊಂಡ ಸಾಮುದಾಯಿಕ ಕಲೆ. ಇಂಥವೊಂದು 
ಪ್ರಾಥಮಿಕ ಜ್ಞಾನವು ಇರದಂತೆ ಕಾರ್ಯಪ್ಪನವರು ಅರಚಾಡುವುದು ಹೇಸಿಗೆಯೆನಿಸುತ್ತಿದೆ.
ಅವರು ಬೇಕಿದ್ದರೆ, ಬಲಪಂಥೀಯ ಚಿಂತನೆಯವರನ್ನೇ ಆಯ್ಕೆ ಮಾಡುವುದಿದ್ದರೆ ಮಾಡಲಿ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿಗ್ಗಜರಿದ್ದಾರೆ. ಸಂಸದ ಮತ್ತು ‌ಚಲನಚಿತ್ರ- ರಂಗನಟ ಪರೇಶ್ ರಾವಲ್ ಇದ್ದಾರೆ.
ಅನುಪಮ್ ಖೇರ್ ಇದ್ದಾರೆ. ಕರೆಯಿಸಲಿ! ಯಾರು ಬೇಡಂತಾರೆ!  ಆದರೆ ಸುಳ್ಳಾಡುವವರನ್ನು ಕರೆಯಿಸಿ
ರಂಗಭೂಮಿ ಮರ್ಯಾದೆಯನ್ನು ಯಾಕೆ ಹಾಳು ಮಾಡುತ್ತೀರಿ?ಅದ್ಯಾವ ಘನಂದಾರಿ ಕಾರ್ಯ
ಮಾಡಬೇಕೆಂದಿರುವಿರಿ ಕಾರ್ಯಪ್ಪನವರೆ! ಇಷ್ಟೆಲ್ಲ ನಡೆಯುತ್ತಿದ್ದರೂ ಹಲ್ಲಿಲ್ಲದ ಹಾವಿನಂತಿರುವ
ರಂಗಸಮಾಜದ ಸದಸ್ಯರೇನು ಮಾಡುತ್ತಿದ್ದಾರೆ? ಗಾಢ ನಿದ್ದೆಯಲ್ಲಿದ್ದಾರೆಯೆ? ಕೊನೆ ಪಕ್ಷ ಬುಸುಗುಡುವುದನ್ನಾದರೂ
ಮಾಡಿರಿ ಮಹಾನುಭಾವರೆ.
ಸರಕಾರಕ್ಕೆ ಒಂದು ಕಿವಿ ಮಾತು. 
ರಂಗಭೂಮಿಗೆ ಎಡ ಬಲ,ಜಾತಿ ಕೋಮು- ಬಿಜೆಪಿ,ಜೆಡಿಎಸ್,ಕಾಂಗ್ರೆಸ್ ಸರಕಾರಗಳೆಂಬ ಹಣೆ ಪಟ್ಟಿಯಿಲ್ಲ. 
ಅದು ಪರಿಶುದ್ಧ ರಂಗಭೂಮಿ ಅಷ್ಟೇ. ಅದರ ಘನತೆಯನ್ನು ಕಾಪಾಡಲು ಇಂದಿನ ಸರಕಾರವು ಆಯ್ಕೆ 
ಮಾಡಿರುವ ಗೌರವಾನ್ವಿತ ಅಡ್ಡಂಡ ಕಾರ್ಯಪ್ಪನವರನ್ನು ಕರೆಯಿಸಿ ಬುದ್ದಿಮಾತು ಹೇಳಿರಿ.
ರಂಗಭೂಮಿ ಮತ್ತು ರಂಗಾಯಣದ ಗೌರವ ಉಳಿಸಿರಿ.
ರಂಗಭೂಮಿಯಲ್ಲಿ ರಾಜಕೀಯ ಸಲ್ಲದು. ಇದು ಮನವಿ.


- ಡಾ.ಡಿ.ಎಸ್.ಚೌಗಲೆ
   ನಾಟಕಕಾರ-ಮಾಜಿ ರಂಗಸಮಾಜದ ಸದಸ್ಯ
.
.

Apr 05, 2021 at 9:48 am

ರಂಗಚಕ್ರ ರಂಗತಂಡ- "ರಂಗಾಯಣ-ರಾಮಾಯಣ"
ಯಾಕೊ ರಂಗಾಯಣದ ಬಗ್ಗೆ ನಡೆಯುತ್ತಿರುವ ರಾಮಾಯಣ ನೋಡಿ ನನಗನ್ನಿಸಿದ್ದನ್ನ ಹಂಚಿಕೊಳ್ಳಲೇಬೇಕೆನಿಸಿತು.  ಕಾರಣ ನಾನು ಮೈಸೂರು ರಂಗಾಯಣದ ನಿರ್ದೇಶಕನಾಗಿ ಮೂರು ತಿಂಗಳು ಕಾರ್ಯನಿರ್ವಹಿದ್ದೆ. ಅದೇ ಅವಧಿಯಲ್ಲಿ ಅಂತರರಾಷ್ಟ್ರೀಯ ನಾಟಕೊತ್ಸವವನ್ನು ಸಂಧಿಗ್ದ ಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿಸಿದ ಸಿಹಿ ಸಂಧರ್ಭ ಅದು. ನನ್ನ ವೃತ್ತಿ ಬದುಕಿನ ಅತ್ಯಂತ ನೆನಪಿನಾನುಭವಕ್ಕೆ ಕಾರಣವಾದ ಸಂಧರ್ಭವೂ ಹೌದು. ಅವುಗಳ ಸಿಹಿ ನೆನಪು ಇಂದಿನ ರಾಮಾಯಣದ ಹಿನ್ನೆಲೆಯಲ್ಲಿ ಹಂಚಿಕೊಳ್ಳುವುದು ಅಷ್ಟೆ ಹೊರತು ಯಾವುದು ಸರಿ ಯಾವುದು ತಪ್ಪು ಎಂಬ ಚರ್ಚೆಯಲ್ಲ ಎಂಬ ನನ್ನ ಮಿತಿಯನ್ನರಿತು ಈ ಮಾತುಗಳಷ್ಟೆ.





ರಂಗಾಯಣ ನಿರ್ದೇಶಕನಾಗಿ ಅಧಿಕಾರ ಪಡೆಯುತ್ತಿದ್ದಂತೆಯೇ ಬಹುರೂಪಿ ಅಂತರಾಷ್ಟ್ರೀಯ ನಾಟಕೊತ್ಸವಕ್ಕೆ ತಯಾರಿ ಪ್ರಾರಂಬಿಸಬೇಕಿತ್ತು. ಕಲಾವಿದರೆಲ್ಲರನ್ನು ಸಭೆ ಕರೆದು ಚರ್ಚಿಸುವಾಗ ಎಲ್ಲರಲ್ಲೂ ನಿರುತ್ಸಾಹ. ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸಿ ವೇತನ ಪಡೆಯುತ್ತಿದ್ದ ಕಲಾವಿದರು ಮತ್ತು ಸಿಬ್ಬಂದಿ ನಿವೃತ್ತರಾದರೆ ಅಥವ ಮರಣ ಹೊಂದಿದರೆ ಒಂದು ಬಿಡಿಗಾಸು ಇಲ್ಲದೆ ನಂತರ ಬದುಕಬೇಕಿತ್ತು. ಇನ್ನು ಮನೆಯಲ್ಲಿ ದುಡಿಯುವ ಮಕ್ಕಳಿಲ್ಲದಿದ್ದರೆ  ಬದುಕು ಮುಗಿದೆ ಹೊಯಿತು. ಹಾಗಾಗಿ ಇಪ್ಪತ್ತು ವರ್ಷಗಳಿಂದ ನಿವೃತ್ತಿ ವೇತನಕ್ಕಾಗಿ ಹೋರಾಟ ನಡೆಯುತ್ತಲೆ ಇದ್ದರು ಪರಿಹಾರ ದೊರೆತಿರಲಿಲ್ಲ. ಎಲ್ಲಾ ಕಲಾವಿದರು ನೀವು ನಮ್ಮ ಇಪ್ಪತ್ತು ವರ್ಷದ ಬೇಡಿಕೆ ಈಡೇರಿಸಿದರೆ ಮಾತ್ರ ನಾವು ಬಹುರೂಪಿಯಲ್ಲಿ ಖುಷಿಯಿಂದ ಕೆಲಸ ಮಾಡಲು ಸಾಧ್ಯ ಎಂದು ಹೇಳಿದ್ದರು. ಆಘಂತುಕವೆಂಬಂತೆ ಹಿರಿಯ ಕಲಾವಿದರೊಬ್ಬರು ಅದೇ ಸಂಧರ್ಭದಲ್ಲಿ ಹೃದಯಘಾತದಿಂದ ಮರಣ ಹೊಂದಿದ್ದು ಕರಾಳದಿನವಾಗಿ ಹೋಯಿತು. ಅವರ ಕುಟುಂಬಕ್ಕೆ ಆದಾರವೇನು? ಎಂಬ ಪ್ರಶ್ಣೆ ಮುಂದಿಟ್ಟು ಕಲಾವಿಧರು ಬಹುರೂಪಿ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ಅದಕ್ಕಾಗಿಯೇ ತಯಾರಾಗುತಿದ್ದ ಹೊಸ ನಾಟಕ ಎಲ್ಲವನ್ನು ಕೈಬಿಟ್ಟು ಪ್ರತಿಭಟನೆಯಲ್ಲಿ ನಿರತರಾದರು. ಅವರ ಬೇಡಿಕೆ ಒಂದೇ ನಿವೃತ್ತಿವೇತನ ಸಮಸ್ಯೆ ಪರಿಹರಿಸಿ ಮುಂದೆ ಎಲ್ಲ ಕಾರ್ಯಗಳನ್ನು ನಮಗೆ ಬಿಡಿ ಹಿಂದೆಂತಿಗಿಂತಲು ಹೆಚ್ಚು ಯಶಸ್ವಿಗೊಳಿಸುವುದಾಗಿ ಬೇಡಿಕೆಯಿತ್ತರು. ಸಮಸ್ಯೆ ಪರಿಹರಿಸದೆ ಬಹುರೂಪಿ ಯಶಸ್ವಿ ಸಾದ್ಯವಿಲ್ಲ ಎಂಬುದು ಅರ್ಥವಾಗಿತ್ತು.
 ನಾನು ಇಲಾಖೆಯ ನಿರ್ದೇಶಕನು ಇದ್ದುದರಿಂದ ಹಲವು ಭಾರಿ ನಾಟಕಕಾರರಾದ ಕೆ.ವೈ ನಾರಾಯಣಸ್ವಾಮಿ, ಹಡಪ ಹಾಗೂ ದು.ಸರಸ್ವತಿ ಯವರೊಂದಿಗೆ ಸಭೆ ನಡೆದು ಹಲವು ಮಾರ್ಗಗಳನ್ನು ಯೋಜಿಸಿದ್ದೆವು. ಆದರೆ ಅವೆಲ್ಲವೂ ಸರಕಾರದಲ್ಲಿ ಅವಕಾಶವಿಲ್ಲವೆಂದು ತಿರಸ್ಕೃತಗೊಂಡಿದ್ದವು. ಆ ಪ್ರಸ್ಥಾವನೆಯನ್ನು ಮಾನ್ಯ ಸಚಿವರೊಂದಿಗೆ  ಮಾನ್ಯ ಹಣಕಾಸು ಪ್ರಧಾನ ಕಾರ್ಯದರ್ಶಿಗಳಲ್ಲಿ ಚರ್ಚಿಸಿದೆವು. ಮಾನ್ಯ ಸಚಿವರು ಮುಖ್ಯಮಂತ್ರಿಗಳಲ್ಲಿ ಮಾತನಾಡಿದ್ದರು. ಪ್ರಾರಂಭದಲ್ಲಿ ಸಾಧ್ಯವಿಲ್ಲ ಎಂದಿದ್ದ ಮಾನ್ಯ ಹಣಕಾಸು ಪ್ರಧಾನ ಕಾರ್ಯದರ್ಶಿಗಳು ನನ್ನನ್ನು ಕರೆದು ಮತ್ತೆ ಪ್ರತ್ಯೇಕವಾಗಿ ಚರ್ಚಿಸಿ ತಾವು ಸೂಚಿಸಿದಂತೆ ಪ್ರಸ್ಥಾವನೆಯನ್ನು ಮರು ತಿದ್ದುಪಡಿಗೊಳಿಸಿ ಮಧ್ಯಾಹ್ನ ಒಂದು ಗಂಟೆಗೆ ತನಗೆ ನೇರವಾಗಿ ಕಡತ ನೀಡಲು ಸೂಚಿಸಿದರು. ಅದರಂತೆ ಕಡತ ಸಲ್ಲಿಸಿದೆ. "ನಾನು ಅರ್ಧ ಗಂಟೆ ಬಿಟ್ಟು ಪೋನ್ ಮಾಡುತ್ತೇನೆ ಬಾ" ಎಂದು ತಿಳಿಸಿದರು. ಅದರಂತೆ ಪೋನ್ ಬಂತು ಭೇಟಿ ನೀಡುತ್ತಿದ್ದಂತೆ ಕೆಲವು ಸಲಹೆಗಳೊಂದಿಗೆ ನಾವು ಕೋರಿದಂತೆ ರೂ5.62 ಕೋಟಿ ಮಂಜೂರು ಮಾಡಿದ್ದ ಆದೇಶವನ್ನು ಕೈಗಿತ್ತರು. ಇಪ್ಪತ್ತು ವರ್ಷಗಳ ಹೊರಾಟ ಕೇವಲ ಅರ್ಧಗಂಟೆಯಲ್ಲಿ ಪರಿಹಾರವಾಗಿತ್ತು. ಸದರಿ ಮೊತ್ತವನ್ನು ಕಲಾವಿದರ ಕ್ಷೇಮಾಭಿವೃದ್ಧಿ ನಿಧಿಯಾಗಿ ಇಟ್ಟು. ನಿವೃತ್ತರಾಗುತ್ತಿದ್ದಂತೆ ಅವರು ಸೇವೆಸಲ್ಲಿಸಿದ ಒಟ್ಟು ಅವಧಿಗೆ ವರ್ಷಕ್ಕೆ ಒಂದು ಲಕ್ಷದಂತೆ ಅಂದರೆ ಮುವತ್ತು ವರ್ಷ ಸೇವೆಸಲ್ಲಿಸಿದ್ದರೆ ಮುವತ್ತು ಲಕ್ಷ ನಿವೃತ್ತಿಯ ದಿವಸ ನೀಡುವ ಯೊಜನೆ ಜಾರಿಗೊಂಡಿತ್ತು. 
ಕಲಾವಿದರಲ್ಲಿ ಉತ್ಸಾಹ ಮನೆ ಮಾಡಿತ್ತು. ಇಪ್ಪತ್ತು ದಿನದಲ್ಲಿಯೇ ಹೊಸ ನಾಟಕವು ಆಯಿತು. ಕಾರ್ಯಕ್ರಮವೂ ರೂಪಗೊಂಡಿತ್ತು. ಪೋಲೆಂಡ್ ಮತ್ತು ಇತರ ದೇಶಗಳ ಮೂರು ತಂಡ ನಿಗಧಿಯಾಗಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದವು. ವಿದೇಶಗಳಿಂದ ತಂಡ ಬಂದಿದ್ದರಿಂದ ಅವರಿಗೆ ಈಗಾಗಲೇ ಪ್ರಯಾಣ ವೆಚ್ಚ ನೀಡಿದ್ದರಿಂದ ಪ್ರದರ್ಶನದ ವೆಚ್ಚ ನೀಡಿ ಅದೇ ತಂಡಗಳು ಪ್ರಾದೇಶಿಕ ರಂಗಾಯಣಗಳಾದ ಶಿವಮೊಗ್ಗ, ದಾರವಾಡ ಮತ್ತು ಗುಲ್ಬರ್ಗಾ ರಂಗಾಯಣಗಳಲ್ಲಿ ಅಲ್ಲಿಯೂ ಉತ್ಸವ ರೂಪಗೊಂಡು ವಿದೇಶಿ ತಂಡಗಳು ಪ್ರದರ್ಶನ ನೀಡಿದ್ದವು. ನಾಡಿನ ಬೇರೆಡೆಯೂ ವಿದೇಶಿ ರಂಗಭೂಮಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ಬಿ.ಜಯಶ್ರೀಯವರು ಬಹುರೂಪಿಯನ್ನು ಉದ್ಘಾಟಿಸಿದ್ದರು. ರಂಗಾಯಣದ ಕಲಾವಿದರೆ ಎಲ್ಲವನ್ನು ಅತ್ಯಂತ ಯಶಸ್ವಿಯಾಗಿ ನಿಜ ಅರ್ಥದಲ್ಲಿ ಅಂತರಾಷ್ಟ್ರೀಯ ನಾಟಕೊತ್ಸವವನ್ನು ಯಶಸ್ವಿಗೊಳಿಸಿ ರಂಗಭೂಮಿಯ ಅರಿವಿಲ್ಲದ ಅಧಿಕಾರಿ ನಿರ್ದೇಶಕರು ಆಯೋಜಿಸಿದ್ದರು ಎಂದು ಕಿಂಚಿತ್ತು ಯೋಚಿಸದಂತೆ ರೂಪಿಸಿದ್ದರು. ಆ ಮೂರು ತಿಂಗಳ ರಂಗಾಯಣದ ನಿರ್ದೇಶಕ ಹುದ್ದೆ ನನ್ನ ಜೀವನದ ಹೊಸ ಅನುಭವ ನೀಡಿತ್ತು.
ಇಂದಿಗೂ ನಮ್ಮ ರಂಗಾಯಣದ ಕಲಾವಿದರು ಆತ್ಮೀಯ ಸಹೋದರ ಸಹೋದರಿಯರಂತೆ ನನ್ನನ್ನು ಮಾತನಾಡಿಸುವಾಗ ನನಗೆ ನನ್ನ ಕುಟುಂಬದವರನ್ನು ಮಾತನಾಡಿಸಿದಷ್ಟೆ ಆನಂದವಾಗುತ್ತದೆ.  ಬಸವಲಿಂಗಯ್ಯನವರು ಇದೇ  ರಂಗಾಯಣದ ನಿರ್ದೇಶಕರಾಗಿದ್ದಾಗ ಅಹೊರಾತ್ರಿ 9 ಗಂಟೆಯ ಕುವೆಂಪುರವರ ಮಲೆಗಳಲ್ಲಿ ಮದುಮಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿಯೆ ದಾಖಲೆ ಬರೆದರು.
ಕಾಲೇಜು ಮೆಟ್ಟಿಲೇರಿದಾಗ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮಾನವಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಓದುವಾಗ ಬಹುಪಾಲು ತಲೆಕೆಡಿಸಿ ನೆನಪುಳಿಯದೆ ಪರೀಕ್ಷೆಯಲ್ಲಿ ಕಾಡುತಿದ್ದುದು ವಿವಿಧ ಶಾಸ್ತ್ರಗಳ ಚಿಂತಕರ ಚಿಂತನೆಗಳು. ಅದರಲ್ಲಿ ಕೌಟಿಲ್ಯ, ಅರಿಸ್ಟಾಟಲ್, ಮಾರ್ಕ್ಸ್, ಸಾಕ್ರೆಟಿಸ್, ಡಾರ್ವಿನ್, ಪ್ರಾಯ್ಡ್, ಕೇನ್ಸ್, ಹೀಗೆ ಹತ್ತು ಹಲವು ಚಿಂತಕರ ವಿಚಾರಧಾರೆಗಳನ್ನು ಪಾಠ ಮಾಡುವಾಗ ನಮ್ಮ ಉಪನ್ಯಾಸಕರು ಹೇಳಿದ್ದು ಅವರ ಚಿಂತನೆಗಳನ್ನು ಅವರ ಚಿಂತನೆಯಂತೆಯೇ ತಿಳಿಸುತಿದ್ದರು. ಅದನ್ನಷ್ಟೆ ನಾವು ಅರ್ಥೈಸಿಕೊಳ್ಳುತಿದ್ದುದು ಅದನ್ನು ಹೊರತು ಇದು ಸರಿ ಅದು ತಪ್ಪು ಅಂತ ಜಿಜ್ಞಾಸೆ ಆಲೋಚನೆಯೇ ಇರಲಿಲ್ಲ. ಎಲ್ಲಾ ಚಿಂತನೆಗಳು ಆಯಾ ಕಾಲಘಟ್ಟಕ್ಕೆ, ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಅನುಭವದ ಮೇಲೆ ಅವರವರು ಪ್ರಭಾವಕ್ಕೊಳಗಾದ ತಿಳುವಳಿಕೆ ಮಟ್ಟದಲ್ಲಿ ರೂಪಗೊಂಡವು. ಅವರು ಸಿದ್ದಾಂತಗಳನ್ನು ಪ್ರತಿಪಾದಿಸುವಾಗ ಅವರವರ ಆಲೋಚನೆಗೆ ತಕ್ಕಂತೆ ಸರಿಯೆಂದು ಭಾವಿಸಿಯೇ ಪ್ರತಿಪಾದಿಸಿರುತ್ತಾರೆ. ರೂಪಗೊಂಡ ನಂತರ ವಿಚಾರದ ದೃಷ್ಠಿಯಿಂದ ಅವು ಎಡವೊ ಬಲವೊ ಎಂದು ನಾವೇ ಹಣೆಪಟ್ಟಿ ಕಟ್ಟಿಕೊಳ್ಳುತ್ತೇವೆ. ಆ ಎಲ್ಲ ಇತಿಮಿತಿಗಳನ್ನು  ಮರೆತು ಓದಿದ ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಸಾಮಾನ್ಯಜ್ಞಾನ ಬೆಳೆದು ಬದುಕುವ ಜಗತ್ತಿನಲ್ಲಿ ಸರಿ-ತಪ್ಪ ಅಥವಾ ಸತ್ಯ-ಸುಳ್ಳು ಎಂಬುದನ್ನು ಗುರುತಿಸುವ ಶಕ್ತಿ ಬಂದು ಅದರಂತೆ ಸರಿಮಾರ್ಗದಲ್ಲಿ  ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಕುವೆಂಪು ಹೇಳಿದಂತೆ ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿ ನೆಮ್ಮದಿಯ ಬದುಕು ರೂಪಿಸಿಕೊಳ್ಳಬೇಕಿರುತ್ತದೆ. ಸತ್ಯ-ಮಿಥ್ಯ, ಸರಿ-ತಪ್ಪುಗಳನ್ನು ಪ್ರೇಕ್ಷಕರ ಮುಂದಿಟ್ಟು ವಿಚಾರಗಳನ್ನು ಒರೆಗೆ ಹಚ್ಚಿ ವೈಚಾರಿಕವಾಗಿ ಯೊಚಿಸುವಂತೆ ಮಾಡಿ ಪ್ರೇಕ್ಷಕನಿಗೆ ಬದುಕಿನ ಮಾರ್ಗ ತೋರಿಸುವುದು ರಂಗಭೂಮಿ. ಅದೇ ಉದ್ದೇಶದಿಂದ ಬಿ.ವಿ. ಕಾರಂತರು 1989 ರಲ್ಲಿ ಮೈಸೂರು ರಂಗಾಯಣ ಸ್ಥಾಪಿಸಿದ್ದು ಮತ್ತು ಸರಕಾರ ಸಹಮತಿಸಿ ಸಹಕರಿಸಿದ್ದು ಎಂದುಕೊಂಡಿದ್ದೇನೆ.

Apr 05, 2021 at 9:48 am

'ನಟನ_ರಂಗೋತ್ಸವ' ಕ್ಕೆ ತೆರೆ
'ನಟನ_ರಂಗೋತ್ಸವ'ಕ್ಕೆ ತೆರೆ
ನಟನದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆಲ್ಲ ಈ ಮೂರು ದಿನಗಳು ಸಂಭ್ರಮವೋ ಸಂಭ್ರಮ.
ರಂಗವೇದಿಕೆ, ಪ್ರೇಕ್ಷಾಂಗಣ, ಪ್ರಚಾರ, ಕಲಾವಿದರ ಊಟ-ತಿಂಡಿ- ವಾಸ್ತವ್ಯದ ವ್ಯವಸ್ಥೆ,
ಹಣಕಾಸಿನಿಂದ ಹಿಡಿದು ಶೌಚಗೃಹದ ನೀರಿನ ವ್ಯವಸ್ಥೆ ವರೆಗೂ ರಂಗ ವಿದ್ಯಾರ್ಥಿಗಳು
ತೋರಿದ ಆಸ್ಥೆಯೊಂದಿಗೆ ಕಡ್ಡಾಯವಾಗಿ ನಾಟಕವನ್ನೂ ನೋಡಿ,







ಅನುಭವಿಸಿ ವಿಶ್ಲೇಷಿಸಲೇ ಬೇಕೆಂಬ ಇರಾದೆಯೂ ಅವರೊಂದಿಗಿತ್ತು.
ಆದಿಶಕ್ತಿ'ಯ ಭೂಮಿ' ಮತ್ತು #ಕಲಾಗಂಗೋತ್ರಿ'ಯ 'ಮುಖ್ಯಮಂತ್ರಿ'.. ಎರಡೂ ಪ್ರಯೋಗಗಳ
ಮೂರೂ ಯಶಸ್ವೀ ಪ್ರದರ್ಶನಗಳಿಗೆ ಪ್ರೇಕ್ಷಕರು ಹರಿದು ಬಂದು 'ರಂಗಮಂದಿರ ತುಂಬಿದೆ'
ಅಂತಾ ಫಲಕ ಕಂಡಾಗ ಆದ ಸಂತಸ ಅಷ್ಟಿಷ್ಟಲ್ಲ.

ನೆರವಿತ್ತ ಗೆಳೆಯರು, ಸಹಾಯ ಹಸ್ತ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಆದಿಶಕ್ತಿ-ಕಲಾಗಂಗೋತ್ರಿಯ ಅದ್ಭುತ ಕಲಾವಿದರು, ನಿರ್ದೇಶಕರು, ತಂತ್ರಜ್ಞರು,
ತುಂಬಿ ಬಂದ ಪ್ರೇಕ್ಷಕವರ್ಗ... ನಾನು ನೆನೆಯಬೇಕಾದ್ದು ಹಲವರನ್ನು.
ಎರಡೂ ಲಾಕ್ ಡೌನ್  ನಂತರ ರಂಗಮಂದಿರಗಳೆಡೆಗೆ ಜನ ಬರುವುದು ಅನುಮಾನ
ಎಂಬ ಭಾವನೆಯನ್ನು ನಟನ ರಂಗೋತ್ಸವ ಮೀರಿದೆ. ಮತ್ತಷ್ಟು ಒಳ್ಳೆಯ ನಾಟಕಗಳನ್ನು
ನಟನದಲ್ಲಿ ಮಾಡಬೇಕೆಂಬ ಉತ್ಸಾಹ ಇಮ್ಮಡಿಸಿದೆ. 
ನೀವು ನಮ್ಮೊಂದಿಗಿರಿ ಅಷ್ಟೇ. ಪ್ರೀತಿಯ ಧನ್ಯವಾದಗಳು ಎಲ್ಲರಿಗೂ

ಚಿತ್ರ ಕೃಪೆ: Mithra Law

Apr 05, 2021 at 9:48 am

ಮಂಗಳೂರು: ನಿಹಾಲ್ ತೌರೊ ಅವರಿಗೆ 17ನೇ ‘ಕಲಾಕಾರ್ ಪುರಸ್ಕಾರ’ ಕಲಾಂಗಣದಲ್ಲಿ ಪ್ರದಾನ
ಮಂಗಳೂರು, ನ.09: ಸುಸ್ತಾಗಿ ಮನೆಗೆ ಮರಳುವವನಿಗೆ ತಾಯಿ ತನ್ನ ಪ್ರೀತಿಯನ್ನು ಧಾರೆ ಎರೆದರೆ ಮತ್ತೆ ಹುಮ್ಮಸ್ಸು ಮೂಡುತ್ತದೆ. ಈ ಮೂಲಕ ಕೊಂಕಣಿ ಮಾತೆಯ ಪರವಾಗಿ ನೀಡುತ್ತಿರುವ ಈ ಪ್ರಶಸ್ತಿಯು ನಿಹಾಲ್ ಅವರ ಉತ್ಸಾಹವನ್ನು ಬಹುಮಟ್ಟಿಗೆ ಹೆಚ್ಚಿಸಲಿ ಎಂದು ಹಾರೈಸುತ್ತೇನೆ. ಕಮ್-ಲೇಖಕ, ಜಯಂತ್ ಕಾಯ್ಕಿಣಿ.

ಇಲ್ಲಿನ ಕಲಾಂಗನ್ನ ಬಯಲು ರಂಗಮಂದಿರದಲ್ಲಿ ನ.7ರಂದು ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತೌರೊ ಅವರಿಗೆ 17ನೇ ‘ಕಲಾಕಾರ್ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ತೌರೊ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 25 ಸಾವಿರ ನಗದು ನೀಡಿ ಗೌರವಿಸಲಾಯಿತು.









"ಇಲ್ಲಿ ನೆರೆದಿರುವ ಜನರು ಅದೃಷ್ಟವಂತರು. ಏಕೆಂದರೆ ನಾವು ಎರಡು ಲಾಕ್‌ಡೌನ್‌ಗಳು ಮತ್ತು ಕೋವಿಡ್‌ನ ಭೀತಿಯಿಂದ ಯಶಸ್ವಿಯಾಗಿ ಪಾರಾಗಿದ್ದೇವೆ. ಈ ಸಾಂಕ್ರಾಮಿಕವು ನಮಗೆ ಜೀವನದ ಅಮೂಲ್ಯ ಅರ್ಥಗಳನ್ನು ಕಲಿಸಿದೆ. ಇದು ಇತರರ ಬಗ್ಗೆ ಕಾಳಜಿ ವಹಿಸಲು ಮತ್ತು ಸಾಮರಸ್ಯದಿಂದ ಬದುಕುವ ಅಗತ್ಯವನ್ನು ನಮಗೆ ಕಲಿಸಿದೆ. ಒಬ್ಬರಿಗೊಬ್ಬರು ಬೆಂಬಲಿಸುತ್ತಾರೆ, ”ಎಂದು ಅವರು ವಿವರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಹಾಲ್, ಚಿಕ್ಕ ಊರಿಗೆ ಸೇರಿದ ತನಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. "ನನ್ನ ಪೋಷಕರು ಮತ್ತು ಅಭಿಮಾನಿಗಳ ಬೆಂಬಲವು ಈ ಸಾಧನೆ ಮಾಡಲು ನನಗೆ ಸಹಾಯ ಮಾಡಿದೆ. ನಾನು ಇಂಡಿಯನ್ ಐಡಲ್ ಸ್ಪರ್ಧೆಯ ಫೈನಲ್‌ಗೆ ತಲುಪುವ ಕನಸನ್ನು ಹೊಂದಿದ್ದೇನೆ. ಆದರೆ ಇದು ಅಂತ್ಯವಲ್ಲ. ಈ ರೀತಿಯ ಪ್ರಶಸ್ತಿಗಳು ನನ್ನಂತಹ ಜನರು ಇನ್ನೂ ಹೆಚ್ಚಿನ ಎತ್ತರವನ್ನು ತಲುಪಲು ಪ್ರೇರೇಪಿಸುತ್ತವೆ. ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ, ”ಎಂದು ಅವರು ಹೇಳಿದರು. ಕೊನೆಯಲ್ಲಿ, ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಜಯಂತ್ ಕಾಯ್ಕಿಣಿ ರಚಿಸಿದ 'ನಿನ್ನಿಂದಲೇ' ಹಾಡನ್ನು ಹಾಡಿದರು.

ಕರ್ವಾಲೋ ಕುಟುಂಬದ ಜೆನಿವಿವ್ ಲೂಯಿಸ್ ಪ್ರಶಸ್ತಿಯ ಬಗ್ಗೆ ಮಾಹಿತಿ ನೀಡಿದರು. ಮಾಂಡ್ ಸೊಭಾನ್ ಪದಾಧಿಕಾರಿಗಳು, ಎರಿಕ್ ಒಜಾರಿಯೊ, ಲೂಯಿಸ್ ಜೆ ಪಿಂಟೊ, ಸ್ಟ್ಯಾನಿ ಅಲ್ವಾರೆಸ್, ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುನಿಲ್ ಮೊಂತೇರೊ ಪ್ರಶಸ್ತಿ ಪತ್ರ ವಾಚಿಸಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

ಕರ್ವಾಲೋ ಕುಟುಂಬದ ಸದಸ್ಯರು, ಫಾದರ್ ಪ್ರತಾಪ್ ನಾಯ್ಕ್, ಜಾನ್ ಕರ್ವಾಲೋ, ವಲೇರಿಯನ್ ಕರ್ವಾಲೋ, ಫ್ಲೋರಿನ್ ಲೋಬೋ, ಫೆಲಿಕ್ಸ್ ಲೋಬೋ, ಲಿಬರ್ಟಾ ಕರ್ವಾಲೋ, ರೆನಿಟಾ ಲೋಬೋ, ಜೆಫ್ರಿ ಕರ್ವಾಲೋ, ಜಾನಿಸ್ ಕರ್ವಾಲೋ ಮತ್ತು ನಿಹಾಲ್ ಕುಟುಂಬಸ್ಥರು, ಹೆರಾಲ್ಡ್ ಪ್ರೆಸಿಲ್ಲಾ ಟೌರೊ ಮತ್ತು ನಿಶಾನ್ ಟೌರೊ ಉಪಸ್ಥಿತರಿದ್ದರು.

ಷೇಕ್ಸ್‌ಪಿಯರ್‌ನ 'ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್' ನ ಕೊಂಕಣಿ ಅನುವಾದ, 'ಗಿಮಾಲುಯ ರಾತಿಚೆಂ ಸ್ವಪನ್'; 239ನೇ ಮಾಸಿಕ ರಂಗಭೂಮಿ ಸರಣಿಯ ಮೂಲಕ ಮಾಂಡ್ ತಂಡದ ಕಲಾವಿದರು ನಾಟಕವನ್ನು ಪ್ರದರ್ಶಿಸಿದರು. ಈ ನಾಟಕವನ್ನು ಅರುಣ್ರಾಜ್ ರೋಡ್ರಿಗಸ್ ಅನುವಾದಿಸಿದ್ದಾರೆ. ವಿದ್ದು ಉಚ್ಚಿಲ್ ನಿರ್ದೇಶನ ಮಾಡಿದ್ದರು. ಅಲ್ಬನ್ ಹೊನ್ನಾವರ, ಅಲ್ಸ್ಲಾನ್ ಪೆರ್ಮನ್ನೂರು, ಅಮ್ರಿನ್ ಶಕ್ತಿನಗರ, ಅಡ್ಲಿನ್ ಬೆಳ್ಮಣ್, ಇಮಾನಿ ಕುಲಶೇಖರ್, ಫ್ಲಾವಿಯಾ ಶಕ್ತಿನಗರ, ಜಾಸ್ಮಿನ್ ವಾಮಂಜೂರು, ಜೀವನ್ ಮುಂಡಗೋಡ್, ಪ್ರೀತಿಕಾ ವಾಮಂಜೂರು, ಸಂದೀಪ್ ಶಕ್ತಿನಗರ, ಸ್ಯಾಮ್ಯುಯೆಲ್ ಗುರ್ಪುರ್, ಸುಜಯ ವೆಲೆನ್ಸಿಯಾ, ವಿಂದನ್ ಕಿರೆಂಜೊ, ರೋಮರ್ಜಿಯೋಡಿ, ರೋಮರ್ಜಿಯೋಡಿ, ರೋಮರ್ಜಿಯೋ, ರೋಮರ್ಜಿಯೋ, ಶಾಂಬ್‌ನಗರ ತಂಡವನ್ನು ರಚಿಸಿದರು. ಕೇತನ್ ಕ್ಯಾಸ್ಟೆಲಿನೊ, ರೆನಾಲ್ಡ್ ಲೋಬೊ ಮತ್ತು ಮನೀಶ್ ಪಿಂಟೊ ಸಂಗೀತದೊಂದಿಗೆ ಸಂಬಂಧ ಹೊಂದಿದ್ದರು. ಶಿವರಾಮ್ ಅವರು ವೇದಿಕೆ ವ್ಯವಸ್ಥೆ ಮತ್ತು ವೇಷಭೂಷಣಗಳನ್ನು ನಿರ್ವಹಿಸಿದರೆ, ಕಿಂಗ್ಸ್ಲಿ ನಜರೆತ್ ಅವರು ಬೆಳಕನ್ನು ನಿರ್ವಹಿಸಿದರೆ, ಸುರಭಿ ಸೌಂಡ್ಸ್ ಧ್ವನಿ ವ್ಯವಸ್ಥೆಯನ್ನು ವ್ಯವಸ್ಥೆಗೊಳಿಸಿದರು.



Courtesy: Daijiworld Media Network - Mangaluru (SP)

Apr 05, 2021 at 9:48 am

"#ಚದುರಂಗ_ಮತ್ತು_ಕತ್ತೆ"
ನಾಟಕ ಬೆಂಗಳೂರು ಈ ಆವೃತ್ತಿಯ ಹಲವು ನಾಟಕಗಳು ತನ್ನ ವಿಭಿನ್ನತೆಯಿಂದ ಗಮನ‌ ಸೆಳೆದವು.
ಅದರಲ್ಲೂ ಯಾವುದೇ ರಂಗತಂಡ ಮತ್ತು ಕಲಾವಿದರಿಗೆ ಅತ್ಯಂತ ಸವಾಲೆನಿಸುವ 
"#ಚದುರಂಗ_ಮತ್ತು_ಕತ್ತೆ" ನಾಟಕ ಈ ಬಾರಿಯ ನಾಟಕೋತ್ಸವದ ಹೈಲೈಟ್ ಎನ್ನಬಹುದು.


ಖ್ಯಾತ ನಾಟಕಕಾರ ಪ್ರೊ.ಡಿ.ಎಸ್.ಚೌಗಲೆ ಅವರ ಈ ಕೃತಿಯ ಮೂಲ ಮರಾಠಿಯ(ಚಂ.ಪ್ರ.ದೇಶಪಾಂಡೆ )
ಅನುವಾದಿತ ಕೃತಿಯಾದರೂ ಪಾತ್ರಧಾರಿಗಳ‌ ಹೆಸರು(ಠಾಕೂರ್,ಜಗದೀಪ) ಹೊರತು ಪಡಿಸಿದರೆ
ಉಳಿದೆಲ್ಲವೂ ಈ ಮಣ್ಣಿನದೆ,ಭಾಷೆಯಂತೂ ಉತ್ತರ ಕರ್ನಾಟಕದ ಜವಾರಿ ಕನ್ನಡ.
ಪಂಚಮುಖಿ ನಟರ ಸಮೂಹ ಅಭಿನಯಿಸಿದ ಈ ನಾಟಕ ಬೆಳಕು, ನೆರಳಿನಾಟದ ಮೂಲಕ ಗಮನ ಸೆಳೆಯಿತು.
Human Instinct ಮತ್ತು Moral ನಡುವಿನ ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸಿದ ನಿರ್ದೇಶಕ ಅಭಿಮನ್ಯು ಭೂಪತಿ
ಮತ್ತು ಕಲಾವಿದರು ಆ ಮಟ್ಟಿಗೆ ಅಭಿನಯದ ಪ್ರಸ್ತುತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.
ಮನುಷ್ಯನ ಮನಸ್ಸುಗಳ ವೈರುಧ್ಯ ಗಳ ತಾಕಲಾಟ ಒಳಸುಳಿಗಳ ಅನಾವರಣದ ಮನೋ ವಿಶ್ಲೇಷಣಾತ್ಮಕ 
ನಾಟಕ ಮರಾಠಿ ರಂಗಭೂಮಿಯಲ್ಲಿ ಕಾಣ‌ಸಿಗುವ ಬ್ಲಾಕ್ (ಡಾರ್ಕ್)ಕಾಮಿಡಿ ವಿಭಾಗಕ್ಕೆ ಸೇರುತ್ತದೆ.
ಮೊದಲ ಬಾರಿಗೆ ಇದನ್ನು ಪ್ರಯೋಗಿಸಿದ ಪಂಚಮುಖಿ‌ ನಟರ ಸಮೂಹ ತಮ್ಮ ಮಿತಿಯಲ್ಲಿ‌ ಭೇಷ್ ಎನಿಸಿಕೊಂಡಿತು‌.
ಜಗದೀಪನ‌ ಪಾತ್ರಧಾರಿ ಆರಂಭದಲ್ಲಿಯೇ ಸಂಭಾಷಣೆಯಲ್ಲಿ ಮಾಡಿದ‌ ಕೊಂಚ ಎಡವಟ್ಟಿನಿಂದಾಗಿ‌
ಕೆಲ‌ ನಿಮಿಷಗಳ ನಾಟಕ‌ ತುಂಡಾದರೂ ಅಭಾಸವೆನಿಸಲಿಲ್ಲ.


ಠಾಕೂರ್ ಪಾತ್ರಧಾರಿ ಸಹಜಾಭಿನಯದ ಮೂಲಕ ಗಮನೆಸಳೆದರು. ಭಾವನೆಗಳನ್ನು ವ್ಯಕ್ತಪಡಿಸುವಾಗ
ಅವರ ಮುಖಭಾವವಂತೂ‌ ಎಕ್ಸಲೆಂಟ್!... ಇಡೀ ನಾಟಕದ ಹೈಲೈಟ್! ಬೆಳಕು ಸಂಭಾಷಣೆಗಳಿಲ್ಲದ ಸಮಯದಲ್ಲಿ
ಬೆಳಕು ಇಡೀ ನಾಟಕವನ್ನಾವರಿಸುವ ಮೂಲಕ ನೋಡುಗನ ಗಮನಸೆಳೆಯಿತು.
ಕೊನೆಯಲ್ಲಿ ರಂಗದ ಮೇಲೆ‌ ಬಂದ ಪಾತ್ರಧಾರಿಗಳು ತಾವು ಮಾಡಿದ ತಪ್ಪನ್ನು ಒಪ್ಪಿ ಕ್ಷಮೆಯಾಚಿಸಿದರು.
ಮತ್ತೊಮ್ಮೆ ಇದನ್ನು ಅಭಿನಯಿಸುತ್ತೇವೆ ಬಂದು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. 
ಈ ವಿನಮ್ರತೆ ಹಿಡಿಸಿತು.
ರಂಗಾಸಕ್ತರು ಖಂಡಿತ ಇದನ್ನು ನೋಡಲೇಬೇಕು ಯಾವುದೇ ನಿರ್ದೇಶಕ, ನಟರಿಗೆ ಈ ನಾಟಕ ಹಾಗೂ
ಇಲ್ಲಿನ ವಿಷಯ ವಸ್ತು ಅತ್ಯಂತ ಸವಾಲಿನದು. ಕನ್ನಡ ರಂಗಭೂಮಿಗಂತೂ ಅಪರೂಪ! ಹೀಗಾಗಿ
ಪಂಚಮುಖಿ ನಟರ ಸಮೂಹದ‌ ಈ ಪ್ರಯತ್ನಕ್ಕೆ ಅಭಿನಂದಿಸಲೇಬೇಕು.ಮತ್ತು ಬೆಂಬಲ ಅಗತ್ಯವಾಗಿ ನೀಡಬೇಕು...


#ಆರ್_ಎಚ್_ನಟರಾಜ  ಹೆಸರಾಂತ ಪತ್ರಕರ್ತರು,ಸಂಪಾದಕರು 'ಅಭಿಮನ್ಯು' ಪತ್ರಿಕೆ, ಬೆಂಗಳೂರು

Apr 05, 2021 at 9:48 am

ಅಕ್ಟೋಬರ್ 21 ರಿಂದ ಖಾದಿರ್ ಅಲಿ ಬೇಗ್ ಥಿಯೇಟರ್ ಫೆಸ್ಟ್
ಹೈದರಾಬಾದ್: ಅಕ್ಟೋಬರ್ 21 ರಿಂದ 24 ರವರೆಗಿನ 16 ನೇ ಆವೃತ್ತಿಯ ‘ಖಾದಿರ್ ಅಲಿ ಬೇಗ್ ಥಿಯೇಟರ್ ಫೆಸ್ಟಿವಲ್’ ಅನ್ನು ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಅವರು ಮೊವಾamಮ್ ಜಾಹಿ ಮಾರುಕಟ್ಟೆಯಲ್ಲಿ ಉದ್ಘಾಟಿಸಲಿದ್ದಾರೆ.
ಉತ್ಸವದ ಆರಂಭದ ನಂತರ, ತಾಜ್ ಮಹಲ್ ನಿರ್ಮಾಣದ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಭಾರತೀಯ -ಅಮೇರಿಕನ್ ನಾಟಕಕಾರ ಮತ್ತು ಪುಲಿಟ್ಜರ್ ಪ್ರಶಸ್ತಿ ನಾಮನಿರ್ದೇಶಿತ ರಾಜೀವ್ ಜೋಸೆಫ್ ಬರೆದ ನಾಟಕವನ್ನು ಮುಂಬೈನ ಹೀಬಾ ಷಾ ಅವರ ತಂಡವು ರೂಪಿಸಲಿದೆ.

ಖಾದಿರ್ ಅಲಿ ಬೇಗ್ ಥಿಯೇಟರ್ ಫೆಸ್ಟಿವಲ್, ಹಿಂದೂಸ್ತಾನಿ ಥಿಯೇಟರ್ ಲೆಜೆಂಡ್, ದಿವಂಗತ ಖಾದಿರ್ ಅಲಿ ಬೇಗ್, ತೆಲಂಗಾಣ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಐ & ಪಿಆರ್ ಇಲಾಖೆ ಮತ್ತು ಸಿಂಗರೇನಿ ಕಾಲರಿಯರ ಸಹಯೋಗದೊಂದಿಗೆ ನಡೆದ ವಾರ್ಷಿಕ ಗೌರವ ಅಲಿ ಬೇಗ್ ಮೊಜಾಮ್ ಜಾಹಿ ಮಾರುಕಟ್ಟೆ ಪ್ರಾಂಗಣದ ಐತಿಹಾಸಿಕ ಕಟ್ಟಡದಲ್ಲಿ.
"ಭವ್ಯವಾದ ಗಡಿಯಾರ ಗೋಪುರ ಮತ್ತು ಕಲ್ಲಿನ ಕಟ್ಟಡಗಳು ಬರೆದ ಕಾವ್ಯದ (ನಾಜ್ಮ್) ಹಿನ್ನೆಲೆಯಾಗಿರುತ್ತದೆ
ಕೊನೆಯ ನಿಜಾಮನ ಎರಡನೇ ಮಗ ರಾಜಕುಮಾರ ಮೊವಾಜಮ್ ಜಾ. ಅವರು ಕವನವನ್ನು 'ಶಾಜಿ' ಎಂಬ ಹೆಸರಿನಲ್ಲಿ ಬರೆದಿದ್ದಾರೆ "ಎಂದು ಮೊಹಮ್ ಹೇಳಿದರು.
ಖಾದಿರ್ ಅಲಿ ಬೇಗ್ ಥಿಯೇಟರ್ ಫೆಸ್ಟಿವಲ್, ಹಿಂದೂಸ್ತಾನಿ ಥಿಯೇಟರ್ ಲೆಜೆಂಡ್, ದಿವಂಗತ ಖಾದಿರ್ ಅಲಿ ಬೇಗ್, ತೆಲಂಗಾಣ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಐ & ಪಿಆರ್ ಇಲಾಖೆ ಮತ್ತು ಸಿಂಗರೇನಿ ಕಾಲರಿಯರ ಸಹಯೋಗದೊಂದಿಗೆ ನಡೆದ ವಾರ್ಷಿಕ ಗೌರವ ಅಲಿ ಬೇಗ್ ಮೊಜಾಮ್ ಜಾಹಿ ಮಾರುಕಟ್ಟೆ ಪ್ರಾಂಗಣದ ಐತಿಹಾಸಿಕ ಕಟ್ಟಡದಲ್ಲಿ.
"ಭವ್ಯವಾದ ಗಡಿಯಾರ ಗೋಪುರ ಮತ್ತು ಕಲ್ಲಿನ ಕಟ್ಟಡಗಳು ಬರೆದ ಕಾವ್ಯದ (ನಾಜ್ಮ್) ಹಿನ್ನೆಲೆಯಾಗಿರುತ್ತದೆ
ಕೊನೆಯ ನಿಜಾಮನ ಎರಡನೇ ಮಗ ರಾಜಕುಮಾರ ಮೊವಾಜಮ್ ಜಾ. ಅವರು ಕವನವನ್ನು 'ಶಾಜಿ' ಎಂಬ ಹೆಸರಿನಲ್ಲಿ ಬರೆದಿದ್ದಾರೆ "ಎಂದು ದಿವಂಗತ ಕಲಾವಿದನ ಮಗ ಮೊಹಮ್ಮದ್ ಅಲಿ ಬೇಗ್ ಹೇಳಿದರು.
ಬೇಗ್ ಅವರಿಂದ ಸಂಗ್ರಹಿಸಲ್ಪಟ್ಟ ಈ ಉತ್ಸವವು ಭಾರತೀಯ ರಂಗಭೂಮಿ ನಟರು ಮತ್ತು ವಿಶ್ವಪ್ರಸಿದ್ಧ ನಾಟಕಕಾರರ ಆಯ್ಕೆಗಳನ್ನು ಪ್ರಸ್ತುತಪಡಿಸುತ್ತದೆ.
ಭಾರತದ ಅತ್ಯಂತ ಮಹತ್ವದ ರಂಗಭೂಮಿ ಕಾರ್ಯಕ್ರಮಗಳಲ್ಲಿ ಒಂದಾದ ‘ಖಾದಿರಾಲಿ ಬೇಗ್
ಸಾಂಕ್ರಾಮಿಕ ರೋಗದ ಹೊರತಾಗಿಯೂ ಕಳೆದ ವರ್ಷ ಲೈವ್‌ನಲ್ಲಿ ನಡೆಸಲಾದ ಥಿಯೇಟರ್ ಫೆಸ್ಟಿವಲ್ ಮಾತ್ರ ಅದರ ಏಕೈಕ ಥಿಯೇಟರ್ ಕಾರ್ಯಕ್ರಮವಾಗಿದೆ. ಪ್ರತಿವರ್ಷದಂತೆ, ಈ ವರ್ಷವೂ ರಂಗಭೂಮಿಯಿಂದ ಬೇಗಂ ರಜಿಯಾ ಬೇಗ್, ಇಲಾ ಅರುಣ್, ಕೆಕೆ ರೈನಾ, ಹೀಬಾ ಶಾ, ಡೆನ್ಜಿಲ್ ಸ್ಮಿತ್, ನೂರ್ ಬೈಗ್ ಮೊಹಮ್ಮದ್ ಅಲಿ ಬೇಗ್, ಶಿಶಿರ್ ಸಿಂಗ್ ಚೌಹಾಣ್, ಮತ್ತು ಇತರರಂತಹ ಪ್ರಮುಖ ಹೆಸರುಗಳು
ಈ ಘಟನೆಯ ಒಂದು ಭಾಗ

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img