" ಎಲಿಫೆಂಟಾ ಗುಹೆಯ ಶಿಲ್ಪಕೃತಿಗಳು "
Published By: Police World News
Last Updated Date: 19-Dec-2021

ಎಲಿಫೆಂಟಾ ದ್ವೀಪದ ಹೆಸರು ಬಂದುದು ಈ ದ್ವೀಪದಲ್ಲಿ ದೊರೆತ ಬೃಹದಾಕಾರದ ಆನೆಯ ವಿಗ್ರಹದಿಂದಾಗಿ ಇದಕ್ಕೆ ಎಲಿಫೆಂಟಾ
ಎಂಬ ಹೆಸರು ಬಂದಿತಂತೆ . ಈ ವಿಗ್ರಹ ಬೊಂಬಾಯಿಯ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಜಿಯಂನಲ್ಲಿ ನೋಡಬಹುದಾಗಿದೆ .ಗುಹೆ .
ಕಗ್ಗಲ್ಲಿನದು . ಗರ್ಭಗೃಹ , ನಡುವೆ ಲಿಂಗ , ದ್ವಾರದಲ್ಲಿ ದ್ವಾರಾಪಾಲಕ ವಿಗ್ರಹಗಳು , ವಿಶಾಲವಾದ ಗೋಡೆಯ ಮೇಲೆ
ಶಿಲಾಮೂರ್ತಿಗಳು , ಶಾಸನಗಳ ಸುಳಿವಿಲ್ಲ . ಈ ಗವಿಯ ನಿರ್ದಿಷ್ಟ ಕಾಲ ತಿಳಿಯಲಿಲ್ಲ . ಆದರೂ ದಖನ್ನಿನಗುಹಾ ಶಿಲ್ಪ ಶ್ರೇಣಿ ಇದು .
ಶಿಲ್ಪಗಳು 11 , 16 ಅಡಿ ಎತ್ತರದಲ್ಲಿವೆ . ಅಂಗಾಂಗಳ ಸಹಜ ಪ್ರಮಾಣ , ಉತ್ತಮ ಭಾವ , ನೈಜತೆಯ ಈ ಸುಂದರ ಕೃತಿಗಳು .


ಬೆಳಕು ನೆರಳುಗಳ ಸಂಯೋಜನೆ ಇಲ್ಲಿಯ ವೈಶಿಷ್ಟ್ಯತೆ . ಮೇಲಾಗಿ ಕುಸುರಿನ ಕಲೆ , ಮಣಿಹಾರ , ಪದಕ , ಸೃಷ್ಟಿ , ಸ್ಥಿತಿ , ಲಯಗಳ
ಸಮನ್ವಯ , ದುಂಡುಮುಖ , ತುಂಬುಗಲ್ಲ , ಶಾಂತ , ಗಂಭೀರ , ನಿರ್ವಿಕಾರ ನಿರಾಮಯ ಸ್ವರೂಪ ಕಂಡು ಅಪರೂಪ ಶಿಲ್ಪಕೃತಿಗಳು
. ಗುಹೆಯ ಮುಂಬಾಗಿಲಿನ ಬಳಿ ಎದುರು ಬದುರಾಗಿ ಎರಡು ಶಿಲ್ಪಗಳಿವೆ . ನಟರಾಜ ವಿಗ್ರಹ . ಶಿವ ತನ್ನ ಅಷ್ಟಭುಜಗಳನ್ನು
ಕಾಲುಗಳನ್ನು ವಿವಿಧ ದಿಶೆಯಲ್ಲಿ ಎತ್ತಿ ರಾಕ್ಷಸನನ್ನು ಧ್ವಂಸಮಾಡುತ್ತ ತನ್ನ ವಿರಾಟ್ ಶಕ್ತಿಯನ್ನು ಹೊರ ಚೆಲ್ಲುತ್ತಿದ್ದಾನೆ ಎಂಬಂತಿದೆ .
ಆದರೆ ಈ ವಿಗ್ರಹದ ಎದುರಿಗಿರುವ ಶಿವಲಕುಲೇಶನ ಶಿಲ್ಪ . ಅದೇ ಸರ್ವಶಕ್ತನಾದ ಮಹಾದೇವ . ಯಾವ ಅಬ್ಬರ , ಆವೇಶಗಳೂ
ಇಲ್ಲದೆ ಮಹಾಯೋಗಿಯಾಗಿ ತಪೋಮಗ್ನನಾಗಿದ್ದಾನೆ . ಪಾರ್ವತಿ ಶಿವನ ಮೇಲೆ ಮುನಿಸಿಕೊಂಡು ಆತನಿಂದ ದೂರ ಕುಳಿತಿದ್ದರೆ
ಅವರ ಎದುರಿನ ರಾವಣ ಕೈಲಾಸವನ್ನೆತ್ತುತ್ತಿರುವ ಶಿಲ್ಪದಲ್ಲಿ ಅದೇ ಪಾರ್ವತಿ ರಾವಣನ ಕಾರ್ಯದಿಂದ ಬೆದರಿ ಶಿವನನ್ನು ಬಾಚಿ
ತಬ್ಬಿದ್ದಾಳೆ . ಇನ್ನೊಂದು ಕಡೆ ಶಿವ ಅಂದಕಾಸುರನ ಸಂಹಾರದಲ್ಲಿ ನಿರತನಾಗಿರುವ ಭಯಂಕರ ಸನ್ನಿವೇಶ ವ್ಯಕ್ತವಾಗಿದೆ . ಈ ಶಿಲ್ಪದ
ಎದುರಿನಲ್ಲಿ ಕಲ್ಯಾಣ ಸುಂದರ ಮೂರ್ತಿಯೂ ಇದ್ದಾನೆ . ಮಹೇಶ ಮೂರ್ತಿಯ ಇಕ್ಕೆಲಗಳಲ್ಲೂ ಇನ್ನೆರಡು ಶಿಲ್ಪಗಳಿದ್ದು ಪರಶಿವ
ಪ್ರಕೃತಿ ಪುರುಷಾತ್ಮಕನೆಂಬ ಭಾವವನ್ನು ವ್ಯಕ್ತಪಡಿಸುವ ಅರ್ಧನಾರೀಶ್ವರ ಮತ್ತು ಗಂಗಾಧರ ಇವರ ರೂಪವನ್ನು , ಸಾಕ್ಷಾತ್ಕರಿಸಿವೆ .
ಇಲ್ಲಿಯ ಒಂದೊಂದು ಶಿಲ್ಪವೂ ಎಲಿಫೆಂಟಾದ ಅನಾಮಿಕ ಶಿಲ್ಪಿಯ ತಪಸ್ಸಿದ್ಧಿಯ ಕುರುಹಾಗಿವೆ . ಭಾರತೀಯ ಶಿಲ್ಪದ ಶ್ರೇಷ್ಠ
ಸಾಧನೆಯಾಗಿ ಮೆರೆಯುತ್ತಿವೆ.

- ಉಮೇಶ್ ಪತ್ತಾರ
ಸಿಂಧನೂರು,ರಾಯಚೂರು
