ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ
ಜಿಲ್ಲೆಯ 23773 ರೈತ ಮಕ್ಕಳಿಗೆ ಪ್ರೋತ್ಸಾಹಧನ : ಸಚಿವ ಪಾಟೀಲ
Published By: ಕಾಶಿನಾಥ್ ಮೇಟಿ ಬಾಗಲಕೋಟ ತಾಲೂಕ ವರದಿಗಾರ
Last Updated Date: 23-Mar-2022
ಬಾಗಲಕೋಟೆ: ಮಾರ್ಚ 21 (ಕರ್ನಾಟಕ ವಾರ್ತೆ) : ಮುಖ್ಯ ಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23773 ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ 5.86 ಕೋಟಿ ರೂ.ಗಳ ಹಣವನ್ನು ಜಮೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಬಾದಾಮಿಯ ಖಾಸಗಿ ಹೋಟೆಲ್‍ನಲ್ಲಿಂದು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ರೂಪಿಸಲಾಗಿರುವ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 23773 ರೈತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 219872 ಜನ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೊಂದಾಯಿಸಿದ್ದು, ಈವರೆಗೆ ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗಳಿಗೆ 300 ಕೋಟಿ ರೂ.ಗಿಂತ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ. ರೈತರು ಈ ಯೋಜನೆಯಡಿ ಮುಂದುವರೆಯಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾರ್ಚ 31 ರೊಳಗಾಗಿ ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಲು ಕೋರಿದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ಪರಿಹಾರ ಮಂಜೂರಾದ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಹಾಗೂ ಎನ್‍ಪಿಸಿಐ ಲಿಂಕ್ ಮಾಡಿಸಿದಲ್ಲಿ ಅಂತಹವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತದೆ ಎಂದು ತಿಳಿಸಿದರು.
ಯಾವುದೇ ರೀತಿಯ ಕುಂದು ಕೊರತೆಗಳಿದ್ದಲ್ಲಿ ರೈತರು ತಮ್ಮ ತಾಲೂಕಿನ ಕೃಷಿ ಕಛೇರಿಗೆ ಭೇಟಿ ನೀಡಿ ಅಲ್ಲಿರುವ ವಿಮಾ ಸಂಸ್ಥೆಯವರೊಂದಿಗೆ ಸಮಾಲೋಚನೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ತಿಳಿಸುತ್ತಾ ಈ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ತಾಲೂಕಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳನ್ನು ನಿಯೋಜಿಸಿದ್ದು, ನಿಯತಕಾಲಿಕವಾಗಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಯ ಬೆಳೆವಣಿಗೆ, ರೋಗ ಹಾಗೂ ಕೀಟದ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ರೈತರ ಬೇಡಿಕೆ ಅನುಸಾರ ಹೆಚ್ಚಿನ ಕಾರ್ಯಕ್ರಮದ ಅವಶ್ಯಕತೆ ಇದ್ದಲ್ಲಿ ಕೇಂದ್ರ ಕಛೇರಿಗೆ ಮನವಿ ಸಲ್ಲಿಸಲು ತಿಳಿಸುತ್ತಾ, ಸಮಗ್ರ ಪೊಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಯಾಂತ್ರಿಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖಾಂತರ ರೈತರಿಗೆ ನವೀನ ತಾಂತ್ರಿಕತೆ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತರಬೇತಿಗಳನ್ನು ಆಯೋಜಿಸಲು ಸಚಿವ ಪಾಟೀಲ ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತಮಾಡಿ ಮುಂಗಾರು ಹಂಗಾಮಿನಲ್ಲಿ 271989 ಹೆ, ಹಿಂಗಾರು ಹಂಗಾಮಿನಲ್ಲಿ 247448 ಹೆ ಹಾಗೂ ಬೇಸಿಗೆ ಹಂಗಾಮಿನಲ್ಲಿ 32113 ಹೆ. ಕ್ಷೇತ್ರದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗಿರುವುದಾಗಿ ತಿಳಿಸಿದರು. ಮಾನ್ಯ ಕೃಷಿ ಸಚಿವರು ಜಿಲ್ಲೆಯ ಬೇಡಿಕೆ ಅನುಸಾರ ಈವರೆಗೆ ಯಾವುದೇ ಕೊರತೆಯಾಗದಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ವ್ಯವಸ್ಥೆಯನ್ನು ಮಾಡಿದ್ದು, ಮುಂಗಾರು ಹಂಗಾಮಿನಲ್ಲಿ 112845 ಮೆ.ಟನ್ ರಷ್ಟು ಹಾಗೂ ಹಿಂಗಾರು /ಬೇಸಿಗೆ ಹಂಗಾಮಿನಲ್ಲಿ 58927 ಮೆ.ಟನ್ ನಷ್ಟು ವಿವಿಧ ರಸಗೊಬ್ಬರಗಳನ್ನು ಜಿಲ್ಲೆಗೆ ಸರಬರಾಜಾಗಿರುವುದಾಗಿ ಯಾವುದೇ ಕೊರತೆ ಇಲ್ಲವೆಂದು ತಿಳಿಸಿದರು.
ನಕಲಿ ಹಾಗೂ ಕಳಪೆ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅಂತಹವನ್ನು ಪತ್ತೆ ಹಚ್ಚಿ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈವರೆಗೆ ಜಿಲ್ಲೆಯಲ್ಲಿ 17 ಪ್ರಕರಣಗಳಲ್ಲಿ ಸಂಶಯಾಸ್ಪದ, ಕಳಪೆ ಮತ್ತು ಕಾನೂನಿನ ಉಲ್ಲಂಘನೆ ಮಾಡಿರುವ ಬಗ್ಗೆ ಪರಿಕರ ಜಪ್ತು ಮಾಡಿ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು. ಒಂದು ವೇಳೆ ಅಧಿಕೃತ ಕೃಷಿ ಪರಿಕರ ವಿತರಕರು ಕಳಪೆ, ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಅಂತವರ ಪರವಾನಿಗೆಯನ್ನು ಅಮಾನತ್ತು ಮಾಡಿ ಮುಂದಿನ ಕ್ರಮ ವಹಿಸಲಾಗುವುದೆಂದು ಎಚ್ಚರಿಸಿದರು.
ಸಭೆಯಲ್ಲಿ ಕೃಷಿ ಉಪನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಆರ್.ಜಿ.ನಾಗಣ್ಣವರ, ಜಾಗೃತಿ ದಳದ ಸಹಾಯಕ ನಿರ್ದೇಶಕ ಎಸ್.ಬಿ.ಹಳ್ಳೊಳ್ಳಿ, ಕೃಷಿ ಸಹಾಯಕ ನಿರ್ದೇಶಕರಾದ ಟಿ.ಪಿ.ಲಂಬಾಣಿ, ಅಶೋಕ ತಿರಕನ್ನವರ, ಸಿದ್ದಪ್ಪ ಪಟ್ಟಿಹಾಳ, ಸತೀಶ ಮಾವಿನಕೊಪ್ಪ, ಬಿ.ವಿ.ದಾಸರ, ಆರ್.ಬಿ.ಬಿದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ. 4
*53 ವರ್ಷದ ಮಹಿಳೆ ಕಾಣೆ*
-------------------
ಬಾಗಲಕೋಟೆ: ಮಾರ್ಚ 21 (ಕರ್ನಾಟಕ ವಾರ್ತೆ) : ಮುಧೋಳ ತಾಲೂಕಿನ ಮಳಲಿ ಗ್ರಾಮದ ತೋಟದ ವಸ್ತಿ ಸಿದ್ದಪ್ಪ ನರಸಿಂಗ ಘೋರ್ಪಡೆ ಅವರ ತಾಯಿ ಬಂದವ್ವ ನರಸಿಂಗ ಘೋರ್ಪಡೆ (53) ಜುಲೈ 8, 2021 ರಂದು ಬೆಳಗಿನ ಜಾವ ತೋಟದ ಮನೆಯಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಮಹಿಳೆ 5 ಅಡಿ ಎತ್ತರ, ಸಾದಗಪ್ಪು ಮೈಬಣ್ಣ, ಮೈಮೇಲೆ ಬೂದು ಬಣ್ಣದ ಸೀರೆ, ಕೆಂಪು ಜಂಪರ್ ಧರಿಸಿದ್ದು, ಹಣೆಯ ಮೇಲೆ ಹಣಚಿಬೊಟ್ಟು ಇರುತ್ತದೆ. ಕನ್ನಡ ಮತ್ತು ಮರಾಠಿ ಮಾತನಾಡುತ್ತಿದ್ದು, ಈ ಚಹರೆವುಳ್ಳ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಬಾಗಲಕೋಟೆ ಕಂಟ್ರೋಲ್ ರೂಮ್ (08354-235079, 9480803900) ಜಮಖಂಡಿ ಡಿಎಸ್‍ಪಿ ಕಾರ್ಯಾಲಯ (08353-220114, 9480803921), ವೃತ್ತ ನಿರೀಕ್ಷಕರ ಕಾರ್ಯಾಲಯ (08350-280103, 9480803936), ಮುಧೋಳ ಪೊಲೀಸ್ ಠಾಣೆ (08350-280133, 9480803960) ಕರೆ ಮಾಡುವಂತೆ ಮುಧೋಳ ಪೊಲೀಸ್ ಠಾಣೆಯ ಪಿಎಸ್‍ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಲಗತ್ತಿಸಿದೆ. 5