logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಸಯೀದ್ ಜಾಫ್ರಿ On birth anniversary of great actor Saeed Jaffrey
Published By: Police World News
Last Updated Date:  10-Jan-2022
ಕಲಾಸುದ್ದಿ

ಸಯೀದ್ ಜಾಫ್ರಿ ಒಬ್ಬ ಮಹಾನ್ ಚಲನಚಿತ್ರ ಕಲಾವಿದ. ಇಂದು ಅವರ ಜನ್ಮದಿನ. ಅವರ ಕುರಿತು ಸಿ. ಪಿ. ರವಿಕುಮಾರ್ ಅವರು ಬರೆದ ಮನೋಜ್ಞ ಲೇಖನವನವನ್ನು ಮೊದಲು ಇಲ್ಲಿ ಹೇಳಿ ನಂತರ ಅವರ ಕೆಲವೊಂದು ವಿವರ ಹೇಳುತ್ತೇನೆ.

ಸಯೀದ್ ಜಾಫ್ರಿ ಎಂದಾಗ ನೆನಪಾಗುವುದು ಅವರ ವಿಶಿಷ್ಟವಾದ ಧ್ವನಿ ಮತ್ತು ಮಧುರ ಸಂಭಾಷಣಾ ಶೈಲಿ. "ಶತರಂಜ್ ಕೇ ಖಿಲಾಡಿ" ಚಿತ್ರದಲ್ಲಿನ ಅವರ ಪಾತ್ರ ಅವಿಸ್ಮರಣೀಯ. ಅವಧ್ ಪ್ರಾಂತದಲ್ಲಿ ನವಾಬನಾದ ವಾಜಿದ್ ಅಲಿ ಶಾಹ್ ಒಬ್ಬ ವಿಲಾಸಿ ರಾಜ. ಅವನಿಗೆ ಮೂರು ಹೊತ್ತೂ ಶಾಯರಿ-ನೃತ್ಯ-ಗೀತೆಗಳಲ್ಲೇ ಮೋಹ. ಸ್ವಂತ ಕವಿ ಕೂಡ! ಯಥಾ ರಾಜಾ ತಥಾ ಪ್ರಜಾ! ಜನರಿಗೂ ಇಂಥದ್ದೇ ಶೋಕಿಗಳು. ಈ ಚಿತ್ರದಲ್ಲಿ ಸಜ್ಜದ್ ಅಲಿ ಮತ್ತು ರೋಷನ್ ಅಲಿ ಎಂಬ ಇಬ್ಬರು ಶ್ರೀಮಂತರ ಪಾತ್ರಗಳು ಬರುತ್ತವೆ. ಸಯೀದ್ ಜಾಫ್ರಿ ಮತ್ತು ಸಂಜೀವ್ ಕುಮಾರ್ ಈ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಶ್ರೀಮಂತರಿಗೆ ಶತರಂಜ್ ಆಡುವ ಶೋಕಿ. ಅದರಲ್ಲೇ ಮೂರು ಹೊತ್ತೂ ಮಗ್ನರಾಗಿರುವ ಇವರಿಗೆ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವೇ ಇರುವುದಿಲ್ಲ. ಒಬ್ಬ ಶ್ರೀಮಂತನ ಹೆಂಡತಿ ವಿರಹದಲ್ಲಿ ಬೇಯುತ್ತಾ ಹುಚ್ಚಿಯಂತಾಗಿದ್ದಾಳೆ. ಇನ್ನೊಬ್ಬನ ಹೆಂಡತಿ ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ! ಇತ್ತ ಈಸ್ಟ್ ಇಂಡಿಯಾ ಕಂಪನಿ ಅವಧ್ ಮೇಲೆ ಕಣ್ಣಿಟ್ಟಿದೆ. ಶತ್ರುಗಳು ಬಂದಾಗ ವಾಜಿದ್ ಅಲಿ ಶಾಹ್ ಯಾವುದೇ ಹೋರಾಟವಿಲ್ಲದೆ ತನ್ನ ತಲೆಯ ಮೇಲಿನ ಮುಕುಟವನ್ನು ಎತ್ತಿ ಕೆಳಕ್ಕಿಟ್ಟುಬಿಡುತ್ತಾನೆ. ಯುದ್ಧಕ್ಕೆ ಹೆದರಿದ ಶ್ರೀಮಂತರು ಓಡಿ ಒಂದು ಸ್ಮಶಾನದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅಲ್ಲೂ ಅವರಿಗೆ ಶತರಂಜ್ ಶೋಕಿ ಬಿಡದು. ತಮ್ಮ ಪಗಡೆ ಹಾಸನ್ನು ಜೊತೆಗೇ ತೆಗೆದುಕೊಂಡು ಹೋಗುತ್ತಾರೆ! ಆಟದಲ್ಲಿ ಮೋಸ ಮಾಡಿದನೆಂಬ ಕಾರಣಕ್ಕಾಗಿ ಇಬ್ಬರಿಗೂ ಜಗಳವಾಗುತ್ತದೆ. ಇದಕ್ಕಾಗಿ ಒಬ್ಬರನ್ನೊಬ್ಬರು ಖೂನಿ ಮಾಡಲೂ ಅವರು ತಯಾರು! ಆದರೆ ತಮ್ಮ ಜೊತೆ ಪಗಡೆ ಆಡಲಾದರೂ ಯಾರಾದರೂ ಬೇಕಲ್ಲ! ಹೀಗಾಗಿ ಪರಸ್ಪರರನ್ನು ಕ್ಷಮಿಸುತ್ತಾರೆ. ಸತ್ಯಜಿತ್ ರೇ ಅವರ ನಿರ್ದೇಶನದಲ್ಲಿ ಸಂಜೀವ್ ಕುಮಾರ್ ಮತ್ತು ಸಯೀದ್ ಜಾಫ್ರಿ ಅವರ ಅಭಿನಯ ಮನೋಜ್ಞವಾಗಿದೆ. ಈ ಪಾತ್ರಗಳನ್ನು ಕಂಡು ನಗು, ಕೋಪ, ಹೇಸಿಕೆ, ಅನುಕಂಪ ಎಲ್ಲವೂ ಉಂಟಾಗುತ್ತದೆ! ಪ್ರೇಮ್ ಚಂದ್ ತಮ್ಮ ಕತೆಯನ್ನು ಇವರಿಬ್ಬರಿಗಾಗಿಯೇ ಬರೆದರು ಎಂಬಷ್ಟು ಸಹಜವಾಗಿ ಈ ನಟರು ಅಭಿನಯಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಜೆನೆರಲ್ ಊಟ್ರಮ್ ಪಾತ್ರದಲ್ಲಿ ರಿಚರ್ಡ್ ಆಟೆನ್ ಬರೋ ನಟಿಸಿದ್ದಾರೆ.

ಸಯೀದ್ ಜಾಫ್ರಿ ಅವರು ಹಲವಾರು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದ ಮ್ಯಾನ್ ಹೂ ವುಡ್ ಬಿ ಕಿಂಗ್ ಎಂಬುದು ರಡ್ಯಾರ್ಡ್ ಕಿಪ್ಲಿಂಗ್ ಬರೆದ ಕಥೆಯನ್ನು ಆಧರಿಸಿದ ಚಿತ್ರ. ಇದರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಲ್ಲಿ ಕೆಲಸಕ್ಕಿದ್ದ ಇಬ್ಬರು ಮೋಸಗಾರ ಸೈನಿಕರ ಕಥೆ ಬರುತ್ತದೆ. ಇವರು ಯಾವುದೋ ಕೆಟ್ಟ ಕೆಲಸ ಮಾಡಿ ತಪ್ಪಿಸಿಕೊಂಡು ಓಡಿ ಹೋಗುತ್ತಾರೆ. ಅವರು ಉತ್ತರ ಭಾರತದ ಒಂದು ಬೆಟ್ಟಪ್ರದೇಶದ ರಾಜ್ಯಕ್ಕೆ ಬಂದು ಸೇರುತ್ತಾರೆ. ಇವರಲ್ಲಿ ಒಬ್ಬನನ್ನು (ಶಾನ್ ಕಾನರಿ) ಇಲ್ಲಿಯ ಜನ ಸೂರ್ಯ ಭಗವಂತನ ಅವತಾರವೆಂದು ಸ್ವೀಕರಿಸುತ್ತಾರೆ. ಈ ನಾಲಾಯಕ್ಕುಗಳಿಗೆ ಎಲ್ಲಿಲ್ಲದ ಆದರ-ಸತ್ಕಾರಗಳು ನಡೆಯುತ್ತವೆ. ಮುಂದೆ ಇವರ ಗುಟ್ಟು ರಟ್ಟಾದಾಗ ಅದೇ ಮುಗ್ಧ ಜನ ಇವರನ್ನು ಒಂದು ಹಗ್ಗದ ಸೇತುವೆಯ ಮೇಲೆ ತಪ್ಪಿಸಿಕೊಂಡು ಹೋಗುವಾಗ ಸೇತುವೆಯನ್ನು ಕಡಿದುಹಾಕುತ್ತಾರೆ. ಶಾನ್ ಕಾನರಿಯ ಜೊತೆಗಾರನಾಗಿ ಸಯೀದ್ ಜಾಫ್ರಿಯವರ ಅಭಿನಯ ನೆನಪಿನಲ್ಲಿ ನಿಲ್ಲುವಂಥದು.

"ಮೈ ಬ್ಯೂಟಿಫುಲ್ ಲಾಂಡ್ರೆಟ್" ಎಂಬುದು ಹನೀಫ್ ಕುರೇಷಿ ಅವರ ಕಥೆಯನ್ನು ಆಧರಿಸಿದ ಚಿತ್ರ. ಇಂಗ್ಲೆಂಡಿನಲ್ಲಿ ನೆಲೆಸಿದ ಪಾಕೀಸ್ತಾನ್ ಮೂಲದ ಒಂದು ಮುಸ್ಲಿಂ ಸಂಸಾರದ ಕಥೆ ಇದರಲ್ಲಿ ಬರುತ್ತದೆ. ಒಮರ್ ಅಲಿ ಎಂಬ ನವಯುವಕನ ತಂದೆ ಹಾಸಿಗೆ ಹಿಡಿದಿದ್ದಾನೆ. ಅಲಿಯ ಚಿಕ್ಕಪ್ಪ ಒಬ್ಬ ಇಂಗ್ಲಿಷ್ ಹೆಣ್ಣನ್ನು ರಖಾವಾಗಿ ಇಟ್ಟುಕೊಂಡಿದ್ದಾನೆ. ಅವನು ತನ್ನ ವಹಿವಾಟಿನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾನೆ. ಆಲಿಗೆ ಅವನು ತನ್ನ ಗ್ಯಾರೇಜಿನಲ್ಲಿ ಕಾರು ತೊಳೆಯುವ ಕೆಲಸಕ್ಕಿಟ್ಟುಕೊಳ್ಳುತ್ತಾನೆ. ಮುಂದೆ ಅಲಿ ಮತ್ತು ಅವನ ಬ್ರಿಟಿಷ್ ಸ್ನೇಹಿತ ಇಬ್ಬರೂ ಸೇರಿ ಚಿಕ್ಕಪ್ಪನ ಒಂದು ಹಳೆಯ ಲಾಂಡ್ರಿಯನ್ನು ಪುನರುಜ್ಜೀವನಗೊಳಿಸಿ ನಡೆಸುತ್ತಾರೆ. ಆದರೆ ಬ್ರಿಟಿಷ್ ಸ್ನೇಹಿತನ ಕೆಲವು ಬ್ರಿಟಿಷ್ ಸಂಗಡಿಗರಿಗೆ ಅವನು ಒಬ್ಬ ಪಾಕೀಸ್ತಾನಿ ಹುಡುಗನೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಸಹಿಸದೆ ಲಾಂಡ್ರಿಯನ್ನು ಧ್ವಂಸ ಮಾಡುತ್ತಾರೆ. ಸಯೀದ್ ಜಾಫ್ರಿ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಲಂಡನ್ ನಗರದಲ್ಲಿ ನೆಲಸಿದ ಭಾರತೀಯ ಅಥವಾ ಪಾಕೀಸ್ತಾನಿ ಮೂಲದ ನಿವಾಸಿಗಳನ್ನು ಕುರಿತು ಮುಂದೆ ಅನೇಕ ಚಿತ್ರಗಳು ಬಂದವು. ಸಯೀದ್ ಜಾಫ್ರಿ ಅವರು ಮಾಡಿದ ಪಾತ್ರಗಳನ್ನು ನೆನಪಿಸುವ ಪಾತ್ರಗಳನ್ನು ನಟ ಓಂ ಪುರಿ ಮಾಡಿದರು. ಇಬ್ಬರೂ ಸಮರ್ಥ ನಟರು. ಓಂ ಪುರಿ ಅವರದ್ದು ತೀಕ್ಷ್ಣ ಅಭಿನಯವಾದರೆ ಜಾಫ್ರಿ ಅವರದ್ದು ಹೆಚ್ಚು ಸೂಕ್ಷ್ಮ.

ಸಯೀದ್ ಜಾಫ್ರಿ ಅವರು ತಮ್ಮ ಡೈರಿಯ ಪುಟದಲ್ಲಿ ಬರೆದಿದ್ದಾರೆ ಎನ್ನಲಾದ ಕಥೆ ಫೇಸ್ ಬುಕ್ಕಿನಲ್ಲಿ ಪ್ರಸಾರವಾಯಿತು. ಈ ಕಥೆಯಲ್ಲಿ ಅವರು ತಮ್ಮ ಮೊದಲ ಹೆಂಡತಿ ಮೆಹಾರುನ್ನೀಮಾ ಬಗ್ಗೆ ಬರೆದಿದ್ದಾರೆ. ಈಕೆಯನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿ ಜಾಫ್ರಿ ಮದುವೆಯಾದರು. ಜಾಫ್ರಿ ಅವರಿಗೆ ಉಡುಗೆ-ತೊಡುಗೆ ಮಾತು-ಕತೆ ಎಲ್ಲದರಲ್ಲೂ ಬ್ರಿಟಿಷರಂತೆ ಇರಬೇಕು ಎನ್ನುವ ಶೋಕಿ. ಅವರ ಪತ್ರಿ ಮೆಹರುನ್ನೀಮಾಗೆ ಇದು ಸಾಧ್ಯವಾಗಲಿಲ್ಲ. ಆಕೆಗೆ ತಾನಾಯಿತು, ತನ್ನ ಮನೆಯಾಯಿತು, ತನ್ನ ಮೂರು ಮಕ್ಕಳಾದರು. ಈಕೆಯ ಹಳ್ಳಿತನದಿಂದ ಬೇಸತ್ತು ಜಾಫ್ರಿ ಆಕೆಯನ್ನು ತ್ಯಜಿಸಿ ಜೆನಿಫರ್ ಎಂಬ ಬ್ರಿಟಿಷ್ ಯುವತಿಯನ್ನು ಮದುವೆಯಾದರು. ಆದರೆ ಕ್ರಮೇಣ ತಮ್ಮ ಹೊಸಪತ್ನಿಯಲ್ಲಿ ಅವರು ಮೆಹರುನ್ನೀಮಾಳ ಭಯ-ಭಕ್ತಿ-ಸಮರ್ಪಣ ಭಾವವನ್ನು ಕಾಣಲು ಬಯಸಿದರು! ಅವರ ದ್ವಿತೀಯ ಪತ್ನಿ ಅವರು ಬಯಸಿದಂತೆ ಶೋಕಿಯಾಗಿದ್ದರೂ ಅವರ ಬೇಕು-ಬೇಡಗಳನ್ನು ಪೂರೈಸುವುದರಲ್ಲಿ ಇಚ್ಛೆಯುಳ್ಳವರಾಗಿರಲಿಲ್ಲ. ಒಂದು ದಿನ ಪತ್ರಿಕೆಯಲ್ಲಿ ಅವರಿಗೆ ತಮ್ಮ ಮೊದಲ ಹೆಂಡತಿ ಮೆಹರುನ್ನೀಮಾ ಅವರ ಫೋಟೋ ಕಂಡಿತು! ಆಕೆ ಸಂಪೂರ್ಣ ಬದಲಾಗಿದ್ದಳು. ಈಗ ಆಕೆಯ ಹೆಸರು ಮಧುರ್ ಜಾಫ್ರಿ ಎಂದಿತ್ತು. ಆಕೆ ಪ್ರಸಿದ್ಧ ಬಾಣಸಿಗಳಾಗಿದ್ದಳು, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಳು! ಆಕೆ ಬೇರೊಬ್ಬರನ್ನು ಮದುವೆಯಾಗಿದ್ದಳು ಕೂಡಾ. ಸಯೀದ್ ಜಾಫ್ರಿ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆಕೆ ಅವರನ್ನು ನೋಡಲು ನಿರಾಕರಿಸಿದಳು! "ನನ್ನ ಮಕ್ಕಳು ಆಕೆಯ ಬಗ್ಗೆ ಹೇಳಿದ್ದನ್ನು ನಾನೆಂದೂ ಮರೆಯಲಾರೆ. ಅವರ ಎರಡನೇ ತಂದೆ ಅವರ ತಾಯಿಯನ್ನು ನಿಜಕ್ಕೂ ಪ್ರೀತಿಸುತ್ತಿದ್ದ. ಆಕೆಯನ್ನು ಇದ್ದ ಹಾಗೇ ಸ್ವೀಕರಿಸಿದ. ನನ್ನ ಹಾಗೆ ಆಕೆಯನ್ನು ಬದಲಾಯಿಸಲು ಪ್ರಯತ್ನಿಸಲಿಲ್ಲ. ಆತನ ಪ್ರೀತಿಯ ಛಾಯೆಯಲ್ಲಿ ಆಕೆ ಒಬ್ಬ ಆತ್ಮವಿಶ್ವಾಸವುಳ್ಳ ಮಹಿಳೆಯಾಗಿ ರೂಪುಗೊಂಡಳು. ನಾನಾದರೋ ನನ್ನದೇ ಸ್ವಾರ್ಥದಲ್ಲಿದ್ದು ಆಕೆಯನ್ನು ಪ್ರೀತಿಸಲೇ ಇಲ್ಲ. ಯಾರಿಗೆ ತಮ್ಮಲ್ಲೇ ಹೆಚ್ಚು ಮೋಹವೋ ಅವರು ಬೇರೆಯವರನ್ನು ಪ್ರೀತಿಸಲಾರರು," ಎಂದು ಸಯೀದ್ ಜಾಫ್ರಿ ಬರೆದುಕೊಂಡಿದ್ದಾರೆ. ಹೀಗೆ ತಮ್ಮ ಜೀವನವನ್ನು ತೆರೆದಿಡುವವರು ಎಷ್ಟು ಜನರಿದ್ದಾರೆ? ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವವರಂತೂ ಇಲ್ಲವೇ ಇಲ್ಲ.

ಜಾಫ್ರಿ ಅವರ ಸಾವಿನಲ್ಲಿ ಒಬ್ಬ ಉತ್ತಮ ನಟನಷ್ಟೇ ಅಲ್ಲ ಒಬ್ಬ ಉತ್ತಮ ಮನುಷ್ಯನನ್ನೂ ಜಗತ್ತು ಕಳೆದುಕೊಂಡಿತು.

ಸಯೀದ್ ಜಾಫ್ರಿ 1929ರ ಜನವರಿ 8ರಂದು ಪಂಜಾಬಿನ ಮಲೇರ್‍ಕೋಟ್ಲ ಎಂಬಲ್ಲಿ ಜನಿಸಿದರು. ಅಲಹಾಬಾದ್ನಲ್ಲಿ ಬಿಎ, ಎಂಎ ಪದವಿಧರರಾದರು. ಆಕಾಶವಾಣಿಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಜಾಫ್ರಿ, ನಂತರ ಅಮೆರಿಕದ ದಿ ಕ್ಯಾಥೋಲಿಕ್‌ ವಿಶ್ವವಿದ್ಯಾಲಯದಲ್ಲಿ ಫುಲ್‌ಬ್ರೈಟ್‌ ಸ್ಕಾಲರ್ ಆಗಿ ಆಯ್ಕೆಯಾಗಿ ನಾಟಕ ವಿಷಯವನ್ನು ಅಧ್ಯಯನ ಮಾಡಿದರು. ಶೇಕ್ಸ್‌ಪಿಯರ್‌ನ ನಾಟಕಗಳನ್ನು ಅಮೆರಿಕದಲ್ಲಿ ಪ್ರದರ್ಶಿಸಿದ ಮೊದಲ ಭಾರತೀಯ ಎಂಬ ಅಗ್ಗಳಿಕೆ ಅವರದಾಗಿತ್ತು. 100ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಜಾಫ್ರಿ, ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ‘ಶತ್‌ರಂಜ್ ಕೆ ಖಿಲಾಡಿ’ ಅಲ್ಲದೆ ‘ಚಷ್ಮೆ ಬದ್ದೂರ್’, ‘ಮಾಸೂಮ್‌’, ‘ಕಿಸೀ ಸೆ ನಾ ಕೆಹನಾ’, ‘ಮಂಡಿ’, ‘ಮಷಾಲ್‌’, ‘ರಾಮ್ ತೇರಿ ಗಂಗಾ ಮೈಲಿ’, ‘ರಾಮ್‌ ಲಖನ್‌’, ‘ಅಜೂಬಾ’, ‘ಹೆನ್ನಾ’ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿ ಚಿತ್ರಗಳಷ್ಟೇ ಅಲ್ಲ, ಹಾಲಿವುಡ್‌ ನಟರಾದ ಸೀನ್ ಕಾನರಿ, ಮೈಕೇಲ್ ಕೇನ್, ರೋಶನ್ ಸೇಥ್, ಜೇಮ್ಸ್ ಐವರಿ, ರಿಚರ್ಡ್ ಅಟೆನ್ಬರೋ ಮತ್ತು ಡೇನಿಯಲ್ ಡೇ-ಲೆವಿಸ್ ಅವರೊಂದಿಗೆ ಇಂಗ್ಲಿಷ್‌ ಚಿತ್ರಗಳಲ್ಲೂ ಜಾಫ್ರಿ ಅಭಿನಯಿಸಿದ್ದರು. ‘ಗಾಂಧಿ’ ಚಿತ್ರದಲ್ಲೂ ಸರ್ದಾರ್ ಪಟೇಲರಾಗಿ ಅವರ ಅಭಿನಯ ಸ್ಮರಣೀಯ. 'ದಿ ಮ್ಯಾನ್‌ ಹೂ ವುಡ್‌ ಬಿ ಕಿಂಗ್, ’ ಡೆತ್ ಆನ್‌ ದಿ ನೈಲ್‌’, ‘ದಿ ಜ್ಯೂಲ್‌ ಇನ್‌ ದಿ ಕ್ರೌನ್‌’, ‘ಎ ಪ್ಯಾಸೇಜ್‌ ಟು ಇಂಡಿಯಾ’, ‘ಮೈ ಬ್ಯೂಟಿಫುಲ್ ಲಾಂಡ್ರೆಟ್‌’, ‘ದಿ ಡಿಸೀವರ್ಸ್’, ‘ಆಫ್ಟರ್ ಮಿಡ್‌ ನೈಟ್‌’, ‘ಆನ್‌ ವಿಂಗ್ಸ್‌ ಆಫ್‌ ಫೈರ್‌’, ‘ಚಿಕನ್ ಟಿಕ್ಕಾ ಮಸಾಲ’ ಜಾಫ್ರಿ ಅಭಿನಯದ ಇಂಗ್ಲಿಷ್ ಚಿತ್ರಗಳು. 'ಮೈ ಬ್ಯೂಟಿಫುಲ್ ಲಾಂಡ್ರೆಟ್‌’ ಚಿತ್ರದ ಅಭಿಯನಕ್ಕಾಗಿ ಜಾಫ್ರಿ ‘ಬಫ್ತಾ’ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸಯೀದ್ ಜಾಫ್ರಿ ಅವರು ಆರ್ಡರ್ ಆಫ್‌ ಬ್ರಿಟಿಷ್‌ ಎಂಪೈರ್ (ಒಬಿಇ) ಗೌರವಕ್ಕೆ ಪಾತ್ರರಾಗಿದ್ದರು. ಈ ಗೌರವ ಪಡೆದ ಪ್ರಥಮ ಭಾರತೀಯ ಅವರು.

ಸಯೀದ್ ಜಾಫ್ರಿ 2015ರ ನವೆಂಬರ್ 15ರಂದು ಲಂಡನ್ನಿನಲ್ಲಿ ನಿಧನರಾದರು.

ಕೃತಜ್ಞತೆ: ಸಿ. ಪಿ. ರವಿಕುಮಾರ್
(https://cpravikumar-kannada.blogspot.com)


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img