logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಗಾನಗಂಧರ್ವ ಕೆ. ಜೆ. ಏಸುದಾಸ್ On the birth day of great feel of music called K J Yesudas
Published By: Police World News
Last Updated Date:  09-Jan-2022
ಕಲಾಸುದ್ದಿ

ಜನವರಿ 10, ಕೆ. ಜೆ. ಏಸುದಾಸರ ಜನ್ಮದಿನ. ಈ ಸುಕೋಮಲ ಕಂಠದ ಕಟ್ಟಸ್ಸೇರಿ ಜೋಸೆಫ್ ಏಸುದಾಸರು ಹುಟ್ಟಿ 82 ವರ್ಷವಾಯಿತು. ಅವರು ಹುಟ್ಟಿದ್ದು 1940ರ ವರ್ಷದಲ್ಲಿ. ಅವರ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಅವರ ವ್ಯಕ್ತಿತ್ವ ಹೀಗೆ ಪ್ರತಿಯೊಂದೂ ಹಿರಿದಾದದ್ದೇ. ಒಬ್ಬ ಉತ್ತಮ ಕಲೆಗಾರರಾಗಿ, ಸಂಸ್ಕೃತಿಗಾರರಾಗಿ ಅವರು ತಮ್ಮ ಸುತ್ತಲಿನ ಪ್ರಪಂಚದಲ್ಲಿ ಹರಡಿರುವ ಸಂಗೀತ ಪ್ರೀತಿ ಅಪ್ರತಿಮವಾದದ್ದು.

ಕನ್ನಡಿಗರಾದ ನಾವು ಅವರನ್ನು ಅರಿಯುವ ಮೊದಲೇ ಏಸುದಾಸ್ ಅವರು ‘ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ’ ಎಂಬ ಹಾಡಿನಿಂದ ಅರವತ್ತರ ದಶಕದಲ್ಲೇ ಕನ್ನಡಿಗರ ಮನೆಬಾಗಿಲಿಗೆ ಬಂದು ಆಪ್ತರಾಗಿದ್ದರು. 1970ರ ದಶಕದಲ್ಲಿ ‘ಚಿತ್ ಚೋರ್’ ಎಂಬ ರಾಜಶ್ರೀ ಚಿತ್ರಸಂಸ್ಥೆಯ ಚಿತ್ರ ಭಾರೀ ಜನಪ್ರಿಯವಾಯಿತು. ಬಸುಚಟರ್ಜಿ ಅವರ ಸುಂದರ ಚಿತ್ರವದು. ರವೀಂದ್ರ ಜೈನರ ಸುಶ್ರಾವ್ಯ ಸಂಗೀತದಲ್ಲಿ ಏಸುದಾಸರ ‘ಆಜ್ ಸೆ ಪೆಹೆಲೇ ಆಜ್ ಸೆ ಜ್ಯಾದಾ ಖುಷೀ ಆಜ್ ತಕ್ ನಹೀ ಮಿಲೇ’ ಹಾಡು ಬಂದಾಗ ಭಾರತೀಯರಿಗೂ ಅಷ್ಟೇ, ಅಲ್ಲಿಯವರೆಗೆ ಕಾಣದ ಯಾವುದೋ ಸುಮಧುರ ಅನುಭವ. ಎಲ್ಲರ ಬಾಯಲ್ಲೂ ಏಸುದಾಸರ ‘ಗೋರಿ ತೇರ ಗಾವೋ ಬಡಾ ಪ್ಯಾರಾ’ ಮನೆ ಮಾಡಿಬಿಟ್ಟಿತು. 'ಚಿತ್ ಚೋರ್' ಚಿತ್ರದ ಇತರ ಹಾಡುಗಳಾದ ‘ಜಬ್ ದೀಪ್ ಜಲೆ ಆನಾ’, ‘ತು ಜೋ ಮೇರೆ ಸುರ್ ಮೇ’ ಕೂಡ ಅಷ್ಟೇ ಸೊಗಸಿನವು.

ಆನಂತರದಲ್ಲಿ ಏಸುದಾಸ್ ಅವರು ಹಿಂದಿಯಲ್ಲಿ ಆಯ್ದ ಹಾಡುಗಳಿಗೆ ಮಾತ್ರ ಹಾಡಿದರೂ ಅವರಿಲ್ಲದ ಎಡೆಯೇ ಇಲ್ಲ. ಭಾರತದ ಬಹುತೇಕ ಭಾಷೆಗಳಲ್ಲಲ್ಲದೆ, ಮಲಯ, ರಷ್ಯಾ, ಅರಬ್ಬೀ, ಲ್ಯಾಟಿನ್, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಹಾ ಅವರು ಹಾಡಿದ್ದಾರೆ. ಹೀಗೆ ಅವರ ಗಾನ ಲಹರಿ ಕಳೆದ ಆರು ದಶಕಗಳನ್ನು ಮೀರಿ ನಿರಂತರವಾಗಿ ಮುಂದುವರೆದಿದೆ.

ಚಿತ್ರಸಂಗೀತದಲ್ಲಷ್ಟೇ ಅಲ್ಲದೆ ಏಸುದಾಸರು ಶಾಸ್ತ್ರೀಯ ಸಂಗೀತಾಸಕ್ತರಿಗೆ ಸಹಾ ಬಲು ಪ್ರಿಯರು. ಆವರ ಯಾವುದೇ ಚಿತ್ರಗೀತೆ ಕೂಡ ಶಾಸ್ತ್ರೀಯ ಸಂಗೀತದ ಸೊಗಡನ್ನು ಕಟ್ಟಿಕೊಡುತ್ತದೆ. ಬೇಕಿದ್ದರೆ ‘ಯಾರೇ ನೀನು ಚೆಲುವೆ’, ‘ನಗುವಿನ ಅಳುವಿನ ಸಂಕೋಲೆ’, ‘ನಮ್ಮೂರ ಯುವರಾಣಿ ಕಲ್ಯಾಣವಂತಿ’, ‘ಚೆಲುವೆ ನಿನ್ನ ಕಣ್ಣ ನೋಟ ಮಿಂಚು ಮಿಂಚು’, ‘ಆ ಕರ್ಣನಂತೆ ನೀ ದಾನಿಯಾದೆ’, ‘ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ’, 'ಎಲ್ಲೆಲ್ಲು ಸಂಗೀತವೇ', 'ಶ್ರೀಕರ ಶುಭಕರ ಶಿವಶಂಕರ', 'ಶಾರದೇ ದಯೆ ತೋರಿದೆ' ಹೀಗೆ ಯಾವುದೇ ಭಾವದ ಗೀತೆಯನ್ನಾದರೂ ನೆನಪಿಸಿಕೊಂಡು ನೋಡಿ.....!.

ಅಂದಿನ ಅರಳೀಕಟ್ಟೆ ಸಂಗೀತ ಕಾರ್ಯಕ್ರಮಗಳಲ್ಲಿ ಸಂಗೀತ ದಿಗ್ಗಜರ ದಂಡೇ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ತಾಂಡವಿಸುತ್ತಿತ್ತು. ಏಸುದಾಸ್ 1970ರ ದಶಕದಲ್ಲೇ ಅತಿ ಕಿರಿಯವಯಸ್ಸಿನ ಸಂಗೀತ ಸಮ್ಮೇಳನಾಧ್ಯಕ್ಷರು ಎಂಬ ಗೌರವಕ್ಕೆ ಪಾತ್ರರಾದವರು. ಏಸುದಾಸರು ಯಾವುದೇ ಸಿನಿಮಾದ ವಾತಾವರಣದ ಸೋಂಕಿಲ್ಲದೆ, ಕೇವಲ ತಮ್ಮ ಅಮೋಘ ಶಾಸ್ತ್ರೀಯ ಸಂಗೀತ ಬಲಮಾತ್ರದಿಂದಲೇ ಕಳೆದ ಐದು ದಶಕಗಳಲ್ಲಿ ಎಲ್ಲಾ ಸಂಗೀತಾಸಕ್ತರ ಹೃದಯಗಳಲ್ಲಿ ಪ್ರಧಾನರಾಗಿ ರಾರಾಜಿಸುತ್ತಿದ್ದಾರೆ.

ಏಸುದಾಸರಿಗೆ ಅವರ ತಂದೆ ಜೋಸೆಫ್ ಅವರೇ ಮೊದಲ ಗುರು. ಜೋಸೆಫ್ ಅವರು ಕೂಡ ಹೆಸರಾಂತ ಶಾಸ್ತ್ರೀಯ ಸಂಗೀತ, ರಂಗಭೂಮಿ ಕಲಾವಿದರಾಗಿದ್ದರು. ಮುಂದೆ ಏಸುದಾಸರು ಸಂಗೀತ ಅಕಾಡಮಿಗಳಲ್ಲಿ ಪದವಿ ಪಡೆದು, ಸ್ವಲ್ಪ ಕಾಲ ಶ್ರೀ ವೇಚೂರು ಹರಿ ಹರ ಸುಬ್ರಮಣ್ಯ ಅಯ್ಯರ್ ಅವರ ಬಳಿಯೂ ಕಲಿತರು. ಆನಂತರದಲ್ಲಿ ಏಸುದಾಸ್ ಸಂಗೀತ ಲೋಕದ ಅಪ್ರತಿಮ ವಿದ್ವಾಂಸರಾದ ಚೆಂಬೈ ವೈದ್ಯನಾಥ ಭಾಗವತರ್ ಅವರ ಶಿಷ್ಯತ್ವ ಪಡೆದರು. ಕೇವಲ ಕರ್ನಾಟಕ ಸಂಗೀತದಲ್ಲಿ ಗಳಿಸಿದ ಸಾರ್ವಭೌಮತ್ವವಲ್ಲದೆ ಏಸುದಾಸರು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದಲ್ಲೂ ಪ್ರಾವೀಣ್ಯತೆ ಸಾಧಿಸಿದರು. ಅವರಿಗೆ ಯಾವುದೂ ಬೇರೆ ಅಲ್ಲ, ಯಾರೂ ದೂರವಲ್ಲ, ಎಲ್ಲವೂ ಒಂದೇ. ಶ್ರೀ ನಾರಾಯಣ ಗುರು ಅವರು ಹೇಳುವ “ಒಂದೇ ಜಾತಿ, ಒಂದೇ ಧರ್ಮ ಮತ್ತು ಸಮಸ್ತ ಜೀವ ಸಂಕುಲಕ್ಕೆ ಒಂದೇ ದೇವರು” ಎಂಬ ನುಡಿ ನನ್ನ ಹೃದಯದಲ್ಲಿರುವ ಆತ್ಮೀಯ ಮಂತ್ರ ಎನ್ನುತ್ತಾರೆ ಏಸುದಾಸ್.

ಏಸುದಾಸರು ಹಾಡಿರುವ ಧ್ವನಿಮುದ್ರಿಕೆಗಳ ಸಂಖ್ಯೆ ಅನೇಕ ಸಾವಿರಗಳನ್ನು ಮೀರಿದೆ. ಇದುವರೆಗೂ ಇನ್ನಾರಿಗೂ ದಕ್ಕಿಲ್ಲದ ಎಂಟು ರಾಷ್ಟ್ರೀಯ ಪ್ರಶಸ್ತಿಗಳೂ, ಮುವ್ವತ್ತಕ್ಕೂ ಹೆಚ್ಚು ವಿವಿಧ ರಾಜ್ಯ ಪ್ರಶಸ್ತಿಗಳೂ ಚಲನಚಿತ್ರಗಾಯನದಲ್ಲಿ ಅವರಿಗೆ ಸಂದಿವೆ. ಹಲವು ವರ್ಷಗಳ ಹಿಂದೆ ತಮ್ಮನ್ನು ರಾಜ್ಯಪ್ರಶಸ್ತಿಗಳಿಗೆ ಪರಿಗಣಿಸದೆ ಯುವ ಕಲಾವಿದರಿಗೆ ಆ ಪ್ರಶಸ್ತಿಯನ್ನು ನೀಡಬೇಕೆಂದು ಅವರು ತಮ್ಮ ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ. ಎಪ್ಪತ್ತು-ಎಂಭತ್ತರ ದಶಕದಲ್ಲಿ ಹಲವಾರು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನವನ್ನೂ ಮಾಡಿದ್ದರು. ಒಮ್ಮೆ ಚನ್ನೈನ ಸ್ಟುಡಿಯೋದಲ್ಲಿ ಒಂದೇ ದಿನ ಹದಿನಾರು ಸಿನಿಮಾ ಹಾಡುಗಳನ್ನು ಹಾಡಬೇಕಾದ ಅನಿವಾರ್ಯತೆಯನ್ನು ಕೂಡಾ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ವಿಶ್ವದಾದ್ಯಂತ ಏಸುದಾಸ್ ಅವರ ಕಛೇರಿಗಳು, ಗಾಯನ ಪ್ರದರ್ಶನಗಳು ನಡೆಯುತ್ತಿವೆ. 1971ರ ಯುದ್ಧ ಕಾಲದಲ್ಲಿ ಇಡೀ ನಾಡೆಲ್ಲಾ ಸಂಚರಿಸಿ ನಿಧಿ ಸಂಗ್ರಹಣೆ ಮಾಡಿಕೊಟ್ಟರು. 1999ರ ವರ್ಷದಲ್ಲಿ ಯುನೆಸ್ಕೋ ಸಂಸ್ಥೆ “ಸಂಗೀತದಲ್ಲಿ ಅಪಾರ ಸಾಧನೆ ಮತ್ತು ಶಾಂತಿ ಪ್ರೇರಣೆಗಳಿಗಾಗಿ” ಏಸುದಾಸರಿಗೆ ಗೌರವ ಪಾರಿತೋಷಕವನ್ನು ನೀಡಿ ಸಂಮಾನಿಸಿತು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವಗಳಲ್ಲದೆ ಹಲವಾರು ರೀತಿಯ ಗೌರವಗಳು ಏಸುದಾಸರನ್ನು ಸೇರಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಏಸುದಾಸರಿಗೆ ಮೊಹಮ್ಮದ್ ರಫಿ, ತಮ್ಮ ಗುರು ಚಂಬೈ ವೈಧ್ಯನಾಥ ಭಾಗವತರ್, ಬಾಲಮುರಳಿ ಕೃಷ್ಣರೆಂದರೆ ಅಪಾರ ಮೆಚ್ಚುಗೆ. ಅವರ ಪುತ್ರ ವಿಜಯ್ ಏಸುದಾಸ್ ಕೂಡ ಪ್ರಸಿದ್ದ ಗಾಯಕರಾಗಿದ್ದು ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಚನ್ನೈ, ತಿರುವನಂತಪುರ ಅಲ್ಲದೆ ಅಮೇರಿಕದ ಫ್ಲೋರಿಡಾ, ಫ್ಲವರ್ ಮೌಂಡ್, ಸಂಯುಕ್ತ ಅರಾಬ್ ಸಂಸ್ಥಾನದ ದುಬೈ ಮುಂತಾದ ಸ್ಥಳಗಳಲ್ಲಿ ವೈಯಕ್ತಿಕ ನೆಲೆಗಳನ್ನು ಹೊಂದಿದ್ದಾರೆ.

1980ರಲ್ಲಿ ಏಸುದಾಸರು ತಿರುವನಂತ ಪುರದಲ್ಲಿ ತರಂಗಿಣಿ ಸ್ಟುಡಿಯೋ ಆರಂಭಿಸಿ ನಂತರದಲ್ಲಿ ಅದರ ವಹಿವಾಟನ್ನು ಚನ್ನೈಗೆ ವರ್ಗಾಯಿಸಿದರು. ಈ ಸಂಸ್ಥೆ ಅಮೇರಿಕದಲ್ಲಿ ಕೂಡ ತನ್ನ ಪ್ರಮುಖ ಶಾಖೆಯನ್ನು ಹೊಂದಿದೆ. ಈ ಸಂಸ್ಥೆ ಧ್ವನಿಮುದ್ರಣ ಕಾರ್ಯಗಳಲ್ಲದೆ ವಿಶ್ವದಾದ್ಯಂತ ಏಸುದಾಸರ ಸಂಗೀತ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಕೂಡ ನೋಡಿಕೊಳ್ಳುತ್ತಿದೆ.

ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಅವರ ಪ್ರಕಾರ ಏಸುದಾಸರದು ವಿಶ್ವದಲ್ಲೇ ಶ್ರೇಷ್ಠ ಇಂಪುದ್ವನಿ. ಭಾರತದ ಸಿನಿಮಾ ಸಂಗೀತದ ಶ್ರೇಷ್ಠ ಸಂಗೀತ ನಿರ್ಧೇಶಕ ರವೀಂದ್ರ ಜೈನ್ “ಏಸುದಾಸ್ ಭಾರತದ ಧ್ವನಿ. ನನಗೇನಾದರೂ ಕಣ್ಣುಬಂದರೆ ನಾನು ನೋಡಲಿಚ್ಚಿಸುವ ಪ್ರಥಮ ವ್ಯಕ್ತಿ ಅವರು” ಎನ್ನುತ್ತಿದ್ದರು. ಏಸುದಾಸರ ಗೆಳೆಯ ಮತ್ತು ಹಲವಾರು ಪ್ರಸಿದ್ಧ ಚಿತ್ರಗಳ ಮಹಾನ್ ಸಂಗೀತ ನಿರ್ದೇಶಕ ದಿವಂಗತ ರವೀಂದ್ರನ್ ಹೇಳುತ್ತಿದ್ದರು “ಏಸುದಾಸನದು ದೇವರ ಧ್ವನಿ, ನಾನು ಆ ಧ್ವನಿಯ ಭಕ್ತ” ಎಂದು.

ಜವಹರಲಾಲ್ ನೆಹರೂ ಜನ್ಮಶತಾಬ್ಧಿ ಆಚರಣೆ ಸಂದರ್ಭದಲ್ಲಿ ಅವರು ವಿವಿಧ ಭಾಷೆಗಳಲ್ಲಿ ಹಾಡಿರುವ ಶಾಸ್ತ್ರೀಯ ಸಂಗೀತದ ಕ್ಯಾಸೆಟ್ ಮತ್ತು ಸಿ.ಡಿಗಳು ಅವರ ವೈವಿಧ್ಯಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದ್ದು ವಿಶ್ವದಾದ್ಯಂತ ಮನೆ ಮನಗಳನ್ನು ಅಲಂಕರಿಸಿದೆ. ಇದಲ್ಲದೆ ಅವರು ಎಲ್ಲ ರೀತಿಯ ಶಾಸ್ತ್ರೀಯ, ಲಘು ಸಂಗೀತ, ಸಿನಿಮಾ ಸಂಗೀತಗಳ ಹಾಡುಗಳನ್ನೂ ಹಾಡಿದ್ದಾರೆ.

ಅವರ 'ಹರಿವರಾಸನಂ ವಿಶ್ವಮೋಹನಂ' ಭಕ್ತಿ ಗೀತೆಯನ್ನು ಆರಾಧಿಸದವರಿಲ್ಲ. ದೇವರಿಗೂ ಅದು ಅತಿ ಆಪ್ತ. ಅದಕ್ಕೇ ಶಬರಿಮಲೈ ಸನ್ನಿಧಾನದಲ್ಲಿ ಅದು ಅಧಿಕೃತವಾದ ಗೀತೆ. ಈ ಮಹಾನ್ ಸಾಧಕನ ಬಗ್ಗೆ ಅದಕ್ಕಿಂತ ಹೇಳಲಿಕ್ಕೆ ಉಳಿದುದಾದರೂ ಏನಿದೆ.

ಪ್ರತಿವರ್ಷ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಏಸುದಾಸರು ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಸಂಗೀತ ಸೇವೆ ನಡೆಸುವ ಪ್ರತೀತಿ ಕೂಡ ಇದೆ. ಆ ಮಹಾತಾಯಿ ಸಂಗೀತ ಸರಸ್ವತಿಯ ಈ ಸುಪುತ್ರರ ಸಂಗೀತ ಸೇವೆಯನ್ನು ನಿರಂತರವಾಗಿ ಈ ಲೋಕದಲ್ಲಿ ಬೆಳಗುತ್ತಿರಲಿ. ಆ ಗಾನಗಂಗೆಯಲ್ಲಿ ಮಿಂದು ಪುನೀತರಾಗುವ ಅವಕಾಶಗಳು ನಮ್ಮದಾಗುತ್ತಿರಲಿ, ಏಸುದಾಸರಿಗೆ ನಿರಂತರ ಶುಭವಾಗಲಿ ಎಂದು ಹಾರೈಸೋಣ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ) 


-Tiru Sridhara


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img