"ಮುದಕವ್ವಳ ಬುಟ್ಟಿಯಲ್ಲಿಯ ಖಡಕ್ ರೊಟ್ಟಿ"
Published By: Police World News
Last Updated Date: 14-Oct-2021
ದಾನಶೂರ ಹಳ್ಳಿಯ ಈ ಮುದಕವ್ವಳ
ಬುಟ್ಟಿಯಲ್ಲಿಯ ಖಡಕ್ ರೊಟ್ಟಿ
ಖಾರಾ ಚಟ್ನಿ,ಕಾಳ ಪಲ್ಯೆ
ತಿನ್ನಲು ಬನಶಂಕರಿಗೆ ಬನ್ನಿ
ನಿನ್ನೆ ಗುರುವಾರ ಮತ್ತು ಇಂದು ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿ ಬಿಜಿನೆಸ್ ಪ್ರವಾಸದ ಕೊನೆಗೆ ಇಂದು ಮಧ್ಯಾನ್ಹ ಬದಾಮಿಯ ಬನಶಂಕರಿ ದೇವಿಯ ಡರ್ಶನ ಪಡೆದು ಹೊರಬಂದಾಗ ಎದುರಾಗಿದ್ದು ಈ ಮುದಕವ್ವ.
" ಯಪ್ಪಾ ಊಟಾ ಮಾಡಬಾ,ಖಡಕ್ ರೊಟ್ಟಿ,ಮೊಸರು,ಚಟ್ನಿ ಐತಿ" ಎಂದಿತು ಈ ಮುದುಕಿ.ಗುಡಿಯ ಎದುರಿಗಿನ ಹೊಂಡದ ಕಟ್ಟೆಯ ಮೇಲೆ ನಮ್ಮ ಇನೋವಾ ಮಾಲೀಕ ಕಮ್ ಚಾಲಕ ರಮೇಶ್,ನಮ್ಮ ಆಫೀಸ್ ವ್ಯವಸ್ಥಾಪಕ ವೀರೇಂದ್ರ ಕುಳಿತೆವು.ಆಕೆಯ ಬುಟ್ಟಿಯಲ್ಲಿಯ ಖಡಕ್ ಸಜ್ಜೆ,ಜೋಳದ ರೊಟ್ಟಿ,ಕೆಂಪು ಖಾರಾ ,ಗುರೆಳ್ಳ ಚಟ್ನಿ,ಮೊಸರು ಹೊಡೆದೆವು.
ಈ ಮುದುಕಿ ಸಮೀಪದ ದಾನಶೂರ ಹಳ್ಳಿಯವಳು.ಮೂವತ್ತು ವರ್ಷದಿಂದ ಈ ಊಟ ಮಾರುವ ವೃತ್ತಿ." ನಿನ್ನ ಸೊಸೆಯಂದಿರು ಈ ಕೆಲಸ ಮಾಡುವದಿಲ್ಲವೆ?" ಎಂದು ಪ್ರಶ್ನಿಸುವಂತಾಗಿದೆ," ಲಗೂನ (ಬೇಗನೇ) ಎದ್ದು ಒಲೆ ಮುಂದಿನ ಕಸಾ ತೆಗೆಯೂದಿಲ್ಲ.ಇದನೇನ್ ಮಾಡ್ತಾವ್ರಿ" ಎಂದುತ್ತರಿಸಿದಳು.
ನಾವು ದುಡದಿದ್ದನ್ನು ಎಲ್ಲಾರೂ ಕುಂತಕೊಂಡ ತಿಂತಾರ್.ಆದ್ರ ನಮ್ ಹಣೆಬರಹದಾಗ ಇದ್ದದ್ದ ತಿನ್ನಾಕ್ ಯಾರೂ ಬರೂದಿಲ್ರಿ" ಎಂದೂ ಸೇರಿಸಿದಳು ಮುದಕವ್ವ.
ನಾವು ಊಟಾ ಮಾಡಿ,ಒಂದಿಷ್ಟು ರೊಟ್ಟಿ ಖರೀದಿಸಿ ಅಲ್ಲಿಂದ ಏಳುತ್ತಲೇ ಮುದಕವ್ವ " ಊಟಾ ಮಾಡಬರ್ರಿ ಊಟಾ" ಎಂದು ಕೂಗುತ್ತ ನಡೆದಳು.ಬನಶಂಕರಿಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಹಿಳೆಯರು ಸಮೀಪದ ಹಳ್ಳಿಗಳಿಂದ ಬಂದು ಇಲ್ಲಿ ಉಣಬಡಿಸುತ್ತಾರೆ.ಇದು ಬನಶಂಕರಿಯ ವೈಶಿಷ್ಟ್ಯ.
-Ashok Yankappa Chandargi