ರಂಗಚಕ್ರ ರಂಗತಂಡ- "ರಂಗಾಯಣ-ರಾಮಾಯಣ"
Published By: Police World News
Last Updated Date: 19-Dec-2021
ಯಾಕೊ ರಂಗಾಯಣದ ಬಗ್ಗೆ ನಡೆಯುತ್ತಿರುವ ರಾಮಾಯಣ ನೋಡಿ ನನಗನ್ನಿಸಿದ್ದನ್ನ ಹಂಚಿಕೊಳ್ಳಲೇಬೇಕೆನಿಸಿತು. ಕಾರಣ ನಾನು ಮೈಸೂರು ರಂಗಾಯಣದ ನಿರ್ದೇಶಕನಾಗಿ ಮೂರು ತಿಂಗಳು ಕಾರ್ಯನಿರ್ವಹಿದ್ದೆ. ಅದೇ ಅವಧಿಯಲ್ಲಿ ಅಂತರರಾಷ್ಟ್ರೀಯ ನಾಟಕೊತ್ಸವವನ್ನು ಸಂಧಿಗ್ದ ಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿಸಿದ ಸಿಹಿ ಸಂಧರ್ಭ ಅದು. ನನ್ನ ವೃತ್ತಿ ಬದುಕಿನ ಅತ್ಯಂತ ನೆನಪಿನಾನುಭವಕ್ಕೆ ಕಾರಣವಾದ ಸಂಧರ್ಭವೂ ಹೌದು. ಅವುಗಳ ಸಿಹಿ ನೆನಪು ಇಂದಿನ ರಾಮಾಯಣದ ಹಿನ್ನೆಲೆಯಲ್ಲಿ ಹಂಚಿಕೊಳ್ಳುವುದು ಅಷ್ಟೆ ಹೊರತು ಯಾವುದು ಸರಿ ಯಾವುದು ತಪ್ಪು ಎಂಬ ಚರ್ಚೆಯಲ್ಲ ಎಂಬ ನನ್ನ ಮಿತಿಯನ್ನರಿತು ಈ ಮಾತುಗಳಷ್ಟೆ.
ರಂಗಾಯಣ ನಿರ್ದೇಶಕನಾಗಿ ಅಧಿಕಾರ ಪಡೆಯುತ್ತಿದ್ದಂತೆಯೇ ಬಹುರೂಪಿ ಅಂತರಾಷ್ಟ್ರೀಯ ನಾಟಕೊತ್ಸವಕ್ಕೆ ತಯಾರಿ ಪ್ರಾರಂಬಿಸಬೇಕಿತ್ತು. ಕಲಾವಿದರೆಲ್ಲರನ್ನು ಸಭೆ ಕರೆದು ಚರ್ಚಿಸುವಾಗ ಎಲ್ಲರಲ್ಲೂ ನಿರುತ್ಸಾಹ. ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸಿ ವೇತನ ಪಡೆಯುತ್ತಿದ್ದ ಕಲಾವಿದರು ಮತ್ತು ಸಿಬ್ಬಂದಿ ನಿವೃತ್ತರಾದರೆ ಅಥವ ಮರಣ ಹೊಂದಿದರೆ ಒಂದು ಬಿಡಿಗಾಸು ಇಲ್ಲದೆ ನಂತರ ಬದುಕಬೇಕಿತ್ತು. ಇನ್ನು ಮನೆಯಲ್ಲಿ ದುಡಿಯುವ ಮಕ್ಕಳಿಲ್ಲದಿದ್ದರೆ ಬದುಕು ಮುಗಿದೆ ಹೊಯಿತು. ಹಾಗಾಗಿ ಇಪ್ಪತ್ತು ವರ್ಷಗಳಿಂದ ನಿವೃತ್ತಿ ವೇತನಕ್ಕಾಗಿ ಹೋರಾಟ ನಡೆಯುತ್ತಲೆ ಇದ್ದರು ಪರಿಹಾರ ದೊರೆತಿರಲಿಲ್ಲ. ಎಲ್ಲಾ ಕಲಾವಿದರು ನೀವು ನಮ್ಮ ಇಪ್ಪತ್ತು ವರ್ಷದ ಬೇಡಿಕೆ ಈಡೇರಿಸಿದರೆ ಮಾತ್ರ ನಾವು ಬಹುರೂಪಿಯಲ್ಲಿ ಖುಷಿಯಿಂದ ಕೆಲಸ ಮಾಡಲು ಸಾಧ್ಯ ಎಂದು ಹೇಳಿದ್ದರು. ಆಘಂತುಕವೆಂಬಂತೆ ಹಿರಿಯ ಕಲಾವಿದರೊಬ್ಬರು ಅದೇ ಸಂಧರ್ಭದಲ್ಲಿ ಹೃದಯಘಾತದಿಂದ ಮರಣ ಹೊಂದಿದ್ದು ಕರಾಳದಿನವಾಗಿ ಹೋಯಿತು. ಅವರ ಕುಟುಂಬಕ್ಕೆ ಆದಾರವೇನು? ಎಂಬ ಪ್ರಶ್ಣೆ ಮುಂದಿಟ್ಟು ಕಲಾವಿಧರು ಬಹುರೂಪಿ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ಅದಕ್ಕಾಗಿಯೇ ತಯಾರಾಗುತಿದ್ದ ಹೊಸ ನಾಟಕ ಎಲ್ಲವನ್ನು ಕೈಬಿಟ್ಟು ಪ್ರತಿಭಟನೆಯಲ್ಲಿ ನಿರತರಾದರು. ಅವರ ಬೇಡಿಕೆ ಒಂದೇ ನಿವೃತ್ತಿವೇತನ ಸಮಸ್ಯೆ ಪರಿಹರಿಸಿ ಮುಂದೆ ಎಲ್ಲ ಕಾರ್ಯಗಳನ್ನು ನಮಗೆ ಬಿಡಿ ಹಿಂದೆಂತಿಗಿಂತಲು ಹೆಚ್ಚು ಯಶಸ್ವಿಗೊಳಿಸುವುದಾಗಿ ಬೇಡಿಕೆಯಿತ್ತರು. ಸಮಸ್ಯೆ ಪರಿಹರಿಸದೆ ಬಹುರೂಪಿ ಯಶಸ್ವಿ ಸಾದ್ಯವಿಲ್ಲ ಎಂಬುದು ಅರ್ಥವಾಗಿತ್ತು.
ನಾನು ಇಲಾಖೆಯ ನಿರ್ದೇಶಕನು ಇದ್ದುದರಿಂದ ಹಲವು ಭಾರಿ ನಾಟಕಕಾರರಾದ ಕೆ.ವೈ ನಾರಾಯಣಸ್ವಾಮಿ, ಹಡಪ ಹಾಗೂ ದು.ಸರಸ್ವತಿ ಯವರೊಂದಿಗೆ ಸಭೆ ನಡೆದು ಹಲವು ಮಾರ್ಗಗಳನ್ನು ಯೋಜಿಸಿದ್ದೆವು. ಆದರೆ ಅವೆಲ್ಲವೂ ಸರಕಾರದಲ್ಲಿ ಅವಕಾಶವಿಲ್ಲವೆಂದು ತಿರಸ್ಕೃತಗೊಂಡಿದ್ದವು. ಆ ಪ್ರಸ್ಥಾವನೆಯನ್ನು ಮಾನ್ಯ ಸಚಿವರೊಂದಿಗೆ ಮಾನ್ಯ ಹಣಕಾಸು ಪ್ರಧಾನ ಕಾರ್ಯದರ್ಶಿಗಳಲ್ಲಿ ಚರ್ಚಿಸಿದೆವು. ಮಾನ್ಯ ಸಚಿವರು ಮುಖ್ಯಮಂತ್ರಿಗಳಲ್ಲಿ ಮಾತನಾಡಿದ್ದರು. ಪ್ರಾರಂಭದಲ್ಲಿ ಸಾಧ್ಯವಿಲ್ಲ ಎಂದಿದ್ದ ಮಾನ್ಯ ಹಣಕಾಸು ಪ್ರಧಾನ ಕಾರ್ಯದರ್ಶಿಗಳು ನನ್ನನ್ನು ಕರೆದು ಮತ್ತೆ ಪ್ರತ್ಯೇಕವಾಗಿ ಚರ್ಚಿಸಿ ತಾವು ಸೂಚಿಸಿದಂತೆ ಪ್ರಸ್ಥಾವನೆಯನ್ನು ಮರು ತಿದ್ದುಪಡಿಗೊಳಿಸಿ ಮಧ್ಯಾಹ್ನ ಒಂದು ಗಂಟೆಗೆ ತನಗೆ ನೇರವಾಗಿ ಕಡತ ನೀಡಲು ಸೂಚಿಸಿದರು. ಅದರಂತೆ ಕಡತ ಸಲ್ಲಿಸಿದೆ. "ನಾನು ಅರ್ಧ ಗಂಟೆ ಬಿಟ್ಟು ಪೋನ್ ಮಾಡುತ್ತೇನೆ ಬಾ" ಎಂದು ತಿಳಿಸಿದರು. ಅದರಂತೆ ಪೋನ್ ಬಂತು ಭೇಟಿ ನೀಡುತ್ತಿದ್ದಂತೆ ಕೆಲವು ಸಲಹೆಗಳೊಂದಿಗೆ ನಾವು ಕೋರಿದಂತೆ ರೂ5.62 ಕೋಟಿ ಮಂಜೂರು ಮಾಡಿದ್ದ ಆದೇಶವನ್ನು ಕೈಗಿತ್ತರು. ಇಪ್ಪತ್ತು ವರ್ಷಗಳ ಹೊರಾಟ ಕೇವಲ ಅರ್ಧಗಂಟೆಯಲ್ಲಿ ಪರಿಹಾರವಾಗಿತ್ತು. ಸದರಿ ಮೊತ್ತವನ್ನು ಕಲಾವಿದರ ಕ್ಷೇಮಾಭಿವೃದ್ಧಿ ನಿಧಿಯಾಗಿ ಇಟ್ಟು. ನಿವೃತ್ತರಾಗುತ್ತಿದ್ದಂತೆ ಅವರು ಸೇವೆಸಲ್ಲಿಸಿದ ಒಟ್ಟು ಅವಧಿಗೆ ವರ್ಷಕ್ಕೆ ಒಂದು ಲಕ್ಷದಂತೆ ಅಂದರೆ ಮುವತ್ತು ವರ್ಷ ಸೇವೆಸಲ್ಲಿಸಿದ್ದರೆ ಮುವತ್ತು ಲಕ್ಷ ನಿವೃತ್ತಿಯ ದಿವಸ ನೀಡುವ ಯೊಜನೆ ಜಾರಿಗೊಂಡಿತ್ತು.
ಕಲಾವಿದರಲ್ಲಿ ಉತ್ಸಾಹ ಮನೆ ಮಾಡಿತ್ತು. ಇಪ್ಪತ್ತು ದಿನದಲ್ಲಿಯೇ ಹೊಸ ನಾಟಕವು ಆಯಿತು. ಕಾರ್ಯಕ್ರಮವೂ ರೂಪಗೊಂಡಿತ್ತು. ಪೋಲೆಂಡ್ ಮತ್ತು ಇತರ ದೇಶಗಳ ಮೂರು ತಂಡ ನಿಗಧಿಯಾಗಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದವು. ವಿದೇಶಗಳಿಂದ ತಂಡ ಬಂದಿದ್ದರಿಂದ ಅವರಿಗೆ ಈಗಾಗಲೇ ಪ್ರಯಾಣ ವೆಚ್ಚ ನೀಡಿದ್ದರಿಂದ ಪ್ರದರ್ಶನದ ವೆಚ್ಚ ನೀಡಿ ಅದೇ ತಂಡಗಳು ಪ್ರಾದೇಶಿಕ ರಂಗಾಯಣಗಳಾದ ಶಿವಮೊಗ್ಗ, ದಾರವಾಡ ಮತ್ತು ಗುಲ್ಬರ್ಗಾ ರಂಗಾಯಣಗಳಲ್ಲಿ ಅಲ್ಲಿಯೂ ಉತ್ಸವ ರೂಪಗೊಂಡು ವಿದೇಶಿ ತಂಡಗಳು ಪ್ರದರ್ಶನ ನೀಡಿದ್ದವು. ನಾಡಿನ ಬೇರೆಡೆಯೂ ವಿದೇಶಿ ರಂಗಭೂಮಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ಬಿ.ಜಯಶ್ರೀಯವರು ಬಹುರೂಪಿಯನ್ನು ಉದ್ಘಾಟಿಸಿದ್ದರು. ರಂಗಾಯಣದ ಕಲಾವಿದರೆ ಎಲ್ಲವನ್ನು ಅತ್ಯಂತ ಯಶಸ್ವಿಯಾಗಿ ನಿಜ ಅರ್ಥದಲ್ಲಿ ಅಂತರಾಷ್ಟ್ರೀಯ ನಾಟಕೊತ್ಸವವನ್ನು ಯಶಸ್ವಿಗೊಳಿಸಿ ರಂಗಭೂಮಿಯ ಅರಿವಿಲ್ಲದ ಅಧಿಕಾರಿ ನಿರ್ದೇಶಕರು ಆಯೋಜಿಸಿದ್ದರು ಎಂದು ಕಿಂಚಿತ್ತು ಯೋಚಿಸದಂತೆ ರೂಪಿಸಿದ್ದರು. ಆ ಮೂರು ತಿಂಗಳ ರಂಗಾಯಣದ ನಿರ್ದೇಶಕ ಹುದ್ದೆ ನನ್ನ ಜೀವನದ ಹೊಸ ಅನುಭವ ನೀಡಿತ್ತು.
ಇಂದಿಗೂ ನಮ್ಮ ರಂಗಾಯಣದ ಕಲಾವಿದರು ಆತ್ಮೀಯ ಸಹೋದರ ಸಹೋದರಿಯರಂತೆ ನನ್ನನ್ನು ಮಾತನಾಡಿಸುವಾಗ ನನಗೆ ನನ್ನ ಕುಟುಂಬದವರನ್ನು ಮಾತನಾಡಿಸಿದಷ್ಟೆ ಆನಂದವಾಗುತ್ತದೆ. ಬಸವಲಿಂಗಯ್ಯನವರು ಇದೇ ರಂಗಾಯಣದ ನಿರ್ದೇಶಕರಾಗಿದ್ದಾಗ ಅಹೊರಾತ್ರಿ 9 ಗಂಟೆಯ ಕುವೆಂಪುರವರ ಮಲೆಗಳಲ್ಲಿ ಮದುಮಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿಯೆ ದಾಖಲೆ ಬರೆದರು.
ಕಾಲೇಜು ಮೆಟ್ಟಿಲೇರಿದಾಗ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮಾನವಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಓದುವಾಗ ಬಹುಪಾಲು ತಲೆಕೆಡಿಸಿ ನೆನಪುಳಿಯದೆ ಪರೀಕ್ಷೆಯಲ್ಲಿ ಕಾಡುತಿದ್ದುದು ವಿವಿಧ ಶಾಸ್ತ್ರಗಳ ಚಿಂತಕರ ಚಿಂತನೆಗಳು. ಅದರಲ್ಲಿ ಕೌಟಿಲ್ಯ, ಅರಿಸ್ಟಾಟಲ್, ಮಾರ್ಕ್ಸ್, ಸಾಕ್ರೆಟಿಸ್, ಡಾರ್ವಿನ್, ಪ್ರಾಯ್ಡ್, ಕೇನ್ಸ್, ಹೀಗೆ ಹತ್ತು ಹಲವು ಚಿಂತಕರ ವಿಚಾರಧಾರೆಗಳನ್ನು ಪಾಠ ಮಾಡುವಾಗ ನಮ್ಮ ಉಪನ್ಯಾಸಕರು ಹೇಳಿದ್ದು ಅವರ ಚಿಂತನೆಗಳನ್ನು ಅವರ ಚಿಂತನೆಯಂತೆಯೇ ತಿಳಿಸುತಿದ್ದರು. ಅದನ್ನಷ್ಟೆ ನಾವು ಅರ್ಥೈಸಿಕೊಳ್ಳುತಿದ್ದುದು ಅದನ್ನು ಹೊರತು ಇದು ಸರಿ ಅದು ತಪ್ಪು ಅಂತ ಜಿಜ್ಞಾಸೆ ಆಲೋಚನೆಯೇ ಇರಲಿಲ್ಲ. ಎಲ್ಲಾ ಚಿಂತನೆಗಳು ಆಯಾ ಕಾಲಘಟ್ಟಕ್ಕೆ, ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಅನುಭವದ ಮೇಲೆ ಅವರವರು ಪ್ರಭಾವಕ್ಕೊಳಗಾದ ತಿಳುವಳಿಕೆ ಮಟ್ಟದಲ್ಲಿ ರೂಪಗೊಂಡವು. ಅವರು ಸಿದ್ದಾಂತಗಳನ್ನು ಪ್ರತಿಪಾದಿಸುವಾಗ ಅವರವರ ಆಲೋಚನೆಗೆ ತಕ್ಕಂತೆ ಸರಿಯೆಂದು ಭಾವಿಸಿಯೇ ಪ್ರತಿಪಾದಿಸಿರುತ್ತಾರೆ. ರೂಪಗೊಂಡ ನಂತರ ವಿಚಾರದ ದೃಷ್ಠಿಯಿಂದ ಅವು ಎಡವೊ ಬಲವೊ ಎಂದು ನಾವೇ ಹಣೆಪಟ್ಟಿ ಕಟ್ಟಿಕೊಳ್ಳುತ್ತೇವೆ. ಆ ಎಲ್ಲ ಇತಿಮಿತಿಗಳನ್ನು ಮರೆತು ಓದಿದ ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಸಾಮಾನ್ಯಜ್ಞಾನ ಬೆಳೆದು ಬದುಕುವ ಜಗತ್ತಿನಲ್ಲಿ ಸರಿ-ತಪ್ಪ ಅಥವಾ ಸತ್ಯ-ಸುಳ್ಳು ಎಂಬುದನ್ನು ಗುರುತಿಸುವ ಶಕ್ತಿ ಬಂದು ಅದರಂತೆ ಸರಿಮಾರ್ಗದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಕುವೆಂಪು ಹೇಳಿದಂತೆ ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿ ನೆಮ್ಮದಿಯ ಬದುಕು ರೂಪಿಸಿಕೊಳ್ಳಬೇಕಿರುತ್ತದೆ. ಸತ್ಯ-ಮಿಥ್ಯ, ಸರಿ-ತಪ್ಪುಗಳನ್ನು ಪ್ರೇಕ್ಷಕರ ಮುಂದಿಟ್ಟು ವಿಚಾರಗಳನ್ನು ಒರೆಗೆ ಹಚ್ಚಿ ವೈಚಾರಿಕವಾಗಿ ಯೊಚಿಸುವಂತೆ ಮಾಡಿ ಪ್ರೇಕ್ಷಕನಿಗೆ ಬದುಕಿನ ಮಾರ್ಗ ತೋರಿಸುವುದು ರಂಗಭೂಮಿ. ಅದೇ ಉದ್ದೇಶದಿಂದ ಬಿ.ವಿ. ಕಾರಂತರು 1989 ರಲ್ಲಿ ಮೈಸೂರು ರಂಗಾಯಣ ಸ್ಥಾಪಿಸಿದ್ದು ಮತ್ತು ಸರಕಾರ ಸಹಮತಿಸಿ ಸಹಕರಿಸಿದ್ದು ಎಂದುಕೊಂಡಿದ್ದೇನೆ.