logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಪ್ರಿಂಟ್ ಮೇಕರ್ ಶಿವಶಂಕರ ಸುತಾರ್ ರವರ 'ಅನಿಶ್ಚಿತತೆ' ಕೃತಿ
Published By: Police World News
Last Updated Date:  26-Oct-2021
ಕಲಾಸುದ್ದಿ

 ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಸುಮಾರು ಒಂದೂವರೆ ವರ್ಷ ಆನ್ಲೈನ್ ಕಲಾ ಚಟುವಟಿಕೆಯನ್ನು ಳಿದು ,ಎಲ್ಲ ಆಫ್ ಲೈನ್ ಕಲಾ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು.ಈ ಕಾರಣದಿಂದ ಕಲಾಸಕ್ತ ಸಮುದಾಯ ಕಲಾವಿದರು&ಕಲಾಕೃತಿಗಳ ಪ್ರತ್ಯಕ್ಷ ಭೇಟಿ, ಖುದ್ದು ಅವಲೋಕನಗಳಿಂದ ವಂಚಿತರಾಗಿ ,ಸಪ್ಪೆಯಾದ,ನೀರಸವಾದ ವಾತಾವರಣದಲ್ಲಿ 'ದಿನ ದೂಡ'ಬೇಕಾದ ಅನಿವಾರ್ಯತೆಗೆ ಒಳಗಾಗಿದ್ದರು.ಕಲಾವಿದರ ಬಳಗಕ್ಕೂ ಕೂಡ ಇದೇ ಸ್ಥಿತಿ ಬಂದಿತ್ತು.ಆದರೆ ,ಲಾಕ್ ಡೌನ್ ತೆರವಾದ ನಂತರ ಇಡೀ ರಾಜ್ಯದ, ಅಷ್ಟೇ ಏಕೆ, ಇಡೀ ದೇಶದ ಗಮನ ಕರ್ನಾಟಕದ ದೃಶ್ಯಕಲಾವಲಯದ ಮೇಲೆ ಕೇಂದ್ರೀಕೃತ ಆಗುವಂತೆ ದಿಟ್ಟ, ಚೈತನ್ಯಪೂರ್ಣ ,ಸೃಜನಾತ್ಮಕ ಚಟುವಟಿಕೆ ಹಮ್ಮಿಕೊಂಡು ಕೋವಿಡ್-19ಸಾಂಕ್ರಾಮಿಕದ ಪರಿಣಾಮವಾಗಿ ಸ್ತಬ್ಧವಾಗಿದ್ದ ರಾಜ್ಯದ ದೃಶ್ಯಕಲಾ ರಂಗಕ್ಕೆ ಸ್ಫೂರ್ತಿಯ ಸಿಂಚನಗೈದವರೆಂದರೆ ಅರ್ಪಿತಾ ಜಿ.ಆರ್, ಮನು ಚಕ್ರವರ್ತಿ, ಅನಿತಾ ಎನ್ ಮತ್ತು ಅವರ ಜೊತೆ ಸಂಪೂರ್ಣ ಸಹಕಾರ ನೀಡಿದ ಉತ್ಸಾಹಿ ಸಮಾನ ಮನಸ್ಕ ಕಲಾವಿದ ಸಮೂಹ. ಈ ಬಳಗ ಕನ್ನಡ ನಾಡಿನ ಆಯ್ದ ನುರಿತ 75 ಪ್ರಿಂಟ್ ಮೇಕರ್ ಗಳನ್ನು (ಮುದ್ರಣ ಮಾಧ್ಯಮ ಪರಿಣತ ಕಲಾವಿದರು)ಸಂಪರ್ಕಿಸಿ, ಪ್ರತಿಯೊಬ್ಬ ಕಲಾವಿದ/ದೆ  ಯವರಿಂದ 8ಅಡಿ×4ಅಡಿ ಅಳತೆಯ ವುಡ್ ಕಟ್ ಮಾಧ್ಯಮ ಕೃತಿಯನ್ನು 'ಕೋವಿಡ್-19'ರ ಕುರಿತಾಗಿ ರಚಿಸುವಂತೆ ಕೋರಿಕೊಂಡು,ಬಿಟ್ಟೂ ಬಿಡದೆ ಆ ಕಲಾವಿದರುಗಳನ್ನು ಸತತವಾಗಿ ಸಂಪರ್ಕದಲ್ಲಿರಿಸಿಕೊಂಡು ಅವರಿಂದ ಅಷ್ಟು ಬೃಹತ್ ಅಳತೆಯ ಉತ್ತಮ ಮಟ್ಟದ ವುಡ್ ಕಟ್ ಪ್ರಿಂಟ್ ತರಿಸಿಕೊಂಡು ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ    ಸಪ್ಟೆಂಬರ್ 22-2021   ದಿಂದ    ಅಕ್ಟೋಬರ್ 3-2021ರ     ತನಕ "ಅನಿಶ್ಚಿತತೆ(uncertainty)"  ಎಂಬ ಶೀರ್ಷಿಕೆ ಅಡಿಯಲ್ಲಿ  ವುಡ್ ಕಟ್ ಮಾಧ್ಯಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸುವುದರ ಮೂಲಕ  ಕೊರೋನಾಘಾತಕ್ಕೊಳಗಾದ ದೃಶ್ಯ ಕಲಾ ವಲಯದಲ್ಲಿ ಹರ್ಷದ ಸಿಂಚನಗೈದಿದ್ದು ಕಲಾಚರಿತ್ರೆಯಲ್ಲೇ ವಿಶೇಷತಃ ಉಲ್ಲೇಖನೀಯ.


     
  ದಾವಣಗೆರೆಯ ಕಲಾವಿದ ಶ್ರೀಯುತ ಶಿವಶಂಕರ ಸುತಾರ್ ರವರ ಕಲಾಕೃತಿಯೂ  ಪ್ರದರ್ಶಿತವಾಯಿತು ಎಂಬುದೂ ಕೂಡ ಉಲ್ಲೇಖನೀಯ ಅಂಶ. ಬೆಂಗಳೂರು, ಮುಂಬೈ,ದೆಹಲಿ,ಕೊಲ್ಕೊತ್ತಾ ದಂತಹ ಮಹಾನಗರಗಳಲ್ಲಿ ನೆಲೆಸಿರುವ ಕಲಾವಿದರುಗಳಿಗಾದರೆ ಯಾವ ಪ್ರಮಾಣದ(ಅಳತೆಯ)ಕಲಾಕೃತಿ ರಚಿಸಬೇಕೋ ಅದಕ್ಕೆ ತಕ್ಕಂತೆ ಸೂಕ್ತ ಪರಿಕರಗಳು ಸುಲಭವಾಗಿ ಸಿಗುತ್ತವೆ. ಆದರೆ ದಾವಣಗೆರೆ, ಹಾವೇರಿ,ಬಳ್ಳಾರಿಯಂತಹ ಪಟ್ಟಣದಲ್ಲಿ ನೆಲೆಸಿರುವ ಕಲಾವಿದರುಗಳು ಸೂಕ್ತ ಪರಿಕರಗಳು ಸ್ಥಳೀಯವಾಗಿ ಸಿಗುವುದು ಕಷ್ಟ ಸಾಧ್ಯ/ದುರ್ಲಭವೇ ಆಗಿರುವುದರಿಂದ ತಮ್ಮ ಅಪೇಕ್ಷಿತ /ಉದ್ದೇಶಿತ ಕೃತಿ ರಚನೆಗೆ ಬೇಕಾದ ಪರಿಕರಗಳನ್ನು ಈ ಮೇಲೆ ಹೆಸರಿಸಿದ ಮಹಾನಗರಿಗಳಿಂದ ತರಿಸಿಕೊಳ್ಳಬೇಕಾಗುತ್ತದೆ.ಅದುವರೆಗೂ ಇಂತಹ ಮಧ್ಯಮ ದರ್ಜೆಯ ನಗರಗಳ ಕಲಾವಿದ/ದೆ ತಮ್ಮೊಳಗಿನ  ಕಲಾಸ್ಫೂರ್ತಿಯನ್ನು ಜಾಗೃತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷ ವಾಗಿ 8ಅಡಿ×4ಅಡಿ ಯಂತಹ ವಿಶಾಲವಾದ ಅವಕಾದಲ್ಲಿ ವುಡ್ ಕಟ್ ಮಾಧ್ಯಮ ದಂತಹ ಕೃತಿ ಸೃಷ್ಟಿಸಬೇಕಾದರೆ, ಸಮಯ ,ಪರಿಸರ, ಸ್ಥಳ ಇತ್ಯಾದಿ ಅನೇಕ ಮಗ್ಗಲುಗಳ ಹೊಂದಾಣಿಕೆ ಮಾಡಿಕೊಂಡು  ಕಾರ್ಯಪ್ರವೃತ್ತರಾಗಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ  ಶಿವಶಂಕರ ಸುತಾರ್ ರವರ ಈ ಸಾಧನೆ ಗಮನಾರ್ಹವಾದುದಾಗುತ್ತದೆ.

   'ನನ್ನ ಗುರುಗಳಾದ ಶಶಿಕಾಂತ ಮಾಶಾಳಕರ್ ಸರ್ ಒಂದು ದಿನ ನನಗೆ ಪೋನ್ಮಾಡಿ,'ನೀನು ಅರ್ಪಿತಾ ಜಿ.ಆರ್ ಮೊದಲಾದವರು ಆಯೋಜಿಸುತ್ತಿರುವ ವುಡ್ ಕಟ್ ಮಾಧ್ಯಮದ ಪ್ರಿಂಟ್ಗಳ ಪ್ರದರ್ಶನಕ್ಕೆ 8ಅಡಿ×4ಅಡಿ ಅಳತೆಯ ವುಡ್ ಕಟ್ ಪ್ರಿಂಟ್ ರಚಿಸಬೇಕು'ಎಂದು  ಹೇಳಿದಾಕ್ಷಣ ಕೆಲವು ಕ್ಷಣಗಳ ಕಾಲ ದಿಗಿಲುಗೊಂಡೆ.ಏಕೆಂದರೆ ಕನಸು ಮನಸಿನಲ್ಲಿಯೂ ಊಹಿಸಿರದ/ಕಲ್ಪಿಸಿರದ ಬೃಹತ್ ಅಳತೆಯಲ್ಲಿ ವುಡ್ ಕಟ್ ಪ್ರಿಂಟ್ ತೆಗೆಯುವ  ಸವಾಲು ನನ್ನ ಕಣ್ಣೆದುರು ಬಂದಿತು....'ಎನ್ನುತ್ತಾ ಆ ಪ್ರದರ್ಶನಕ್ಕೆ ಕೃತಿ ರಚಿಸುವಾಗ ಎದುರಾದ ಛಾಲೆಂಜ್ಗಳನ್ನು ವಿವರಿಸುವುದು ಹೀಗೆ--'ನನ್ನ ಮನಸ್ಸಿನಲ್ಲಿ ಈ ಕುರಿತು ಕಾನ್ಸೆಪ್ಟ್ ಸ್ಪಷ್ಟವಾಗಲು ಸುಮಾರು ನಾಲ್ಕಾರು ದಿವಸಗಳೇ ಬೇಕಾದವು.ಅವುಗಳನ್ನು ಒಂದಿಷ್ಟು ಕೀ ಸ್ಕೆಚ್ ಗಳಲ್ಲಿ ದಾಖಲಿಸಿಕೊಂಡು,ನನ್ನ ಮನಸ್ಸಿಗೆ ತೃಪ್ತಿ ತಂದ ಒಂದು ಸ್ಕೆಚ್ ಮಾಧ್ಯಮದ ಸ್ಪಷ್ಟವಾಗಿ ರೇಖಿಸಿದೆ. ಉತ್ತಮವಾದ ಪ್ರಿಂಟ್ ಬರಬೇಕೆಂದರೆ ಪ್ಯಾಬ್ರಿಯಾನೋ120ಜಿ ಎಸ್ ಎಂ ಕಾಗದವೇ ಬೇಕು.ಅದು ದಾವಣಗೆರೆಯಲ್ಲಿ ಸಿಗದು.ಬೆಂಗಳೂರಿನ ಭಾಸ್ಕರ್&ಭಾಸ್ಕರ್ ಅಂಗಡಿಯಲ್ಲಿ ಆ ಕಾಗದ ಲಭ್ಯ, ಸಾಲದ್ದಕ್ಕೆ ಅದು ಲಾಕ್ ಡೌನ್ ದಿನಗಳು, ಮುಕ್ತ ಸಂಚಾರಕ್ಕೆ ಅವಕಾವಿಲ್ಲದ ಅವಧಿ, ಅದೂಅಲ್ಲದೆ ಭಾಸ್ಕರ್&ಭಾಸ್ಕರ್ ಅಂಗಡಿಯ ಪ್ರಮುಖ ವ್ಯಕ್ತಿ ನಿಧನರಾಗಿದ್ದರಿಂದ(ಅದೇ ದಿನಗಳಲ್ಲಿ)ಒಂದು ತಿಂಗಳ ಕಾಲ ಅದು ಮುಚ್ಚಲ್ಪಟ್ಟಿತ್ತು.ಅದು ಮತ್ತೆ ತೆರೆದ ನಂತರವೇ ಆ ಕಾಗದ ಅಲ್ಲಿಂದ ಖರೀದಿಸಬೇಕಾಯ್ತು.ಇಷ್ಟೊಂದು ದೊಡ್ಡ ಅಳತೆಯ ಪ್ರಿಂಟ್ ತೆಗೆಯಲು ವಿಶಾಲವಾದ ಸ್ಥಳಾವಕಾಶ  ತೀರಾ ಅಗತ್ಯ. ನನ್ನ ಸುದೈವ,ನಾನು ಬೋಧನಾ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿಗಳು,ಕಛೇರಿ ನೌಕರರು, ನನ್ನ ಸಹೋದ್ಯೋಗಿ ಮಿತ್ರರು&ವಿದ್ಯಾರ್ಥಿ ಬಳಗದಿಂದ ಆ ವಿಷಯದಲ್ಲಿ ವಿಶೇಷ ಸಹಕಾರ ಒದಗಿಬಂತು. ಆ ಕಾರಣದಿಂದಾಗಿಯೇ ಉತ್ತಮ ಮಟ್ಟದ ಪ್ರಿಂಟ್ ಪಡೆಯಲು ಸಾಧ್ಯವಾಯ್ತು,ಅವರೆಲ್ಲರಿಗೆ ಕೃತಜ್ಞತೆ ಹಳಲೇಬೇಕು....'ಎಂದು ವಿವರಿಸುತ್ತಾರೆ ,ಕಲಾವಿದ ಶಿವಶಂಕರ ಸುತಾರ್ ರವರು.   




   ಕೃತಿ ವಿಶೇಷತೆ
    ------------------ 
    ಸಮಗ್ರ ಕೃತಿ ಮೋನೋಕ್ರೋಂ (ಏಕವರ್ಣ)ದಲ್ಲಿ ಇದ್ದು, ಅವಕಾಶದಲ್ಲಿ ಸಾಂದರ್ಭಿಕ ಚಿತ್ರ ಮಾದರಿಯಲ್ಲಿ ಕೋವಿಡ್-19ಸಾಂಕ್ರಾಮಿಕದಿಂದ ವ್ಯಕ್ತಿಗತವಾಗಿ ಮತ್ತು ಸಾಮುದಾಯಿಕವಾಗಿ ಎದುರಾದ ಸಂಕಟಗಳನ್ನು, ತಲ್ಲಣಗಳನ್ನು ಅಭಿವ್ಯಕ್ತಿಸಲಾಗಿದೆ.ಕಲಾವಿದರು ಕಪ್ಪು ಬಣ್ಣವನ್ನೇ ಈ ಕೃತಿಗೆ ಆಯ್ಕೆ ಮಾಡಿಕೊಂಡಿದುದು ಇವರ 'ಸಮಯಪ್ರಜ್ಞೆ'ಗೆ ದ್ಯೋತಕ ಎನ್ನಬಹುದು(ಕಪ್ಪು ಬಣ್ಣ ಪ್ರಿಂಟ್ ಮಾಧ್ಯಮಕ್ಕೆ ಹೇಳಿ ಮಾಡಿಸಿದ್ದು ).ಕೃತಿಯಲ್ಲಿ ಮೂಡಿಸಿದ ಮಾಸ್ಕ ಧರಿಸಿದ ಪುರುಷ ಮುಖ ಪೆನ್ಸಿಲ್ ಶೇಡಿಂಗ್ ಅನ್ನು ನೆನಪಿಸುವ ರೀತಿಯಲ್ಲಿ ನಾಜೂಕಾಗಿ, ಕಲಾತ್ಮಕವಾಗಿ, ವಿವರವಾಗಿ ನಿರೂಪಿತವಾಗಿದ್ದು ಶಿವಶಂಕರ ಸುತಾರ್ ರವರು ವುಡ್ ಕಟ್ ಮಾಧ್ಯಮದ ಮೇಲೆ ಹೊಂದಿರುವ ಪರಿಣತಿಗೆ ಸಾಕ್ಷೀಭೂತವಾದ ರೂಪವಾಗಿಯೂ ತೋರ್ಪಡಿಕೆಯಾಗಿದೆ. ದಿಗಂತದತ್ತ ಮುಖಮಾಡಿರುವ ಹಲ್ಲಿಗಳು ಈ ಕಲಾವಿದರ 'ವೈಯಕ್ತಿಕ ಶೈಲಿಯ ಸಂಕೇತ'ಗಳಂತೆ ಮಾತ್ರ ತೋರ್ಪಡಿಕೆಯಾಗದೆ,ಸಮಸ್ತ ಜೀವಸಂಕುಲದ ವ್ಯಾಕುಲತೆಯ ಪ್ರಾತಿನಿಧಿಕ ರೂಪಗಳಾಗಿಯೂ ಕಂಡುಬರುತ್ತವೆ.ಇಡಿಯ ಕೃತಿಯನ್ನು ಗಮನಿಸಿದರೆ -ಗಮನಕ್ಕೆ ಬರುವ ಅಂಶವೆಂದರೆ-ಸೃಜನಶೀಲತೆಯನ್ನು ,ವೈಯಕ್ತಿಕ ಛಾಪನ್ನು ಪ್ರಕಟಪಡಿಸುತ್ತಲೇ ರೂಪ ರಂಜಕತೆಯತ್ತಲೂ ಲಕ್ಷ್ಯೀಕರಿಸಲಾಗಿದೆ.ಮಾಧ್ಯಮದ ಮಿತಿಗೆ ಅನುಗುಣವಾಗಿ  ಸನ್ನಿವೇಶದ ಭೀಕರತೆಯನ್ನು ಹಲವು ಆಯಾಮಗಳಲ್ಲಿ ಸೃಜನಶೀಲ ಮತ್ತು ಕಲಾತ್ಮಕ  ವೈಖರಿಯ ಮೂಲಕ ಕೃತಿಯಲ್ಲಿ ಹರಳುಗಟ್ಟಿಸಿದ್ದು ಈ ಕಲಾವಿದರ 'ಸನ್ನಿವೇಶವನ್ನು ಹತ್ತು ಹಲವು ನಿಟ್ಟಿನಲ್ಲಿ ಕಲ್ಪಿಸಿ/ಅರ್ಥೈಸಿ ಮಾಧ್ಯಮದ ಸ್ವಭಾವಕ್ಕೆ ತಕ್ಕಂತೆ ಪ್ರಸ್ತುತ ಪಡಿಸಬಲ್ಲ ನೈಪುಣ್ಯತೆ 'ಗೆ ನಿದರ್ಶನ ಎನ್ನಬಹುದು. ಆಕಾರಗಳಲ್ಲಿ ನವಿರಾದ, ನಿಖರವಾದ ಕೊರೆತಗೈದು ,ಅಷ್ಟೇ ಪ್ರಸ್ಫುಟ ಪ್ರಿಂಟ್ ಅನ್ನು ,ಬದಿಯಲ್ಲಿರುವ ಅವಕಾಶವನ್ನು ಶುಭ್ರವಾಗಿರಿಸಿಕೊಂಡು ಈ ಬೃಹತ್ ಅಳತೆಯಲ್ಲಿ ಪಡೆದ ಶಿವಶಂಕರ ಸುತಾರ್ ರವರ ಪ್ರಬುದ್ಧತೆಗೆ ತಲೆದೂಗಲೇಬೇಕು.


       ಇಂತಹ ಅನೇಕ ಪ್ರತಿಭಾವಂತ ಮುದ್ರಣ (ಗ್ರಾಫಿಕ್)ಕಲಾವಿದರನ್ನು ಪರಿಚಯಿಸಿದ "ಅನಿಶ್ಚಿತತೆ", ಈ ಪ್ರದರ್ಶನದ ಮೂಲಕ  ಕನ್ನಡ ನಾಡಿನಲ್ಲಿ ಕೊರೋನಾ ಹಾವಳಿಯ ನಡುವೆಯೂ ಉತ್ಸಾಹ ಕಳೆದುಕೊಳ್ಳದ,ಬೃಹತ್ ಸ್ಟುಡಿಯೋ ವ್ಯವಸ್ಥೆಯಡಿಯಲ್ಲಿ ಮಾತ್ರ ಸೃಷ್ಟಿಸಬಲ್ಲ ಇಂತಹ ಮಾಧ್ಯಮಗಳಲ್ಲಿ ಯೂ ಅದ್ಯಾವ ಕೊರತೆ ಯನ್ನೂ ಲೆಕ್ಕಿಸದೇ ಸಮರ್ಥವಾಗಿ ಕಲಾ ಸೃಷ್ಟಿಗೈಯಬಲ್ಲ  ಸಾಮರ್ಥ್ಯ ಉಳ್ಳ ಕಲಾ ಪೀಳಿಗೆ ಇದೆ'ಎಂಬುದನ್ನು ಸಾಬೀತು ಪಡಿಸಿದ  ಶ್ರೇಯಸ್ಸಿಗೆ ಪಾತ್ರವಾಗಿದೆ .ಜೊತೆಗೆ ಶಿವಶಂಕರ ಸುತಾರ್ ರಂತಹ 'ವಿನಮ್ರ ಶ್ರಮಿಕ ಕಲಾವಿದರನ್ನು ಈ ಅಭೂತಪೂರ್ವ ಪ್ರದರ್ಶನ ಮೂಲಕ ಹೈಲೈಟ್ ಮಾಡುವ ಮೂಲಕ ಸಾರ್ಥಕ ಶ್ರಮಗೈದಿದೆ ಎಂದರೆ ಅತಿಶಯವಲ್ಲ.


 ಲೇಖನ---ದತ್ತಾತ್ರೇಯ  ಎನ್. ಭಟ್, ದಾವಣಗೆರೆ.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img