ಆಲಸ್ಯದ ತ್ಯಾಗ
ಶ್ರಮ ಜೀವನಕ್ಕೆ ಒಂದು ಮಾರ್ಗದರ್ಶನದ ಕವನ ಶ್ರೀ ಎಮ್ ಎಚ್ ಲಷ್ಕರಿ ಸ.ಕಿ.ಪ್ರಾ ಶಾಲೆನಿಡಗುಂದಿ ( ಎಲ್ ಟಿ ) ವಿಜಯಪುರ ಜಿಲ್ಲೆ
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date: 25-Jul-2023
*
*ಆಲಸ್ಯದ ತ್ಯಾಗ*
ಮಳೆ ಸುರಿಸುವ ಕಾಲಕೆ ಹದವಾಗದ ಧರೆಯಿಂದು
ಕಳೆ ಬೆಳೆದು ಕವಲೊಡೆದು
ನಿಂತಿಹದಿಂದು
ಕರ್ಮವ ಮರೆತು ಕಾಲದ ತುತ್ತಿಗೆ ಶರಣಾಗಿಂದು
ಆಗಿಹರು ಯುವ ರೈತರು ಆಲಸ್ಯದ ಗುಲಾಮರಿಂದು
ಬಿತ್ತುವ ಹೊತ್ತಲಿ ಶಾಸ್ತ್ರವ ಮರೆತು
ಹೊತ್ತಿಸಿ ಅಗ್ನಿಯ ಮಾಂಸವ ಬೇಯಿಸಿ
ಚೆಲ್ಲಿಸಿ ರಕ್ತವ ಸೇವಿಸಿ ಮಧ್ಯವ
ಫಲವನು ಕೊಡಲು ಧರೆಯ ಕೇಳುತಿಹರು
ಸೊರಗುತಿದೆ ಧರೆಯು ಕಾಲ ಗತಿಸಿದಂತೆ
ಕೊರಗುತಿದೆ ಮೇಲ್ಪದರ ರಸಾಯನಿಕ ವಿಷವನುಂಡು
ನಶಿಸುತಿದೆ ಪೂರ್ವಜರ ಊಳುವ ಬಗೆಯು
ಕಳೆಯುತಿದೆ ಧರೆಯ ಫಲವತ್ತತೆಯ ಫಲವು
ಉದಯ ಪೂರ್ವದಲಿ ನಿನ್ನೊಡೆಯನ ನೀ ನೆನೆದು
ಬಸವನ ಕಾಲ್ ಕಸ ಕಣ ಕಣವ ನೀ ತೆಗೆದು
ಅದರೊಡಲವ ತುಂಬಿಸಿ ನೀರಡಿಕೆಯ ನೀಗಿಸಿ
ನಿನ್ನಷ್ಟೇ ಶುಚಿಯಾಗಿಡು ಧರೆ ಊಳುವ ಧನಿಯನ ನೀ
ಕದಡಿದ ಕಡ್ಡಿಗಳ ಒಗ್ಗೂಡಿಸಿ ಕಟ್ಟಿ
ಮುದಡಿದ ಎಲೆಗಳ ಗೂಡಿಸಿ ಇಟ್ಟು
ಹರಡಿದ ಸಗಣಿಯ ಅದರ ಮೇಲೊಟ್ಟಿ
ಸಾವಯವ ಗೊಬ್ಬರವ ಮಾಡು ನೀ ಸೃಷ್ಠಿ
ವ್ಯಯಿಸದಿರು ಕಾಲವ ಹರಟೆ ಕಟ್ಟೆಯನೇರಿ
ಸವಿಸು ಅಮೂಲ್ಯ ಹೊತ್ತನು ಅನುಭವಿಗಳ ಸಂಗಡ
ಮನಬಿಚ್ಚಿ ಕೇಳು ಧರೆಯನೊಲಿಸುವ ಪರಿಯನ
ಸುರಿಸುವರು ನಿನಗೆ ಸಾಗರದಷ್ಟು ಅರಿವನ್ನ
ಹಿಂಡು ನೀ ಬೆವರ ಹನಿಗಳ ಹೊಳೆಯ
ಒದ್ದೆಯಾಗಿ ಒಡೆಯಲಿ ರಾಶಿ ರಾಶಿ ಹೆಂಟೆಯ
ಚಿಗುರೊಡೆದು ಪುಟಿದೆದ್ದು ಬರುವುದು
ಮನ ಮನೆ ತುಂಬುವ ನಗ ನಾಣ್ಯ ರಾಶಿಯು
ಆಕಳಿಕೆಯ ಅಳಿಸಿ ಆಲಸ್ಯವಾ ತೊರೆದು
ಬಿಕ್ಕಳಿಕೆಗೆ ನೀರುಣಿಸಿ ಪುಟಿದೆದ್ದು ನೀನಿಂತು
ಕುಲಕಸಬನು ಹೊತ್ತು ಗರ್ವದಿಂ ಸಾಗಿಂದು ನೀ
ಒಲಿದಪ್ಪಿಕೊಳ್ಳುವುದು ಧರೆಯು ನಿನ್ನ
ಶ್ರೀ ಎಂ ಎಚ್ ಲಷ್ಕರಿ
ಶಿಕ್ಷಕರು ನಿಡಗುಂದಿ