ಬಸು ಚಟರ್ಜಿ On the birth anniversary of Basu Chatterjee
Published By: Police World News
Last Updated Date: 10-Jan-2022
ಸಿನಿಮಾ ಎಂದರೆ ಆಡಂಭರ, ಇಲ್ಲವೇ ಬಡತನದ ಬವಣೆ ಎಂಬ ಎರಡು ಚಿಂತನೆಗಳನ್ನೇ ಬಿಂಬಿಸುವವರ
ಮಧ್ಯೆ ಮಧ್ಯಮ ವರ್ಗದ ಚೆಲುವು ಒಲವುಗಳನ್ನು ಚಲನಚಿತ್ರಗಳಲ್ಲಿ ತಂದು ಕೊಟ್ಟವರಲ್ಲಿ ಬಸು ಚಟರ್ಜಿ ಪ್ರಮುಖರು.
ಬಸು ಚಟರ್ಜಿ 1930ರ ಜನವರಿ 10 ರಂದು ರಾಜಾಸ್ಥಾನದ ಅಜ್ಮೀರ್ ನಗರದಲ್ಲಿ ಜನಿಸಿದರು.
ಬಸು ಚಟರ್ಜಿ ಅವರು ಪ್ರಸಿದ್ಧ ಬ್ಲಿಟ್ಜ್ ಪತ್ರಿಕೆಯಲ್ಲಿನ ಕಥಾನಕಗಳ ಚಿತ್ರಕಾರರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ
ಹದಿನೆಂಟು ವರ್ಷಕಾಲ ಕೆಲಸಮಾಡಿದರು. ಆ ನಂತರದಲ್ಲಿ ಅವರು ಚಿತ್ರರಂಗದತ್ತ ಕಣ್ಣುಹಾಯಿಸಿದರು.
ಬಸು ಚಟರ್ಜಿ ರಾಜ್ ಕಫೂರ್ ಮತ್ತು ವಹೀದಾ ರಹಮಾನ್ ನಟಿಸಿದ ತೀಸ್ರೀ ಕಸಮ್ ಚಿತ್ರಕ್ಕೆ ಬಸು ಭಟ್ಟಾಚಾರ್ಯ
ಅವರಿಗೆ ಸಹಾಯಕರಾಗಿ ದುಡಿದರು. ಆ ಚಿತ್ರ ರಾಷ್ಟ್ರ ಪ್ರಶಸ್ತಿಗಳಿಸಿತು.
1969 ರಲ್ಲಿ ಬಸು ಚಟರ್ಜಿ ಅವರು 'ಸಾರಾ ಆಕಾಶ್' ಚಿತ್ರಕಥೆ ಬರೆದು ನಿರ್ದೇಶಿಸಿದರು. ಇದು ಉತ್ತಮ ಚಿತ್ರಕಥೆಗಾಗಿ
ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು. ಬಸು ಚಟರ್ಜಿ ಅವರು ಅಮಿತಾಬ್ ಬಚ್ಚನ್ , ರಾಜೇಶ್ ಖನ್ನಾ,
ದೇವ್ ಆನಂದ್ ಮತ್ತು ಮಿಥುನ್ ಚಕ್ರವರ್ತಿ ಮುಂತಾದವರನ್ನು ಹೊಸ ರೀತಿಯ ಅವತಾರಗಳಲ್ಲಿ ಪ್ರಸ್ತುತಪಡಿಸಿದರು.
ಅಮೋಲ್ ಪಾಲೇಕರ್, ಅಶೋಕ್ ಕುಮಾರ್, ಉತ್ಪಲ್ ದತ್, ಅಸ್ರಾಣಿ, ವಿದ್ಯಾಸಿನ್ಹಾ, ಜರೀನಾ ವಾಹಾಬ್ ಮುಂತಾದ
ಅನೇಕ ಪ್ರತಿಭೆಗಳು ಇವರ ಚಿತ್ರಗಳಲ್ಲಿ ಬೆಳಗಿದ್ದು ಮರೆಯುವಂತೆಯೇ ಇಲ್ಲ.
ಚಿತ್ ಚೋರ್, ರಜನಿ, ಬಾತೋ ಬಾತೋ ಮೇ, ಉಸ್ ಪಾರ್, ಛೋಟಿ ಸಿ ಬಾತ್ , ಖಟ್ಟಾ-ಮೀಠಾ, ಪಿಯಾ ಕಾ ಘರ್,
ಚಕ್ರವ್ಯೋಹ, ಶೌಕೀನ್, ಏಕ್ ರುಕಾ ಹುವಾ ಫೈಸಲಾ, ಜೀನಾ ಯಹಾ, ಪ್ರಿಯತಂ, ಸ್ವಾಮೀ, ದುರ್ಗಾ, ಅಪ್ನೆ ಪರಾಯ,
ಕಮಲಾ ಕಿ ಮೌತ್, ಮನ ಪಸಂದ್, ಹಮಾರಿ ಬಹು ಅಲ್ಖಾ, ಚಮೇಲಿ ಕಿ ಶಾದಿ ಮುಂತಾದ ಸೊಬಗಿನ ಚಿತ್ರಗಳನ್ನು
ಬಸು ದಾ ನಿರ್ದೇಶಿಸಿದ್ದರು.
ಐಫಾ ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಉತ್ತಮ ಚಿತ್ರ ಪ್ರಶಸ್ತಿ (ದುರ್ಗಾ ಸಿನಿಮಾಕ್ಕೆ) , ಉತ್ತಮ ನಿರ್ದೇಶಕ ಪ್ರಶಸ್ತಿ
(ಕಮಲಾ ಕಿ ಮೌತಾ ಸಿನಿಮಾ) ಸೇರಿದಂತೆ ಹಲವಾರು ಗೌರವಗಳು ಬಸು ಚಟರ್ಜಿ ಅವರಿಗೆ ಸಂದಿದ್ದವು.
ಬಸು ಚಟರ್ಜಿ ಅವರು 2020ದ ಜೂನ್ 4ರಂದು ನಿಧನರಾದರು. ಸರಳತೆಯಲ್ಲಿ ಸಾಮಾನ್ಯತೆಯನ್ನು ಬಿಂಬಿಸಿ
ಎಲ್ಲರ ಮನಮುಟ್ಟುವುದು ಸೂಕ್ಷ್ಮ ಸಂವೇದನೆಯುಳ್ಳ ಸೃಜನಶೀಲ ಮನಗಳಿಗೆ ಮಾತ್ರಾ ಸಾಧ್ಯ. ಅಂತಹ ಅಪೂರ್ವ
ಚೇತನವಾಗಿ ಬಸು ಚಟರ್ಜಿ ನಮ್ಮ ಮನಗಳಲ್ಲಿ ಸವಿನೆನಪಾಗುಳಿದಿರುವವರು.
(ನಮ್ಮ'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ
www.sallapa.comನಲ್ಲಿಯೂ ಲಭ್ಯ. ನಮಸ್ಕಾರ).
-Tiru Sridhara