logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಬಳ್ಳಾರಿ ಏಕಶಿಲಾಬೆಟ್ಟ ಹಾಗೂ ಸುಂದರವಾದ ಕೋಟೆ
Published By: Police World News
Last Updated Date:  04-Nov-2021
ಕಲಾಸುದ್ದಿ

ಸಮತಟ್ಟಾದ ಭೂಪ್ರದೇಶದ ಮೇಲೆ ನಿರ್ಮಿತವಾದ ಬಳ್ಳಾರಿ ನಗರ ಅನೇಕ ಪ್ರಾಚೀನ ದೇವಾಲಯಗಳು  ಚರ್ಚುಗಳು,
ಮಸೀದಿಗಳು, ಇನ್ನಿತರ ಆಕರ್ಷಣೀಯ ಪುರಾತನ ಕಟ್ಟಡಗಳಿಂದ ಶೋಭಿಸುತ್ತಿದ್ದರೂ ವಿಶೇಷ ಗಮನ ಸೆಳೆಯುವಲ್ಲಿ
ಜಗತ್ತಿನಲ್ಲಿಯೇ ಎರಡನೆಯದೆನ್ನುವ ಹೆಗ್ಗಳಿಕೆ ಹೊಂದಿರುವ ಏಕಶಿಲಾಬೆಟ್ಟ ಹಾಗೂ ಸುಂದರವಾದ ಕೋಟೆ ಪ್ರಧಾನ
ಪಾತ್ರ ವಹಿಸುತ್ತವೆ. ಸಮುದ್ರ ಮಟ್ಟದಿಂದ ೧೯೭೬ಅಡಿ ಹಾಗೂ ನೆಲಮಟ್ಟದಿಂದ ೪೮೦ಅಡಿ ಎತ್ತರವಿರುವ,
ಮೂರೂವರೆ ಮೈಲು ಸುತ್ತಳತೆಯ ಈ ‘ಬಲಹರಿ’ ಬೆಟ್ಡಕ್ಕೆ  ಗೌರವದ ಮೆರುಗು ತಂದಿರುವುದು ನಯನ ಮನೋಹರವಾದ ಭವ್ಯಕೋಟೆ. 
ಜನತೆ ಸಾಮಾನ್ಯವಾಗಿ ಭಾವಿಸಿರುವಂತೆ ಈ ಕೋಟೆ ಹೈದರಾಲಿಯಾಗಲೀ, ಟಿಪ್ಪು ಸುಲ್ತಾನನಾಗಲೀ ಕಟ್ಟಿಸಿದ್ದಲ್ಲ.
ಮೊದಲೇ ಇದ್ದ ಕೋಟೆಯನ್ನು ಅವರು ಪುನರ್ನಿರ್ಮಿಸಿದರು. ವಿಜಯನಗರದರಸ ಕೃಷ್ಣದೇವರಾಯನಾಳ್ವಿಕೆಯ
ಕಾಲ-14ನೇ ಶತಮಾನದಲ್ಲಿ ತಿಮ್ಮಪ್ಪ ಈ ಕೋಟೆಯನ್ನು ನಿರ್ಮಾಣಮಾಡಿಸಿದ, ಈ ಕೋಟೆ 600-700 ವರ್ಷ
ಹಳೆಯದೆಂಬ ಮಾತು ಸತ್ಯಕ್ಕೆ ದೂರವಾದುದು! ಏಕೆಂದರೆ ಹೊಯ್ಸಳ ವಿಷ್ಣುವರ್ಧನನು ಗೆದ್ದುಕೊಂಡ
ಕೋಟೆಗಳ ಪಟ್ಟಿಯಲ್ಲಿ ಬಳ್ಳಾರಿ, ಕುರುಗೋಡು ಕೋಟೆಗಳು ಸೇರಿರುವುದರಿಂದ ೧೨ನೆ ಶತಮಾನದಷ್ಟು
ಹಿಂದೆಯೇ ಬಳ್ಳಾರಿ ಕೋಟೆ ಅಸ್ತಿತ್ವದಲ್ಲಿದ್ದುದು ಖಚಿತವಾಗುತ್ತದೆ. 





ಕ್ರಿ.ಶ.೧೧೩೧ರಲ್ಲಿ ಮಹಾಮಂಡಲೇಶ್ವರ ಬೀವರಸ ಬಳ್ಳಾರಿಯನ್ನಾಳುತ್ತಿದ್ದನು. ‘ಬಳ್ಳಾರಿ ರಾಚಮಲ್ಲ ದೇವರಸ’
ಎಂದು ಶಾಸನ ಕೀರ್ತಿತ ಕುರುಗೋಡು ಸಿಂದ ಅರಸ ರಾಚಮಲ್ಲ ಬಳ್ಳಾರಿ ಕೋಟೆಯೊಳಗಡೆ ಎರಡು ಚಿಕ್ಕ
ಗುಡಿಗಳನ್ನು ಕಟ್ಟಿಸಿದ್ದಾಗಿ ತಿಳಿಯುತ್ತದೆ. ಬಳ್ಳಾರಿ ಕೋಟೆಯನ್ನು ಮೇಲಣಕೋಟೆ ಮತ್ತು ಕೆಳಗಣಕೋಟೆ
ಎಂದು ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಮೇಲಣಕೋಟೆಯನ್ನು
ವಿಜಯನಗರದ ಸಾಮಂತ ಹನುಮಂತ ನಾಯಕ ಪುನರ್ನಿರ್ಮಾಣ ಮಾಡಿಸಿದನು. ಕೆಳಕೋಟೆಯನ್ನು
18ನೆ ಶತಮಾನದ ನಂತರ  ಹೈದರಾಲಿ ಫ್ರೆಂಚ್ ಎಂಜಿನೀಯರನಿಂದ ಮರುನಿರ್ಮಾಣ ಮಾಡಿಸಿದ.
ದುರದೃಷ್ಟವಶಾತ್ ಅದೇ ಫ್ರೆಂಚ್ ಎಂಜಿನೀಯರ್ ಪಕ್ಕದ ಕುಂಬಾರಗುಡ್ಡ ಈ ಏಕಶಿಲಾ ಬೆಟ್ಟಕ್ಕಿಂತ
ಎತ್ತರವಾಗಿರುವುದರಿಂದ ಅದರ ಮೇಲೆ ನಿಂತವರಿಗೆ  ಈ ಕೋಟೆಯ ಒಳಭಾಗ ಕಾಣುತ್ತದೆಂದು ಹೇಳಿದ
ತಕ್ಷಣ ಹೈದರಾಲಿ ಅವನನ್ನು ಗುಂಡಿಟ್ಟು ಕೊಲ್ಲುತ್ತಾನೆ. ಗಲ್ಲಿಗೇರಿಸಲಾಯಿತೆಂದೂ ಕೆಲವೆಡೆ ದಾಖಲಾಗಿದೆ!
ಪೂರ್ವದ್ವಾರದ ಬಳಿಯಿರುವ ಸಮಾಧಿಯು ಆ ಇಂಜಿನೀಯರನದೆಂದರೆ ಕೆಲವು ಸ್ಥಳೀಯರು ಅದು ಮುಸ್ಲೀಂ
ವ್ಯಕ್ತಿಯ ಪವಿತ್ರ ಸಮಾಧಿಯೆಂದು ಹೇಳುತ್ತಾರೆ. 



ವಿಜಯನಗರ ಪತನದ ನಂತರ ೧೬೩೧ರವರೆಗೆ ಹಂಡೆ ಹನುಮಪ್ಪ ನಾಯಕನ ಪಾಳೇಪಟ್ಟು ಆಳುತ್ತಿದ್ದಾಗ
ಬಳ್ಳಾರಿ ಕೋಟೆಯನ್ನು ಸುವ್ಯವಸ್ಥಿತವಾಗಿ ಪುನರ್ ರ್ನಿರ್ಮಿಸಲಾಯ್ತು. ೧೬೩೮ರಲ್ಲಿ ಒಬ್ಬ ವಿಧವೆ ಬಳ್ಳಾರಿಯನ್ನಾಳುತ್ತಿದ್ದಳು.
ಈಕೆಯ ಸೈನಿಕರು ಬಳ್ಳಾರಿ ಮಾರ್ಗವಾಗಿ ಆಂಧ್ರದೆಡೆ ಹೊರಟಿದ್ದ ಶಿವಾಜಿ ಸೈನ್ಯದ ಕೆಲ ಅಶ್ವಪಡೆ ಅಧಿಕಾರಿಗಳನ್ನು ಕೊಲ್ಲುತ್ತಾರೆ.
ಕ್ರುದ್ಧನಾದ ಶಿವಾಜಿ ಬಳ್ಳಾರಿ ಕೋಟೆಗೆ ಮುತ್ತಿಗೆ ಹಾಕಿದಾಗ ಹೆದರದೇ ೨೭ದಿನಗಳ ಪರ್ಯಂತರ ವೀರಾವೇಶದಿಂದ ಹೋರಾಡುತ್ತಾಳೆ. 
೧೭೨೯ರಲ್ಲಿ ನೀಲಮ್ಮ ಎಂಬ ದಿಟ್ಟ ಮಹಿಳೆ ಬಳ್ಳಾರಿಯನ್ನಾಳಿದಳು. ಮಹಾ ಪರಾಕ್ರಮಿಯಾದ ಈಕೆ ಆಡಳಿತ ವಿಷಯವಾಗಿ
ತೆಗೆದುಕೊಂಡ ನಿರ್ಧಾರವನ್ನು ಒಪ್ಪದೇ ವಿರೋಧ ವ್ಯಕ್ತವಾಗಿ, ವಾದ-ವಿವಾದ ತೀವ್ರ ವಿಕೋಪಕ್ಕೆ ಹೋದಾಗ 
ನಿಕಟ ಸಂಬAಧಿಗಳಿಬ್ಬರ ತಲೆ ಕಡಿಸುತ್ತಾಳೆ.  ನಂತರದಲ್ಲಿ ಮುಸ್ಲಿಮರ ವಶವಾದ ಈ ಕೋಟೆಯನ್ನು ೧೬೭೮ರಲ್ಲಿ
ಶಿವಾಜಿ ವಶಪಡಿಸಿಕೊಂಡ. ಆಮೇಲೆ ಜೌರಂಗಜೇಬನಾಳ್ವಿಕೆಗೊಳಪಟ್ಟು ೧೬೯೨ರಲ್ಲಿ ಪುನ: ಪಾಳೇಗಾರರ ವಶವಾಯ್ತು.  
 ೧೭೬೪ರಲ್ಲಿ ಆದ್ವಾನಿ ಸಂಸ್ಥಾನದ ಬಸಾಲತ್ ಜಂಗ್ನ ಅಧೀನದಲ್ಲಿ ರಾಮಪ್ಪ ಬಳ್ಳಾರಿಯನ್ನಾಳಿದನು. ೧೭೭೮ರಲ್ಲಿ 
ಗೆದ್ದುಕೊಂಡ ಈ ಕೋಟೆ ೧೭೯೨ರವರೆಗೆ ಟಿಪ್ಪುಸುಲ್ತಾನ ವಶದಲ್ಲಿತ್ತು. ೪.೫.೧೭೯೯ರಂದು ಟಿಪ್ಪು ಮರಣಿಸಿದ ಮೇಲೆ
ಹೈದ್ರಾಬಾದ್ ನಿಜಾಮನ ವಶವಾಗಿ ೧೮೦೦ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರವಾಯಿತು.
ಕರ್ನೂಲು ನವಾಬ ಮುಜಾಫರ್‌ಖಾನ್‌ನನ್ನು ೧೮೨೩ ರಿಂದ ೧೮೬೪ರವರೆಗೆ ೪೧ವರ್ಷ ಸುದೀರ್ಘಕಾಲ
ಬಳ್ಳಾರಿ ಕೋಟೆಯಲ್ಲಿ ಬಂಧನದಲ್ಲಿಡಲಾಗಿತ್ತು. 
ಒಟ್ಟಾರೆ ಬಳ್ಳಾರಿ ಕೋಟೆಯ ಇತಿಹಾಸ ಓದುಗರನ್ನು, ಕೇಳುಗರನ್ನು ರಸ ರೋಮಾಂಚನಗೊಳಿಸುತ್ತದೆ!


-ಟಿ.ಕೆ.ಗಂಗಾಧರ ಪತ್ತಾರ, 9008226702. 



kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img