logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

" ನಟರಾಜ ಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆ "
Published By: Police World News
Last Updated Date:  21-Dec-2021
ಕಲಾಸುದ್ದಿ

ನಟರಾಜ ಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆ
ನಾಟ್ಯಕ್ಕೂ, ಯೋಗಸಾಂಖ್ಯಾದಿ ದರ್ಶನಗಳಿಗೂ, ಶಿಲ್ಪಾದಿ ಕಲಾಪ್ರಕಾರಗಳಿಗೂ, ನಾನಾಶಾಸ್ತ್ರಗಳಿಗೂ ಭಗವಂತನೇ ಮೂಲವೆಂಬ ಹೇಳಿಕೆ ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿದೆಯಷ್ಟೆ. ಮಹಾದೇವನ ಹಲವು ಹೆಸರುಗಳಲ್ಲಿ ನಟರಾಜ ಎಂಬ ಹೆಸರು ವಿಶಿಷ್ಟವಾದದ್ದು. 
ಹಾಗೆ ನೋಡಿದರೆ ನಮ್ಮೆಲ್ಲಾ ದೇವತೆಗಳಲ್ಲೂ ನರ್ತನದ -ಶಿಲ್ಪಕಲೆಯ ಅಂಶಗಳು ಅಡಕಗೊಂಡಿದ್ದರೂ, ನಾಟ್ಯಾಧಿದೇವತೆಯೆಂಬ ಅಗ್ರಸ್ಥಾನ ಪರಶಿವನದ್ದೇ. ನಟರಿಗೆಲ್ಲಾ ಆತ ರಾಜ. ಅಧಿಪತಿ, ಅಭಿನಯ ಕಲೆಯ ಆದ್ಯಪ್ರವರ್ತಕ. ನಾಟ್ಯದಲ್ಲಾಗಲೀ ಶಿಲ್ಪದಲ್ಲಾಗಲೀ ಕಣ್ಣಿಗೆ ಕಾಣುವ ವಿವರಗಳ ಹಿಂದೆ ಅಡಗಿರುವ ಸಂಕೇತವೇ ಕಲೆಗೆ ಹೊಸದೊಂದು ಆಯಾಮವನ್ನು ಒದಗಿಸುತ್ತದೆ.
 ಇದನ್ನೇ ಆಧ್ಯಾತ್ಮಿಕವೆಂದು ಬಗೆಯುತ್ತಾರೆ. ಸಂಪ್ರದಾಯದ ಚೌಕಟ್ಟಿನಲ್ಲಿ ಮನಸ್ಸಿಗೆ, ಹೃದಯಕ್ಕೆ ಸಲ್ಲಬಹುದಾದ ಸಂಸ್ಕಾರ ಇಲ್ಲಿ ಮುಖ್ಯ. ಸಾಂಪ್ರದಾಯಿಕ ಕಲೆಯ ಸ್ವಾರಸ್ಯ ಇದೇ.
ನಟರಾಜಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆಯತ್ತ ಕಣ್ಣು ಹಾಯಿಸುವ ಮುನ್ನ ನಾವು “ತಾಂಡವ” ಎಂಬ ನೃತ್ಯದ ಬಗ್ಗೆ, ನೃತ್ಯದ ಆಧ್ಯಾತ್ಮಿಕ ಹಿನ್ನೆಲೆಯ ಈ ಶಿಲ್ಪದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅರಿಯಬೇಕಾದ್ದು ಅವಶ್ಯ.
ಶಿವತಾಂಡವ ನೃತ್ಯವು ಆಗಮಪ್ರಸಿದ್ದ. ಅಗಸ್ತ್ಯರ ಭರತಸೂತ್ರ ೧೦೮ ತಾಂಡವಗಳನ್ನು ವರ್ಣಿಸಿದರೆ, ಶೈವಾಗಮಗಳು ಹದಿನೈದನ್ನು ವಿಶ್ಲೇಷಿಸಿವೆ. ತಂಡು ಎಂಬ ಮುನಿಗೆ ಪರಮೇಶ್ವರನು ಕಲಿಸಿದ ನಾಟ್ಯಕ್ಕೆ ತಾಂಡವ ಎಂಬ ಹೆಸರಾಯಿತೆಂದೂ, ಉದ್ಧತವಾದ, ಪುರುಷ ಶಕ್ತಿ ಪ್ರತಿಬಿಂಬಿತ ಪ್ರಕಾರವಿದೆಂದೂ ಹಲವರು ವಿಶ್ಲೇಷಿಸುತ್ತಾರೆ. ಸಪ್ತ ತಾಂಡವಗಳ ವಿವರಣೆ ಸ್ಫುಟವಾಗಿ ದೊರೆಯುತ್ತವೆ ಆದ್ದರಿಂದ ನಾವು ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡಬಹುದು.
ಶಿವತಾಂಡವ ಪ್ರಸಿದ್ಧ ವರ್ಣನೆ ಇಲ್ಲಿ ಉಲ್ಲೇಖಾರ್ಹ
ಉದ್ಧಂಡತಾಂಡವಮುದಂಚಿತಲಾಸ್ಯಲೀಲಾಂ
ಕರ್ತುಂ ಸ್ವಯಂ ಯುಗಪದೇವ ಸಮೂತ್ಸೂತ್ಮಾ|
ಯ: ಕಾಮಿಗೀಕಲಿತಕಮ್ರತರಾರ್ಧಕಾಯ:
ಸೋ ಯಂ ವಿಭಾತಿ ವಿಭಯರಾಧಿನಟಃ ಸುರಾಣಾಂ ||
– ಸಂಗೀತ ವಿದ್ಯಾವಿನೋದ
೧. ಕಲಿತ ತಾಂಡವ (ಕಾಲಿಕಾ ತಾಂಡವ)
ಕಲಿತ ತಾಂಡವು ಸೃಷ್ಟಿಯ ಸಂಕೇತ. ಈ ತಾಂಡವದಲ್ಲಿ ಶಿವನಿಗೆ ಎಂಟು ಕೈಗಳು – ಅಭಯ ಮುದ್ರೆ, ಡಮರು, ತ್ರಿಶೂಲ, ಪಾಶ, ಗಜಹಸ್ತ, ಕಪಾಲ, ಅಗ್ನಿ ಮತ್ತು ಘಂಟೆ. ಶಿವ ಮತ್ತು ಅವನ ಸಹಧರ್ಮಿಣಿ ಕಾಳಿಯ ನಡುವೆ ನಡೆದ ನರ್ತನ ಸ್ಪರ್ಧೆಯಲ್ಲಿ ತನ್ನ “ಲಲಾಟತಿಲಕ ಭಂಗಿ” ಯ ಯುಕ್ತಿಯಿಂದ ಶಿವ ಗೆದ್ದ ಸಂದರ್ಭದಲ್ಲಿ ಆಡಿದ್ದು ಇಲ್ಲಿ ಶಿವನ ಬಲಗಾಲು ಸಂಪೂರ್ಣವಾಗಿ ಎತ್ತಲ್ಪಟ್ಟಿದೆ.
೨. ಉಮಾ ತಾಂಡವ (ಗೌರೀ ತಾಂಡವ)
“ಶ್ರೀ ತತ್ವನಿಧಿ” ಎಂಬ ಗ್ರಂಥದಲ್ಲಿ ಇದರ ವಿವರಣೆಗಳಿವೆ. ಉಮೆಯ ಜೊತೆಯಲ್ಲಿ, ಕಗ್ಗತ್ತಲೆಯ ತಾಮಸಿಕ ಶಕ್ತಿಯಿಂದ ಶಿವ ನರ್ತಿಸುತ್ತಾನೆ. ಪೌರುಷಿಕ ಉನ್ನತ ಶಕ್ತಿಯ ಜೊತೆಯಲ್ಲಿಯೇ, ಸ್ತ್ರೀ ಸಹಜ ಲಾಸ್ಯವೂ ಇಲ್ಲಿ ಸೇರಿಕೊಂಡಿದೆ. ಇಲ್ಲಿ ಶಿವನಿಗೆ ಆರು ಕೈಗಳು ಢಮರು, ತ್ರಿಶೂಲ, ಅಭಯ ಮುದ್ರೆ, ವಿಸ್ಮಯ ಮುದ್ರೆ, ಪಿಂಛ, ಗಜಹಸ್ತ ಮುದ್ರೆ.
೩. ಸಂಧ್ಯಾ ತಾಂಡವ
ವಿಶ್ವದ ಸ್ಥಿರತ್ವ ಮತ್ತು ಪರಿರಕ್ಷಣೆಯ ಸಂಕೇತ ಸಂಗೀತ ವಾದ್ಯಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಶಿವ ಸಂಧ್ಯಾ ತಾಂಡವವನ್ನು ಅಶ್ವತ್ಥ ವೃಕ್ಷದಡಿಯಲ್ಲಿ ನರ್ತಿಸುತ್ತಾನೆ. “ಭುಜಂಗ ಲಲಿತ” ಅಥವಾ ಪ್ರದೋಷ ತಾಂಡವ ಎಂದು ಕರೆಯಲ್ಪಡುವ ಈ ತಾಂಡವದ ವರ್ಣನೆಯನ್ನು ಹಲವು ತಮಿಳು ಪದಗಳಲ್ಲಿ, ವರ್ಣಗಳಲ್ಲಿ ನೋಡಬಹುದು. ತ್ರಿಲೋಕದ ತಾಯಿಯನ್ನು ನವರತ್ನ ಖಚಿತ ಸುವರ್ಣ ಸಿಂಹಾಸದಲ್ಲಿರಿಸಿ ಶೂಲಪಾಣಿ ತಾಂಡವವಾಡುತ್ತಾನೆ. ಸರಸ್ವತಿ ವೀಣೆ ನುಡಿಸಿದರೆ, ಬ್ರಹ್ಮ ತಾಳವನ್ನು ವಿಷ್ಣು ಮದ್ದಲವನ್ನು ನುಡಿಸುತ್ತಾರೆ.
೪. ಸಂಹಾರ ತಾಂಡವ
ಸಂಹಾರ ತಾಂಡವವು ಪ್ರಳಯದ ಸಂಕೇತ. ಇದರಲ್ಲಿ ಶಿವ ಉಮೆಯೊಡನೆ ನರ್ತಿಸುತ್ತಾನೆ. ಸ್ಕಂದ ಸ್ವಾಮಿಯು ವೀಕ್ಷಿಸುತ್ತಿರುತ್ತಾನೆ. ಇಲ್ಲಿ ಶಿವನಿಗೆ ಕಲಿತ ತಾಂಡವದ ೮ ಕೈಗಳೂ ಒಟ್ಟು ೧೬ ಕೈಗಳು – ವಜ್ರ, ಟಂಕ, ದಂಡ, ನಾಗ, ವಲಯ, ಕಟಕ, ಖಡ್ಗ, ಪಾತಾಕ, ತನ್ನ ಪರಮಭಕ್ತ ಮಾರ್ಕಂಡೇಯನನ್ನು ರಕ್ಷಿಸಲು ಶಿವಲಿಂಗ ಒಡೆದು ಯಮನನ್ನು ಘಾಸಿಮಾಡಲು ಕಾಲೆತ್ತಿದ ಶಿವ ಕಾಲ ಸಂಹಾರ ಮೂರ್ತಿಯಾದ ಅದೇ ರೀತಿ ದಕ್ಷಯಜ್ಞದ ಸಮಯದಲ್ಲೂ ಪರಮೇಶ್ವರ ಸಂಹಾರಮೂರ್ತಿಯೇ. ಸಂಹಾರ ಸೃಷ್ಟಿ-ಸ್ಥಿತಿ-ಲಯಗಳ ಜೀವನದ ಚಕ್ರದಲ್ಲಿ ಪ್ರಮುಖವಾದದ್ದು, ಜೀವನ ಚಕ್ರ ತಿರುಗಲು, ಪುನರ್ ಸೃಷ್ಟಿಯಾಗಲು        ಜಗತ್ತನ್ನು ಸಿದ್ಧಪಡಿಸುವಂತದ್ದು.
೫. ತ್ರಿಪುರ ತಾಂಡವ (ವಿಜಯ ತಾಂಡವ)
ಜಗತ್ತಿನಲ್ಲಿ ಸದ್ಗುಣ ಮತ್ತು ದುಗುರ್ಣಗಳು ಸಮತೋಲನದಲ್ಲಿಡಲು ಶಿವ ಮಾಡಿದ ತಾಂಡವ ಉತ್ತಮವಾದದನ್ನುದ್ಧರಿಸಿ, ನೀಚತ್ವವನ್ನು ನಾಶ ಮಾಡಲು ಲೋಕಕ್ಕೆ ಮಾರಕರಾಗಿದ್ದ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಯರನ್ನು ಒಂದೇ ಬಾಣದಿಂದ, ಒಂದೇ ಬಾರಿ ಹೊಡೆದ ಸಮಯದಲ್ಲಿ ಶಿವನಾಡಿದ್ದು ತ್ರಿಪುರ ತಾಂಡವ, ವಿಶ್ವದ ತಿರೋಧಾನವನ್ನು ಸೂಚಿಸುತ್ತದೆ. ಇಲ್ಲಿ ಶಿವನಿಗೆ ೧೬ ಕೈಗಳು.
೬. ಊರ್ಧ್ವತಾಂಡವ
ಇಲ್ಲಿಯ ಸಂದರ್ಭ ಕಲಿತ ತಾಂಡವದ್ದೇ ಆದರೂ, ಇಲ್ಲಿ ಶಿವನಿಗೆ ೪ ಕೈಗಳು. ಕಾಳಿಯ ಜೊತೆಗಿನ ಸ್ಪರ್ಧೆಯಲ್ಲಿ ತನ್ನ ಊರ್ಧ್ವತಾಂಡವದಿಂದ ಶಿವ ಗೆಲ್ಲುತ್ತಾನೆ. ಮಹೇಶನ ಅನುಗ್ರಹ ಭಾವವನ್ನು ಇದು ಪ್ರತಿನಿಧಿಸುತ್ತದೆ.
೭. ಆನಂದ ತಾಂಡವ
ನಾವು ದಕ್ಷಿಣ ಭಾರತದ ಮನೆ ಮನೆಗಳಲ್ಲೂ ಕಾಣುವ ನಟರಾಜಶಿಲ್ಪ ಆನಂದತಾಂಡವದ್ದು, ದಾರುಕಾವನದಲ್ಲಿ ವೇದಬಾಹಿರ ಋಷಿಗಳು ಸೃಷ್ಟಿಸಿದ ವ್ಯಾಘ್ರನನ್ನು ಕೊಂದು ಅದರ ಚರ್ಮವನ್ನು ಉಟ್ಟಿದ್ದು, ವಿಷಪೂರಿತ ಸರ್ಪವನ್ನು ಮಾಲೆಯಾಗಿ ಧರಿಸಿದ್ದು, ಪಾಪಮೂರ್ತಿ ಅಪಸ್ಮಾರನನ್ನು ಬೀಳಿಸಿ, ಆತನನ್ನು ಮೆಟ್ಟಿ ನಿಂತದ್ದು ಎಲ್ಲವನ್ನೂ ಆನಂದತಾಂಡವ ಮೂರ್ತಿಯಲ್ಲಿ ಕಾಣಬಹುದು. ಆನಂದತಾಂಡವವು ವಿಶ್ವ ಸೃಷ್ಟ್ಯಾದಿ ಕ್ರಿಯಾ ಪಂಚಕದ ಸಮಾಹಾರ ರೂಪ. ಎಂದರೆ ಸೃಷ್ಟಿ, ಸ್ಥಿತಿ, ಪ್ರಳಯ, ತಿರೋಧಾನ, ಅನುಗ್ರಹ ಸಮಸ್ತವನ್ನೂ ಒಳಗೊಂಡದ್ದು.
ಈ ತಾಂಡವಗಳಲ್ಲದೆ, ತಂತ್ರಶಾಸ್ತ್ರಗಳೂ ಸಪ್ತವಿಧ ನಟರಾಜನರ್ತನಗಳನ್ನು ವರ್ಣಿಸಿವೆ. ಅಜಪಾ, ಉನ್ಮತ್ತ, ಪಾರಾವಾರ ತರಂಗ, ಕುಕ್ಕಟ, ಭೃಂಗ, ಕಮಲ, ಹಂಸಪಾದ (ಅಥವಾ ಅಮೃತ). ಆನಂದ ತಾಂಡವವನ್ನು ತಂತ್ರಗಳು ನಾದಾಂತನಟನವೆಂದು ಕರೆದು ಅಜಪಾದಿ ನರ್ತನಗಳೆಲ್ಲದರ ಸಮಾಹಾರ ಅಥವಾ ಪರ್ಯವಸತಿ ರೂಪವೆಂದು ಕೀರ್ತಿಸಿವೆ.
“ಭಾವ ಪ್ರಕಾಶ”ದಲ್ಲಿ ಐದು ತಾಂಡವಗಳನ್ನು ಹೆಸರಿಸಿ ಪ್ರತಿಯೊಂದರ ಮುಖ್ಯ ರಸಗಳನ್ನೂ ಹೆಸರಿಸಿದೆ. ಉಚ್ಚಂಡ, ಚಂಡ, ಪ್ರಚಂಡ, ಪ್ರೇರಣಾ ಮತ್ತು ಪ್ರಸನ್ನ ಇವು ತಾಂಡವದ ೫ ವಿಧಗಳು.
ಆನಂದ ತಾಂಡವ ಮೂರ್ತಿಯ ನಟರಾಜ ವಿಗ್ರಹ ಬಳಕೆಗೆ ಬಂದದ್ದು ಬಹುಶಃ ೧೦ನೆಯ ಶತಮಾನದಲ್ಲಿ. ಚೋಳರ ವಂಶದ ರಾಜರಾಜಚೋಳನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಗ್ರಹ ರಾಜರಾಜಚೋಳನಿಗೆ ಅತ್ಯಂತ ಪ್ರಿಯವಾಗಿತ್ತೆಂದೂ, “ಅಡವಲ್ಲವನ್‌” ಎಂದು ಖ್ಯಾತಿಗೊಂಡಿತ್ತೆಂದೂ ಹೇಳಲ್ಪಟ್ಟಿದೆ.
ನಟರಾಜಮೂರ್ತಿಯನ್ನು ಕಂಡಾಗ ನಮ್ಮ ದೃಷ್ಟಿ ಮೂರ್ತಿಯ ಪಾದಗಳಿಗೆ ಮಣಿದು ಹಂತ ಹಂತವಾಗಿ ಏರುತ್ತಾ ಹೋದರೆ ಅಸಂಖ್ಯ ಅಂಶಗಳನ್ನು ಗಮನಿಸಬಹುದು. ಆತನ ಬಲಕಾಲು “ಮುಯ್ಯಲಕ” ಎಂಬ ರಾಕ್ಷಸನ ಬೆನ್ನ ಮೇಲೆ ಊರಿದ್ದರೆ, ಎಡಕಾಲು ಬಲಪಾರ್ಶ್ವಕ್ಕೆ ಎತ್ತಲ್ಪಟ್ಟಿದೆ. ಶಿರದಲ್ಲಿ ಗಂಗೆ, ಅಧಚಂದ್ರ, ಹರಡಿರುವ ಕೇಶಸಮೂಹ, ಎರಡು ಕಣ್ಣುಗಳಲ್ಲದೆ ಭ್ರೂಮಧ್ಯದ ಮೂರನೆಯ ಕಣ್ಣು ಬಲಗಿವಿಯಲ್ಲಿ ಮಕರ ಕುಂಡಲ (ಪುರುಷಾಭರಣ), ಎಡಗಿವಿಯಲ್ಲಿ ಸ್ತ್ರೀಯರು ಧರಿಸುವ ತಾಟಂಕ, ನರ್ತಕರು ಅಲಂಕರಿಸಿಕೊಳ್ಳುವಂತೆಯೇ ನಟರಾಜ ತನ್ನ ಅಂಗಗಳಲ್ಲಿ ಅಲಂಕಾರಯುಕ್ತನಾಗಿದ್ದಾನೆ. ಸೊಂಟದಲ್ಲಿ ಬಿಗಿಯಾದ ಬಟ್ಟೆಯ ಬದಲಿಗೆ ಗಜದ ಅಥವಾ ವ್ಯಾಘ್ರದ ಚರ್ಮವಿದೆ. ಸೊಂಟದ ಪಟ್ಟಿ ಅಲಂಕಾರಗಳಿಂದ ಕೂಡಿದೆ. ಮೂರೆಳೆಯ ಯಜ್ಞೋಪವೀತ ಹೊಕ್ಕಳ ಬಳಿ ಇಳಿಯುವಂತಿದೆ. ಕಾಳ್ಬೆರಳುಗಳಲ್ಲಿ ಕಾಲ್ಕಡಗಗಳು, ಕೈಗಳಲ್ಲಿ ಕಂಕಣಗಳು, ತೋಳ್ಬಂದಿಗಳು, ಭುಜಕೀರ್ತಿಗಳು. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಶಿವನ ಎಡಗಡೆಯ ಮೂರ್ತಿಯಲ್ಲಿ ಸ್ತ್ರೀಸಹಜವಾಗಿರುವ ರೂಪು ಕಾಣಿಸುತ್ತದೆ. ಎಡಗೈ ಮತ್ತು ಎಡಗಾಲುಗಳಲ್ಲಿ ಸ್ತ್ರೀಯರ ತೆಳ್ಳನೆಯ ಆಕಾರ ಹಾಗೂ ಉಗುರುಗಳಿವೆ.
ನಟರಾಜನಿಗೆ ನಾಲ್ಕು ಕೈಗಳು, ಎಡಗೈ ಗಜಹಸ್ತವಿದ್ದು ಅದರ ಬೆರಳುಗಳು ಕುಂಚಿತಪಾದದೆಡೆಗೆ ಮುಖ ಮಾಡಿವೆ. ಬಲಗೈ ಅಭಯ ಹಸ್ತವಾಗಿದ್ದು ಎದೆಗಿದಿರು ನಿಂತಿದೆ. ಹಿಂದಿನ ಬಲಗೈ ಒಂದು ಢಮರುವನ್ನೂ ಎಡಗೈ ಅಗ್ನಿಯನ್ನೂ ಹಿಡಿದಂತೆ ಚಿತ್ರಿತವಾಗಿದೆ.
ನಟರಾಜನ ಹಣೆಯಲ್ಲಿರುವ ಮೂರನೆಯ ಕಣ್ಣು ಮುಚ್ಚಿರುತ್ತದೆ. ಉಳಿದ ಸ್ವಾಭಾವಿಕ ಕಣ್ಣುಗಳು ತೆರೆದಿದ್ದರೂ, ಅವುಗಳ ದೃಷ್ಟಿ ಒಳಮುಖವಾಗಿದೆ. ಮುಖದಲ್ಲಿ ಮಂದಹಾಸ, ಎಡಹುಬ್ಬು ಕಿಂಚಿತ್‌ಮೇಲೆತ್ತಲ್ಪಟ್ಟಿದೆ.
ಕಮಲದ ಪೀಠದ ಮೇಲಿರುವ ಅಪಸ್ಮಾರನ ಬೆನ್ನ ಮೇಲೆ ಶಿವ ನರ್ತಿಸುತ್ತಿದ್ದಾನೆ. ಅಗ್ನಿಯ ಪ್ರಭಾವಳಿ ಈ ಪೀಠದಿಂದ ಮೊದಲುಗೊಂಡು ಮೂರ್ತಿಯನ್ನು ಪೂರ್ಣವಾಗಿ ಸುತ್ತುವರಿದು ಆ ಪೀಠದಲ್ಲೇ ಅಂತ್ಯಗೊಳ್ಳುತ್ತದೆ.
ನಟರಾಜಮೂರ್ತಿ ಷಟ್‌ಕೋನದ ರೇಖಾವಿನ್ಯಾಸಕ್ಕೆ ಒಳಪಡುತ್ತದೆ. ಮೈ ಮಧ್ಯಭಾಗದಲ್ಲಿದ್ದರೆ ತಲೆ, ಮೇಲಿನ ಎರಡು ಕೈಗಳು, ಮೇಲಿನ ಮೂರು ಕೋನಗಳನ್ನು ಅಕ್ರಮಿಸುತ್ತದೆ. ಕುಂಚಿತ ಪಾದ ಕೆಳಗೆ ಅಪಸ್ಮಾರನ ಮೇಲಿದ್ದು ಕೆಳಗಿನ ಕೋನದಲ್ಲಿದ್ದರೆ, ಅವನ ಮೇಲೆದ್ದ ಕಾಲು ಮತ್ತು ನರ್ತಿಸುವಾಗ ಹರಡಿದ ವಸ್ತ್ರ ಮತ್ತೆರಡು ಕೋನಗಳನ್ನಾಕ್ರಮಿಸಿಕೊಂಡಿದೆ. ಈ ಆರು ಕೋನಗಳೂ ಸುತ್ತಲಿನ ವರ್ತುಲಕಾರದ ಅಗ್ನಿಜ್ವಾಲೆಯ ಪ್ರಭಾವಳಿಯೊಳಗೆ ಅಡಕವಾಗಿದೆ.
ಶಿಲ್ಪಕಲೆಯಲ್ಲಿ ಶಿವನ ಪ್ರತಿಮೆಗಳನ್ನು ನಾಲ್ಕು ಮೂರ್ತಿಗಳಾಗಿ ನಿರ್ಮಿಸುತ್ತಾರೆ. ಸಂಹಾರ ಮೂರ್ತಿಯಲ್ಲಿ ಆತ ಲಯಕಾರನಾಗಿ, ದಕ್ಷಿಣಾಮೂರ್ತಿಯಲ್ಲಿ ಆತ ಯೋಗಿಯಾಗಿ, ಅನುಗ್ರಹ ಮೂರ್ತಿಯಲ್ಲಿ ವರಪ್ರದಾಯಕನಾಗಿ ಹಾಗೂ ನೃತ್ಯ ಮೂರ್ತಿಯಲ್ಲಿ ನರ್ತಕನಾಗಿದ್ದಾನೆ.
ವಿಶ್ವ ವ್ಯಾಪಾರವಷ್ಟನ್ನೂ ಈ ವಿಗ್ರಹದಲ್ಲಿ ಪ್ರತಿನಿಧಿಸಲಾಗಿದೆಯೆನ್ನಬಹುದು. ಜಟೆಯಲ್ಲಿರುವ ಗಂಗೆ ಪಾವಿತ್ರ‍್ಯದ ಹಾಗೂ ಸಮೃದ್ಧಿಯ ಚಿಹ್ನೆ. ಶಿವ-ಶವೆಯರು ಅಭಿನ್ನರು. ಅರ್ಧಚಂದ್ರವು ಕಾಲದ ಸಂಕೇತವೆಂದಾಗಲೀ, ಕುಂಡಲಿನೀಯೋಗದ ಸೋಮಚಕ್ರದ ಸಂಕೇತವೆಂದಾಗಲೀ ಭಾವಿಸಬಹುದು. ಸ್ವಪ್ರಕಾಶನಲ್ಲದ, ಸೂರ್ಯನಿಂದ ಪ್ರಕಾಶಿಸಲ್ಪಡುವ, ವೃದ್ಧಿ ಕ್ಷಯಗಳಿಗೊಳಗಾವ ಚಂದ್ರ ಮನಸ್ಸಿನ ಸಂಕೇತ. ತಂತ್ರಗ್ರಂಥಗಳ ಪ್ರಕಾರ ಸೋಮಚಕ್ರವು ಧ್ಯಾನಾಶ್ರು, ರೋಮಾಂಚ, ಧೃತಿ, ಸಂತೋಷ, ವೈರಾಗ್ಯ, ಗಾಂಭೀರ್ಯ, ಏಕಾಗ್ರತೆ ಮೊದಲಾದವುಗಳ ಅಧಿಷ್ಠಾನವೆಂದು ಹೇಳಿವೆ. ಈ ಗುಣಗಳೆಲ್ಲವೂ ಮನಸ್ಸಿನ ಗುಣಗಳೇ, ಆದ್ದರಿಂದ ನಟರಾಜ ಮೂರ್ತಿಯು ಶಿರದಲ್ಲಿ ಧರಿಸಿರುವ ಚಂದ್ರನನ್ನು ಮನಸ್ಸಿನ ಸಂಕೇತವೆಂದೇ ತಿಳಿಯಬೇಕಾಗುತ್ತದೆ.
ನಟರಾಜಸ್ವಾಮಿಯ ವಿಗ್ರಹವನ್ನು ಸುತ್ತುವರೆದ ಅಗ್ನಿವರ್ತುಲ ಚಿತ್‌ಪ್ರಭಾವಳಿಯನ್ನೂ ಶಿರದ ಮೇಲ್ಗಡೆಯಿರುವ ವೃತ್ತಖಂಡ ಓಂಕಾರವನ್ನು ಸೂಚಿಸುತ್ತದೆ. ಅದು ಪೂರ್ಣತೆಯ ಚಿಹ್ನೆಯೂ ಹೌದು.
ನಟರಾಜನ ಹಾರಾಡುತ್ತಿರುವ ಕೇಶರಾಶಿಯು ಶಿವನ “ವ್ಯೋಮಕೇಶ” ಎಂಬ ಹೆಸರನ್ನು ಸಾರ್ಥಕಗೊಳಿಸಿವೆ. ಆಕಾಶವೇ ಅವನಿಗೆ ಕೇಶಗಳಾಗಿವೆ. ಲಲಾಟ ನೇತ್ರವು ಜ್ಞಾನದ್ಯೋತಕ, ಈಶ್ವರನ ಅಸಾಧಾರಣ ಮಹಿಮೆಯ ಲಾಂಛನ. ಮೂರು ಕಣ್ಣುಗಳಿರುವ ಸಂಗತಿ ಕಾಲಶ್ರಯ ಸೂಚನೆಯ ಆಶಯವುಳ್ಳದೆನ್ನಬಹುದು. ಅದು ಕರ್ಮಸಂಕಲ್ಪ-ಕರ್ಮತ್ಯಾಗ-ಜ್ಞಾನ, ಹೀಗೂ ಪ್ರತಿಪಾದಿಸಬಹುದು.
ಕಿವಿಗಳಲ್ಲಿ ಪುರುಷಾಭರಣ, ಸ್ತ್ರೀ ಆಭರಣಗಳೆರಡನ್ನೂ ಧರಿಸಿರುವುದು ಅರ್ಧನಾರೀಶ್ವರತ್ವದ ಚಿಹ್ನೆ. ಶಿವಶಕ್ತಿಯರ ಅಥವಾ ಪ್ರಕೃತಿ-ಪುರುಷರ ಸಮಾವೇಶವೆಂದೂ ಇದನ್ನು ಭಾವಿಸಬಹುದು. ದ್ರಾವಿಡರಲ್ಲಿ ತತ್ವಜ್ಞಾನ ಆರ್ಯರಿಗಿಂತ ಹೆಚ್ಚಿನ ಆಳದಲ್ಲಿದೆ. ಸೃಷ್ಠಿ ಕಾರ್ಯ ಬರಿಯ ಗಂಡು ಶಕ್ತಿಯಿಂದ ಮಾತ್ರವಲ್ಲ. ಸ್ತ್ರೀಯ ಗುಣಗಳು ಅವಕ್ಕೆ ಕೂಡಿದಾಗ ಮಾತ್ರ ಎಂಬ ಸತ್ಯ ಅವರಿಗೆ ಗೋಚರಿಸಿತ್ತು. ಆದ್ದರಿಂದಲೇ ನಟರಾಜ “ಮೂರ್ತಿ” ಪ್ರಕೃತಿ- ಪುರುಷ ಸಮಾಗಮವನ್ನೂ ಪ್ರತಿನಿಧಿಸುತ್ತದೆ.
ನಾದವೇ ಸೃಷ್ಟಿಮೂಲವಾದ್ದರಿಂದ ಡಮರುಗವು ಸೃಷ್ಟಿಯ ಸಂಕೇತವಾಗಿದೆ. ಡಮರುವಿನ ರೂಪ ಯೋನಿಲಿಂಗಗಳ ಸಾಮರಸ್ಯದ್ದು. ಎರಡು ತ್ರಿಕೋಣಗಳು ಒಂದರ ತುದಿಯನ್ನಿನ್ನೊಂದು ಅನಿಸಿಕೊಂಡು ನಿಂತಂತೆ ಡಮರುವಿನ ಆಕಾರ. ಮೇಲಣ ತ್ರಿಕೋನ ಶಕ್ತಿರೂಪ, ಕೆಳಗಿನದು ಶಿವ ರೂಪ. ನಡುವಿನ ಬಿಂದು ಸಾಮರಸ್ಯ, ಡೋಲಾಹಸ್ತ, ಅಭಯ ಹಸ್ತಗಳು ಸ್ಥಿತಿಶಕ್ತಿಯನ್ನೂ ಎಡಗೈಯ ಅಗ್ನಿಯು ಸಂಹಾರ ಶಕ್ತಿಯನ್ನು ಸೂಚಿಸುತ್ತವೆ. ಅಗ್ನಿಯು ಪಾವಕವೆಂಬ ಸಂಗತಿಯೂ ಧ್ಯಾನಾರ್ಹವಾಗಿವೆ. ಕಂಠಾಭರಣವಾದ ಸರ್ಪವು ಕುಂಡಲಿನೀ ಶಕ್ತಿಯ ಸಂಕೇತವೆಂದೂ ಉಳಿದ ಸರ್ಪಗಳು ಪ್ರತಿ ಶರೀರದಲ್ಲೂ ಇದ್ದು ಶರೀರದ ಸ್ವಾಭಾವಿಕ ಕರ್ಮಗಳಿಗೆ ಕಾರಣವಾಗಿರುವ ಪ್ರಾಣ, ಅಪಾನ, ವ್ಯಾನ, ಸಮಾನಗಳೆಂಬ ಪಂಚವಾಯುಗಳ ಮತ್ತು ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ಉಪವಾಯುಗಳ ಸಂಕೇತವೆಂದೂ ತಿಳಿಯುವುದು ಹೆಚ್ಚು ಸಮಂಜಸ.
ಡೋಲಾಹಸ್ತವು ಕೆಳಮುಖವಾಗಿಯೂ ಕುಂಚಿತ ದಕ್ಷಿಣ ಪಾದವು ಮೇಲ್ಮುಖವಾಗಿಯೂ ಪರಸ್ಪರ ಅಭಿಮುಖವಾಗಿರುವುದು ಗಮನಾರ್ಹ. ಇದು ಜೀವೋತ್ಕರ್ಷದ ಸಾಧ್ಯತೆಯನ್ನೂ ಪರತ್ತತ್ವದ ಆಕರ್ಷ ಪ್ರವಣತೆಯನ್ನೂ ಸೂಚಿಸುತ್ತದೆ. ಮರ್ತ್ಸತೆಯ, ಮಾಯೆಯ, ಅಜ್ಞಾನದ ಹಾಗೂ ಅಂಧಕಾರದ ಪ್ರತೀಕನಾದ ಅಪಸ್ಮಾರ ರಾಕ್ಷಸನನ್ನು ಸಾತ್ವಿಕ ಶಕ್ತಿ ಜಯಿಸುತ್ತದೆ. ಇದು ಸಾದನೆಯ ಪ್ರಥಮ ದಶೆ. ಅಂಧಕಾರವನ್ನು ನಿವಾರಣೆ ಮಾಡಿದ ಮೇಲೂ ಸತ್ತ್ವಸಿದ್ಧಗಾಗಿ ಕ್ರಿಯಾಶೀಲ ಪ್ರಯತ್ನ ಅಪೇಕ್ಷಿತವಾಗುತ್ತದೆಂಬುದನ್ನು ಕುಂಚಿತ ವಾಮಪಾದವು ಸೂಚಿಸುತ್ತದೆ. ಚರ್ಮಾಂಬರ, ಗೆಜ್ಜೆ ಮೊದಲಾದವು ಪೌರುಷದ, ವೀರತ್ವದ ಚಿಹ್ನೆಗಳು. ಯಜ್ಞೋಪವೀತದತ್ಯ್ರಂಶಗಳು ತ್ರಿಕರಣದ ಶುದ್ಧಿಯ ಲಾಂಛನಗಳು. ಕುಂಚಿತ ದಕ್ಷಿಣ ಪಾದದಂತೆ ಅಪಸ್ಮಾರ ರಾಕ್ಷಸ ಶಿರಸ್ಸೂ, ದೃಷ್ಟಿಯೂ ಮೇಲ್ಮುಖವಾಗಿರುವುದು, ಜೀವನ ಸಂತತ ಶಿವಸಾಕ್ಷಾರಾಪೇಕ್ಷೆಯನ್ನು ಸೂಚಿಸುತ್ತದೆನ್ನಬಹುದು. ನಟರಾಜನ ವಿಗ್ರಹ ಶಿವನ ಚಿತ್‌(ಪ್ರಕಾಶ ರೂಪ), ಅನಂದ (ಸ್ವತಂತ್ರವಾದದ್ದು) ಇಚ್ಛೆ (ಎಡೆತಡೆಯಿಲ್ಲದ ಚಮತ್ಕಾರ), ಜ್ಞಾನ (ಗ್ರಾಹ್ಯಗ್ರಾಹಕ ಭೇದವನ್ನೊಳಗೊಂಡ ಆಮರ್ಷಾತ್ಮಕವಾದ ಶಕ್ತಿ) ಮತ್ತು ಕ್ರಿಯಾ (ಎಲ್ಲ ರೂಪಗಳನ್ನು ತಳೆಯಬಲ್ಲ ಶಕ್ತಿ) ಈ ಐದು ಶಕ್ತಿಗಳನ್ನೂ ಅಭಿವ್ಯಕ್ತಿಸುತ್ತದೆ.
ಮೇಲಿನ ಅಂಶಗಳು ನಟರಾಜಮೂರ್ತಿ ಪಂಚಕೃತ್ಯಗಳನ್ನು ಪ್ರತಿನಿಧಿಸುತ್ತದೆ. ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸೃಷ್ಟಿ, ಸ್ತಿತಿ, ಸಂಹಾರ, ತಿರೋಬಾವ, ಅನುಗ್ರಹ ಇವೇ ಆ ಪಂಚಕೃತ್ಯಗಳು. ಜೊತೆಗೆ ವಯು, ಜಲ, ಆಕಾಶ, ಭೂಮಿ ಮತ್ತು ಅಗ್ನಿ ಎಂಬ ಪಂಚಭೂತಗಳು ಈ ಸುಂದರ ಮೂರ್ತಿಯಲ್ಲಿ ಅಡಕವಾಗಿವೆ.
ಓಂಕಾರವನ್ನು ಪ್ರಭಾವಳಿ ಅಥವಾ ತಿರುವಶಿ ಬಿಂಬಿಸಿದಂತೆಯೇ ಶಿವ ಪಂಚಾಕ್ಷರೀ ಮಂತ್ರವನ್ನು (ಶಿವಾಯ ನಮಃ) ನಟರಾಜ ಮೂರ್ತಿ ಚಿತ್ರಿಸುತ್ತದೆ ಎಂಬುದು “ಉನ್ಮೈ ವಿಳಕ್ಕಂ” ಎನ್ನುವ ಶೈವಾಗಮದ ಮತ. ಈ ಮಂತ್ರದ ಧ್ಯಾನದಿಂದ ಆತ್ಮ ಬೆಳಕು -ಕತ್ತಲೆಗಳ್ಯಾವುವೂ ಇಲ್ಲದ, ಶಿವ-ಶಕ್ತಿಯರಿಬ್ಬರಲ್ಲಿ ಭೇದವಿಲ್ಲದ ಸ್ಥಾನವನ್ನು ತಲಪುತ್ತದೆ ಎಂದೂ ” ಉನ್ಮೈ ವಿಳಕ್ಕಂ” ತಿಳಿಸುತ್ತದೆ. “ಶಿ” ಎಂದರೆ ಶಿವ, “ವಾ” ಎಂದರೆ ಶಕ್ತಿ. “ಯ” ಎಂದರೆ ಜೀವ, “ನ” ಎಂದರ ತಿರೋಭಾವ, “ಮ” ಎಂದರೆ ಮಲ, ಹೀಗೆ ಶಿವನ ಪಂಚಕೃತ್ಯಗಳನ್ನು ಪಂಚಾಕ್ಷರಿ ಮಂತ್ರ ಪ್ರತಿನಿಧಿಸುತ್ತದೆ.
ಇವಿಷ್ಠೇ ಅಲ್ಲದೆ ಶಿವಶಕ್ತಿಯರ ಸಂಯೋಗವಲ್ಲದೆ ಹರಿಹರರ ಸಂಯೋಗವನ್ನೂ ನಟರಾಜ ಮೂರ್ತಿಯಲ್ಲಿ ಕಾಣಬಹುದು ಎಂದು ಕೆಲವು ಶಾಸ್ತ್ರಗಳು ತಿಳಿಸುತ್ತದೆ. ಅಪ್ಪಯ್ಯ ದೀಕ್ಷಿತರು ಚದಂಬರದಲ್ಲಿ ಚಿತ್‌ಸಭೆಯನ್ನು ನೋಡಿದಾಕ್ಷಣ ರಚಿಸಿದ ಶ್ಲೋಕ ಇದನ್ನು ಸೂಚಿಸುತ್ತದೆ.
ಮಾರಮಣಂ ಉಮಾರಮಣಂ
ಫಣಧರತಲ್ಪಂ ಫಣಾಧರಕಲ್ಪಂ|
ಮುರಮಥನಂ ಪುರಮಥನಂ
ವಂದೇ ಬಾಣರಿಮ ಸಮಬಾಣಾರಿಂ||
ಶಿವನೊಂದಿಗಿರುವ ಶಿವಕಾಮಸುಂದರಿ ವೈಷ್ಣವೀ ಶಕ್ತಿಯೆ. ವೈಷ್ಣವರಿಗೂ ಚಿದಂಬರವೆಂಬುದು ನೂರೆಂಟು ತಿರುಪತಿಗಳಲ್ಲಿ ತಿರುಚಿತ್ರಕೂಟವೆಂದು ಪ್ರಸಿದ್ಧವಾಗಿದೆ.
ನಟರಾಜನ ಕಲ್ಪನೆಯನ್ನು ಮೂರು ಅಂಶಗಳಲ್ಲಿ ಕೇಂದ್ರೀಕರಿಸಬಹುದು. ಮೊದಲನೆಯದಾಗಿ ಅದು ಇಡೀ ವಿಶ್ವದ ಚಲನೆಯ ಪ್ರತೀಕ ಎರಡನೆಯದಾಗಿ ನಟರಾಜನ ನೃತ್ಯ ಉದ್ದೇಶ ಅಸಂಖ್ಯಾತ ಆತ್ಮಗಳಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಪ್ರಚೋದಿಸುವುದು. ಕೊನೆಯದು, ಈ ನರ್ತನದ ಸ್ಥಳ ಚಿದಂಬರ (ಚಿತ್‌+ಅಂಬರ) ಜಗತ್ತಿನ ಕೇಂದ್ರ ಸ್ಥಳ, ಅದು ನಮ್ಮ ಹೃದಯದ ಒಳಗಿರುವಂಥದ್ದು.
ನಟರಾಜ ಪೂಜೆಯ ಮುಖ್ಯ ಕೇಂದ್ರವೇ ಚಿದಂಬರ. ಚಿತ್‌ಅಥವಾ ಆತ್ಮ ಪ್ರಕಾಶಿಸುತ್ತಿರುವ ಶೂನ್ಯಾಂಬರವದು. ಅದು ಇರುವುದು ಜ್ಞಾನಿಯ ಹೃದಯಾಂತರಾಳದಲ್ಲಿ. ಆಂತರಿಕ ಅನುಭವದ ದೃಷ್ಟಿಯಿಂದ ಕಾಣುವಾಗ ಅಲ್ಲಿ ನಟರಾಜನ ದರ್ಶನವಾಗುತ್ತದೆ. ಆಕಾಶತತ್ತ್ವದ ಅರಿವಾಗುತ್ತದೆ. ಈ ಅರಿವಿನೊಡನೆ ಮೂಡುವ ಆನಂದವನ್ನೇ ಪ್ರತಿಮಾರೂಪದಲ್ಲಿ ನಾವು ನಟರಾಜಮೂರ್ತಿಯಲ್ಲಿ ನೋಡುತ್ತೇವೆ. ತಮಿಳುನಾಡಿನ ಚಿದಂಬರಂನಲ್ಲಿ ನಟರಾಜನ ವಿಶ್ವನರ್ತನದ ಬಳಿಯೆ, ಪರದೆಯ ಹಿಂದೆ ಒಂದು ಶೂನ್ಯ ಸ್ಥಳವಿದೆ. ಅಲ್ಲಿಯ ಶೂನ್ಯ ಸ್ಥಳವೇ ಶುದ್ಧಾಕಾಶವೆಂದೂ ಅದು ದೇವರ ಸಂಕೇತವೆಂದೂ ಭಾವಿಸುತ್ತಾರೆ. ಅದು ಜಡಾಕ್ಷರ (ಮೂರ್ತರೂಪದ ಆಕಾಶ) ವೆಂದೂ, ದೇವ ಚಿದಾಕಾಶ (ಆತ್ಮ ಸ್ವರೂಪಿ, ಚಿನ್ಮಯ) ಎಂದು ಅರ್ಥವಾಗುತ್ತದೆ. ಸತ್‌(ಶುದ್ಧ), ಚಿತ್‌(ಸುಜ್ಞಾನ), ಆನಂದ (ಸಂತೋಷ) ವನ್ನು ಪ್ರಕಟಿಸುವ ಅಧ್ಯಾತ್ಮಿಕ ಹೆಸರು ಚಿದಂಬರ. ನಟರಾಜನ ಕಲ್ಪನೆಗೆ ಪ್ರಾಯೋಗಿಕವಾದ ಒಂದು ಚೌಕಟ್ಟು ಇದೆ. ಶೈವಾಗಮ ಪಂಥದಲ್ಲಿ ಯೋಗ ಮುಖ್ಯವಾದದ್ದು. ಇಲ್ಲಿ ಪಾತಂಜಲ ಯೋಗದಂತೆ ಚಿತ್ತನಿರೋಧವಲ್ಲ. ಜೀವದ ಸಾಧನೆಯೇ ಯೋಗ. ಇದರಲ್ಲಿ ಎರಡು ನೆಲೆಗಳು. ಮೊದಲನೆಯದು “ಕ್ರಿಯೆ” ಎಂದರೆ ಮೈ, ಮಾತು, ಮನಸ್ಸುಗಳ ಕೆಲಸ. ಎರಡನೆಯದು ಕ್ರಿಯೋಪರಮ. ಈ ಕೆಲಸವೆಲ್ಲ ನಿಂತು ಧ್ಯಾನದಲ್ಲಿ ತೊಡಗುವುದು. ಕ್ರಿಯೆಯ ಭಾಗದಲ್ಲಿ “ವಾರಂಗಾಹಾರ್ಯಸಾತ್ವಿಕ” ಎಂಬ ನಾಲ್ಕು ಬಗೆಯ ಅಭಿನಯ ಪೂರ್ವಕ ನೃತ್ಯಗೀತಗಳು ಶಿವಸಾಯುಜ್ಯಕ್ಕೆ ದಾರಿ.
ನಟರಾಜ ಮೂರ್ತಿಯ ತಾಂಡವದ ಕಲ್ಪನೆ, ವಿಗ್ರಹದ ವೈಶಿಷ್ಟ್ಯ ಯೋಗಿಗಳಿಗೂ, ಕಲೋಪಾಸಕರಿಗೂ, ವಿಶೇಷವಾಗಿ ಭರತನಾಟ್ಯದ ಅಂತರ್ಭಾವಗಳನ್ನು ಅರಿಯ ಬಯಸುವವರಿಗೂ ಅತ್ಯಂತ ಧ್ಯಾನಾರ್ಹ.
ನಟರಾಜ ಕಲ್ಪನೆಯನ್ನು ಸಮಗ್ರವಾಗಿ ಅರಿಯಬೇಕಾದರೆ ಗಾಢ ಚಿಂತನೆಯೂ, ದೀಘಕಾಲದ ಯೋಗ ಸಾಧನೆಯೂ ಅಗತ್ಯ. ಭರತನಾಟ್ಯದಲ್ಲಿ ಶ್ರದ್ಧಾಪೂರ್ವಕವಾಗಿ ನಿರತರಾಗಿರುವವರಿಗೆ ಆನಂದ ತಾಂಡವ ಮೂರ್ತಿಯ ಸಾಕ್ಷಾತ್ಕಾರವೇ ಜೀವಿತದ ಪರಮೋದ್ದೇಶವಾಗಿರುತ್ತದೆ. ನಾಟ್ಯಕಲೆಯ ಲೌಕಿಕ ವೈದಿಕ -ಆಧ್ಯಾತ್ಮಿಕ ಈ ಮೂರು ಪ್ರಮಾಣಗಳೂ ನಟರಾಜಮೂರ್ತಿಯಲ್ಲಿ ಅಡಕವಾಗಿವೆ. ಧ್ಯಾನ ಮಾಡಿದಂತೆಲ್ಲಾ ಹೆಚ್ಚು ಹೆಚ್ಚು ಅರ್ಥಪೂರ್ಣವೂ, ವ್ಯಾಪಕವೂ ಆಗಿ ತೋರುವ ಕಲ್ಪನೆ ನಟರಾಜನ ಆನಂದ ತಾಂಡವ ಮೂರ್ತಿ.
ನಮಃ ಶಿವಾಯ ಸತತಂ ಪಂಚಕೃತ್ಯ ವಿಧಾಯಿನೇ|
ಚಿದಾನಂದ ಘನಸ್ವಾತ್ಮ ಪರಮಾರ್ಥವಭಾಸಿನೇ||
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img