logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ನಮ್ಮ ಕರ್ನಾಟಕದ ನೆಲಮೂಲದ ; "ಹಸೆ ಚಿತ್ತಾರ ಜನಪದ ಕಲೆ"
ಜನಪದ ಚಿತ್ರಕಲೆಯಾಗಿ ಗುರುತಿಸಿಗೊಂಡ ಮಹಾರಾಷ್ಟ್ರದ ವರ್ಲಿ , ಬಿಹಾರದ ಮಧುಬನಿ ,
ಒರಿಸ್ಸಾದ ಸೊರಾ ಗೋವಾದ ಕಾವಿ ಹಾಗೂ ಮಂಡಲ ಕಲೆ,ಹಾಗೆ ನಮ್ಮ ಕನಾ೯ಟಕದ
ಜನಪದ ಹಸೆ ಚಿತ್ರಕಲೆಯು ಒಂದು.



ಕಲೆ ಪ್ರತಿಯೊಬ್ಬರಲ್ಲೂ ಹುದುಗಿರುವ ಚಿತ್ತಾಕರ್ಷಕ ರಸಸಂವೇದನೆ . ಭಾಷೆಗಳಿಗೆ ಲಿಪಿಯೇ
ಹುಟ್ಟದ ಕಾಲದಲ್ಲೇ ನಮ್ಮ ಜನಪದರು ಚಿತ್ರಕಲೆ ಮೂಲಕ ಸಂವಹನ ನಡೆಸಲು ಆರಂಭಿಸಿದರು .
ಸಹ್ಯಾದ್ರಿಯ ಘಟ್ಟಗಳ ಮಲೆನಾಡಿನ ತವರು ಭಾಗದಲ್ಲಿ ಇಂದಿಗೂ ಲಕ್ಷಾಂತರ ಮನೆಗಳಲ್ಲಿ
ಕಾಣಸಿಗುವ ಆಚರಣೆಗಳ ಕಲೆ ಹಸೆ ಚಿತ್ತಾರ ವಿಶಿಷ್ಟ ವಿನ್ಯಾಸದ್ದು , ಅನನ್ಯವಾದುದು ಆಗಿದ್ದು
ಶಿಷ್ಟಚಿತ್ರಕಲೆ ತನ್ನದೇ ಸಾಂಪ್ರದಾಯಿಕ ಅಂತಃಸತ್ವ ಉಳಿಸಿಕೊಂಡಿರುವ ಜನಪದರ ಚಿತ್ರಕಲೆಗಳನ್ನು
ಅಕ್ಷರ ಕಲಿತವರು ಕಡೆಗಣಿಸಿದ್ದೆ ಹೆಚ್ಚು ಹಾಗಾಗಿ ಈವರೆಗೂ ಕರ್ನಾಟಕದ್ದೆ ಆದ ನೆಲಮೂಲದ
ಹಸ ಚಿತ್ತಾರದ ಸಾಮಾನ್ಯವಾಗಿ ಇಂದಿಗೂ ಮಲೆನಾಡಿ ನಲ್ಲಿ ಮಾತ್ರ ಕಂಡುಬರುವ ದೀವರರಲ್ಲಿನ
ಮದುವೆ ಸಂದರ್ಭಗಳಲ್ಲಿ , ಹಬ್ಬಗಳಲ್ಲಿ ಮದುಮಕ್ಕಳು ಕೂರುವ ಸ್ಥಳದಲ್ಲಿನ ಹಿಂಭಾಗದ ಗೋಡೆಯ
ಮೇಲೆ ಬರೆ ಯುವ , ಎಳೆ  ಎಳೆಯುವುದರಿಂದಲೇ ಮೂರ್ತ ರೂಪತಳೆಯುವ ದೈವೀಭಾವದ ಶಾಸ್ತ್ರ
ಕಲೆಯೇ ಹಸೆಚಿತ್ತಾರ ಆಗಿದೆ . ಮಲೆಕರ್ನಾಟಕದ ದೀವರ ಜನಾಂಗದ ಮಹಿಳೆಯರು ಹಸೆಚಿತ್ತಾರದಲ್ಲಿ
ಬಳಸುವ ಬಣ್ಣಗಳು ಅಪ್ಪಟ ನೈಸರ್ಗಿಕ ಮೂಲದಿಂದ ಅವುಗಳ ಆಧಾರದ ಮೇಲೆ ಇವುಗಳನ್ನು
ಮೂರು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಕೆಮ್ಮಣ್ಣನನ್ನು ಪ್ರಮುಖವಾಗಿ ಬಳಸಿದರೆ ಕೆಂಪು ಹಸೆ,
ಇದ್ದಿಲನ್ನು ಬಳಸಿ ಕಪ್ಪು ಹಸೆ, ಅಕ್ಕಿ ಹಿಟ್ಟು ಉಪಯೋಗಿಸಿದರೆ ಬಿಳಿಹಸೆ. ಇವುಗಳ ಜೊತೆಯಲ್ಲಿ
ಹಸೆಯನ್ನು ರಂಗುಗೊಳಿಸಲು ಅರಿಸಿನ, ಹಾಲು, ಸುಣ್ಣ, ಕಾರೆಕಾಯಿ, ಗುರಗೆಕಾಯಿಗಳನ್ನು ಬಳಸಿ
ನೈಸರ್ಗಿಕ ಬಣ್ಣಗಳನ್ನು. ಹಸೆ ಚಿತ್ತಾರಗಳನ್ನು ಮೂಡಿಸಲು ಬಳಸುವ ಬ್ರಷ್ ಸಹ ಹುಲ್ಲು ಮತ್ತು
ನಾರಿನದಾಗಿದೆ. 



ಗೋಡೆಯ ಮೇಲೆ , ಬುಟ್ಟಿಗಳು , ಬಾಗಿಲು , ಕಿಟಕಿ , ಇಡುಕಲು , ಮಡಕೆ ಇವುಗಳ ಮೇಲೆ ಸಸ್ಯಜನ್ಯ
ಮೂಲದ ಬಣ್ಣಗಳಿಂದ ಶುಭಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ .
ಚಿತ್ರಿಸಲು ಬೇಕಾದ ಬಣ್ಣಗಳನ್ನು ಆಯಾಕಾಲದಲ್ಲಿ ಅವರೇ ತಯಾರಿಸಿಕೊಳ್ಳುವರು .
ಈ ಕಲೆಯನ್ನು ದೀವರರ ಮಹಿಳೆಯರ ಹಸೆ ಚಿತ್ತಾರ ವೆಂದೇ ಗುರುತಿಸಲಾಗಿದೆ .
ಮಲೆನಾಡಿನ ಹಸಚಿತ್ತಾರ | ಬುಡಕಟ್ಟು ಸಂಸ್ಕೃತಿಯ ಅತಿ ಪುರಾತನ ಕಲೆಯಾಗಿದ್ದು
ಉಳಿಸುವ ಬೆಳೆಸುವ ನಮ್ಮೆಲ್ಲರ ಕರ್ತವ್ಯವಾಗಿದೆ ಯಾಕಂದ್ರೆ ? ಜನಪದ ಕಲೆಯು
ನಮ್ಮ ಪರಂಪರೆಯ ಸಂಸ್ಕೃತಿಯ ಪ್ರತೀಕ .
















- ಉಮೇಶ್ ಪತ್ತಾರ
ಚಿತ್ರಕಲಾವಿದರು & ಬರಹಗಾರರು
ಸಿಂಧನೂರು,ರಾಯಚೂರು

Apr 05, 2021 at 9:48 am

" ನಟರಾಜ ಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆ "
ನಟರಾಜ ಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆ
ನಾಟ್ಯಕ್ಕೂ, ಯೋಗಸಾಂಖ್ಯಾದಿ ದರ್ಶನಗಳಿಗೂ, ಶಿಲ್ಪಾದಿ ಕಲಾಪ್ರಕಾರಗಳಿಗೂ, ನಾನಾಶಾಸ್ತ್ರಗಳಿಗೂ ಭಗವಂತನೇ ಮೂಲವೆಂಬ ಹೇಳಿಕೆ ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿದೆಯಷ್ಟೆ. ಮಹಾದೇವನ ಹಲವು ಹೆಸರುಗಳಲ್ಲಿ ನಟರಾಜ ಎಂಬ ಹೆಸರು ವಿಶಿಷ್ಟವಾದದ್ದು. 
ಹಾಗೆ ನೋಡಿದರೆ ನಮ್ಮೆಲ್ಲಾ ದೇವತೆಗಳಲ್ಲೂ ನರ್ತನದ -ಶಿಲ್ಪಕಲೆಯ ಅಂಶಗಳು ಅಡಕಗೊಂಡಿದ್ದರೂ, ನಾಟ್ಯಾಧಿದೇವತೆಯೆಂಬ ಅಗ್ರಸ್ಥಾನ ಪರಶಿವನದ್ದೇ. ನಟರಿಗೆಲ್ಲಾ ಆತ ರಾಜ. ಅಧಿಪತಿ, ಅಭಿನಯ ಕಲೆಯ ಆದ್ಯಪ್ರವರ್ತಕ. ನಾಟ್ಯದಲ್ಲಾಗಲೀ ಶಿಲ್ಪದಲ್ಲಾಗಲೀ ಕಣ್ಣಿಗೆ ಕಾಣುವ ವಿವರಗಳ ಹಿಂದೆ ಅಡಗಿರುವ ಸಂಕೇತವೇ ಕಲೆಗೆ ಹೊಸದೊಂದು ಆಯಾಮವನ್ನು ಒದಗಿಸುತ್ತದೆ.
 ಇದನ್ನೇ ಆಧ್ಯಾತ್ಮಿಕವೆಂದು ಬಗೆಯುತ್ತಾರೆ. ಸಂಪ್ರದಾಯದ ಚೌಕಟ್ಟಿನಲ್ಲಿ ಮನಸ್ಸಿಗೆ, ಹೃದಯಕ್ಕೆ ಸಲ್ಲಬಹುದಾದ ಸಂಸ್ಕಾರ ಇಲ್ಲಿ ಮುಖ್ಯ. ಸಾಂಪ್ರದಾಯಿಕ ಕಲೆಯ ಸ್ವಾರಸ್ಯ ಇದೇ.
ನಟರಾಜಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆಯತ್ತ ಕಣ್ಣು ಹಾಯಿಸುವ ಮುನ್ನ ನಾವು “ತಾಂಡವ” ಎಂಬ ನೃತ್ಯದ ಬಗ್ಗೆ, ನೃತ್ಯದ ಆಧ್ಯಾತ್ಮಿಕ ಹಿನ್ನೆಲೆಯ ಈ ಶಿಲ್ಪದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅರಿಯಬೇಕಾದ್ದು ಅವಶ್ಯ.
ಶಿವತಾಂಡವ ನೃತ್ಯವು ಆಗಮಪ್ರಸಿದ್ದ. ಅಗಸ್ತ್ಯರ ಭರತಸೂತ್ರ ೧೦೮ ತಾಂಡವಗಳನ್ನು ವರ್ಣಿಸಿದರೆ, ಶೈವಾಗಮಗಳು ಹದಿನೈದನ್ನು ವಿಶ್ಲೇಷಿಸಿವೆ. ತಂಡು ಎಂಬ ಮುನಿಗೆ ಪರಮೇಶ್ವರನು ಕಲಿಸಿದ ನಾಟ್ಯಕ್ಕೆ ತಾಂಡವ ಎಂಬ ಹೆಸರಾಯಿತೆಂದೂ, ಉದ್ಧತವಾದ, ಪುರುಷ ಶಕ್ತಿ ಪ್ರತಿಬಿಂಬಿತ ಪ್ರಕಾರವಿದೆಂದೂ ಹಲವರು ವಿಶ್ಲೇಷಿಸುತ್ತಾರೆ. ಸಪ್ತ ತಾಂಡವಗಳ ವಿವರಣೆ ಸ್ಫುಟವಾಗಿ ದೊರೆಯುತ್ತವೆ ಆದ್ದರಿಂದ ನಾವು ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡಬಹುದು.
ಶಿವತಾಂಡವ ಪ್ರಸಿದ್ಧ ವರ್ಣನೆ ಇಲ್ಲಿ ಉಲ್ಲೇಖಾರ್ಹ
ಉದ್ಧಂಡತಾಂಡವಮುದಂಚಿತಲಾಸ್ಯಲೀಲಾಂ
ಕರ್ತುಂ ಸ್ವಯಂ ಯುಗಪದೇವ ಸಮೂತ್ಸೂತ್ಮಾ|
ಯ: ಕಾಮಿಗೀಕಲಿತಕಮ್ರತರಾರ್ಧಕಾಯ:
ಸೋ ಯಂ ವಿಭಾತಿ ವಿಭಯರಾಧಿನಟಃ ಸುರಾಣಾಂ ||
– ಸಂಗೀತ ವಿದ್ಯಾವಿನೋದ
೧. ಕಲಿತ ತಾಂಡವ (ಕಾಲಿಕಾ ತಾಂಡವ)
ಕಲಿತ ತಾಂಡವು ಸೃಷ್ಟಿಯ ಸಂಕೇತ. ಈ ತಾಂಡವದಲ್ಲಿ ಶಿವನಿಗೆ ಎಂಟು ಕೈಗಳು – ಅಭಯ ಮುದ್ರೆ, ಡಮರು, ತ್ರಿಶೂಲ, ಪಾಶ, ಗಜಹಸ್ತ, ಕಪಾಲ, ಅಗ್ನಿ ಮತ್ತು ಘಂಟೆ. ಶಿವ ಮತ್ತು ಅವನ ಸಹಧರ್ಮಿಣಿ ಕಾಳಿಯ ನಡುವೆ ನಡೆದ ನರ್ತನ ಸ್ಪರ್ಧೆಯಲ್ಲಿ ತನ್ನ “ಲಲಾಟತಿಲಕ ಭಂಗಿ” ಯ ಯುಕ್ತಿಯಿಂದ ಶಿವ ಗೆದ್ದ ಸಂದರ್ಭದಲ್ಲಿ ಆಡಿದ್ದು ಇಲ್ಲಿ ಶಿವನ ಬಲಗಾಲು ಸಂಪೂರ್ಣವಾಗಿ ಎತ್ತಲ್ಪಟ್ಟಿದೆ.
೨. ಉಮಾ ತಾಂಡವ (ಗೌರೀ ತಾಂಡವ)
“ಶ್ರೀ ತತ್ವನಿಧಿ” ಎಂಬ ಗ್ರಂಥದಲ್ಲಿ ಇದರ ವಿವರಣೆಗಳಿವೆ. ಉಮೆಯ ಜೊತೆಯಲ್ಲಿ, ಕಗ್ಗತ್ತಲೆಯ ತಾಮಸಿಕ ಶಕ್ತಿಯಿಂದ ಶಿವ ನರ್ತಿಸುತ್ತಾನೆ. ಪೌರುಷಿಕ ಉನ್ನತ ಶಕ್ತಿಯ ಜೊತೆಯಲ್ಲಿಯೇ, ಸ್ತ್ರೀ ಸಹಜ ಲಾಸ್ಯವೂ ಇಲ್ಲಿ ಸೇರಿಕೊಂಡಿದೆ. ಇಲ್ಲಿ ಶಿವನಿಗೆ ಆರು ಕೈಗಳು ಢಮರು, ತ್ರಿಶೂಲ, ಅಭಯ ಮುದ್ರೆ, ವಿಸ್ಮಯ ಮುದ್ರೆ, ಪಿಂಛ, ಗಜಹಸ್ತ ಮುದ್ರೆ.
೩. ಸಂಧ್ಯಾ ತಾಂಡವ
ವಿಶ್ವದ ಸ್ಥಿರತ್ವ ಮತ್ತು ಪರಿರಕ್ಷಣೆಯ ಸಂಕೇತ ಸಂಗೀತ ವಾದ್ಯಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಶಿವ ಸಂಧ್ಯಾ ತಾಂಡವವನ್ನು ಅಶ್ವತ್ಥ ವೃಕ್ಷದಡಿಯಲ್ಲಿ ನರ್ತಿಸುತ್ತಾನೆ. “ಭುಜಂಗ ಲಲಿತ” ಅಥವಾ ಪ್ರದೋಷ ತಾಂಡವ ಎಂದು ಕರೆಯಲ್ಪಡುವ ಈ ತಾಂಡವದ ವರ್ಣನೆಯನ್ನು ಹಲವು ತಮಿಳು ಪದಗಳಲ್ಲಿ, ವರ್ಣಗಳಲ್ಲಿ ನೋಡಬಹುದು. ತ್ರಿಲೋಕದ ತಾಯಿಯನ್ನು ನವರತ್ನ ಖಚಿತ ಸುವರ್ಣ ಸಿಂಹಾಸದಲ್ಲಿರಿಸಿ ಶೂಲಪಾಣಿ ತಾಂಡವವಾಡುತ್ತಾನೆ. ಸರಸ್ವತಿ ವೀಣೆ ನುಡಿಸಿದರೆ, ಬ್ರಹ್ಮ ತಾಳವನ್ನು ವಿಷ್ಣು ಮದ್ದಲವನ್ನು ನುಡಿಸುತ್ತಾರೆ.
೪. ಸಂಹಾರ ತಾಂಡವ
ಸಂಹಾರ ತಾಂಡವವು ಪ್ರಳಯದ ಸಂಕೇತ. ಇದರಲ್ಲಿ ಶಿವ ಉಮೆಯೊಡನೆ ನರ್ತಿಸುತ್ತಾನೆ. ಸ್ಕಂದ ಸ್ವಾಮಿಯು ವೀಕ್ಷಿಸುತ್ತಿರುತ್ತಾನೆ. ಇಲ್ಲಿ ಶಿವನಿಗೆ ಕಲಿತ ತಾಂಡವದ ೮ ಕೈಗಳೂ ಒಟ್ಟು ೧೬ ಕೈಗಳು – ವಜ್ರ, ಟಂಕ, ದಂಡ, ನಾಗ, ವಲಯ, ಕಟಕ, ಖಡ್ಗ, ಪಾತಾಕ, ತನ್ನ ಪರಮಭಕ್ತ ಮಾರ್ಕಂಡೇಯನನ್ನು ರಕ್ಷಿಸಲು ಶಿವಲಿಂಗ ಒಡೆದು ಯಮನನ್ನು ಘಾಸಿಮಾಡಲು ಕಾಲೆತ್ತಿದ ಶಿವ ಕಾಲ ಸಂಹಾರ ಮೂರ್ತಿಯಾದ ಅದೇ ರೀತಿ ದಕ್ಷಯಜ್ಞದ ಸಮಯದಲ್ಲೂ ಪರಮೇಶ್ವರ ಸಂಹಾರಮೂರ್ತಿಯೇ. ಸಂಹಾರ ಸೃಷ್ಟಿ-ಸ್ಥಿತಿ-ಲಯಗಳ ಜೀವನದ ಚಕ್ರದಲ್ಲಿ ಪ್ರಮುಖವಾದದ್ದು, ಜೀವನ ಚಕ್ರ ತಿರುಗಲು, ಪುನರ್ ಸೃಷ್ಟಿಯಾಗಲು        ಜಗತ್ತನ್ನು ಸಿದ್ಧಪಡಿಸುವಂತದ್ದು.
೫. ತ್ರಿಪುರ ತಾಂಡವ (ವಿಜಯ ತಾಂಡವ)
ಜಗತ್ತಿನಲ್ಲಿ ಸದ್ಗುಣ ಮತ್ತು ದುಗುರ್ಣಗಳು ಸಮತೋಲನದಲ್ಲಿಡಲು ಶಿವ ಮಾಡಿದ ತಾಂಡವ ಉತ್ತಮವಾದದನ್ನುದ್ಧರಿಸಿ, ನೀಚತ್ವವನ್ನು ನಾಶ ಮಾಡಲು ಲೋಕಕ್ಕೆ ಮಾರಕರಾಗಿದ್ದ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಯರನ್ನು ಒಂದೇ ಬಾಣದಿಂದ, ಒಂದೇ ಬಾರಿ ಹೊಡೆದ ಸಮಯದಲ್ಲಿ ಶಿವನಾಡಿದ್ದು ತ್ರಿಪುರ ತಾಂಡವ, ವಿಶ್ವದ ತಿರೋಧಾನವನ್ನು ಸೂಚಿಸುತ್ತದೆ. ಇಲ್ಲಿ ಶಿವನಿಗೆ ೧೬ ಕೈಗಳು.
೬. ಊರ್ಧ್ವತಾಂಡವ
ಇಲ್ಲಿಯ ಸಂದರ್ಭ ಕಲಿತ ತಾಂಡವದ್ದೇ ಆದರೂ, ಇಲ್ಲಿ ಶಿವನಿಗೆ ೪ ಕೈಗಳು. ಕಾಳಿಯ ಜೊತೆಗಿನ ಸ್ಪರ್ಧೆಯಲ್ಲಿ ತನ್ನ ಊರ್ಧ್ವತಾಂಡವದಿಂದ ಶಿವ ಗೆಲ್ಲುತ್ತಾನೆ. ಮಹೇಶನ ಅನುಗ್ರಹ ಭಾವವನ್ನು ಇದು ಪ್ರತಿನಿಧಿಸುತ್ತದೆ.
೭. ಆನಂದ ತಾಂಡವ
ನಾವು ದಕ್ಷಿಣ ಭಾರತದ ಮನೆ ಮನೆಗಳಲ್ಲೂ ಕಾಣುವ ನಟರಾಜಶಿಲ್ಪ ಆನಂದತಾಂಡವದ್ದು, ದಾರುಕಾವನದಲ್ಲಿ ವೇದಬಾಹಿರ ಋಷಿಗಳು ಸೃಷ್ಟಿಸಿದ ವ್ಯಾಘ್ರನನ್ನು ಕೊಂದು ಅದರ ಚರ್ಮವನ್ನು ಉಟ್ಟಿದ್ದು, ವಿಷಪೂರಿತ ಸರ್ಪವನ್ನು ಮಾಲೆಯಾಗಿ ಧರಿಸಿದ್ದು, ಪಾಪಮೂರ್ತಿ ಅಪಸ್ಮಾರನನ್ನು ಬೀಳಿಸಿ, ಆತನನ್ನು ಮೆಟ್ಟಿ ನಿಂತದ್ದು ಎಲ್ಲವನ್ನೂ ಆನಂದತಾಂಡವ ಮೂರ್ತಿಯಲ್ಲಿ ಕಾಣಬಹುದು. ಆನಂದತಾಂಡವವು ವಿಶ್ವ ಸೃಷ್ಟ್ಯಾದಿ ಕ್ರಿಯಾ ಪಂಚಕದ ಸಮಾಹಾರ ರೂಪ. ಎಂದರೆ ಸೃಷ್ಟಿ, ಸ್ಥಿತಿ, ಪ್ರಳಯ, ತಿರೋಧಾನ, ಅನುಗ್ರಹ ಸಮಸ್ತವನ್ನೂ ಒಳಗೊಂಡದ್ದು.
ಈ ತಾಂಡವಗಳಲ್ಲದೆ, ತಂತ್ರಶಾಸ್ತ್ರಗಳೂ ಸಪ್ತವಿಧ ನಟರಾಜನರ್ತನಗಳನ್ನು ವರ್ಣಿಸಿವೆ. ಅಜಪಾ, ಉನ್ಮತ್ತ, ಪಾರಾವಾರ ತರಂಗ, ಕುಕ್ಕಟ, ಭೃಂಗ, ಕಮಲ, ಹಂಸಪಾದ (ಅಥವಾ ಅಮೃತ). ಆನಂದ ತಾಂಡವವನ್ನು ತಂತ್ರಗಳು ನಾದಾಂತನಟನವೆಂದು ಕರೆದು ಅಜಪಾದಿ ನರ್ತನಗಳೆಲ್ಲದರ ಸಮಾಹಾರ ಅಥವಾ ಪರ್ಯವಸತಿ ರೂಪವೆಂದು ಕೀರ್ತಿಸಿವೆ.
“ಭಾವ ಪ್ರಕಾಶ”ದಲ್ಲಿ ಐದು ತಾಂಡವಗಳನ್ನು ಹೆಸರಿಸಿ ಪ್ರತಿಯೊಂದರ ಮುಖ್ಯ ರಸಗಳನ್ನೂ ಹೆಸರಿಸಿದೆ. ಉಚ್ಚಂಡ, ಚಂಡ, ಪ್ರಚಂಡ, ಪ್ರೇರಣಾ ಮತ್ತು ಪ್ರಸನ್ನ ಇವು ತಾಂಡವದ ೫ ವಿಧಗಳು.
ಆನಂದ ತಾಂಡವ ಮೂರ್ತಿಯ ನಟರಾಜ ವಿಗ್ರಹ ಬಳಕೆಗೆ ಬಂದದ್ದು ಬಹುಶಃ ೧೦ನೆಯ ಶತಮಾನದಲ್ಲಿ. ಚೋಳರ ವಂಶದ ರಾಜರಾಜಚೋಳನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಗ್ರಹ ರಾಜರಾಜಚೋಳನಿಗೆ ಅತ್ಯಂತ ಪ್ರಿಯವಾಗಿತ್ತೆಂದೂ, “ಅಡವಲ್ಲವನ್‌” ಎಂದು ಖ್ಯಾತಿಗೊಂಡಿತ್ತೆಂದೂ ಹೇಳಲ್ಪಟ್ಟಿದೆ.
ನಟರಾಜಮೂರ್ತಿಯನ್ನು ಕಂಡಾಗ ನಮ್ಮ ದೃಷ್ಟಿ ಮೂರ್ತಿಯ ಪಾದಗಳಿಗೆ ಮಣಿದು ಹಂತ ಹಂತವಾಗಿ ಏರುತ್ತಾ ಹೋದರೆ ಅಸಂಖ್ಯ ಅಂಶಗಳನ್ನು ಗಮನಿಸಬಹುದು. ಆತನ ಬಲಕಾಲು “ಮುಯ್ಯಲಕ” ಎಂಬ ರಾಕ್ಷಸನ ಬೆನ್ನ ಮೇಲೆ ಊರಿದ್ದರೆ, ಎಡಕಾಲು ಬಲಪಾರ್ಶ್ವಕ್ಕೆ ಎತ್ತಲ್ಪಟ್ಟಿದೆ. ಶಿರದಲ್ಲಿ ಗಂಗೆ, ಅಧಚಂದ್ರ, ಹರಡಿರುವ ಕೇಶಸಮೂಹ, ಎರಡು ಕಣ್ಣುಗಳಲ್ಲದೆ ಭ್ರೂಮಧ್ಯದ ಮೂರನೆಯ ಕಣ್ಣು ಬಲಗಿವಿಯಲ್ಲಿ ಮಕರ ಕುಂಡಲ (ಪುರುಷಾಭರಣ), ಎಡಗಿವಿಯಲ್ಲಿ ಸ್ತ್ರೀಯರು ಧರಿಸುವ ತಾಟಂಕ, ನರ್ತಕರು ಅಲಂಕರಿಸಿಕೊಳ್ಳುವಂತೆಯೇ ನಟರಾಜ ತನ್ನ ಅಂಗಗಳಲ್ಲಿ ಅಲಂಕಾರಯುಕ್ತನಾಗಿದ್ದಾನೆ. ಸೊಂಟದಲ್ಲಿ ಬಿಗಿಯಾದ ಬಟ್ಟೆಯ ಬದಲಿಗೆ ಗಜದ ಅಥವಾ ವ್ಯಾಘ್ರದ ಚರ್ಮವಿದೆ. ಸೊಂಟದ ಪಟ್ಟಿ ಅಲಂಕಾರಗಳಿಂದ ಕೂಡಿದೆ. ಮೂರೆಳೆಯ ಯಜ್ಞೋಪವೀತ ಹೊಕ್ಕಳ ಬಳಿ ಇಳಿಯುವಂತಿದೆ. ಕಾಳ್ಬೆರಳುಗಳಲ್ಲಿ ಕಾಲ್ಕಡಗಗಳು, ಕೈಗಳಲ್ಲಿ ಕಂಕಣಗಳು, ತೋಳ್ಬಂದಿಗಳು, ಭುಜಕೀರ್ತಿಗಳು. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಶಿವನ ಎಡಗಡೆಯ ಮೂರ್ತಿಯಲ್ಲಿ ಸ್ತ್ರೀಸಹಜವಾಗಿರುವ ರೂಪು ಕಾಣಿಸುತ್ತದೆ. ಎಡಗೈ ಮತ್ತು ಎಡಗಾಲುಗಳಲ್ಲಿ ಸ್ತ್ರೀಯರ ತೆಳ್ಳನೆಯ ಆಕಾರ ಹಾಗೂ ಉಗುರುಗಳಿವೆ.
ನಟರಾಜನಿಗೆ ನಾಲ್ಕು ಕೈಗಳು, ಎಡಗೈ ಗಜಹಸ್ತವಿದ್ದು ಅದರ ಬೆರಳುಗಳು ಕುಂಚಿತಪಾದದೆಡೆಗೆ ಮುಖ ಮಾಡಿವೆ. ಬಲಗೈ ಅಭಯ ಹಸ್ತವಾಗಿದ್ದು ಎದೆಗಿದಿರು ನಿಂತಿದೆ. ಹಿಂದಿನ ಬಲಗೈ ಒಂದು ಢಮರುವನ್ನೂ ಎಡಗೈ ಅಗ್ನಿಯನ್ನೂ ಹಿಡಿದಂತೆ ಚಿತ್ರಿತವಾಗಿದೆ.
ನಟರಾಜನ ಹಣೆಯಲ್ಲಿರುವ ಮೂರನೆಯ ಕಣ್ಣು ಮುಚ್ಚಿರುತ್ತದೆ. ಉಳಿದ ಸ್ವಾಭಾವಿಕ ಕಣ್ಣುಗಳು ತೆರೆದಿದ್ದರೂ, ಅವುಗಳ ದೃಷ್ಟಿ ಒಳಮುಖವಾಗಿದೆ. ಮುಖದಲ್ಲಿ ಮಂದಹಾಸ, ಎಡಹುಬ್ಬು ಕಿಂಚಿತ್‌ಮೇಲೆತ್ತಲ್ಪಟ್ಟಿದೆ.
ಕಮಲದ ಪೀಠದ ಮೇಲಿರುವ ಅಪಸ್ಮಾರನ ಬೆನ್ನ ಮೇಲೆ ಶಿವ ನರ್ತಿಸುತ್ತಿದ್ದಾನೆ. ಅಗ್ನಿಯ ಪ್ರಭಾವಳಿ ಈ ಪೀಠದಿಂದ ಮೊದಲುಗೊಂಡು ಮೂರ್ತಿಯನ್ನು ಪೂರ್ಣವಾಗಿ ಸುತ್ತುವರಿದು ಆ ಪೀಠದಲ್ಲೇ ಅಂತ್ಯಗೊಳ್ಳುತ್ತದೆ.
ನಟರಾಜಮೂರ್ತಿ ಷಟ್‌ಕೋನದ ರೇಖಾವಿನ್ಯಾಸಕ್ಕೆ ಒಳಪಡುತ್ತದೆ. ಮೈ ಮಧ್ಯಭಾಗದಲ್ಲಿದ್ದರೆ ತಲೆ, ಮೇಲಿನ ಎರಡು ಕೈಗಳು, ಮೇಲಿನ ಮೂರು ಕೋನಗಳನ್ನು ಅಕ್ರಮಿಸುತ್ತದೆ. ಕುಂಚಿತ ಪಾದ ಕೆಳಗೆ ಅಪಸ್ಮಾರನ ಮೇಲಿದ್ದು ಕೆಳಗಿನ ಕೋನದಲ್ಲಿದ್ದರೆ, ಅವನ ಮೇಲೆದ್ದ ಕಾಲು ಮತ್ತು ನರ್ತಿಸುವಾಗ ಹರಡಿದ ವಸ್ತ್ರ ಮತ್ತೆರಡು ಕೋನಗಳನ್ನಾಕ್ರಮಿಸಿಕೊಂಡಿದೆ. ಈ ಆರು ಕೋನಗಳೂ ಸುತ್ತಲಿನ ವರ್ತುಲಕಾರದ ಅಗ್ನಿಜ್ವಾಲೆಯ ಪ್ರಭಾವಳಿಯೊಳಗೆ ಅಡಕವಾಗಿದೆ.
ಶಿಲ್ಪಕಲೆಯಲ್ಲಿ ಶಿವನ ಪ್ರತಿಮೆಗಳನ್ನು ನಾಲ್ಕು ಮೂರ್ತಿಗಳಾಗಿ ನಿರ್ಮಿಸುತ್ತಾರೆ. ಸಂಹಾರ ಮೂರ್ತಿಯಲ್ಲಿ ಆತ ಲಯಕಾರನಾಗಿ, ದಕ್ಷಿಣಾಮೂರ್ತಿಯಲ್ಲಿ ಆತ ಯೋಗಿಯಾಗಿ, ಅನುಗ್ರಹ ಮೂರ್ತಿಯಲ್ಲಿ ವರಪ್ರದಾಯಕನಾಗಿ ಹಾಗೂ ನೃತ್ಯ ಮೂರ್ತಿಯಲ್ಲಿ ನರ್ತಕನಾಗಿದ್ದಾನೆ.
ವಿಶ್ವ ವ್ಯಾಪಾರವಷ್ಟನ್ನೂ ಈ ವಿಗ್ರಹದಲ್ಲಿ ಪ್ರತಿನಿಧಿಸಲಾಗಿದೆಯೆನ್ನಬಹುದು. ಜಟೆಯಲ್ಲಿರುವ ಗಂಗೆ ಪಾವಿತ್ರ‍್ಯದ ಹಾಗೂ ಸಮೃದ್ಧಿಯ ಚಿಹ್ನೆ. ಶಿವ-ಶವೆಯರು ಅಭಿನ್ನರು. ಅರ್ಧಚಂದ್ರವು ಕಾಲದ ಸಂಕೇತವೆಂದಾಗಲೀ, ಕುಂಡಲಿನೀಯೋಗದ ಸೋಮಚಕ್ರದ ಸಂಕೇತವೆಂದಾಗಲೀ ಭಾವಿಸಬಹುದು. ಸ್ವಪ್ರಕಾಶನಲ್ಲದ, ಸೂರ್ಯನಿಂದ ಪ್ರಕಾಶಿಸಲ್ಪಡುವ, ವೃದ್ಧಿ ಕ್ಷಯಗಳಿಗೊಳಗಾವ ಚಂದ್ರ ಮನಸ್ಸಿನ ಸಂಕೇತ. ತಂತ್ರಗ್ರಂಥಗಳ ಪ್ರಕಾರ ಸೋಮಚಕ್ರವು ಧ್ಯಾನಾಶ್ರು, ರೋಮಾಂಚ, ಧೃತಿ, ಸಂತೋಷ, ವೈರಾಗ್ಯ, ಗಾಂಭೀರ್ಯ, ಏಕಾಗ್ರತೆ ಮೊದಲಾದವುಗಳ ಅಧಿಷ್ಠಾನವೆಂದು ಹೇಳಿವೆ. ಈ ಗುಣಗಳೆಲ್ಲವೂ ಮನಸ್ಸಿನ ಗುಣಗಳೇ, ಆದ್ದರಿಂದ ನಟರಾಜ ಮೂರ್ತಿಯು ಶಿರದಲ್ಲಿ ಧರಿಸಿರುವ ಚಂದ್ರನನ್ನು ಮನಸ್ಸಿನ ಸಂಕೇತವೆಂದೇ ತಿಳಿಯಬೇಕಾಗುತ್ತದೆ.
ನಟರಾಜಸ್ವಾಮಿಯ ವಿಗ್ರಹವನ್ನು ಸುತ್ತುವರೆದ ಅಗ್ನಿವರ್ತುಲ ಚಿತ್‌ಪ್ರಭಾವಳಿಯನ್ನೂ ಶಿರದ ಮೇಲ್ಗಡೆಯಿರುವ ವೃತ್ತಖಂಡ ಓಂಕಾರವನ್ನು ಸೂಚಿಸುತ್ತದೆ. ಅದು ಪೂರ್ಣತೆಯ ಚಿಹ್ನೆಯೂ ಹೌದು.
ನಟರಾಜನ ಹಾರಾಡುತ್ತಿರುವ ಕೇಶರಾಶಿಯು ಶಿವನ “ವ್ಯೋಮಕೇಶ” ಎಂಬ ಹೆಸರನ್ನು ಸಾರ್ಥಕಗೊಳಿಸಿವೆ. ಆಕಾಶವೇ ಅವನಿಗೆ ಕೇಶಗಳಾಗಿವೆ. ಲಲಾಟ ನೇತ್ರವು ಜ್ಞಾನದ್ಯೋತಕ, ಈಶ್ವರನ ಅಸಾಧಾರಣ ಮಹಿಮೆಯ ಲಾಂಛನ. ಮೂರು ಕಣ್ಣುಗಳಿರುವ ಸಂಗತಿ ಕಾಲಶ್ರಯ ಸೂಚನೆಯ ಆಶಯವುಳ್ಳದೆನ್ನಬಹುದು. ಅದು ಕರ್ಮಸಂಕಲ್ಪ-ಕರ್ಮತ್ಯಾಗ-ಜ್ಞಾನ, ಹೀಗೂ ಪ್ರತಿಪಾದಿಸಬಹುದು.
ಕಿವಿಗಳಲ್ಲಿ ಪುರುಷಾಭರಣ, ಸ್ತ್ರೀ ಆಭರಣಗಳೆರಡನ್ನೂ ಧರಿಸಿರುವುದು ಅರ್ಧನಾರೀಶ್ವರತ್ವದ ಚಿಹ್ನೆ. ಶಿವಶಕ್ತಿಯರ ಅಥವಾ ಪ್ರಕೃತಿ-ಪುರುಷರ ಸಮಾವೇಶವೆಂದೂ ಇದನ್ನು ಭಾವಿಸಬಹುದು. ದ್ರಾವಿಡರಲ್ಲಿ ತತ್ವಜ್ಞಾನ ಆರ್ಯರಿಗಿಂತ ಹೆಚ್ಚಿನ ಆಳದಲ್ಲಿದೆ. ಸೃಷ್ಠಿ ಕಾರ್ಯ ಬರಿಯ ಗಂಡು ಶಕ್ತಿಯಿಂದ ಮಾತ್ರವಲ್ಲ. ಸ್ತ್ರೀಯ ಗುಣಗಳು ಅವಕ್ಕೆ ಕೂಡಿದಾಗ ಮಾತ್ರ ಎಂಬ ಸತ್ಯ ಅವರಿಗೆ ಗೋಚರಿಸಿತ್ತು. ಆದ್ದರಿಂದಲೇ ನಟರಾಜ “ಮೂರ್ತಿ” ಪ್ರಕೃತಿ- ಪುರುಷ ಸಮಾಗಮವನ್ನೂ ಪ್ರತಿನಿಧಿಸುತ್ತದೆ.
ನಾದವೇ ಸೃಷ್ಟಿಮೂಲವಾದ್ದರಿಂದ ಡಮರುಗವು ಸೃಷ್ಟಿಯ ಸಂಕೇತವಾಗಿದೆ. ಡಮರುವಿನ ರೂಪ ಯೋನಿಲಿಂಗಗಳ ಸಾಮರಸ್ಯದ್ದು. ಎರಡು ತ್ರಿಕೋಣಗಳು ಒಂದರ ತುದಿಯನ್ನಿನ್ನೊಂದು ಅನಿಸಿಕೊಂಡು ನಿಂತಂತೆ ಡಮರುವಿನ ಆಕಾರ. ಮೇಲಣ ತ್ರಿಕೋನ ಶಕ್ತಿರೂಪ, ಕೆಳಗಿನದು ಶಿವ ರೂಪ. ನಡುವಿನ ಬಿಂದು ಸಾಮರಸ್ಯ, ಡೋಲಾಹಸ್ತ, ಅಭಯ ಹಸ್ತಗಳು ಸ್ಥಿತಿಶಕ್ತಿಯನ್ನೂ ಎಡಗೈಯ ಅಗ್ನಿಯು ಸಂಹಾರ ಶಕ್ತಿಯನ್ನು ಸೂಚಿಸುತ್ತವೆ. ಅಗ್ನಿಯು ಪಾವಕವೆಂಬ ಸಂಗತಿಯೂ ಧ್ಯಾನಾರ್ಹವಾಗಿವೆ. ಕಂಠಾಭರಣವಾದ ಸರ್ಪವು ಕುಂಡಲಿನೀ ಶಕ್ತಿಯ ಸಂಕೇತವೆಂದೂ ಉಳಿದ ಸರ್ಪಗಳು ಪ್ರತಿ ಶರೀರದಲ್ಲೂ ಇದ್ದು ಶರೀರದ ಸ್ವಾಭಾವಿಕ ಕರ್ಮಗಳಿಗೆ ಕಾರಣವಾಗಿರುವ ಪ್ರಾಣ, ಅಪಾನ, ವ್ಯಾನ, ಸಮಾನಗಳೆಂಬ ಪಂಚವಾಯುಗಳ ಮತ್ತು ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ಉಪವಾಯುಗಳ ಸಂಕೇತವೆಂದೂ ತಿಳಿಯುವುದು ಹೆಚ್ಚು ಸಮಂಜಸ.
ಡೋಲಾಹಸ್ತವು ಕೆಳಮುಖವಾಗಿಯೂ ಕುಂಚಿತ ದಕ್ಷಿಣ ಪಾದವು ಮೇಲ್ಮುಖವಾಗಿಯೂ ಪರಸ್ಪರ ಅಭಿಮುಖವಾಗಿರುವುದು ಗಮನಾರ್ಹ. ಇದು ಜೀವೋತ್ಕರ್ಷದ ಸಾಧ್ಯತೆಯನ್ನೂ ಪರತ್ತತ್ವದ ಆಕರ್ಷ ಪ್ರವಣತೆಯನ್ನೂ ಸೂಚಿಸುತ್ತದೆ. ಮರ್ತ್ಸತೆಯ, ಮಾಯೆಯ, ಅಜ್ಞಾನದ ಹಾಗೂ ಅಂಧಕಾರದ ಪ್ರತೀಕನಾದ ಅಪಸ್ಮಾರ ರಾಕ್ಷಸನನ್ನು ಸಾತ್ವಿಕ ಶಕ್ತಿ ಜಯಿಸುತ್ತದೆ. ಇದು ಸಾದನೆಯ ಪ್ರಥಮ ದಶೆ. ಅಂಧಕಾರವನ್ನು ನಿವಾರಣೆ ಮಾಡಿದ ಮೇಲೂ ಸತ್ತ್ವಸಿದ್ಧಗಾಗಿ ಕ್ರಿಯಾಶೀಲ ಪ್ರಯತ್ನ ಅಪೇಕ್ಷಿತವಾಗುತ್ತದೆಂಬುದನ್ನು ಕುಂಚಿತ ವಾಮಪಾದವು ಸೂಚಿಸುತ್ತದೆ. ಚರ್ಮಾಂಬರ, ಗೆಜ್ಜೆ ಮೊದಲಾದವು ಪೌರುಷದ, ವೀರತ್ವದ ಚಿಹ್ನೆಗಳು. ಯಜ್ಞೋಪವೀತದತ್ಯ್ರಂಶಗಳು ತ್ರಿಕರಣದ ಶುದ್ಧಿಯ ಲಾಂಛನಗಳು. ಕುಂಚಿತ ದಕ್ಷಿಣ ಪಾದದಂತೆ ಅಪಸ್ಮಾರ ರಾಕ್ಷಸ ಶಿರಸ್ಸೂ, ದೃಷ್ಟಿಯೂ ಮೇಲ್ಮುಖವಾಗಿರುವುದು, ಜೀವನ ಸಂತತ ಶಿವಸಾಕ್ಷಾರಾಪೇಕ್ಷೆಯನ್ನು ಸೂಚಿಸುತ್ತದೆನ್ನಬಹುದು. ನಟರಾಜನ ವಿಗ್ರಹ ಶಿವನ ಚಿತ್‌(ಪ್ರಕಾಶ ರೂಪ), ಅನಂದ (ಸ್ವತಂತ್ರವಾದದ್ದು) ಇಚ್ಛೆ (ಎಡೆತಡೆಯಿಲ್ಲದ ಚಮತ್ಕಾರ), ಜ್ಞಾನ (ಗ್ರಾಹ್ಯಗ್ರಾಹಕ ಭೇದವನ್ನೊಳಗೊಂಡ ಆಮರ್ಷಾತ್ಮಕವಾದ ಶಕ್ತಿ) ಮತ್ತು ಕ್ರಿಯಾ (ಎಲ್ಲ ರೂಪಗಳನ್ನು ತಳೆಯಬಲ್ಲ ಶಕ್ತಿ) ಈ ಐದು ಶಕ್ತಿಗಳನ್ನೂ ಅಭಿವ್ಯಕ್ತಿಸುತ್ತದೆ.
ಮೇಲಿನ ಅಂಶಗಳು ನಟರಾಜಮೂರ್ತಿ ಪಂಚಕೃತ್ಯಗಳನ್ನು ಪ್ರತಿನಿಧಿಸುತ್ತದೆ. ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸೃಷ್ಟಿ, ಸ್ತಿತಿ, ಸಂಹಾರ, ತಿರೋಬಾವ, ಅನುಗ್ರಹ ಇವೇ ಆ ಪಂಚಕೃತ್ಯಗಳು. ಜೊತೆಗೆ ವಯು, ಜಲ, ಆಕಾಶ, ಭೂಮಿ ಮತ್ತು ಅಗ್ನಿ ಎಂಬ ಪಂಚಭೂತಗಳು ಈ ಸುಂದರ ಮೂರ್ತಿಯಲ್ಲಿ ಅಡಕವಾಗಿವೆ.
ಓಂಕಾರವನ್ನು ಪ್ರಭಾವಳಿ ಅಥವಾ ತಿರುವಶಿ ಬಿಂಬಿಸಿದಂತೆಯೇ ಶಿವ ಪಂಚಾಕ್ಷರೀ ಮಂತ್ರವನ್ನು (ಶಿವಾಯ ನಮಃ) ನಟರಾಜ ಮೂರ್ತಿ ಚಿತ್ರಿಸುತ್ತದೆ ಎಂಬುದು “ಉನ್ಮೈ ವಿಳಕ್ಕಂ” ಎನ್ನುವ ಶೈವಾಗಮದ ಮತ. ಈ ಮಂತ್ರದ ಧ್ಯಾನದಿಂದ ಆತ್ಮ ಬೆಳಕು -ಕತ್ತಲೆಗಳ್ಯಾವುವೂ ಇಲ್ಲದ, ಶಿವ-ಶಕ್ತಿಯರಿಬ್ಬರಲ್ಲಿ ಭೇದವಿಲ್ಲದ ಸ್ಥಾನವನ್ನು ತಲಪುತ್ತದೆ ಎಂದೂ ” ಉನ್ಮೈ ವಿಳಕ್ಕಂ” ತಿಳಿಸುತ್ತದೆ. “ಶಿ” ಎಂದರೆ ಶಿವ, “ವಾ” ಎಂದರೆ ಶಕ್ತಿ. “ಯ” ಎಂದರೆ ಜೀವ, “ನ” ಎಂದರ ತಿರೋಭಾವ, “ಮ” ಎಂದರೆ ಮಲ, ಹೀಗೆ ಶಿವನ ಪಂಚಕೃತ್ಯಗಳನ್ನು ಪಂಚಾಕ್ಷರಿ ಮಂತ್ರ ಪ್ರತಿನಿಧಿಸುತ್ತದೆ.
ಇವಿಷ್ಠೇ ಅಲ್ಲದೆ ಶಿವಶಕ್ತಿಯರ ಸಂಯೋಗವಲ್ಲದೆ ಹರಿಹರರ ಸಂಯೋಗವನ್ನೂ ನಟರಾಜ ಮೂರ್ತಿಯಲ್ಲಿ ಕಾಣಬಹುದು ಎಂದು ಕೆಲವು ಶಾಸ್ತ್ರಗಳು ತಿಳಿಸುತ್ತದೆ. ಅಪ್ಪಯ್ಯ ದೀಕ್ಷಿತರು ಚದಂಬರದಲ್ಲಿ ಚಿತ್‌ಸಭೆಯನ್ನು ನೋಡಿದಾಕ್ಷಣ ರಚಿಸಿದ ಶ್ಲೋಕ ಇದನ್ನು ಸೂಚಿಸುತ್ತದೆ.
ಮಾರಮಣಂ ಉಮಾರಮಣಂ
ಫಣಧರತಲ್ಪಂ ಫಣಾಧರಕಲ್ಪಂ|
ಮುರಮಥನಂ ಪುರಮಥನಂ
ವಂದೇ ಬಾಣರಿಮ ಸಮಬಾಣಾರಿಂ||
ಶಿವನೊಂದಿಗಿರುವ ಶಿವಕಾಮಸುಂದರಿ ವೈಷ್ಣವೀ ಶಕ್ತಿಯೆ. ವೈಷ್ಣವರಿಗೂ ಚಿದಂಬರವೆಂಬುದು ನೂರೆಂಟು ತಿರುಪತಿಗಳಲ್ಲಿ ತಿರುಚಿತ್ರಕೂಟವೆಂದು ಪ್ರಸಿದ್ಧವಾಗಿದೆ.
ನಟರಾಜನ ಕಲ್ಪನೆಯನ್ನು ಮೂರು ಅಂಶಗಳಲ್ಲಿ ಕೇಂದ್ರೀಕರಿಸಬಹುದು. ಮೊದಲನೆಯದಾಗಿ ಅದು ಇಡೀ ವಿಶ್ವದ ಚಲನೆಯ ಪ್ರತೀಕ ಎರಡನೆಯದಾಗಿ ನಟರಾಜನ ನೃತ್ಯ ಉದ್ದೇಶ ಅಸಂಖ್ಯಾತ ಆತ್ಮಗಳಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಪ್ರಚೋದಿಸುವುದು. ಕೊನೆಯದು, ಈ ನರ್ತನದ ಸ್ಥಳ ಚಿದಂಬರ (ಚಿತ್‌+ಅಂಬರ) ಜಗತ್ತಿನ ಕೇಂದ್ರ ಸ್ಥಳ, ಅದು ನಮ್ಮ ಹೃದಯದ ಒಳಗಿರುವಂಥದ್ದು.
ನಟರಾಜ ಪೂಜೆಯ ಮುಖ್ಯ ಕೇಂದ್ರವೇ ಚಿದಂಬರ. ಚಿತ್‌ಅಥವಾ ಆತ್ಮ ಪ್ರಕಾಶಿಸುತ್ತಿರುವ ಶೂನ್ಯಾಂಬರವದು. ಅದು ಇರುವುದು ಜ್ಞಾನಿಯ ಹೃದಯಾಂತರಾಳದಲ್ಲಿ. ಆಂತರಿಕ ಅನುಭವದ ದೃಷ್ಟಿಯಿಂದ ಕಾಣುವಾಗ ಅಲ್ಲಿ ನಟರಾಜನ ದರ್ಶನವಾಗುತ್ತದೆ. ಆಕಾಶತತ್ತ್ವದ ಅರಿವಾಗುತ್ತದೆ. ಈ ಅರಿವಿನೊಡನೆ ಮೂಡುವ ಆನಂದವನ್ನೇ ಪ್ರತಿಮಾರೂಪದಲ್ಲಿ ನಾವು ನಟರಾಜಮೂರ್ತಿಯಲ್ಲಿ ನೋಡುತ್ತೇವೆ. ತಮಿಳುನಾಡಿನ ಚಿದಂಬರಂನಲ್ಲಿ ನಟರಾಜನ ವಿಶ್ವನರ್ತನದ ಬಳಿಯೆ, ಪರದೆಯ ಹಿಂದೆ ಒಂದು ಶೂನ್ಯ ಸ್ಥಳವಿದೆ. ಅಲ್ಲಿಯ ಶೂನ್ಯ ಸ್ಥಳವೇ ಶುದ್ಧಾಕಾಶವೆಂದೂ ಅದು ದೇವರ ಸಂಕೇತವೆಂದೂ ಭಾವಿಸುತ್ತಾರೆ. ಅದು ಜಡಾಕ್ಷರ (ಮೂರ್ತರೂಪದ ಆಕಾಶ) ವೆಂದೂ, ದೇವ ಚಿದಾಕಾಶ (ಆತ್ಮ ಸ್ವರೂಪಿ, ಚಿನ್ಮಯ) ಎಂದು ಅರ್ಥವಾಗುತ್ತದೆ. ಸತ್‌(ಶುದ್ಧ), ಚಿತ್‌(ಸುಜ್ಞಾನ), ಆನಂದ (ಸಂತೋಷ) ವನ್ನು ಪ್ರಕಟಿಸುವ ಅಧ್ಯಾತ್ಮಿಕ ಹೆಸರು ಚಿದಂಬರ. ನಟರಾಜನ ಕಲ್ಪನೆಗೆ ಪ್ರಾಯೋಗಿಕವಾದ ಒಂದು ಚೌಕಟ್ಟು ಇದೆ. ಶೈವಾಗಮ ಪಂಥದಲ್ಲಿ ಯೋಗ ಮುಖ್ಯವಾದದ್ದು. ಇಲ್ಲಿ ಪಾತಂಜಲ ಯೋಗದಂತೆ ಚಿತ್ತನಿರೋಧವಲ್ಲ. ಜೀವದ ಸಾಧನೆಯೇ ಯೋಗ. ಇದರಲ್ಲಿ ಎರಡು ನೆಲೆಗಳು. ಮೊದಲನೆಯದು “ಕ್ರಿಯೆ” ಎಂದರೆ ಮೈ, ಮಾತು, ಮನಸ್ಸುಗಳ ಕೆಲಸ. ಎರಡನೆಯದು ಕ್ರಿಯೋಪರಮ. ಈ ಕೆಲಸವೆಲ್ಲ ನಿಂತು ಧ್ಯಾನದಲ್ಲಿ ತೊಡಗುವುದು. ಕ್ರಿಯೆಯ ಭಾಗದಲ್ಲಿ “ವಾರಂಗಾಹಾರ್ಯಸಾತ್ವಿಕ” ಎಂಬ ನಾಲ್ಕು ಬಗೆಯ ಅಭಿನಯ ಪೂರ್ವಕ ನೃತ್ಯಗೀತಗಳು ಶಿವಸಾಯುಜ್ಯಕ್ಕೆ ದಾರಿ.
ನಟರಾಜ ಮೂರ್ತಿಯ ತಾಂಡವದ ಕಲ್ಪನೆ, ವಿಗ್ರಹದ ವೈಶಿಷ್ಟ್ಯ ಯೋಗಿಗಳಿಗೂ, ಕಲೋಪಾಸಕರಿಗೂ, ವಿಶೇಷವಾಗಿ ಭರತನಾಟ್ಯದ ಅಂತರ್ಭಾವಗಳನ್ನು ಅರಿಯ ಬಯಸುವವರಿಗೂ ಅತ್ಯಂತ ಧ್ಯಾನಾರ್ಹ.
ನಟರಾಜ ಕಲ್ಪನೆಯನ್ನು ಸಮಗ್ರವಾಗಿ ಅರಿಯಬೇಕಾದರೆ ಗಾಢ ಚಿಂತನೆಯೂ, ದೀಘಕಾಲದ ಯೋಗ ಸಾಧನೆಯೂ ಅಗತ್ಯ. ಭರತನಾಟ್ಯದಲ್ಲಿ ಶ್ರದ್ಧಾಪೂರ್ವಕವಾಗಿ ನಿರತರಾಗಿರುವವರಿಗೆ ಆನಂದ ತಾಂಡವ ಮೂರ್ತಿಯ ಸಾಕ್ಷಾತ್ಕಾರವೇ ಜೀವಿತದ ಪರಮೋದ್ದೇಶವಾಗಿರುತ್ತದೆ. ನಾಟ್ಯಕಲೆಯ ಲೌಕಿಕ ವೈದಿಕ -ಆಧ್ಯಾತ್ಮಿಕ ಈ ಮೂರು ಪ್ರಮಾಣಗಳೂ ನಟರಾಜಮೂರ್ತಿಯಲ್ಲಿ ಅಡಕವಾಗಿವೆ. ಧ್ಯಾನ ಮಾಡಿದಂತೆಲ್ಲಾ ಹೆಚ್ಚು ಹೆಚ್ಚು ಅರ್ಥಪೂರ್ಣವೂ, ವ್ಯಾಪಕವೂ ಆಗಿ ತೋರುವ ಕಲ್ಪನೆ ನಟರಾಜನ ಆನಂದ ತಾಂಡವ ಮೂರ್ತಿ.
ನಮಃ ಶಿವಾಯ ಸತತಂ ಪಂಚಕೃತ್ಯ ವಿಧಾಯಿನೇ|
ಚಿದಾನಂದ ಘನಸ್ವಾತ್ಮ ಪರಮಾರ್ಥವಭಾಸಿನೇ||
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Apr 05, 2021 at 9:48 am

ಹದವಿಟ್ಟು ತಿದ್ದಿ ತೀಡಿದ ಚಿತ್ತಾರಗಳು
ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸಿ.ಡಿ.ಜಟ್ಟೆಣ್ಣವರ ಕಲಾಯಾನ ಬಹು
ವಿಶೇಷವಾದದ್ದು.ಗೆರೆ ಬಣ್ಣಗಳೊಂದಿಗೆ ಆಟವಾಡಿದ,ಅಷ್ಟೇ ಗಂಭೀರವಾಗಿ ಚಿಂತನೆಗೊಳಪಡಿಸಿದ
ರೀತಿ,ನೀತಿ,ಅನನ್ಯವಾದದ್ದು.ಯಾವುದೇ ಮಾಧ್ಯಮವನ್ನು ಆರಿಸಿಕೊಂಡು ಚಿತ್ರ ಬರೆಯಲು ಕುಳಿತರೆಂದರೆ ಅಷ್ಟೇ
ಶಿಸ್ತುಬದ್ಧವಾಗಿ ರಚಿಸುವ,ಮನಸ್ಸು ಪೂರಕವಾಗಿ ಭಾವ ಸಂವೇದಿಸುವ,ನೋಡುಗನ ಎದೆಗೆ ಬೇಗ ಆಪ್ತವಾಗುವ,ಕೆಲವೊಮ್ಮೆ
ತಿರಸ್ಕೃತ ಭಾವದಿಂದ ಗ್ರಹಿಸುವ ಮನಸ್ಥಿತಿಗೆ ಬೇಸರವಾಗುವ,ಹೀಗೆ ಆಯಾ ನೋಡುಗನ ನೋಟದಲ್ಲಿ ಅರ್ಥ ವೈವಿಧ್ಯತೆಯನ್ನು
ವಿಶ್ಲೇಷಣೆಗೆ ಒಳಪಡುವ ರೀತಿಯಲ್ಲಿ ರೂಪ ತಾಳಿವೆ. ಕಾಲದನುಭವದ ಕೈಯೊಳಗೆ ಏನೇ ಕೊಟ್ಟರೂ ಮೂರ್ತರೂಪದ
ಕಲಾಕೃತಿಯೊಂದು ಅನುಭವ ಸಹಿತ ಸಿಹಿಯು ದೊರೆಯುತ್ತದೆ ಎಂಬ ಆತ್ಮಾಭಿಮಾನದ ಮಾತು ಸತ್ಯವೆನಿಸುತ್ತದೆ.
ಇವರ ಪ್ರಾರಂಭಿಕ ರೇಖಾಪ್ರಧಾನ ಕೇಂದ್ರಿತ ಕಲಾಕೃತಿಗಳನ್ನು ಗಮನಿಸಿದಾಗ ಗೆರೆಗಳಲ್ಲಿ ಸಮಾಧಾನ ಗ್ರಹಿಕೆಯ
ಹೊಳಹುಗಳಿಂದ ಕಣ್ಣ್ ಸೆಳೆದರೂ ಸಹ ಚಲಿಸುವ ಗುಣದ ಪ್ರಕ್ರಿಯೆ,ವಸ್ತು ವೈವಿಧ್ಯತೆಯ ನೋಟವನ್ನು ಬಹು ಆಕರ್ಷಣೆಯವಾಗಿ
ಮನ ಸೂರೆಗೊಳ್ಳುತ್ತದೆ.ಗೆರೆಯಲ್ಲಿ ಅರಳಿದ ಯುವತಿಯರ,ಜನಪದರ,ಹಳ್ಳಿ ಮತ್ತು ನಗರ ಬದುಕಿನ ವೈವಿಧ್ಯತೆಯ ವಿವಿಧ
ನೋಟಗಳು,ದೇಹ ಮನಸ್ಸು ಅಂಗಾಂಗಗಳ ಚಲನ ಕ್ರಿಯೆಯಲ್ಲಿ ಆಯಾ ವಸ್ತು ವಿಷಯದ ಪ್ರಸ್ತುತತೆಯನ್ನು ಅರ್ಥ ಸಹಿತವಾಗಿ
ತಿಳಿಯುವಂತೆ ಕಂಡುಬರುತ್ತವೆ.




ಹದಿನಾರರಿಂದ ಹದಿನೆಂಟು ವಯೋ ಮಿತಿಯಾಚೆಗಿನ ಪುರುಷ ಮತ್ತು ಸ್ತ್ರೀಯರ ರೇಖಾಚಿತ್ರಗಳು ಹತ್ತು ಹಲವು
ಚಿಂತನೆಗಳನ್ನು ಕಟ್ಟಿಕೊಡುತ್ತವೆ.ಎರಡು ಕೊಡಗಳ ಮಧ್ಯೆ ಕುಳಿತು ಮರದ ಪೊಟರೆಗೆ ಬೆನ್ನು ಹಚ್ಚಿ ಕಲ್ಲಿನ ಮೇಲೆ ಕುಳಿತ
ಯುವತಿಯು ತನ್ನ ತೆಳ್ಳನೆಯ ಕೈ ಬೆರಳ ಮುಖಾಮುಖಿಯಲ್ಲಿ ಸಮಯ ಪ್ರಜ್ಞೆಯ ಲೆಕ್ಕಾಚಾರವಿರಬಹುದೋ ಅಥವಾ
ಮನೆಯಾಚೆಗಿನ ರೆಕ್ಕೆ ಬಿಚ್ಚಿ ಹಾರುವ ತವಕವೋ ? ಎಂಬ ಅನೇಕ ದಾರಿಗಳ ತೆವಲನ್ನು ಸೂಚಿಸಿ ಹೇಳುವಂತಿದೆ.
ಮತ್ತೊಬ್ಬ ಯುವಕ ಡೋಲು ನುಡಿಸುತ್ತ ಹೋರಾಟ ಭಂಗಿ,ಇಬ್ಬರು ಯುವಕ ಯುವತಿಯರು ಹೀಗೆ
ನೂರಾರುಪ್ರಕಾರದ ರೇಖಾಚಿತ್ರಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ತೆರೆಯನ್ನು ಪ್ರದರ್ಶಿಸಿ ದಂತಿದೆ.ಮತ್ತೆ
ರೇಖಾಪ್ರಧಾನವಲ್ಲದೆ ಕಪ್ಪು ,ಬಿಳುಪು,ಮಧ್ಯೆ ಅಲ್ಲಲ್ಲಿ ಕೆಂಪು ಹಳದಿ ನೀಲಿ ಬಣ್ಣಗಳ ಲೇಪನದೊಂದಿಗೆ ಕರಿ ಪೌಡರ್
ಮಾದರಿಯ,ಇದ್ದಿಲು ಕುಟ್ಟಿ ಪುಡಿ ಮಾಡಿ ಅದರ ಸಹಾಯವೆಂಬಂತೆ ಮೂಲ ಸ್ಟಮ್ಪಿಂಗ್ ಪುಡಿಯ ಚಿತ್ರಗಳಂತೆ ರಚಿಸಿದ ಹತ್ತಾರು
ಚಿತ್ರಕಲಾಕೃತಿಗಳು ಶೀರ್ಷಿಕೆ ರಹಿತವೆಂಬಂತೆ ಕಂಡರೂ ಸಹ ಅನೇಕ ಅರ್ಥಗಳ ಸಂಗಮವಾಗಿ
ಮುಖಾಮುಖಿಯಾಗುತ್ತವೆ.ಅದರಲ್ಲಿ ವಿಶೇಷವಾಗಿ ಮೂವರು ಪುರಷರಿರುವ ಮತ್ತು ಸುತ್ತಲೂ ನಾಯಿಗಳಿರುವ ಕೃತಿಯಲ್ಲಿ
ಕತ್ತಲು ಅವರಿಸಿಕೊಂಡ ಗಳಿಗೆಯಲ್ಲಿ ನಡೆದಾಡುವ ಮೂವರ ಪ್ರಯಾಣಕ್ಕೆ ನಾಯಿಗಳ ಅಡೆ ತಡೆ,ಅಷ್ಟೇ ಮುಗ್ದ ಬೆಕ್ಕುಗಳ
ಮಾತುಕತೆ ನಿಜಕ್ಕೂ ಮಾನವ ಕುಲದ ದೌರ್ಜನ್ಯದ ವಿರುದ್ದದ ಕಡೆ ಪ್ರತಿಭಟಿಸಿದಂತಿದೆ.ಇದೆ ಕಲಾಕೃತಿ ಮತ್ತೊಂದು
ಅರ್ಥವನ್ನು ವಿವರಿಸುವಂತೆ ಮಹಾತ್ಮಗಾಂಧಿಯ ತತ್ವ ವಿವೇಚನೆಯೊಂದಿಗೆ,ಸ್ವಾತಂತ್ರ್ಯ ಚಳುವಳಿಯ ಗೆಲುವಿನ ಹರ್ಷದಲ್ಲಿ
ಮೂಖ ಪ್ರಾಣಿಗಳ ಸಂಭ್ರಮವಿರಬಹುದೇ ? ಹೀಗೆ ಹಲವು ಅರ್ಥದ ನದಿಯಾಗಿ ಈ ಕಲಾಕೃತಿ ನೋಡುಗರೊಂದಿಗೆ
ಸಂವಾದಿಸುತ್ತದೆ.

ಅಮೂರ್ತ ತಲೆ ಬರಹದ ಕಲಾಕೃತಿಗಳ ರಚನೆಯಲ್ಲಿ ಹವಾಮಾನ ವೈಪರೀತ್ಯದ ಸವಾಲುಗಳನ್ನು
ಪ್ರತಿನಿಧಿಸುವ,ಮೋಡ ಮರೆಯ ನಿಧಾನದ ಇಬ್ಬನಿ ಸೂಚಕದ ಛಾಯೆಯನ್ನು ತಿಳಿಸುವ ನೆಲೆಯಲ್ಲಿ ಹಲವು ಸ್ಟಮ್ಪಿಂಗ ಪೌಡರ್
ಕಲಾಕೃತಿಗಳು ಗಮನಾರ್ಹ.ಪೌಡರ್ ರೂಪದ ಚಿತ್ರಗಳಲ್ಲಿ ಅಲಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳು ಸಾಂದರ್ಭಿಕವಾಗಿ
ಲೇಪನಗೊಂಡಿವೆ.ಆದರೆ ಚಿತ್ರಕಲಾಕೃತಿಗಳ ರಚನಾ ತಂತ್ರಗಾರಿಕೆಯಲ್ಲಿ ಕಲಾವಿದನ ಬೌದ್ಧಿಕತೆ ಪ್ರಾಮಾಣಿಕ ಪ್ರಯತ್ನದ
ಹಾದಿಯನ್ನು ಸ್ಪಷ್ಟಪಡಿಸುತ್ತದೆ.
ಮತ್ತಲವೂ ಇದೆ ಪ್ರಕಾರದ ಚಿತ್ರಗಳಲ್ಲಿ ಬಹು ಕಾಡುವ ಒಂದು ಚಿತ್ರ ಇಬ್ಬರು ಪ್ರೇಮಿಗಳು ನಡೆವ ಹಾದಿಯಲ್ಲಿ ಅವರ
ಮುಂದಿನ ಬದುಕಿನ ಮುನ್ನೋಟ ಕಷ್ಟಕಾಲದ ಯಾತನೆ ಹೀಗಿರುವುದು ಎಂಬ ಸೂಚ್ಯವಾಗಿ ತಿಳಿಸಲು ಪ್ರಯತ್ನಿಸಿದಂತಹ
ಅನುಭವವನ್ನು ಪ್ರಸ್ತುತ ಪಡಿಸುವ ಕಲಾಕೃತಿಯೊಂದು ನಿರ್ಮಾಣವಾಗಿದೆ.ಅಲ್ಲದೆ ಬೆಕ್ಕು.ಕಾಗೆ.ನಾಯಿ.ಸೈಕಲ್ ಸವಾರಿ
ಯುವಕರು.ಇಬ್ಬರು ಯುವಕ ಯುವತಿಯರು,ಕೋಳಿ ಕಾಗೆಗಳ ಮಾತುಕತೆ,ಬೆಕ್ಕು ನಾಯಿ,ಮಾನವರೊಂದಿಗೆ ಮಾತಿಲ್ಲದ
ಪ್ರಾಣಿಗಳ ಸಂಯೋಜನೆ,ಎಲ್ಲವೂ ಅರ್ಥ ವಿವರಣ ಕೇಂದ್ರಿತ ಉತ್ತಮ ಕಲಾಕೃತಿಗಳೇ ಹೌದು.
ಇನ್ನೂ ಮೂರನೇ ಪ್ರಕಾರದ ಕಲಾಕೃತಿಗಳಾಗಿ ಅಬ್ಸಟ್ರ್ಯಾಕ್ ಟೈಟಲ್ ಕಲಾಕೃತಿಗಳ ನೋಡುವಿಕೆಯ ಅನುಭವ
ರಸವತಾದದ್ದು.ಕೆಂಪು.ಬಿಳಿ.ಹಸಿರು.ಕಪ್ಪು ಬಣ್ಣಗಳೊಂದಿಗೆ ಕಲಬೇರಿಕೆ ಶೈಲಿ,ಬ್ರೆಶ್ ಓಡಾಡುವ ರೀತಿ,ಕೈ ಬೆರಳ ಕಾವಿನ
ತೀಡುವಿಕೆ,ಹಸಿ ಬಣ್ಣದ ಮೇಲೆ ಪ್ಲಾಸ್ಟಿಕ್ ಸ್ಥಕ್ಚರ್ ತೆಗೆಯುವಿಕೆ,ಒಂದಾ ಎರಡಾ ನೂರು ವಿಧದ ಹೊಸ ರೂಪ ಕೊಟ್ಟು ಬಿಡಿಸಿದ
ಕಲಾಕೃತಿಗಳ ಮೆರಗು ಬಣ್ಣಿಸಲಾಗದು.ಕಲಾ ಬದುಕಿನ ಅನುಭವದ ಮಾರ್ಗವನ್ನೇ ಸೃಷ್ಟಿಸಿ ಹೊಸ ವಿಧಾನದ ತಿಳುವಳಿಕೆಯನ್ನು
ಕಲಾವಿದ ಗ್ರಹಿಸಿಕೊಂಡತಿದೆ.
ನಾಲ್ಕನೇ ಭಾಗವಾಗಿ ನೋಡುವ ಕಲಾಕೃತಿಗಳ ರಚನೆ ನಿಸರ್ಗ ಪ್ರೇರಿತವಾದವು.ಕಪ್ಪು ಕೆಂಪು ಕಲ್ಲಿನ ಬೆಟ್ಟವು
ನೀಲಿಮಯ ಆಕಾಶದ ಚೆಂದದ ಹೊಳಪು ಕಲಾವಿದನ ವಿಶಿಷ್ಟ ನೋಟದ ಮಾದರಿಯನ್ನೇ ತಿಳಿಸಿದಂತಿದೆ.ಬಾದಾಮಿ ಗುಹೆಯ
ಪರಿಕಲ್ಪನೆಯನ್ನು ಸಾರುವ ಒಂದೆರಡು ಕಲಾಕೃತಿಗಳು ನೋಡಲು ತುಂಬಾ ಸೊಗಸಾಗಿವೆ.
ಬಹುತೇಕ ಜಟ್ಟೆಣ್ಣವರ ಕಲಾ ವೈಶಿಷ್ಟ್ಯತೆಯನ್ನು ಸಾರುವ ಮಹತ್ವದ ಗುರುತುಗಳೆಂದರೆ ಆಯಿಲ್,ಡ್ರೈ,ಪೇಸ್ಟಲ್ಗಳ
ತುದಿಯಿಂದ ರಚನೆಯಾದ ಕಲಾಕೃತಿಗಳು.ಮಹಿಳೆ ಮತ್ತು ಪುರುಷರ ಮುಖಭಾವ,ಪೂರ್ಣ ಪ್ರಮಾಣದ ಚಿತ್ರಗಳನ್ನು
ನೋಡೋದಾಗ ಬಣ್ಣದ ತುಣುಕುಗಳ ಕಡ್ಡಿಯಂತಹ ಪೇಸ್ಟಲ್ಗಳನ್ನು ಹಾಳೆಗೆ, ಕ್ಯಾನವಾಸ್ ಗೆ ತಿದ್ದುವ,ಕೈ ಬೆರಳ ಕಾವು ಹೊಸ
ಮಾದರಿಯ ಚಿತ್ರಗಳನ್ನೇ ಸೃಷ್ಟಿ ಮಾಡಿದ ನೆನಪು ಕಲಾ ವಲಯ ಮರೆಯದೆ ಸದಾ ನೆನಪಿನಲ್ಲಿಟ್ಟು ಕೊಳ್ಳುವ ಹಾಗೆ ತನ್ನ
ಅಸ್ಮಿತೆಯನ್ನು ಮೆರೆದಿದ್ದಾರೆ.
ಯುವತಿಯ ಸೌಂದರ್ಯವಂತಿಕೆ ನಾಚಿ ನಿರಾಗುವ,ಬೇಗ ಅಪ್ಪಿಕೊಳ್ಳುವ, ನಗ್ನವಾಗಿರುವ ಯುವತಿಯ ಚಿತ್ರ
ಬಹುವಾಗಿ ಕಾಡುವ,ತಲೆಗೆ ಪಟಗ ಸುತ್ತಿಕೊಂಡು ನಡೆದ ವಯಸ್ಸಾಗಿರುವ ವೃದ್ಧನ ಚೆಲುವು,ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು
ಸಾರುವ ಮುಖಭಾವ ಚಿತ್ರ.ಸೀರೆ,ಕುಪ್ಪಸ,ಡ್ರೆಸ್,ತೊಟ್ಟ ಯುವತಿಯರ ಚಿತ್ರಗಳು ಆಕರ್ಷಕ ನೆಲೆಯಲ್ಲಿ ರಚನೆಯಾಗಿವೆ.
ಕಪ್ಪು.ಕೆಂಪು.ಬೂದು,ಹಳದಿ.ಬಿಳಿ ಇತ್ಯಾದಿ ಬಹು ಮಿಶ್ರವರ್ಣಗಳ ಬಳಕೆಯ ಪೇಸ್ಟಲ್ ಕಲಾಕೃತಿಗಳ ಚೆಲುವು ಕಲಾವಿದನ
ಹೆಗ್ಗಳಿಕೆಗೆ ಸಾಕ್ಷಿ.
ಈಗಾಗಲೇ ನೂರಾರು ಕಲಾಕೃತಿಗಳನ್ನು ರಚಿಸಿದ ಡಾ.ಸಿ.ಡಿ.ಜಟ್ಟೆಣ್ಣವರು ಪ್ರಾಯೋಗಿಕ ಕಾರ್ಯಗಳಷ್ಟೇ
ಮುಖ್ಯವಾಗಿ,ಸೈದ್ಧಾಂತಿಕವಾಗಿಯೂ ಅಷ್ಟೇ ಪ್ರಾಮುಖ್ಯತೆ ಯನ್ನು ಪಡೆದವರು, ಯಾಕೆಂದರೆ ಕರ್ನಾಟಕ ಚಿತ್ರಕಲಾ ಶಿಕ್ಷಣದಲ್ಲಿ
ಇತ್ತೀಚಿನ ಬೆಳವಣಿಗೆಯ ಕುರಿತಂತೆ ಕರ್ನಾಟಕ ವಿಶ್ವವಿದ್ಯಾಲಯ ದಿಂದ ಡಾಕ್ಟರೇಟ್ ಪದವಿ ಪಡೆದವರು.ಅಲ್ಲದೆ ಚಿತ್ರಕಲಾ
ಶಿಕ್ಷಣದ ಮತ್ತು ಕಲೆಯ ಕುರಿತಾದ ಹಲವು ಲೇಖನಗಳನ್ನು ಬರೆದ ಮಾಹಿತಿಯನ್ನು ಮುಕ್ತವಾಗಿ ತಿಳಿಸುತ್ತಾರೆ.ಕಲೆ.ಕಲಾವಿದ
ಕಲಾ ಶಿಕ್ಷಣ, ಪಾರಂಪರಿಕ, ಆಧುನಿಕ, ಸಮಕಾಲೀನ ಕಲೆಯ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು
ನಿರಂತರವಾಗಿ ಕಲಾ ಲೋಕದಲ್ಲಿ ಪಯಣಿಸುತ್ತಿದ್ದಾರೆ ಹಾಗಾಗಿ ಅವರ ಕಲಾಕೃತಿಗಳ ರಚನಾ ಶೈಲಿ, ತಂತ್ರಗಾರಿಕೆ, ಯುವ
ಸಮುದಾಯದ ಮೇಲೆ ಪ್ರಭಾವಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆಗೊಳಪಡುವ ಕರ್ನಾಟಕ ದ ಮಹತ್ವದ ಕಲಾವಿದರು.

ವಿಮರ್ಶೆ : ಡಾ.ಬಸವರಾಜ ಎಸ್.ಕಲೆಗಾರ
ಸಹಾಯಕ ಅಧ್ಯಾಪಕರು
ದೃಶ್ಯಕಲಾ ಅಧ್ಯಯನ ವಿಭಾಗ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

Apr 05, 2021 at 9:48 am

" ಎಲಿಫೆಂಟಾ ಗುಹೆಯ ಶಿಲ್ಪಕೃತಿಗಳು "
ಎಲಿಫೆಂಟಾ ದ್ವೀಪದ ಹೆಸರು ಬಂದುದು ಈ ದ್ವೀಪದಲ್ಲಿ ದೊರೆತ ಬೃಹದಾಕಾರದ ಆನೆಯ ವಿಗ್ರಹದಿಂದಾಗಿ ಇದಕ್ಕೆ ಎಲಿಫೆಂಟಾ
ಎಂಬ ಹೆಸರು ಬಂದಿತಂತೆ . ಈ ವಿಗ್ರಹ ಬೊಂಬಾಯಿಯ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಜಿಯಂನಲ್ಲಿ ನೋಡಬಹುದಾಗಿದೆ .ಗುಹೆ .
ಕಗ್ಗಲ್ಲಿನದು . ಗರ್ಭಗೃಹ , ನಡುವೆ ಲಿಂಗ , ದ್ವಾರದಲ್ಲಿ ದ್ವಾರಾಪಾಲಕ ವಿಗ್ರಹಗಳು , ವಿಶಾಲವಾದ ಗೋಡೆಯ ಮೇಲೆ
ಶಿಲಾಮೂರ್ತಿಗಳು , ಶಾಸನಗಳ ಸುಳಿವಿಲ್ಲ . ಈ ಗವಿಯ ನಿರ್ದಿಷ್ಟ ಕಾಲ ತಿಳಿಯಲಿಲ್ಲ . ಆದರೂ ದಖನ್ನಿನಗುಹಾ ಶಿಲ್ಪ ಶ್ರೇಣಿ ಇದು .
ಶಿಲ್ಪಗಳು 11 , 16 ಅಡಿ ಎತ್ತರದಲ್ಲಿವೆ . ಅಂಗಾಂಗಳ ಸಹಜ ಪ್ರಮಾಣ , ಉತ್ತಮ ಭಾವ , ನೈಜತೆಯ ಈ ಸುಂದರ ಕೃತಿಗಳು .



ಬೆಳಕು ನೆರಳುಗಳ ಸಂಯೋಜನೆ ಇಲ್ಲಿಯ ವೈಶಿಷ್ಟ್ಯತೆ . ಮೇಲಾಗಿ ಕುಸುರಿನ ಕಲೆ , ಮಣಿಹಾರ , ಪದಕ , ಸೃಷ್ಟಿ , ಸ್ಥಿತಿ , ಲಯಗಳ
ಸಮನ್ವಯ , ದುಂಡುಮುಖ , ತುಂಬುಗಲ್ಲ , ಶಾಂತ , ಗಂಭೀರ , ನಿರ್ವಿಕಾರ ನಿರಾಮಯ ಸ್ವರೂಪ ಕಂಡು ಅಪರೂಪ ಶಿಲ್ಪಕೃತಿಗಳು
. ಗುಹೆಯ ಮುಂಬಾಗಿಲಿನ ಬಳಿ ಎದುರು ಬದುರಾಗಿ ಎರಡು ಶಿಲ್ಪಗಳಿವೆ . ನಟರಾಜ ವಿಗ್ರಹ . ಶಿವ ತನ್ನ ಅಷ್ಟಭುಜಗಳನ್ನು
ಕಾಲುಗಳನ್ನು ವಿವಿಧ ದಿಶೆಯಲ್ಲಿ ಎತ್ತಿ ರಾಕ್ಷಸನನ್ನು ಧ್ವಂಸಮಾಡುತ್ತ ತನ್ನ ವಿರಾಟ್ ಶಕ್ತಿಯನ್ನು ಹೊರ ಚೆಲ್ಲುತ್ತಿದ್ದಾನೆ ಎಂಬಂತಿದೆ .
ಆದರೆ ಈ ವಿಗ್ರಹದ ಎದುರಿಗಿರುವ ಶಿವಲಕುಲೇಶನ ಶಿಲ್ಪ . ಅದೇ ಸರ್ವಶಕ್ತನಾದ ಮಹಾದೇವ . ಯಾವ ಅಬ್ಬರ , ಆವೇಶಗಳೂ
ಇಲ್ಲದೆ ಮಹಾಯೋಗಿಯಾಗಿ ತಪೋಮಗ್ನನಾಗಿದ್ದಾನೆ . ಪಾರ್ವತಿ ಶಿವನ ಮೇಲೆ ಮುನಿಸಿಕೊಂಡು ಆತನಿಂದ ದೂರ ಕುಳಿತಿದ್ದರೆ
ಅವರ ಎದುರಿನ ರಾವಣ ಕೈಲಾಸವನ್ನೆತ್ತುತ್ತಿರುವ ಶಿಲ್ಪದಲ್ಲಿ ಅದೇ ಪಾರ್ವತಿ ರಾವಣನ ಕಾರ್ಯದಿಂದ ಬೆದರಿ ಶಿವನನ್ನು ಬಾಚಿ
ತಬ್ಬಿದ್ದಾಳೆ . ಇನ್ನೊಂದು ಕಡೆ ಶಿವ ಅಂದಕಾಸುರನ ಸಂಹಾರದಲ್ಲಿ ನಿರತನಾಗಿರುವ ಭಯಂಕರ ಸನ್ನಿವೇಶ ವ್ಯಕ್ತವಾಗಿದೆ . ಈ ಶಿಲ್ಪದ
ಎದುರಿನಲ್ಲಿ ಕಲ್ಯಾಣ ಸುಂದರ ಮೂರ್ತಿಯೂ ಇದ್ದಾನೆ . ಮಹೇಶ ಮೂರ್ತಿಯ ಇಕ್ಕೆಲಗಳಲ್ಲೂ ಇನ್ನೆರಡು ಶಿಲ್ಪಗಳಿದ್ದು ಪರಶಿವ
ಪ್ರಕೃತಿ ಪುರುಷಾತ್ಮಕನೆಂಬ ಭಾವವನ್ನು ವ್ಯಕ್ತಪಡಿಸುವ ಅರ್ಧನಾರೀಶ್ವರ ಮತ್ತು ಗಂಗಾಧರ ಇವರ ರೂಪವನ್ನು , ಸಾಕ್ಷಾತ್ಕರಿಸಿವೆ .
ಇಲ್ಲಿಯ ಒಂದೊಂದು ಶಿಲ್ಪವೂ ಎಲಿಫೆಂಟಾದ ಅನಾಮಿಕ ಶಿಲ್ಪಿಯ ತಪಸ್ಸಿದ್ಧಿಯ ಕುರುಹಾಗಿವೆ . ಭಾರತೀಯ ಶಿಲ್ಪದ ಶ್ರೇಷ್ಠ
ಸಾಧನೆಯಾಗಿ ಮೆರೆಯುತ್ತಿವೆ.



- ಉಮೇಶ್ ಪತ್ತಾರ
ಸಿಂಧನೂರು,ರಾಯಚೂರು

Apr 05, 2021 at 9:48 am

ಕನಿಷ್ಠ ನೋಡಲು ಕಲಿಯಿರಿ!
ನಾವು ಪೇಂಟರ್ ಆಗಿರಲಿ ಅಥವಾ ಇಲ್ಲದಿರಲಿ, ಕನಿಷ್ಠ ನೋಡಲು ಕಲಿಯಿರಿ!
ಯಾವುದೇ ತಜ್ಞರು ಕೆಲವೊಮ್ಮೆ ಹೇಗೆ ನೋಡಬೇಕೆಂದು ನಿಮಗೆ ಕಲಿಸುತ್ತಾರೆ,
ಆದರೆ ನಾವು ಎಲ್ಲವನ್ನೂ ಕಲಿಯಬೇಕೇ? ಅದನ್ನು ನಾವು ನಮ್ಮಿಂದಲೇ ಕಲಿಯಬಹುದು.
ಪ್ರಕೃತಿಯು ನಮಗೆ ಅದನ್ನು ನೋಡಲು ಕಣ್ಣನ್ನು ನೀಡಿದೆ, ಆದರೆ ದೃಷ್ಟಿ ನಮ್ಮ ಮನಸ್ಸು.
ಕಂಡರೂ ನೋಡದಿದ್ದರೂ ಕಾಣದಿರುವಲ್ಲಿ ದೃಷ್ಟಿ ದೋಷವಿಲ್ಲ. 'ಅಜ್ಞಾನ' ನಿಮಗೆ
ಅನುಭವವನ್ನು ನೀಡುವುದಿಲ್ಲ. ಅದನ್ನು ನೋಡಿದರೆ ಮನದಲ್ಲಿ ಅಚ್ಚೊತ್ತುತ್ತದೆ.
ಅದು ನಮ್ಮ ಪ್ರತಿಯೊಂದು ನೆನಪಿನ ಕೋಶದಲ್ಲೂ ಉಳಿದುಕೊಂಡಿದೆ.

 



ಮಾತ್ರವಲ್ಲದೆ ನೆನಪು ಜೀವಂತವಾಗಿರುತ್ತದೆ. ಇದು ಕೆಲವೊಮ್ಮೆ ನಮ್ಮ ಆಲೋಚನೆಗಳ ವಿಷಯವಾಗುತ್ತದೆ.
ಕೆಲವೊಮ್ಮೆ ಇದು ಹೊಸತನದ ಕಲ್ಪನೆಗೆ ಜನ್ಮ ನೀಡುತ್ತದೆ. ಕಲ್ಪನೆ ಹುಟ್ಟಿದೆ, ಯೋಚಿಸಿದೆ ಮತ್ತು
ಅದು ನಮ್ಮ ಸೃಷ್ಟಿಯ ಮೂಲಕ ಪ್ರಕಟವಾಗುತ್ತದೆ. ಮಾತು, ಚಿತ್ರ, ಶಿಲ್ಪ, ನೃತ್ಯ, ನಾಟಕ, ಅಭಿನಯ,
ಸಂಗೀತದ ಮೂಲಕ ಕಲ್ಪನೆ ಎಲ್ಲೆಲ್ಲಿ ನಿಜವಾಗುತ್ತದೋ ಅಲ್ಲೆಲ್ಲ ನಮ್ಮ ಕಲಾತ್ಮಕ ಗುಣಗಳಲ್ಲಿ
ಪ್ರೌಢಿಮೆ ಕೆಲಸ ಮಾಡುತ್ತದೆ. ಚೆನ್ನಾಗಿ ಯೋಚಿಸಿದೆ ಆದರೆ ಅದನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ,
ಕಲ್ಪನೆಯ ಕೊರತೆಯಿಲ್ಲದಿದ್ದರೆ, ನಮ್ಮ ಮಾಧ್ಯಮಗಳಲ್ಲಿ ಪ್ರಾಬಲ್ಯ ಅಭ್ಯಾಸದ ಕೊರತೆಯಿಂದಾಗಿ
ಅದನ್ನು ಉತ್ತಮವಾಗಿ ವ್ಯಕ್ತಪಡಿಸಲಾಗಲಿಲ್ಲ. ಮತ್ತು......
ಅದಕ್ಕಾಗಿಯೇ ನಾನು ಮತ್ತೆ ಮತ್ತೆ ಹೇಳುತ್ತೇನೆ ಕೆಲಸದ ಅಭ್ಯಾಸವನ್ನು ಸ್ಥಿರವಾಗಿರಿಸಿಕೊಳ್ಳಿ. ಅಲ್ಲಿ ನಾವು ಕೊರತೆ ಬೀಳಬಾರದು.



-Vasudeo Kamath
Portrait artist group initiated by Vasudeo Kamath

Apr 05, 2021 at 9:48 am

ಬಳ್ಳಾರಿ ಏಕಶಿಲಾಬೆಟ್ಟ ಹಾಗೂ ಸುಂದರವಾದ ಕೋಟೆ
ಸಮತಟ್ಟಾದ ಭೂಪ್ರದೇಶದ ಮೇಲೆ ನಿರ್ಮಿತವಾದ ಬಳ್ಳಾರಿ ನಗರ ಅನೇಕ ಪ್ರಾಚೀನ ದೇವಾಲಯಗಳು  ಚರ್ಚುಗಳು,
ಮಸೀದಿಗಳು, ಇನ್ನಿತರ ಆಕರ್ಷಣೀಯ ಪುರಾತನ ಕಟ್ಟಡಗಳಿಂದ ಶೋಭಿಸುತ್ತಿದ್ದರೂ ವಿಶೇಷ ಗಮನ ಸೆಳೆಯುವಲ್ಲಿ
ಜಗತ್ತಿನಲ್ಲಿಯೇ ಎರಡನೆಯದೆನ್ನುವ ಹೆಗ್ಗಳಿಕೆ ಹೊಂದಿರುವ ಏಕಶಿಲಾಬೆಟ್ಟ ಹಾಗೂ ಸುಂದರವಾದ ಕೋಟೆ ಪ್ರಧಾನ
ಪಾತ್ರ ವಹಿಸುತ್ತವೆ. ಸಮುದ್ರ ಮಟ್ಟದಿಂದ ೧೯೭೬ಅಡಿ ಹಾಗೂ ನೆಲಮಟ್ಟದಿಂದ ೪೮೦ಅಡಿ ಎತ್ತರವಿರುವ,
ಮೂರೂವರೆ ಮೈಲು ಸುತ್ತಳತೆಯ ಈ ‘ಬಲಹರಿ’ ಬೆಟ್ಡಕ್ಕೆ  ಗೌರವದ ಮೆರುಗು ತಂದಿರುವುದು ನಯನ ಮನೋಹರವಾದ ಭವ್ಯಕೋಟೆ. 
ಜನತೆ ಸಾಮಾನ್ಯವಾಗಿ ಭಾವಿಸಿರುವಂತೆ ಈ ಕೋಟೆ ಹೈದರಾಲಿಯಾಗಲೀ, ಟಿಪ್ಪು ಸುಲ್ತಾನನಾಗಲೀ ಕಟ್ಟಿಸಿದ್ದಲ್ಲ.
ಮೊದಲೇ ಇದ್ದ ಕೋಟೆಯನ್ನು ಅವರು ಪುನರ್ನಿರ್ಮಿಸಿದರು. ವಿಜಯನಗರದರಸ ಕೃಷ್ಣದೇವರಾಯನಾಳ್ವಿಕೆಯ
ಕಾಲ-14ನೇ ಶತಮಾನದಲ್ಲಿ ತಿಮ್ಮಪ್ಪ ಈ ಕೋಟೆಯನ್ನು ನಿರ್ಮಾಣಮಾಡಿಸಿದ, ಈ ಕೋಟೆ 600-700 ವರ್ಷ
ಹಳೆಯದೆಂಬ ಮಾತು ಸತ್ಯಕ್ಕೆ ದೂರವಾದುದು! ಏಕೆಂದರೆ ಹೊಯ್ಸಳ ವಿಷ್ಣುವರ್ಧನನು ಗೆದ್ದುಕೊಂಡ
ಕೋಟೆಗಳ ಪಟ್ಟಿಯಲ್ಲಿ ಬಳ್ಳಾರಿ, ಕುರುಗೋಡು ಕೋಟೆಗಳು ಸೇರಿರುವುದರಿಂದ ೧೨ನೆ ಶತಮಾನದಷ್ಟು
ಹಿಂದೆಯೇ ಬಳ್ಳಾರಿ ಕೋಟೆ ಅಸ್ತಿತ್ವದಲ್ಲಿದ್ದುದು ಖಚಿತವಾಗುತ್ತದೆ. 





ಕ್ರಿ.ಶ.೧೧೩೧ರಲ್ಲಿ ಮಹಾಮಂಡಲೇಶ್ವರ ಬೀವರಸ ಬಳ್ಳಾರಿಯನ್ನಾಳುತ್ತಿದ್ದನು. ‘ಬಳ್ಳಾರಿ ರಾಚಮಲ್ಲ ದೇವರಸ’
ಎಂದು ಶಾಸನ ಕೀರ್ತಿತ ಕುರುಗೋಡು ಸಿಂದ ಅರಸ ರಾಚಮಲ್ಲ ಬಳ್ಳಾರಿ ಕೋಟೆಯೊಳಗಡೆ ಎರಡು ಚಿಕ್ಕ
ಗುಡಿಗಳನ್ನು ಕಟ್ಟಿಸಿದ್ದಾಗಿ ತಿಳಿಯುತ್ತದೆ. ಬಳ್ಳಾರಿ ಕೋಟೆಯನ್ನು ಮೇಲಣಕೋಟೆ ಮತ್ತು ಕೆಳಗಣಕೋಟೆ
ಎಂದು ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಮೇಲಣಕೋಟೆಯನ್ನು
ವಿಜಯನಗರದ ಸಾಮಂತ ಹನುಮಂತ ನಾಯಕ ಪುನರ್ನಿರ್ಮಾಣ ಮಾಡಿಸಿದನು. ಕೆಳಕೋಟೆಯನ್ನು
18ನೆ ಶತಮಾನದ ನಂತರ  ಹೈದರಾಲಿ ಫ್ರೆಂಚ್ ಎಂಜಿನೀಯರನಿಂದ ಮರುನಿರ್ಮಾಣ ಮಾಡಿಸಿದ.
ದುರದೃಷ್ಟವಶಾತ್ ಅದೇ ಫ್ರೆಂಚ್ ಎಂಜಿನೀಯರ್ ಪಕ್ಕದ ಕುಂಬಾರಗುಡ್ಡ ಈ ಏಕಶಿಲಾ ಬೆಟ್ಟಕ್ಕಿಂತ
ಎತ್ತರವಾಗಿರುವುದರಿಂದ ಅದರ ಮೇಲೆ ನಿಂತವರಿಗೆ  ಈ ಕೋಟೆಯ ಒಳಭಾಗ ಕಾಣುತ್ತದೆಂದು ಹೇಳಿದ
ತಕ್ಷಣ ಹೈದರಾಲಿ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಗಲ್ಲಿಗೇರಿಸಲಾಯಿತೆಂದೂ ಕೆಲವೆಡೆ ದಾಖಲಾಗಿದೆ!
ಪೂರ್ವದ್ವಾರದ ಬಳಿಯಿರುವ ಸಮಾಧಿಯು ಆ ಇಂಜಿನೀಯರನದೆಂದರೆ ಕೆಲವು ಸ್ಥಳೀಯರು ಅದು ಮುಸ್ಲೀಂ
ವ್ಯಕ್ತಿಯ ಪವಿತ್ರ ಸಮಾಧಿಯೆಂದು ಹೇಳುತ್ತಾರೆ. 



ವಿಜಯನಗರ ಪತನದ ನಂತರ ೧೬೩೧ರವರೆಗೆ ಹಂಡೆ ಹನುಮಪ್ಪ ನಾಯಕನ ಪಾಳೇಪಟ್ಟು ಆಳುತ್ತಿದ್ದಾಗ
ಬಳ್ಳಾರಿ ಕೋಟೆಯನ್ನು ಸುವ್ಯವಸ್ಥಿತವಾಗಿ ಪುನರ್ ರ್ನಿರ್ಮಿಸಲಾಯ್ತು. ೧೬೩೮ರಲ್ಲಿ ಒಬ್ಬ ವಿಧವೆ ಬಳ್ಳಾರಿಯನ್ನಾಳುತ್ತಿದ್ದಳು.
ಈಕೆಯ ಸೈನಿಕರು ಬಳ್ಳಾರಿ ಮಾರ್ಗವಾಗಿ ಆಂಧ್ರದೆಡೆ ಹೊರಟಿದ್ದ ಶಿವಾಜಿ ಸೈನ್ಯದ ಕೆಲ ಅಶ್ವಪಡೆ ಅಧಿಕಾರಿಗಳನ್ನು ಕೊಲ್ಲುತ್ತಾರೆ.
ಕ್ರುದ್ಧನಾದ ಶಿವಾಜಿ ಬಳ್ಳಾರಿ ಕೋಟೆಗೆ ಮುತ್ತಿಗೆ ಹಾಕಿದಾಗ ಹೆದರದೇ ೨೭ದಿನಗಳ ಪರ್ಯಂತರ ವೀರಾವೇಶದಿಂದ ಹೋರಾಡುತ್ತಾಳೆ. 
೧೭೨೯ರಲ್ಲಿ ನೀಲಮ್ಮ ಎಂಬ ದಿಟ್ಟ ಮಹಿಳೆ ಬಳ್ಳಾರಿಯನ್ನಾಳಿದಳು. ಮಹಾ ಪರಾಕ್ರಮಿಯಾದ ಈಕೆ ಆಡಳಿತ ವಿಷಯವಾಗಿ
ತೆಗೆದುಕೊಂಡ ನಿರ್ಧಾರವನ್ನು ಒಪ್ಪದೇ ವಿರೋಧ ವ್ಯಕ್ತವಾಗಿ, ವಾದ-ವಿವಾದ ತೀವ್ರ ವಿಕೋಪಕ್ಕೆ ಹೋದಾಗ 
ನಿಕಟ ಸಂಬAಧಿಗಳಿಬ್ಬರ ತಲೆ ಕಡಿಸುತ್ತಾಳೆ.  ನಂತರದಲ್ಲಿ ಮುಸ್ಲಿಮರ ವಶವಾದ ಈ ಕೋಟೆಯನ್ನು ೧೬೭೮ರಲ್ಲಿ
ಶಿವಾಜಿ ವಶಪಡಿಸಿಕೊಂಡ. ಆಮೇಲೆ ಜೌರಂಗಜೇಬನಾಳ್ವಿಕೆಗೊಳಪಟ್ಟು ೧೬೯೨ರಲ್ಲಿ ಪುನ: ಪಾಳೇಗಾರರ ವಶವಾಯ್ತು.  
 ೧೭೬೪ರಲ್ಲಿ ಆದ್ವಾನಿ ಸಂಸ್ಥಾನದ ಬಸಾಲತ್ ಜಂಗ್ನ ಅಧೀನದಲ್ಲಿ ರಾಮಪ್ಪ ಬಳ್ಳಾರಿಯನ್ನಾಳಿದನು. ೧೭೭೮ರಲ್ಲಿ 
ಗೆದ್ದುಕೊಂಡ ಈ ಕೋಟೆ ೧೭೯೨ರವರೆಗೆ ಟಿಪ್ಪುಸುಲ್ತಾನ ವಶದಲ್ಲಿತ್ತು. ೪.೫.೧೭೯೯ರಂದು ಟಿಪ್ಪು ಮರಣಿಸಿದ ಮೇಲೆ
ಹೈದ್ರಾಬಾದ್ ನಿಜಾಮನ ವಶವಾಗಿ ೧೮೦೦ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರವಾಯಿತು.
ಕರ್ನೂಲು ನವಾಬ ಮುಜಾಫರ್‌ಖಾನ್‌ನನ್ನು ೧೮೨೩ ರಿಂದ ೧೮೬೪ರವರೆಗೆ ೪೧ವರ್ಷ ಸುದೀರ್ಘಕಾಲ
ಬಳ್ಳಾರಿ ಕೋಟೆಯಲ್ಲಿ ಬಂಧನದಲ್ಲಿಡಲಾಗಿತ್ತು. 
ಒಟ್ಟಾರೆ ಬಳ್ಳಾರಿ ಕೋಟೆಯ ಇತಿಹಾಸ ಓದುಗರನ್ನು, ಕೇಳುಗರನ್ನು ರಸ ರೋಮಾಂಚನಗೊಳಿಸುತ್ತದೆ!


-ಟಿ.ಕೆ.ಗಂಗಾಧರ ಪತ್ತಾರ, 9008226702. 


Apr 05, 2021 at 9:48 am

ಕಲಾವಿದ ನಾಡೋಜ ಆರ್ ಎಮ್ ಹಡಪದ

ಕಲಾವಿದ ನಾಡೋಜ ಆರ್ ಎಮ್ ಹಡಪದ ಅವರು ನಮ್ಮ ಕಾಲದ ದಂತ ಕಥೆಯೇ ಹೌದು! ಕುರುಡು ಕಾಂಚಾಣದ ಅಬ್ಭರ ಅಟ್ಟಹಾಸಗಳಿಗೆ ತಮ್ಮ ಪ್ರಜ್ಞಾವಂತ ಬದುಕನ್ನೇ ಸವಾಲಾಗಿ ಒಡ್ಡಿ, ಆ ಮೂಲಕವೇ ಕಲೆಯ ನೆಲೆ ಬೆಲೆಗಳನ್ನು ನನಗೆ ಮತ್ತು ನನ್ನಂತಹ  ಅನೇಕರಿಗೆ ಅರುಹಿದವರು. ಅವರು ಕಲೆಯನ್ನು ಎಂದೂ ಕಲೆಗಾಗಿ ಸೃಷ್ಟಿಸಲಿಲ್ಲ, ಹಾಗೆಂದು ಹೊಟ್ಟೆ ಹೊರೆಯಲಿಕ್ಕಾಗಿಯೂ ಸೃಷ್ಟಿಸಲಿಲ್ಲ! ಬದಲಾಗಿ ಸ್ವಯಂ ಆತ್ಮಾವಲೋಕನಕ್ಕಾಗಿ, ಬದುಕಿನ ಅನ್ವೇಷಣೆಗಾಗಿ ಸೃಷ್ಟಿಸಿದರು. ಕಲೆಯ ಮೂಲಕ ಬದುಕನ್ನು, ಬದುಕಿನ ವಿವಿಧ ಆಯಾಮಗಳ ಮೂಲಕ ಕಲೆಯನ್ನು ಪರೀಕ್ಷಿಸಿದರು. ಕಲೆಯ ಮೂಲಕ ಬದುಕು ಸಹ್ಯವಾಗಬೇಕು, ಬದುಕು ಬಿಟ್ಟು ಕಲೆ ಬೇರೆಯಿಲ್ಲ! ಕಲಾಲೋಕವೆಂಬುದೂ ಬೇರೆ ಇಲ್ಲ, ಒಂದು ವೇಳೆ ಹಾಗೆ ಅಂದುಕೊಂಡಿದ್ದರೆ ಅದು ಒಂದು ಭ್ರಮೆ ಮಾತ್ರ. ಇತ್ಯಾದಿ ಅವರ ನಂಬಿಕೆ, ನಿಲುವುಗಳು ಬಹಳ ಸ್ಪಷ್ಟವಾಗಿದ್ದವು. ಸಾಂಪ್ರದಾಯಿಕ ಕಲಾ ತತ್ವಗಳ ಆಚಗೆ, ವಾಸ್ಥವಿಕ ನೆಲೆಗಟ್ಟಿನ ಮೇಲೆ ಅವರ ಚಿಂತನೆ, ದೃಷ್ಟಿಕೋನ ಪಸರಿಸಿತ್ತು.                                                       .

       ಹಡಪದರು ಕರ್ನಾಟಕದಲ್ಲಿ ಆಧುನಿಕ ಕಲಾ ಚಿಂತನೆಯನ್ನು ಹುಟ್ಟುಹಾಕಿದರಲ್ಲಿ ಪ್ರಮುಖರು. ಅಂತೆಯೇ ಕಲೆಯನ್ನು ಕಲಿಸುವ ಕ್ರಮಕ್ಕೆ ನಿರ್ಧಿಷ್ಟ ಪಠ್ಯಕ್ರಮಗಳು ನಾನು ಕಲಿತ ಅವರ ಆ ಕಲಾ ಶಾಲೆಯಲ್ಲಿ ಇರಲಿಲ್ಲ (ನಿರ್ದಿಷ್ಟ ಪಠ್ಯಕ್ರಮಗಳನ್ನು  ನುಸರಿಸಿ ಕಲಿಸುವ ಸ್ಥಾವರ ಸ್ವರೂಪದ ಹಲವು ಕಲಾಶಾಲೆಗಳು ಭಾರತದಲ್ಲಿ ಇವೆ),ಆದರೆ ಹಡಪದರು ಈ ರೀತಿಯ ಮಿತಿಗಳಿಗೆ ಒಳಗಾಗಿರಲಿಲ್ಲ. ಮತ್ತು ತಮ್ಮ ಕಲಾ ಶಾಲೆಯನ್ನೂ ಹಾಗೆ ಮಿತಿಗಳಿಗೆ ಒಳಪಡಿಸಿರಲಿಲ್ಲ.  ವಿದ್ಯಾರ್ಥಿಗಳಾದ ನಮ್ಮನ್ನು ಹಾಗೆ ಮುಕ್ತವಾಗಿ ತರಬೇತುಗೊಳಿಸಿದರು. ದೃಶ್ಯಕಲೆಯಲ್ಲಿನ ಶೈಲಿ ಬದ್ಧತೆ, ಶ್ರೇಣೀಕರಣ, ತಾದ್ರೂಪ್ಯ, ಕಲೆಯು ಮಾರಾಟದ ಸರಕಾಗುವುದು, ಸಂಗ್ರಹ, ಓಲೈಕೆ ಇಂತಹವುಗಳೆಲ್ಲ ಅವರ ಕಲಾತತ್ವದಲ್ಲಿ  ಗಡಿಪಾರಿನ ಶಿಕ್ಷೆಗೆ ಒಳಗಾಗಿದ್ದ ಅಂಶಗಳು. "ಹಿಡಿವುದದನೆ ಹಿಡಿಯದಯ್ಯ, ಹಿಡಿಯದದನೆ ಹಿಡಿವುದಯ್ಯ ಎಂಬಂತೆ  ಜೀವನದಲ್ಲಿ ಯುವುದು ಸತ್ಯ?, ಯಾವುದು ಮಿತ್ಯ, ಯಾವುದು ಯುಕ್ತ ಎಂಬಿತ್ಯಾದಿ ಚಿಂತನೆಗಳಿಂದ ಅವರ ವಿಚಾರ ಮತ್ತು ಬದುಕು ಎರಡೂ ಸಾಣೆ ಹಿಡಿದ ಅಲಗಿನಂತೆ ಇದ್ದವು. ಅವರ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ! ಬಿಡಿ;  ಹಡಪದ ಅವರ ವಿದ್ಯಾರ್ಥಿಗಳು, ವಿಶೇಷವಾಗಿ ಅವರ ಪ್ರಭಾವಕ್ಕೆ ಒಳಗಾದವರು, ಅಭಿಮಾನಿಗಳು ಅವರೊಂದಿಗೆ ನಡೆಸಿದ ಸಂವಾದ, ಚರ್ಚೆ, ಅಲ್ಲಲ್ಲಿ ಅವರು ಆಡಿದ ಮಾತುಗಳನ್ನು ಸಂಗ್ರಹಿಸಿ ಮತ್ತು ತಾವು ಈ ಗುರುವನ್ನು ಮತ್ತು ಅವರ ಅಂತರಂಗವನ್ನು ತಮ್ಮ ಒಳಗಣ್ಣು ಕಂಡಂತೆ ಬರೆದು ಸಂಗ್ರಹಿಸಿರುವ ಪುಸ್ತಕ "ಹಡಪದ ಮಾಸ್ತರ ಕಲಾತತ್ವ" . ಸಂಪಾದನೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ನಮ್ಮ ಕೈಗೆ ಇರಿಸಿದ ಗೆಳೆಯ ಕೆ ಎಸ್ ಶ್ರೀನಿವಾಸ ಮೂರ್ತಿ ಮತ್ತು ಸಹಪಾಠಿ ಗೆಳೆಯ ಬಿ ಆರ್ ವಿಶ್ವನಾಥ್ ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ.

--Shivanand Bantanur

Apr 05, 2021 at 9:48 am

ಪ್ರಿಂಟ್ ಮೇಕರ್ ಶಿವಶಂಕರ ಸುತಾರ್ ರವರ 'ಅನಿಶ್ಚಿತತೆ' ಕೃತಿ
 ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಸುಮಾರು ಒಂದೂವರೆ ವರ್ಷ ಆನ್ಲೈನ್ ಕಲಾ ಚಟುವಟಿಕೆಯನ್ನು ಳಿದು ,ಎಲ್ಲ ಆಫ್ ಲೈನ್ ಕಲಾ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು.ಈ ಕಾರಣದಿಂದ ಕಲಾಸಕ್ತ ಸಮುದಾಯ ಕಲಾವಿದರು&ಕಲಾಕೃತಿಗಳ ಪ್ರತ್ಯಕ್ಷ ಭೇಟಿ, ಖುದ್ದು ಅವಲೋಕನಗಳಿಂದ ವಂಚಿತರಾಗಿ ,ಸಪ್ಪೆಯಾದ,ನೀರಸವಾದ ವಾತಾವರಣದಲ್ಲಿ 'ದಿನ ದೂಡ'ಬೇಕಾದ ಅನಿವಾರ್ಯತೆಗೆ ಒಳಗಾಗಿದ್ದರು.ಕಲಾವಿದರ ಬಳಗಕ್ಕೂ ಕೂಡ ಇದೇ ಸ್ಥಿತಿ ಬಂದಿತ್ತು.ಆದರೆ ,ಲಾಕ್ ಡೌನ್ ತೆರವಾದ ನಂತರ ಇಡೀ ರಾಜ್ಯದ, ಅಷ್ಟೇ ಏಕೆ, ಇಡೀ ದೇಶದ ಗಮನ ಕರ್ನಾಟಕದ ದೃಶ್ಯಕಲಾವಲಯದ ಮೇಲೆ ಕೇಂದ್ರೀಕೃತ ಆಗುವಂತೆ ದಿಟ್ಟ, ಚೈತನ್ಯಪೂರ್ಣ ,ಸೃಜನಾತ್ಮಕ ಚಟುವಟಿಕೆ ಹಮ್ಮಿಕೊಂಡು ಕೋವಿಡ್-19ಸಾಂಕ್ರಾಮಿಕದ ಪರಿಣಾಮವಾಗಿ ಸ್ತಬ್ಧವಾಗಿದ್ದ ರಾಜ್ಯದ ದೃಶ್ಯಕಲಾ ರಂಗಕ್ಕೆ ಸ್ಫೂರ್ತಿಯ ಸಿಂಚನಗೈದವರೆಂದರೆ ಅರ್ಪಿತಾ ಜಿ.ಆರ್, ಮನು ಚಕ್ರವರ್ತಿ, ಅನಿತಾ ಎನ್ ಮತ್ತು ಅವರ ಜೊತೆ ಸಂಪೂರ್ಣ ಸಹಕಾರ ನೀಡಿದ ಉತ್ಸಾಹಿ ಸಮಾನ ಮನಸ್ಕ ಕಲಾವಿದ ಸಮೂಹ. ಈ ಬಳಗ ಕನ್ನಡ ನಾಡಿನ ಆಯ್ದ ನುರಿತ 75 ಪ್ರಿಂಟ್ ಮೇಕರ್ ಗಳನ್ನು (ಮುದ್ರಣ ಮಾಧ್ಯಮ ಪರಿಣತ ಕಲಾವಿದರು)ಸಂಪರ್ಕಿಸಿ, ಪ್ರತಿಯೊಬ್ಬ ಕಲಾವಿದ/ದೆ  ಯವರಿಂದ 8ಅಡಿ×4ಅಡಿ ಅಳತೆಯ ವುಡ್ ಕಟ್ ಮಾಧ್ಯಮ ಕೃತಿಯನ್ನು 'ಕೋವಿಡ್-19'ರ ಕುರಿತಾಗಿ ರಚಿಸುವಂತೆ ಕೋರಿಕೊಂಡು,ಬಿಟ್ಟೂ ಬಿಡದೆ ಆ ಕಲಾವಿದರುಗಳನ್ನು ಸತತವಾಗಿ ಸಂಪರ್ಕದಲ್ಲಿರಿಸಿಕೊಂಡು ಅವರಿಂದ ಅಷ್ಟು ಬೃಹತ್ ಅಳತೆಯ ಉತ್ತಮ ಮಟ್ಟದ ವುಡ್ ಕಟ್ ಪ್ರಿಂಟ್ ತರಿಸಿಕೊಂಡು ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ    ಸಪ್ಟೆಂಬರ್ 22-2021   ದಿಂದ    ಅಕ್ಟೋಬರ್ 3-2021ರ     ತನಕ "ಅನಿಶ್ಚಿತತೆ(uncertainty)"  ಎಂಬ ಶೀರ್ಷಿಕೆ ಅಡಿಯಲ್ಲಿ  ವುಡ್ ಕಟ್ ಮಾಧ್ಯಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸುವುದರ ಮೂಲಕ  ಕೊರೋನಾಘಾತಕ್ಕೊಳಗಾದ ದೃಶ್ಯ ಕಲಾ ವಲಯದಲ್ಲಿ ಹರ್ಷದ ಸಿಂಚನಗೈದಿದ್ದು ಕಲಾಚರಿತ್ರೆಯಲ್ಲೇ ವಿಶೇಷತಃ ಉಲ್ಲೇಖನೀಯ.


     
  ದಾವಣಗೆರೆಯ ಕಲಾವಿದ ಶ್ರೀಯುತ ಶಿವಶಂಕರ ಸುತಾರ್ ರವರ ಕಲಾಕೃತಿಯೂ  ಪ್ರದರ್ಶಿತವಾಯಿತು ಎಂಬುದೂ ಕೂಡ ಉಲ್ಲೇಖನೀಯ ಅಂಶ. ಬೆಂಗಳೂರು, ಮುಂಬೈ,ದೆಹಲಿ,ಕೊಲ್ಕೊತ್ತಾ ದಂತಹ ಮಹಾನಗರಗಳಲ್ಲಿ ನೆಲೆಸಿರುವ ಕಲಾವಿದರುಗಳಿಗಾದರೆ ಯಾವ ಪ್ರಮಾಣದ(ಅಳತೆಯ)ಕಲಾಕೃತಿ ರಚಿಸಬೇಕೋ ಅದಕ್ಕೆ ತಕ್ಕಂತೆ ಸೂಕ್ತ ಪರಿಕರಗಳು ಸುಲಭವಾಗಿ ಸಿಗುತ್ತವೆ. ಆದರೆ ದಾವಣಗೆರೆ, ಹಾವೇರಿ,ಬಳ್ಳಾರಿಯಂತಹ ಪಟ್ಟಣದಲ್ಲಿ ನೆಲೆಸಿರುವ ಕಲಾವಿದರುಗಳು ಸೂಕ್ತ ಪರಿಕರಗಳು ಸ್ಥಳೀಯವಾಗಿ ಸಿಗುವುದು ಕಷ್ಟ ಸಾಧ್ಯ/ದುರ್ಲಭವೇ ಆಗಿರುವುದರಿಂದ ತಮ್ಮ ಅಪೇಕ್ಷಿತ /ಉದ್ದೇಶಿತ ಕೃತಿ ರಚನೆಗೆ ಬೇಕಾದ ಪರಿಕರಗಳನ್ನು ಈ ಮೇಲೆ ಹೆಸರಿಸಿದ ಮಹಾನಗರಿಗಳಿಂದ ತರಿಸಿಕೊಳ್ಳಬೇಕಾಗುತ್ತದೆ.ಅದುವರೆಗೂ ಇಂತಹ ಮಧ್ಯಮ ದರ್ಜೆಯ ನಗರಗಳ ಕಲಾವಿದ/ದೆ ತಮ್ಮೊಳಗಿನ  ಕಲಾಸ್ಫೂರ್ತಿಯನ್ನು ಜಾಗೃತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷ ವಾಗಿ 8ಅಡಿ×4ಅಡಿ ಯಂತಹ ವಿಶಾಲವಾದ ಅವಕಾದಲ್ಲಿ ವುಡ್ ಕಟ್ ಮಾಧ್ಯಮ ದಂತಹ ಕೃತಿ ಸೃಷ್ಟಿಸಬೇಕಾದರೆ, ಸಮಯ ,ಪರಿಸರ, ಸ್ಥಳ ಇತ್ಯಾದಿ ಅನೇಕ ಮಗ್ಗಲುಗಳ ಹೊಂದಾಣಿಕೆ ಮಾಡಿಕೊಂಡು  ಕಾರ್ಯಪ್ರವೃತ್ತರಾಗಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ  ಶಿವಶಂಕರ ಸುತಾರ್ ರವರ ಈ ಸಾಧನೆ ಗಮನಾರ್ಹವಾದುದಾಗುತ್ತದೆ.

   'ನನ್ನ ಗುರುಗಳಾದ ಶಶಿಕಾಂತ ಮಾಶಾಳಕರ್ ಸರ್ ಒಂದು ದಿನ ನನಗೆ ಪೋನ್ಮಾಡಿ,'ನೀನು ಅರ್ಪಿತಾ ಜಿ.ಆರ್ ಮೊದಲಾದವರು ಆಯೋಜಿಸುತ್ತಿರುವ ವುಡ್ ಕಟ್ ಮಾಧ್ಯಮದ ಪ್ರಿಂಟ್ಗಳ ಪ್ರದರ್ಶನಕ್ಕೆ 8ಅಡಿ×4ಅಡಿ ಅಳತೆಯ ವುಡ್ ಕಟ್ ಪ್ರಿಂಟ್ ರಚಿಸಬೇಕು'ಎಂದು  ಹೇಳಿದಾಕ್ಷಣ ಕೆಲವು ಕ್ಷಣಗಳ ಕಾಲ ದಿಗಿಲುಗೊಂಡೆ.ಏಕೆಂದರೆ ಕನಸು ಮನಸಿನಲ್ಲಿಯೂ ಊಹಿಸಿರದ/ಕಲ್ಪಿಸಿರದ ಬೃಹತ್ ಅಳತೆಯಲ್ಲಿ ವುಡ್ ಕಟ್ ಪ್ರಿಂಟ್ ತೆಗೆಯುವ  ಸವಾಲು ನನ್ನ ಕಣ್ಣೆದುರು ಬಂದಿತು....'ಎನ್ನುತ್ತಾ ಆ ಪ್ರದರ್ಶನಕ್ಕೆ ಕೃತಿ ರಚಿಸುವಾಗ ಎದುರಾದ ಛಾಲೆಂಜ್ಗಳನ್ನು ವಿವರಿಸುವುದು ಹೀಗೆ--'ನನ್ನ ಮನಸ್ಸಿನಲ್ಲಿ ಈ ಕುರಿತು ಕಾನ್ಸೆಪ್ಟ್ ಸ್ಪಷ್ಟವಾಗಲು ಸುಮಾರು ನಾಲ್ಕಾರು ದಿವಸಗಳೇ ಬೇಕಾದವು.ಅವುಗಳನ್ನು ಒಂದಿಷ್ಟು ಕೀ ಸ್ಕೆಚ್ ಗಳಲ್ಲಿ ದಾಖಲಿಸಿಕೊಂಡು,ನನ್ನ ಮನಸ್ಸಿಗೆ ತೃಪ್ತಿ ತಂದ ಒಂದು ಸ್ಕೆಚ್ ಮಾಧ್ಯಮದ ಸ್ಪಷ್ಟವಾಗಿ ರೇಖಿಸಿದೆ. ಉತ್ತಮವಾದ ಪ್ರಿಂಟ್ ಬರಬೇಕೆಂದರೆ ಪ್ಯಾಬ್ರಿಯಾನೋ120ಜಿ ಎಸ್ ಎಂ ಕಾಗದವೇ ಬೇಕು.ಅದು ದಾವಣಗೆರೆಯಲ್ಲಿ ಸಿಗದು.ಬೆಂಗಳೂರಿನ ಭಾಸ್ಕರ್&ಭಾಸ್ಕರ್ ಅಂಗಡಿಯಲ್ಲಿ ಆ ಕಾಗದ ಲಭ್ಯ, ಸಾಲದ್ದಕ್ಕೆ ಅದು ಲಾಕ್ ಡೌನ್ ದಿನಗಳು, ಮುಕ್ತ ಸಂಚಾರಕ್ಕೆ ಅವಕಾವಿಲ್ಲದ ಅವಧಿ, ಅದೂಅಲ್ಲದೆ ಭಾಸ್ಕರ್&ಭಾಸ್ಕರ್ ಅಂಗಡಿಯ ಪ್ರಮುಖ ವ್ಯಕ್ತಿ ನಿಧನರಾಗಿದ್ದರಿಂದ(ಅದೇ ದಿನಗಳಲ್ಲಿ)ಒಂದು ತಿಂಗಳ ಕಾಲ ಅದು ಮುಚ್ಚಲ್ಪಟ್ಟಿತ್ತು.ಅದು ಮತ್ತೆ ತೆರೆದ ನಂತರವೇ ಆ ಕಾಗದ ಅಲ್ಲಿಂದ ಖರೀದಿಸಬೇಕಾಯ್ತು.ಇಷ್ಟೊಂದು ದೊಡ್ಡ ಅಳತೆಯ ಪ್ರಿಂಟ್ ತೆಗೆಯಲು ವಿಶಾಲವಾದ ಸ್ಥಳಾವಕಾಶ  ತೀರಾ ಅಗತ್ಯ. ನನ್ನ ಸುದೈವ,ನಾನು ಬೋಧನಾ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿಗಳು,ಕಛೇರಿ ನೌಕರರು, ನನ್ನ ಸಹೋದ್ಯೋಗಿ ಮಿತ್ರರು&ವಿದ್ಯಾರ್ಥಿ ಬಳಗದಿಂದ ಆ ವಿಷಯದಲ್ಲಿ ವಿಶೇಷ ಸಹಕಾರ ಒದಗಿಬಂತು. ಆ ಕಾರಣದಿಂದಾಗಿಯೇ ಉತ್ತಮ ಮಟ್ಟದ ಪ್ರಿಂಟ್ ಪಡೆಯಲು ಸಾಧ್ಯವಾಯ್ತು,ಅವರೆಲ್ಲರಿಗೆ ಕೃತಜ್ಞತೆ ಹಳಲೇಬೇಕು....'ಎಂದು ವಿವರಿಸುತ್ತಾರೆ ,ಕಲಾವಿದ ಶಿವಶಂಕರ ಸುತಾರ್ ರವರು.   




   ಕೃತಿ ವಿಶೇಷತೆ
    ------------------ 
    ಸಮಗ್ರ ಕೃತಿ ಮೋನೋಕ್ರೋಂ (ಏಕವರ್ಣ)ದಲ್ಲಿ ಇದ್ದು, ಅವಕಾಶದಲ್ಲಿ ಸಾಂದರ್ಭಿಕ ಚಿತ್ರ ಮಾದರಿಯಲ್ಲಿ ಕೋವಿಡ್-19ಸಾಂಕ್ರಾಮಿಕದಿಂದ ವ್ಯಕ್ತಿಗತವಾಗಿ ಮತ್ತು ಸಾಮುದಾಯಿಕವಾಗಿ ಎದುರಾದ ಸಂಕಟಗಳನ್ನು, ತಲ್ಲಣಗಳನ್ನು ಅಭಿವ್ಯಕ್ತಿಸಲಾಗಿದೆ.ಕಲಾವಿದರು ಕಪ್ಪು ಬಣ್ಣವನ್ನೇ ಈ ಕೃತಿಗೆ ಆಯ್ಕೆ ಮಾಡಿಕೊಂಡಿದುದು ಇವರ 'ಸಮಯಪ್ರಜ್ಞೆ'ಗೆ ದ್ಯೋತಕ ಎನ್ನಬಹುದು(ಕಪ್ಪು ಬಣ್ಣ ಪ್ರಿಂಟ್ ಮಾಧ್ಯಮಕ್ಕೆ ಹೇಳಿ ಮಾಡಿಸಿದ್ದು ).ಕೃತಿಯಲ್ಲಿ ಮೂಡಿಸಿದ ಮಾಸ್ಕ ಧರಿಸಿದ ಪುರುಷ ಮುಖ ಪೆನ್ಸಿಲ್ ಶೇಡಿಂಗ್ ಅನ್ನು ನೆನಪಿಸುವ ರೀತಿಯಲ್ಲಿ ನಾಜೂಕಾಗಿ, ಕಲಾತ್ಮಕವಾಗಿ, ವಿವರವಾಗಿ ನಿರೂಪಿತವಾಗಿದ್ದು ಶಿವಶಂಕರ ಸುತಾರ್ ರವರು ವುಡ್ ಕಟ್ ಮಾಧ್ಯಮದ ಮೇಲೆ ಹೊಂದಿರುವ ಪರಿಣತಿಗೆ ಸಾಕ್ಷೀಭೂತವಾದ ರೂಪವಾಗಿಯೂ ತೋರ್ಪಡಿಕೆಯಾಗಿದೆ. ದಿಗಂತದತ್ತ ಮುಖಮಾಡಿರುವ ಹಲ್ಲಿಗಳು ಈ ಕಲಾವಿದರ 'ವೈಯಕ್ತಿಕ ಶೈಲಿಯ ಸಂಕೇತ'ಗಳಂತೆ ಮಾತ್ರ ತೋರ್ಪಡಿಕೆಯಾಗದೆ,ಸಮಸ್ತ ಜೀವಸಂಕುಲದ ವ್ಯಾಕುಲತೆಯ ಪ್ರಾತಿನಿಧಿಕ ರೂಪಗಳಾಗಿಯೂ ಕಂಡುಬರುತ್ತವೆ.ಇಡಿಯ ಕೃತಿಯನ್ನು ಗಮನಿಸಿದರೆ -ಗಮನಕ್ಕೆ ಬರುವ ಅಂಶವೆಂದರೆ-ಸೃಜನಶೀಲತೆಯನ್ನು ,ವೈಯಕ್ತಿಕ ಛಾಪನ್ನು ಪ್ರಕಟಪಡಿಸುತ್ತಲೇ ರೂಪ ರಂಜಕತೆಯತ್ತಲೂ ಲಕ್ಷ್ಯೀಕರಿಸಲಾಗಿದೆ.ಮಾಧ್ಯಮದ ಮಿತಿಗೆ ಅನುಗುಣವಾಗಿ  ಸನ್ನಿವೇಶದ ಭೀಕರತೆಯನ್ನು ಹಲವು ಆಯಾಮಗಳಲ್ಲಿ ಸೃಜನಶೀಲ ಮತ್ತು ಕಲಾತ್ಮಕ  ವೈಖರಿಯ ಮೂಲಕ ಕೃತಿಯಲ್ಲಿ ಹರಳುಗಟ್ಟಿಸಿದ್ದು ಈ ಕಲಾವಿದರ 'ಸನ್ನಿವೇಶವನ್ನು ಹತ್ತು ಹಲವು ನಿಟ್ಟಿನಲ್ಲಿ ಕಲ್ಪಿಸಿ/ಅರ್ಥೈಸಿ ಮಾಧ್ಯಮದ ಸ್ವಭಾವಕ್ಕೆ ತಕ್ಕಂತೆ ಪ್ರಸ್ತುತ ಪಡಿಸಬಲ್ಲ ನೈಪುಣ್ಯತೆ 'ಗೆ ನಿದರ್ಶನ ಎನ್ನಬಹುದು. ಆಕಾರಗಳಲ್ಲಿ ನವಿರಾದ, ನಿಖರವಾದ ಕೊರೆತಗೈದು ,ಅಷ್ಟೇ ಪ್ರಸ್ಫುಟ ಪ್ರಿಂಟ್ ಅನ್ನು ,ಬದಿಯಲ್ಲಿರುವ ಅವಕಾಶವನ್ನು ಶುಭ್ರವಾಗಿರಿಸಿಕೊಂಡು ಈ ಬೃಹತ್ ಅಳತೆಯಲ್ಲಿ ಪಡೆದ ಶಿವಶಂಕರ ಸುತಾರ್ ರವರ ಪ್ರಬುದ್ಧತೆಗೆ ತಲೆದೂಗಲೇಬೇಕು.


       ಇಂತಹ ಅನೇಕ ಪ್ರತಿಭಾವಂತ ಮುದ್ರಣ (ಗ್ರಾಫಿಕ್)ಕಲಾವಿದರನ್ನು ಪರಿಚಯಿಸಿದ "ಅನಿಶ್ಚಿತತೆ", ಈ ಪ್ರದರ್ಶನದ ಮೂಲಕ  ಕನ್ನಡ ನಾಡಿನಲ್ಲಿ ಕೊರೋನಾ ಹಾವಳಿಯ ನಡುವೆಯೂ ಉತ್ಸಾಹ ಕಳೆದುಕೊಳ್ಳದ,ಬೃಹತ್ ಸ್ಟುಡಿಯೋ ವ್ಯವಸ್ಥೆಯಡಿಯಲ್ಲಿ ಮಾತ್ರ ಸೃಷ್ಟಿಸಬಲ್ಲ ಇಂತಹ ಮಾಧ್ಯಮಗಳಲ್ಲಿ ಯೂ ಅದ್ಯಾವ ಕೊರತೆ ಯನ್ನೂ ಲೆಕ್ಕಿಸದೇ ಸಮರ್ಥವಾಗಿ ಕಲಾ ಸೃಷ್ಟಿಗೈಯಬಲ್ಲ  ಸಾಮರ್ಥ್ಯ ಉಳ್ಳ ಕಲಾ ಪೀಳಿಗೆ ಇದೆ'ಎಂಬುದನ್ನು ಸಾಬೀತು ಪಡಿಸಿದ  ಶ್ರೇಯಸ್ಸಿಗೆ ಪಾತ್ರವಾಗಿದೆ .ಜೊತೆಗೆ ಶಿವಶಂಕರ ಸುತಾರ್ ರಂತಹ 'ವಿನಮ್ರ ಶ್ರಮಿಕ ಕಲಾವಿದರನ್ನು ಈ ಅಭೂತಪೂರ್ವ ಪ್ರದರ್ಶನ ಮೂಲಕ ಹೈಲೈಟ್ ಮಾಡುವ ಮೂಲಕ ಸಾರ್ಥಕ ಶ್ರಮಗೈದಿದೆ ಎಂದರೆ ಅತಿಶಯವಲ್ಲ.


 ಲೇಖನ---ದತ್ತಾತ್ರೇಯ  ಎನ್. ಭಟ್, ದಾವಣಗೆರೆ.

Apr 05, 2021 at 9:48 am

ಆಧುನಿಕ ಗೊಂಡ ಕಲೆ ತಮ್ಮ ಐತಿಹಾಸಿಕ ಜೀವನಶೈಲಿ,

ಗೊಂಡರು ಮಧ್ಯಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ

ಭಾರತದ ಅತಿದೊಡ್ಡ ಸ್ಥಳೀಯ ಸಮುದಾಯಗಳಲ್ಲಿ ಒಂದಾಗಿದೆ. ಗೊಂಡ್ ಪದವು ಕೊಂಡ್

ನಿಂದ ಬಂದಿದೆ, ದ್ರಾವಿಡ ಪದವು ಹಸಿರು ಪರ್ವತಗಳು ಎಂದರ್ಥ. ಸಾಂಪ್ರದಾಯಿಕ

ಗೊಂಡ ಕಲೆಯನ್ನು ಅವರ ದೇಶೀಯ ಮತ್ತು ಸಮುದಾಯ ಸ್ಥಳಗಳ ಗೋಡೆಗಳು ಮತ್ತು

ಮುಂಭಾಗಗಳಲ್ಲಿ ರಚಿಸಲಾಗಿದೆ. 1980 ರ ದಶಕದ ಆರಂಭದಲ್ಲಿ ಗೊಂಡ ಕಲಾವಿದರ ಗುಂಪು

ತಮ್ಮ ಧಾರ್ಮಿಕ ಚಿತ್ರಕಲೆಗಳನ್ನು ಆಧುನಿಕ ಮಾಧ್ಯಮಗಳಿಗೆ ಅಳವಡಿಸಲು ಆರಂಭಿಸಿದ್ದು

ಪೇಪರ್ ಮತ್ತು ಕ್ಯಾನ್ವಾಸ್‌ಗಳನ್ನು ಇಷ್ಟಪಡುತ್ತದೆ. ಆಧುನಿಕ ಗೊಂಡ ಕಲೆ ತಮ್ಮ ಐತಿಹಾಸಿಕ

ಜೀವನಶೈಲಿ, ನೈಸರ್ಗಿಕ ಪ್ರಪಂಚ, ಪೌರಾಣಿಕ ನಂಬಿಕೆಗಳು ಮತ್ತು ಹಾಡುಗಳು ಮತ್ತು

ಮೌಖಿಕ ಇತಿಹಾಸಗಳಲ್ಲಿ ಬಲವಾದ ಬೇರುಗಳನ್ನು ಪ್ರದರ್ಶಿಸುತ್ತದೆ. ಈ ಸಂಕೀರ್ಣ ಮತ್ತು

ಜಿಜ್ಞಾಸೆ ಅಂಶಗಳು ಕಲಾತ್ಮಕವಾಗಿ ಆಧುನಿಕ ಚಿತ್ರಣ ಮತ್ತು ತಂತ್ರಗಳೊಂದಿಗೆ ವಿಲೀನಗೊಳ್ಳುತ್ತವೆ,

ಇದರ ಪರಿಣಾಮವಾಗಿ ಅವುಗಳ ಅಸಂಖ್ಯಾತ ಭೂತಕಾಲಕ್ಕೆ ಬಣ್ಣಬಣ್ಣದ ಒಡೆಗಳು ಉಂಟಾಗುತ್ತವೆ.


-ಕಲಾವಿದ ಸುಭಾಷ್ ವ್ಯಾಮ್.

Apr 05, 2021 at 9:48 am

"ಮುದಕವ್ವಳ ಬುಟ್ಟಿಯಲ್ಲಿಯ ಖಡಕ್ ರೊಟ್ಟಿ"
ದಾನಶೂರ ಹಳ್ಳಿಯ ಈ ಮುದಕವ್ವಳ
      ಬುಟ್ಟಿಯಲ್ಲಿಯ ಖಡಕ್ ರೊಟ್ಟಿ
          ಖಾರಾ ಚಟ್ನಿ,ಕಾಳ ಪಲ್ಯೆ
          ತಿನ್ನಲು ಬನಶಂಕರಿಗೆ ಬನ್ನಿ
         ನಿನ್ನೆ ಗುರುವಾರ ಮತ್ತು ಇಂದು ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿ ಬಿಜಿನೆಸ್ ಪ್ರವಾಸದ ಕೊನೆಗೆ ಇಂದು ಮಧ್ಯಾನ್ಹ ಬದಾಮಿಯ ಬನಶಂಕರಿ ದೇವಿಯ ಡರ್ಶನ ಪಡೆದು ಹೊರಬಂದಾಗ ಎದುರಾಗಿದ್ದು ಈ ಮುದಕವ್ವ.
       " ಯಪ್ಪಾ ಊಟಾ ಮಾಡಬಾ,ಖಡಕ್ ರೊಟ್ಟಿ,ಮೊಸರು,ಚಟ್ನಿ ಐತಿ" ಎಂದಿತು ಈ ಮುದುಕಿ.ಗುಡಿಯ ಎದುರಿಗಿನ ಹೊಂಡದ ಕಟ್ಟೆಯ ಮೇಲೆ ನಮ್ಮ ಇನೋವಾ ಮಾಲೀಕ ಕಮ್ ಚಾಲಕ ರಮೇಶ್,ನಮ್ಮ ಆಫೀಸ್ ವ್ಯವಸ್ಥಾಪಕ ವೀರೇಂದ್ರ ಕುಳಿತೆವು.ಆಕೆಯ ಬುಟ್ಟಿಯಲ್ಲಿಯ ಖಡಕ್ ಸಜ್ಜೆ,ಜೋಳದ ರೊಟ್ಟಿ,ಕೆಂಪು ಖಾರಾ ,ಗುರೆಳ್ಳ ಚಟ್ನಿ,ಮೊಸರು ಹೊಡೆದೆವು.
      ಈ ಮುದುಕಿ ಸಮೀಪದ ದಾನಶೂರ ಹಳ್ಳಿಯವಳು.ಮೂವತ್ತು ವರ್ಷದಿಂದ ಈ ಊಟ ಮಾರುವ ವೃತ್ತಿ." ನಿನ್ನ ಸೊಸೆಯಂದಿರು ಈ ಕೆಲಸ ಮಾಡುವದಿಲ್ಲವೆ?" ಎಂದು ಪ್ರಶ್ನಿಸುವಂತಾಗಿದೆ," ಲಗೂನ (ಬೇಗನೇ) ಎದ್ದು ಒಲೆ ಮುಂದಿನ ಕಸಾ ತೆಗೆಯೂದಿಲ್ಲ.ಇದನೇನ್ ಮಾಡ್ತಾವ್ರಿ" ಎಂದುತ್ತರಿಸಿದಳು.
          ನಾವು ದುಡದಿದ್ದನ್ನು ಎಲ್ಲಾರೂ ಕುಂತಕೊಂಡ ತಿಂತಾರ್.ಆದ್ರ ನಮ್ ಹಣೆಬರಹದಾಗ ಇದ್ದದ್ದ ತಿನ್ನಾಕ್ ಯಾರೂ ಬರೂದಿಲ್ರಿ" ಎಂದೂ ಸೇರಿಸಿದಳು ಮುದಕವ್ವ.
            ನಾವು ಊಟಾ ಮಾಡಿ,ಒಂದಿಷ್ಟು ರೊಟ್ಟಿ ಖರೀದಿಸಿ ಅಲ್ಲಿಂದ ಏಳುತ್ತಲೇ ಮುದಕವ್ವ " ಊಟಾ ಮಾಡಬರ್ರಿ ಊಟಾ" ಎಂದು ಕೂಗುತ್ತ ನಡೆದಳು.ಬನಶಂಕರಿಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಹಿಳೆಯರು ಸಮೀಪದ ಹಳ್ಳಿಗಳಿಂದ ಬಂದು ಇಲ್ಲಿ ಉಣಬಡಿಸುತ್ತಾರೆ.ಇದು ಬನಶಂಕರಿಯ ವೈಶಿಷ್ಟ್ಯ.

 -Ashok Yankappa Chandargi

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img