ಕಲಾವಿದ ನಾಡೋಜ ಆರ್ ಎಮ್ ಹಡಪದ
Published By: Police World News
Last Updated Date: 26-Oct-2021
ಕಲಾವಿದ ನಾಡೋಜ ಆರ್ ಎಮ್ ಹಡಪದ ಅವರು ನಮ್ಮ ಕಾಲದ ದಂತ ಕಥೆಯೇ ಹೌದು! ಕುರುಡು ಕಾಂಚಾಣದ ಅಬ್ಭರ ಅಟ್ಟಹಾಸಗಳಿಗೆ ತಮ್ಮ ಪ್ರಜ್ಞಾವಂತ ಬದುಕನ್ನೇ ಸವಾಲಾಗಿ ಒಡ್ಡಿ, ಆ ಮೂಲಕವೇ ಕಲೆಯ ನೆಲೆ ಬೆಲೆಗಳನ್ನು ನನಗೆ ಮತ್ತು ನನ್ನಂತಹ ಅನೇಕರಿಗೆ ಅರುಹಿದವರು. ಅವರು ಕಲೆಯನ್ನು ಎಂದೂ ಕಲೆಗಾಗಿ ಸೃಷ್ಟಿಸಲಿಲ್ಲ, ಹಾಗೆಂದು ಹೊಟ್ಟೆ ಹೊರೆಯಲಿಕ್ಕಾಗಿಯೂ ಸೃಷ್ಟಿಸಲಿಲ್ಲ! ಬದಲಾಗಿ ಸ್ವಯಂ ಆತ್ಮಾವಲೋಕನಕ್ಕಾಗಿ, ಬದುಕಿನ ಅನ್ವೇಷಣೆಗಾಗಿ ಸೃಷ್ಟಿಸಿದರು. ಕಲೆಯ ಮೂಲಕ ಬದುಕನ್ನು, ಬದುಕಿನ ವಿವಿಧ ಆಯಾಮಗಳ ಮೂಲಕ ಕಲೆಯನ್ನು ಪರೀಕ್ಷಿಸಿದರು. ಕಲೆಯ ಮೂಲಕ ಬದುಕು ಸಹ್ಯವಾಗಬೇಕು, ಬದುಕು ಬಿಟ್ಟು ಕಲೆ ಬೇರೆಯಿಲ್ಲ! ಕಲಾಲೋಕವೆಂಬುದೂ ಬೇರೆ ಇಲ್ಲ, ಒಂದು ವೇಳೆ ಹಾಗೆ ಅಂದುಕೊಂಡಿದ್ದರೆ ಅದು ಒಂದು ಭ್ರಮೆ ಮಾತ್ರ. ಇತ್ಯಾದಿ ಅವರ ನಂಬಿಕೆ, ನಿಲುವುಗಳು ಬಹಳ ಸ್ಪಷ್ಟವಾಗಿದ್ದವು. ಸಾಂಪ್ರದಾಯಿಕ ಕಲಾ ತತ್ವಗಳ ಆಚಗೆ, ವಾಸ್ಥವಿಕ ನೆಲೆಗಟ್ಟಿನ ಮೇಲೆ ಅವರ ಚಿಂತನೆ, ದೃಷ್ಟಿಕೋನ ಪಸರಿಸಿತ್ತು. .
ಹಡಪದರು ಕರ್ನಾಟಕದಲ್ಲಿ ಆಧುನಿಕ ಕಲಾ ಚಿಂತನೆಯನ್ನು ಹುಟ್ಟುಹಾಕಿದರಲ್ಲಿ ಪ್ರಮುಖರು. ಅಂತೆಯೇ ಕಲೆಯನ್ನು ಕಲಿಸುವ ಕ್ರಮಕ್ಕೆ ನಿರ್ಧಿಷ್ಟ ಪಠ್ಯಕ್ರಮಗಳು ನಾನು ಕಲಿತ ಅವರ ಆ ಕಲಾ ಶಾಲೆಯಲ್ಲಿ ಇರಲಿಲ್ಲ (ನಿರ್ದಿಷ್ಟ ಪಠ್ಯಕ್ರಮಗಳನ್ನು ನುಸರಿಸಿ ಕಲಿಸುವ ಸ್ಥಾವರ ಸ್ವರೂಪದ ಹಲವು ಕಲಾಶಾಲೆಗಳು ಭಾರತದಲ್ಲಿ ಇವೆ),ಆದರೆ ಹಡಪದರು ಈ ರೀತಿಯ ಮಿತಿಗಳಿಗೆ ಒಳಗಾಗಿರಲಿಲ್ಲ. ಮತ್ತು ತಮ್ಮ ಕಲಾ ಶಾಲೆಯನ್ನೂ ಹಾಗೆ ಮಿತಿಗಳಿಗೆ ಒಳಪಡಿಸಿರಲಿಲ್ಲ. ವಿದ್ಯಾರ್ಥಿಗಳಾದ ನಮ್ಮನ್ನು ಹಾಗೆ ಮುಕ್ತವಾಗಿ ತರಬೇತುಗೊಳಿಸಿದರು. ದೃಶ್ಯಕಲೆಯಲ್ಲಿನ ಶೈಲಿ ಬದ್ಧತೆ, ಶ್ರೇಣೀಕರಣ, ತಾದ್ರೂಪ್ಯ, ಕಲೆಯು ಮಾರಾಟದ ಸರಕಾಗುವುದು, ಸಂಗ್ರಹ, ಓಲೈಕೆ ಇಂತಹವುಗಳೆಲ್ಲ ಅವರ ಕಲಾತತ್ವದಲ್ಲಿ ಗಡಿಪಾರಿನ ಶಿಕ್ಷೆಗೆ ಒಳಗಾಗಿದ್ದ ಅಂಶಗಳು. "ಹಿಡಿವುದದನೆ ಹಿಡಿಯದಯ್ಯ, ಹಿಡಿಯದದನೆ ಹಿಡಿವುದಯ್ಯ ಎಂಬಂತೆ ಜೀವನದಲ್ಲಿ ಯುವುದು ಸತ್ಯ?, ಯಾವುದು ಮಿತ್ಯ, ಯಾವುದು ಯುಕ್ತ ಎಂಬಿತ್ಯಾದಿ ಚಿಂತನೆಗಳಿಂದ ಅವರ ವಿಚಾರ ಮತ್ತು ಬದುಕು ಎರಡೂ ಸಾಣೆ ಹಿಡಿದ ಅಲಗಿನಂತೆ ಇದ್ದವು. ಅವರ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ! ಬಿಡಿ; ಹಡಪದ ಅವರ ವಿದ್ಯಾರ್ಥಿಗಳು, ವಿಶೇಷವಾಗಿ ಅವರ ಪ್ರಭಾವಕ್ಕೆ ಒಳಗಾದವರು, ಅಭಿಮಾನಿಗಳು ಅವರೊಂದಿಗೆ ನಡೆಸಿದ ಸಂವಾದ, ಚರ್ಚೆ, ಅಲ್ಲಲ್ಲಿ ಅವರು ಆಡಿದ ಮಾತುಗಳನ್ನು ಸಂಗ್ರಹಿಸಿ ಮತ್ತು ತಾವು ಈ ಗುರುವನ್ನು ಮತ್ತು ಅವರ ಅಂತರಂಗವನ್ನು ತಮ್ಮ ಒಳಗಣ್ಣು ಕಂಡಂತೆ ಬರೆದು ಸಂಗ್ರಹಿಸಿರುವ ಪುಸ್ತಕ "ಹಡಪದ ಮಾಸ್ತರ ಕಲಾತತ್ವ" . ಸಂಪಾದನೆಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ನಮ್ಮ ಕೈಗೆ ಇರಿಸಿದ ಗೆಳೆಯ ಕೆ ಎಸ್ ಶ್ರೀನಿವಾಸ ಮೂರ್ತಿ ಮತ್ತು ಸಹಪಾಠಿ ಗೆಳೆಯ ಬಿ ಆರ್ ವಿಶ್ವನಾಥ್ ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ.
--Shivanand Bantanur